ಗಾಂಧಿ ಸ್ಮರಣೆ
ಗಾಂಧಿ ತಾತಾ ನೀವೊಬ್ಬ
ನನ್ನ ಕಣ್ಣಿನ ಮಾಯಪ್ರಪಂಚ ಇದ್ದಂಗ
ನಿನ್ನ ನೋಡಿದ್ರ ಸಾಕ
ನನ್ನ ಎದ್ಯಾಗಿನ ನೋವು ಎಲ್ಲಾ ಮರಿತೀನಿ
ನಮ್ಮ ದೇಶಾದಾಗ ಹುಟ್ಟಿ
ಪರದೇಶದ ಮಂದಿ ಕಷ್ಟಾನ ನನ್ನ ಕಷ್ಟಾ ಅಂತ ಹೇಳಿ ಅವರ ಬದುಕು ಹಸನು ಮಾಡಿಯಲ್ಲೋ ತಾತ
ನಿನ್ನ ಬದುಕಾರ ಹೆಂಗೈತಿ ಅಂತಾ ನೋಡಿದ್ರ
ತೆರೆದಿಟ್ಟ ಪುಸ್ತಕ
ಬಿತ್ತಿ ನಿಂತ ಹೊಲ
ಒಳಗಿರೋದೆಲ್ಲಾ ಕಾಣೋ ಗಾಜಿದ್ದಂಗ
ಹೀಂಗ ಇರಾಕ ಸಾಧ್ಯಾನಾ ಅಂತನಸತೈತಿ
ಊರ ಉಸಾಬರಿ ಮೈಮಾಲೆ ಹಾಕೊಂಡ
ದೇಶದ ಸಮಂದ ಹಗಲರಾತ್ರಿ ಹೋರಾಟ ಮಾಡಿ ಸ್ವಾತಂತ್ರ್ಯ ಕೊಡಿಸಿ
ರಾಮರಾಜ್ಯ ಸ್ಥಾಪನಾ ಮಾಡೋ ಕನಸ ಕಂಡಿ
ಆ ಕನಸು ನನಸಾಗೈತೋ ಇಲ್ಲೋ ಅನ್ನೋದರ ಒಮ್ಮೆ ಬಂದು ನೋಡಿ ಹೋಗು ತಾತಾ
ಸಂತ ಬರಿಮೈ ಫಕೀರ ,ಆದ ನಿನ್ನ ಎದೆಗೆ ಗುಂಡು ಹೊಡೆದರಲ್ಲಾ
ನಿನಗಿಂತ ಒಳ್ಳೆಯವರು ಈ ಜಗತ್ತಿನ್ಯಾಗ ದೀಪ ಹಚ್ಚಿ ಹುಡುಕಿದ್ರೂ ನಮಗ್ಯಾರಿಗೂ ಸಿಗಾಂಗಿಲ್ಲ
ಪರದೇಶದ ಮಂದಿ ನಮ್ಮನ್ನು ಗಾಂಧಿನಾಡಿನವ ಎಂದು ಬಾಳ ಕಿಮ್ಮತ್ತ ಕೊಡತಾರ ನಿನ್ನ ಪ್ರತಿಮೆ ಮಾಡಿ ಮಕ್ಕಳಿಗೆ ಪಾಠ ಹೇಳತಾರ
ನಿನ್ನ ಬದುಕ ನಮಗ ಒಂದು ಸಂದೇಶ ನೀಡತೈತಿ
ಅದನ ಪಾಲಿಸೋ ಮಂದಿ ಕಡಿಮಿ ಐತಿ
ತಾತಾ ನೀವೇನೂ ಬೇಜಾರ ಮಾಡಕೋಬ್ಯಾಡ್ರಿ
ಕಾಲ ಚಕ್ರ ತಿರಗತೈತಿ
ಅಸತ್ಯ, ಹಿಂಸೆ ಅನ್ಯಾಯ ಹೆಚ್ಚಾತಂದ್ರ ಮತ್ತ ನೀವು ಹುಟ್ಟಿ ಬಂದು ದೇಶ ಶುದ್ಧ ಮಾಡತೀರಿ
ಬಾಳ ಹಸನ ಮಾಡತೀರಿ
ಅನ್ನೋ ನಂಬಿಕಿ ಐತಿ
ಸರ್ವರಿಗೂ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಶುಭಾಶಯಗಳು
ಶಿವಕುಮಾರ ಕೋಡಿಹಾಳ, ಮೂಡಲಗಿ