spot_img
spot_img

ಭಾವಪೂರ್ಣ ಶ್ರದ್ಧಾಂಜಲಿ; ಕನ್ನಡ ನಿಘಂಟು ತಜ್ಞ, ಹಿರಿಯ ಜೀವಿ ಪ್ರೊ. ಜಿ. ವೆಂಕಟಸುಬ್ಬಯ್ಯ

Must Read

- Advertisement -

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಸವನಗುಡಿ ಬ್ರಾಹ್ಮಣ ಮಹಾಸಭಾ ಶ್ರದ್ಧಾಂಜಲಿ ಸಲ್ಲಿಸುತ್ತದೆ,

ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು ಮೈಸೂರು ಅರಮನೆಯ ವಿದ್ವಾಂಸರಾಗಿದ್ದರು. ತಾಯಿ ಸುಬ್ಬಮ್ಮನವರು. ಪ್ರೊ. ಜಿ. ವಿ. ಅವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ನೆರವೇರಿತು. ಅವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ. 1937ರಲ್ಲಿ ಎಂ.ಎ ಮತ್ತು 1939ರಲ್ಲಿ ಬಿ.ಟಿ. ಪದವಿ ಗಳಿಸಿದರು.

ತಮ್ಮ ನೂರುವರ್ಷವಾದ ಸಂದಭದಲ್ಲಿ ತಮ್ಮ ಸುದೀರ್ಘ ಬದುಕನ್ನು ಕುರಿತು ಜಿ.ವಿ ಹೀಗೆ ಹೇಳಿದ್ದರು: “ಸಂಸ್ಕೃತದಲ್ಲಿ ಒಂದು ಮಾತಿದೆ. ‘ಜೀವನ್ ಭದ್ರಾಣಿ ಪಶ್ಯತಿ’ ಅಂತ. ಆ ಮಾತು ನನಗೆ ಚೆನ್ನಾಗಿ ಅನ್ವಯಿಸುತ್ತೆ. ನಾನು ಹೊಸಗನ್ನಡ ಅರುಣೋದಯದ ಕಾಲವನ್ನು ಕಂಡವನು. ಹೊಸಗನ್ನಡ ಬೆಳೆಯಬೇಕು ಎಂಬ ಬಿ. ಎಂ. ಶ್ರೀಕಂಠಯ್ಯನವರ ಪ್ರಯತ್ನದ ಪರಿಣಾಮವಾಗಿ ಆಂದೋಲನ ಸುಮಾರು 75 ವರ್ಷಗಳ ಕಾಲ ಬಹಳಷ್ಟು ಕೆಲಸ ಮಾಡಿತು. ಬಹುಶಃ ಇನ್ಯಾವ ಭಾರತೀಯ ಭಾಷೆಯಲ್ಲಿಯೂ ಆಗದೆ ಇದ್ದಂತಹ ಸಾಹಿತ್ಯದ ಪ್ರಯೋಗ, ಪ್ರಯೋಜನ ಎಲ್ಲ ಆಗ ಆದವು.

- Advertisement -

ಅದನ್ನು ನಾನು ಕಣ್ಣಾರೆ ಕಂಡವನು. ಅಲ್ಲದೆ ಬಿ. ಎಂ. ಶ್ರೀಕಂಠಯ್ಯನವರ ನೇರ ಶಿಷ್ಯನಾದ್ದರಿಂದ ಅವರ ಉತ್ಸಾಹ ಮತ್ತು ಪರಿಶ್ರಮವನ್ನು ಕಂಡವನು. ಈ ನೂರು ವರ್ಷ ಬದುಕಿರೋದಿದೆಯಲ್ಲ, ನನಗೆ ಒಂದು ವಿಧದಲ್ಲಿ ಸಂತೋಷವನ್ನು ತರುತ್ತೆ. ನೂರು ವರ್ಷ ಅನ್ನೋದು ಇಷ್ಟು ಬೇಗ ಆಗ್ ಹೋಗತ್ಯೆ? ಇಷ್ಟೇನಾ ನೂರು ವರ್ಷ ಅನ್ನೋದು ಅಂತ ಆಶ್ಚರ್ಯ ಆಗುತ್ತೆ. ನಾನು ಎಷ್ಟು ಕೆಲಸ ಮಾಡಬಹುದಾಗಿತ್ತೋ ಅಷ್ಟು ಕೆಲಸ ಮಾಡಿಲ್ಲ ಅಂತ ಒಂದ್ಕಡೆ ವ್ಯಸನಾನೂ ಇದೆ. ನನಗೆ ಕೆಲವು ವಿಚಾರಗಳಲ್ಲಿ ಹೆಚ್ಚು ಸಾಮರ್ಥ್ಯ ಇತ್ತು.

ಅದನ್ನ ಉಪಯೋಗಿಸಿಕೊಳ್ಳುವ ಅವಕಾಶ ಒದಗಲಿಲ್ಲ. ನಾನು ವಿಶ್ವವಿದ್ಯಾಲಯದಲ್ಲಿ ಇದ್ದಿದ್ರೆ, ಬೇಕಾದಂಥ ಗ್ರಂಥಗಳೆಲ್ಲ ಸಿಕ್ಕುವ ಹಾಗಿದ್ದಿದ್ರೆ, ನನ್ನ ಮನಸ್ಸಿನಲ್ಲಿ ಏನೇನು ಇಚ್ಛೆ ಇಟ್ಕೊಂಡಿದ್ನೋ ಅದನ್ನೆಲ್ಲ ಮಾಡಬಹುದಾಗಿತ್ತು. ಕನ್ನಡ ಎಂ. ಎ ಪರೀಕ್ಷೆಗೆ ಆಗ ನಾನು ಮತ್ತು ಶಂಕರನಾರಾಯಣರಾವ್ ಇಬ್ಬರೇ ವಿದ್ಯಾರ್ಥಿಗಳು. ಬಿ.ಎಂ.ಶ್ರೀ ಅವರು ಮೌಖಿಕ ಪರೀಕ್ಷೆಗೆ ಬಂದಿದ್ದರು. ಪರೀಕ್ಷೆಯ ನಂತರ, ‘ಪರೀಕ್ಷೆಯಲ್ಲಿ ನೀವು ಸಫಲರಾಗಿದ್ದೀರಿ. ಆದರೆ ನಿಮ್ಮ ಜವಾಬ್ಧಾರಿ ಇಲ್ಲಿಗೇ ಮುಗಿಯುವುದಿಲ್ಲ. ಏಕೆಂದರೆ ನಾವು ಮುದುಕರಾಗಿಬಿಟ್ವಿ. ಈ ಕನ್ನಡವನ್ನ ನಿಮ್ಮ ಕೈಲಿ ಇಡ್ತಾ ಇದೀವಿ’ ಅಂತ ಹೇಳಿದ್ರು. ನಾನು ಕನ್ನಡ ಕೆಲಸ ಮಾಡಲು ಈ ಮಾತು ಪ್ರೇರಣೆಯಾಯಿತು.”

- Advertisement -

ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿ ಪಡೆದರು.

ಜಿ. ವೆಂ. ಅವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದೂ ಮುಂದು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿ ರಚನೆ ಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದರು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು.

1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಹೀಗೆ ಅವರು ವಿವಿಧ ರೀತಿಗಳಲ್ಲಿ ಸಲ್ಲಿಸಿದ ಸೇವೆ ಅಪಾರವಾದದ್ದು.

ಕನ್ನಡ ನಿಘಂಟು ಮೂಡುವುದಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಕೊಡುಗೆ ಮಹತ್ವವಾದದ್ದು. ಕನ್ನಡ ನಿಘಂಟು ತಯಾರು ಮಾಡಬೇಕು ಎಂದು ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. 1943ರ ವರ್ಷದಲ್ಲಿ ಡಿ. ಎಲ್. ನರಸಿಂಹಾಚಾರ್ಯರು ನಿಘಂಟಿಗೆ ಶಬ್ದಗಳನ್ನು ಆರಿಸುವುದಕ್ಕೆ ಆಯೋಜಿಸಿದ್ದ ಕೆಲವರಲ್ಲಿ ಪ್ರೊ. ಜಿ. ವಿ. ಅವರೂ ಒಬ್ಬರು. ಇವರುಗಳ ಕೈಯಲ್ಲಿ ದಿನನಿತ್ಯದ ಭಾಷೆಯಿಂದ, ಹಳೆಗನ್ನಡದಿಂದ, ಹೊಸಗನ್ನಡದಿಂದ ನಿಘಂಟಿಗೆ ಬೇಕಾದ ಶಬ್ದಗಳನ್ನು ಆಯ್ಕೆ ಮಾಡುವ ಜವಾಬ್ಧಾರಿ ವಹಿಸಿದರು.

ಮುಂದೆ ಜಿ. ವಿ. ಅವರಿಗೆ ಪ್ರೊಫೆಸರ್ ಆಗಿದ್ದ ಎ. ಆರ್. ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದಾಗ, ಜಿ.ವಿ. ಅವರಲ್ಲಿ ನಿಘಂಟಿನ ಕುರಿತಾಗಿದ್ದ ಪ್ರೀತಿಯನ್ನು ಗಮನಿಸಿ ಅವರನ್ನು ವೈಯಕ್ತಿಕವಾಗಿ ಮನೆಗೆ ಕರೆಸಿಕೊಂಡು ಸಂಸ್ಕೃತ ನಿಘಂಟನ್ನ, ವೈದಿಕ ನಿಘಂಟನ್ನ, ಯಾಸ್ಕನ ನಿರುಕ್ತವನ್ನ ಪಾಠ ಮಾಡಿದರು. ಹಾಗಾಗಿ ಪ್ರೊ. ಜಿ. ವಿ. ಅವರಿಗೆ ಅದರ ಮೇಲೆ ಅಪಾರ ಆಸಕ್ತಿ ಮೂಡಿತ್ತು. ಮುಂದೆ ಜಿ.ವಿ. ಅವರೇ ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದರು.

ಪ್ರೊ ಜಿ ವಿ ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ರಾಮಕೃಷ್ಣ ಸ್ಟೂಡೆಂಟ್ ಹೋಂ ಅನ್ನು ಕಟ್ಟಿ ಬೆಳೆಸಿದುದು. ಅದಕ್ಕೆ ಮೊದಲು ಜಿ ವಿ ಅವರನ್ನು ಸದಸ್ಯರಾಗಿಸಿದವರು ಎಂ. ಬಿ. ಗೋಪಾಲಸ್ವಾಮಿ ಅವರು. ಗೊಪಲಾಸ್ವಾಮಿ ಅವರು ನೀವು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳುವುದರಲ್ಲಿ ಎತ್ತಿದ್ದ ಕೈಯಿ. ಹಾಗಾಗಿ ನೀವು ಈ ಕೆಲಸ ಮಾಡಬೇಕು ಎಂದಾಗ ಜಿ. ವಿ ಅವರು ಪ್ರತಿನಿತ್ಯ ಬಿಡುವಿನ ಹೊತ್ತಿನಲ್ಲಿ ಹೋಗಿ ಅಲ್ಲಿನ ಬಡ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳಿಂದ ಅದೆಷ್ಟು ಪ್ರೀತಿ ಸಂಪಾದಿಸಿದ್ದರು ಅಂದರೆ ಅವರನ್ನೇ ವಾರ್ಡನ್ ಮಾಡಲಾಯಿತು. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಪ್ರೊ ಜಿ ವಿ ಅವರು ಬೆಳೆಸಿದ ವಿದ್ಯಾರ್ಥಿಗಳ ಸಂಖ್ಯೆ ಸಹಸ್ರಾರು.

ಶಿಕ್ಷಣ ಮಾಧ್ಯಮವಾಗಿ ಕನ್ನಡ ಹೇಗಿರಬೇಕು, ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. “ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ದೊಡ್ಡ ತಪ್ಪು ಏನೆಂದರೆ, ವಿಜ್ಞಾನವನ್ನು ಬೋಧೆ ಮಾಡುವಾಗ ಪಾರಿಭಾಷಿಕ ಶಬ್ದಗಳನ್ನು ಉಪಯೋಗ ಮಾಡದೆ, ಅದನ್ನು ಅನುವಾದ ಮಾಡೋಕೆ ಪ್ರಯತ್ನಪಟ್ಟದ್ದು. ಕನ್ನಡದಲ್ಲಿ ವಿಜ್ಞಾನ ಬೋಧಿಸುವುದಕ್ಕೆ ಬರುವುದಿಲ್ಲ ಎಂಬ ವಾದ ಶುರುವಾಗಿದ್ದು ಅಲ್ಲೇ. ಇಂಗ್ಲಿಷ್ ಮೀಡಿಯಂ ಎಂದು ಬಂದಿದ್ದು ಆ ಕಾರಣಕ್ಕೇ.

ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸೋದೇ ಬೇರೆ. ಮೀಡಿಯಂ ಆಗಿ ಕಲಿಸೋದೇ ಬೇರೆ. ಇಂಗ್ಲಿಷ್ ಮೀಡಿಯಂನಿಂದ ಇಂಗ್ಲಿಷ್ ಭಾಷೆ ಖಂಡಿತವಾಗಿ ಬರೋಲ್ಲ. ಅದಕ್ಕೆ ಬೇರೆ ಮಾದರಿಯ ಕಲಿಕೆ ಬೇಕು. ಇಂಗ್ಲಿಷ್ ಭಾಷೆಯನ್ನು ಒಂದು ಸಬ್ಜೆಕ್ಟ್ ಆಗಿ ಪಾಠ ಮಾಡಿ. ಕನ್ನಡ ಮೀಡಿಯಂ ಇಟ್ಕೊಳ್ಳಿ. ಇಂಗ್ಲಿಷ್ ಮೀಡಿಯಂ ಬಿಟ್ಹಾಕಿ. ಎಜುಕೇಷನ್ ಅನ್ನೋದನ್ನ ಸೆಂಟ್ರಲ್ ಸಬ್ಜೆಕ್ಟ್ ಮಾಡಬೇಕು. ಆವಾಗ ಒಂದೇ ಮೆಥೆಡ್ನಲ್ಲಿ ದೇಶದಾದ್ಯಂತ ಶಿಕ್ಷಣ ನಡೆಯುತ್ತೆ. ಈಗ ಅದು ಸ್ಟೇಟ್ ಸಬ್ಜೆಕ್ಟ್ ಆಗಿರುವುದರಿಂದ ಒಂದೊಂದು ಸ್ಟೇಟ್ನಲ್ಲಿ ಒಂದೊದು ಥರಾ ಕಲಿಕೆಯ ವಿಧಾನ ಇದೆ.

ಇಷ್ಟ ಬಂದಹಾಗೆ ಮಾಡ್ಕೊಂಡು ಹೋಗ್ತಿದಾರೆ. ಒಟ್ಟು ಇಂಡಿಯಾ ದೇಶಕ್ಕೆ ಒಂದೇ ರೀತಿಯ ಶಿಕ್ಷಣ ಬೇಕು. ಇದನ್ನ ನಾನು ಅನೇಕ ಸಲ ಹೇಳಿದೀನಿ, ಈಗ ಆಗಬೇಕಿರುವ ಕೆಲಸ ಸಂಸತ್ತಿನಲ್ಲಿ ಈ ಕುರಿತು ತಿದ್ದುಪಡಿಯನ್ನು ತರುವುದು”. ರಾಜ ಮಹಾರಾಜರ ಕಾಲದಲ್ಲಿ ಇದ್ದ ಒಳ್ಳೆಯ ಆಡಳಿತ ಬರಬರುತ್ತಾ ಹದಗೆಟ್ಟು, ರಾಜಕೀಯ, ಆಡಳಿತ, ನ್ಯಾಯಾಂಗ ಇವೆಲ್ಲಾ ಭ್ರಷ್ಟತೆಯಿಂದ ತುಂಬಿತುಳುಕುತ್ತಿರುವ ಬಗ್ಗೆ ಜಿ.ವಿ ಅವರಲ್ಲಿ ಅಪಾರವಾದ ನೋವಿದೆ.

ಪ್ರೊ ಜಿ. ವೆಂಕಟಸುಬ್ಬಯ್ಯನವರು ರಚಿಸಿರುವ ಕೃತಿಗಳಲ್ಲಿ ವಿಮರ್ಶೆಯಾಗಿ ನಯಸೇನ, ಅನುಕಲ್ಪನೆ; ಸಂಪಾದಿತ ಕೃತಿಗಳಾಗಿ ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ; ಅನುವಾದಗಳಾಗಿ ಶಂಕರಾಚಾರ್ಯ, ಕಬೀರ, ಲಿಂಡನ್ ಜಾನ್ಸನ್; ಮಕ್ಕಳ ಕೃತಿಗಳಾಗಿ ರಾಬಿನ್‌ಸನ್ ಕ್ರೂಸೋ, ಕವಿಜನ್ನ, ಚಾವುಂಡರಾಯ; ಕಾವ್ಯಕೃತಿಗಳಾಗಿ ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ ಮುಂತಾದವು ಪ್ರಖ್ಯಾತವಾಗಿವೆ.

ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ಕನ್ನಡ ಸಾಹಿತ್ಯಲೋಕದ ಸಾರಸ್ವತರು ಮುಂತಾದ ವಿಶಿಷ್ಟ ಕೃತಿಗಳೂ ಸೇರಿದಂತೆ ಪ್ರೊ. ಜಿ. ವಿ ಅವರು ಅರವತ್ತಕ್ಕೂ ಹೆಚ್ಚು ಮಹತ್ವಪೂರ್ಣ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಜೆ. ಕೃಷ್ಣಮೂರ್ತಿ ಅವರ ವಿಚಾರವನ್ನೂ ಆಪ್ತವಾಗಿ ಕನ್ನಡಿಗರಿಗೆ ಬರೆದುಕೊಟ್ಟಿದ್ದಾರೆ.

ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಪ್ರೊ. ಜಿ. ವಿ. ಅವರಿಗೆ ಸಂದಿವೆ.

ಪ್ರೊ. ಜಿ. ವೆಂಕಟಸುಬ್ಬಯ್ಯನವರು ಇಂದಿನ ಬರಹಗಾರರು ಚೆನ್ನಾಗಿ ಬರೆಯುತ್ತಿದ್ದಾರೆ. ಚೆನ್ನಾಗಿ ಬರೆಯಿರಿ. ಬರೆಯುವುದಕ್ಕಿಂತ ಹತ್ತುಪಟ್ಟು ಹೆಚ್ಚಾಗಿ ಓದಿ ಎನ್ನುತ್ತಾರೆ. ಎಲ್ಲ ವಯಸ್ಸಿನ ವಯೋಮಾನದವರನ್ನು ಯಾವುದೇ ಭೇದವಿಲ್ಲದೆ ಆತ್ಮೀಯವಾಗಿ ಮಾತನಾಡಿಸುವ ಗುಣ ಅವರ ಬಳಿ ಹೋದ ನಮ್ಮಂತಹ ಪ್ರತಿಯೋರ್ವರಿಗೂ ಲಭ್ಯವಾಗಿದೆ.

ಈ ಹಿರಿಯರಿಗೆ ನಮನ ಸಲ್ಲಿಸುತ್ತಾ ಅವರ ಬದುಕು ಸಂತಸ ಪೂರ್ಣವಾಗಿತ್ತು, ನಮ್ಮ ಕಾಲದ ಶ್ರೇಷ್ಠ ಕನ್ನಡಿಗರಲ್ಲೊಬ್ಬರಾದ ಈ ಶತಾಯುಷಿ ಹಿರಿಯರಿಗೆ ನಮನಪೂರ್ವಕವಾದ ಶ್ರದ್ಧಾಂಜಲಿ ಯನ್ನು ಅರ್ಪಿಸೋಣ.


ಇಂಗಳಗಿ ದಾವಲಮಲೀಕ
ಹತ್ತಿಮತ್ತೂರು

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group