spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಜ್ಞಾನಯೋಗಿಯ ನೈಜಕಥನ

ಪುಸ್ತಕದ ಹೆಸರು : ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು
ಲೇಖಕರು : ಶಂಕರ ಬೈಚಬಾಳ
ಪ್ರಕಾಶಕರು : ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪
ಪುಟ : ೧೨೦ ಬೆಲೆ : ರೂ. ೧೦೦
ಲೇಖಕರ ಸಂಪರ್ಕವಾಣಿ : ೯೪೪೮೭೫೧೯೮೦

ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ನಮ್ಮ ನಾಡಿನ ನಿಜವಾದ ಪುಣ್ಯಪುರುಷರು. ಜಾತಿ-ಧರ್ಮಗಳನ್ನು ಮೀರಿನಿಂತ ವಿಶ್ವಯೋಗಿ. ಜನಿಸಿದ್ದು ಲಿಂಗಾಯತ ಮನೆತನದಲ್ಲಿ, ಬೆಳೆದದ್ದು ವಿಶ್ವಮಾನವರಾಗಿ. ಎಲ್ಲ ಬಗೆಯ ಸಂಕೋಲೆಗಳನ್ನು, ಬಂಧನಗಳನ್ನು ಕಳಚಿ ಬುದ್ಧ ನಿರ್ವಾಣ ಪಡೆದಂತೆ, ಬಸವಣ್ಣನವರು ಬಯಲು-ಬೆಳಕಾದಂತೆ ಸಿದ್ಧೇಶ್ವರರು ವಿಶ್ವಾತ್ಮದ ಒಂದು ಭಾಗವಾದರು. ಇಂತಹ ಮಹಾತ್ಮರನ್ನು ನೆನೆಯುವುದೇ ಘನಮುಕ್ತಿ ಪದಂ ಎಂದು ಮಗ್ಗೆಯ ಮಾಯಿದೇವರು ಹೇಳುತ್ತಾರೆ. ಸಿದ್ಧೇಶ್ವರ ಅಪ್ಪಗಳ ನೈಜ ಜೀವನ ಚರಿತ್ರೆಯನ್ನು ಶಂಕರ ಬೈಚಬಾಳ ಅವರು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ ಒಂದು ಅಮೂಲ್ಯ ಕೃತಿಯೇ ‘ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು’.

- Advertisement -

ಶಂಕರ ಬೈಚಬಾಳ ಅವರು ಬಾಲ್ಯದಿಂದಲೂ ಸಿದ್ಧೇಶ್ವರ ಸ್ವಾಮಿಗಳವರನ್ನು ತುಂಬ ಹತ್ತಿರದಿಂದ ಕಂಡವರು. ಅವರ ಬದುಕು-ಸಂದೇಶಗಳ ಕುರಿತು ನಿತ್ಯ ನಿರಂತರ ಅನುಸಂಧಾನ ಮಾಡಿದವರು. ಪೂಜ್ಯರ ಪ್ರವಚನಗಳನ್ನು ಕೇಳುತ್ತ, ದಾಖಲಿಸುತ್ತ, ಅವರನ್ನು ಆಗಾಗ ಭೇಟಿಯಾಗುತ್ತ, ಅವರೊಂದಿಗೆ ಮುಕ್ತಮನದಿಂದ ಮಾತುಕತೆ ಮಾಡುತ್ತ ಬಂದ ಪರಿಣಾಮವೇ ಪ್ರಸ್ತುತ ಅಮೂಲ್ಯ ದಾಖಲೆಗಳ ಕೃತಿ.

ಭಗವಾನ್ ಬುದ್ಧ, ವ್ಯೋಮಯೋಗಿ ಅಲ್ಲಮರ ತತ್ವಸಿದ್ಧಾಂತಗಳನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತಂದುಕೊಂಡಿದ್ದ ಸಿದ್ಧೇಶ್ವರ ಶ್ರೀಗಳು ತಮ್ಮ ಪ್ರವಚನಗಳ ಮೂಲಕ ನಾಡು-ನುಡಿ ಕಟ್ಟುವ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡಿದವರು. ಪ್ರವಚನ-ಧ್ಯಾನ-ಲಿಂಗಪೂಜೆಯಲ್ಲಿ ಕಾಲ ಕಳೆಯದೆ, ವರ್ತಮಾನದ ಸೂಕ್ಷ್ಮ ಸಮಸ್ಯೆಗಳಿಗೆಲ್ಲ ಸ್ಪಂದಿಸಿದವರು. ಇಂದು ಆಲಮಟ್ಟಿ ಜಲಾಶಯ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗುವುದರ ಹಿಂದೆ ಸಿದ್ಧೇಶ್ವರ ಶ್ರೀಗಳ ಇಚ್ಛಾಶಕ್ತಿ-ಸಂಕಲ್ಪಶಕ್ತಿ ಕೆಲಸ ಮಾಡಿದೆ ಎಂಬುದು ವಿಜಯಪುರ ಜಿಲ್ಲೆಯ ಎಲ್ಲ ಹಿರಿಯರಿಗೂ ವೇದ್ಯವಾದ ಸಂಗತಿಯಾಗಿದೆ.

ಸಿದ್ಧೇಶ್ವರ ಸ್ವಾಮಿಗಳು ಗಹನವಾದ ಅಧ್ಯಾತ್ಮ ತತ್ವಗಳನ್ನು ಹೂ-ಮರ-ಪ್ರಕೃತಿ ಆರಾಧನೆಯ ಮೂಲಕ ಜನಸಾಮಾನ್ಯರಿಗೂ ತಿಳಿಸಿಕೊಟ್ಟ ಮಹಾತ್ಮರು. ಇಂತಹ ಮಹಾತ್ಮರ ಚರಿತ್ರೆಯನ್ನು ಬರೆಯುವುದು ಅಷ್ಟು ಸುಲಭವಲ್ಲ. ಸಾಗರವನ್ನು ವರ್ಣಿಸಿದಂತೆ, ಆಕಾಶವನ್ನು ಅರಿತುಕೊಂಡಂತೆ ವಿಶ್ವವ್ಯಾಪಕವಾದ ಅವರ ಬದುಕು-ಸಂದೇಶಗಳನ್ನು ೧೨೦ ಪುಟಗಳ ಕಿರುಕೃತಿಯಲ್ಲಿ ಶ್ರೀ ಶಂಕರ ಬೈಚಬಾಳ ಅವರು ತುಂಬ ಸೊಗಸಾಗಿ ಚಿತ್ರಿಸಿದ್ದಾರೆ. ‘ಅನ್ನಬಹುದೇನಯ್ಯ ಹಾಡು ಮುಗಿಯಿತ್ತೆಂದು, ಜನ್ಮದಾಕಾಶದಲ್ಲದರ ಬೇರು, ಕನ್ನಡಿಯೊಳೆಷ್ಟು ಕಂಡಿತು ಕನಕಾಚಲವು, ಕೊಡದೊಳೆಷ್ಟು ಹಿಡಿಸಿತು ಕಡಲು ನೀರು’ ಎಂಬ ಅನುಭಾವಿ ಕವಿ ಮಧುರಚೆನ್ನರ ನುಡಿಯಂತೆ ಶಂಕರ ಬೈಚಬಾಳರು ಕರಿಯನ್ನು ಕನ್ನಡಿಯೊಳು ಹಿಡಿದಿಟ್ಟಂತೆ ಪೂಜ್ಯರ ಚರಿತ್ರೆಯನ್ನು ಸಾರವತ್ತಾಗಿ ಹಿಡಿದಿಟ್ಟಿದ್ದಾರೆ.

- Advertisement -

೩೦ ಚಿಕ್ಕ ಚಿಕ್ಕ ಅಧ್ಯಾಯಗಳಲ್ಲಿ ಕೃತಿ ಕವಲೊಡೆದಿದೆ. ಪ್ರತಿಯೊಂದು ಅಧ್ಯಾಯಗಳಿಗೆ ಕೊಟ್ಟ ಶೀರ್ಷಿಕೆಗಳು ತುಂಬ ಮನೋಜ್ಞವಾಗಿವೆ. ‘ವಚನಕ್ಕೆ ಭಾಷ್ಯ ಬರೆದಂತೆ’, ‘ಬಸವಾಲ್ಲಮರ ಶಿವಯೋಗ ಮಾರ್ಗ’, ‘ತಾನಿದ್ದನ್ನು ತನ್ನ ಸ್ವರೂಪವಿಲ್ಲ’, ‘ಏರಬಾರದ ಕಾಯ ರ್ಯಾನ ಸಿದಗೊಂಡ’ ಹೀಗೆ ಎಲ್ಲ ಶೀರ್ಷಿಕೆಗಳು ಬೆಡಗು ಬಿನ್ನಾಣಗಳಿಂದ ಕೂಡಿರುವುದು ವಿಶೇಷ. ಓದುಗರಲ್ಲಿ ಮುಂದೇನು ಎಂಬ ಕುತೂಹಲ ಮೂಡುವಂತೆ ಪ್ರತಿಯೊಂದು ಅಧ್ಯಾಯದಲ್ಲಿ ಶಂಕರ ಬೈಚಬಾಳರು ಸಿದ್ಧೇಶ್ವರ ಶ್ರೀಗಳ ಘನವ್ಯಕ್ತಿತ್ವವನ್ನು ವಿವರಿಸುತ್ತ ಹೋಗುತ್ತಾರೆ.

ಬಿಜ್ಜರಗಿ ಎಂಬ ಹಳ್ಳಿಯಲ್ಲಿ ‘ಸಿದಗೊಂಡ’ ಎಂಬ ನಾಮದಿಂದ ಜನಿಸಿದ ಸಿದ್ಧೇಶ್ವರ ಶ್ರೀಗಳು ಬಾಲ್ಯದಲ್ಲಿಯೇ ಅಧ್ಯಾತ್ಮದತ್ತ ವಾಲಿದ ಘಟನೆಗಳನ್ನು ಶಂಕರ ಅವರು ವಿವರಿಸಿದ ರೀತಿ ತುಂಬ ಹೃದಯಂಗಮವಾಗಿದೆ. ಮಲ್ಲಿಕಾರ್ಜುನ ಶ್ರೀಗಳ ಪ್ರವಚನ ಕೇಳುವುದು, ಅವರ ಪ್ರವಚನದ ಪ್ರಭಾವಕ್ಕೆ ಒಳಗಾಗಿ ಎಳೆವಯದಲ್ಲೇ ಮನೆ ಬಿಟ್ಟು ಹೋಗಲು ಪ್ರಯತ್ನಿಸುವುದು, ಮಲ್ಲಿಕಾರ್ಜುನ ಶ್ರೀಗಳು ಬುದ್ಧಿಮಾತು ಹೇಳುವುದು ಎಲ್ಲ ಘಟನೆಗಳು ಚಲನಚಿತ್ರದಂತೆ ಓದುಗರ ಕಣ್ಣಮುಂದೆ ಹಾದು ಹೋಗುತ್ತವೆ.

‘ಬಿಸಿಲೆಂಬ ಗುರುವಿಂಗೆ ನೆರಳೆಂಬ ಶಿಷ್ಯ ನಿರಾಳ ಬಯಲೇ ಸಜ್ಜೆ’ ಎಂದು ಅಲ್ಲಮ ಹೇಳಿದ್ದನ್ನು ಬೈಚಬಾಳರು ರೂಪಕಾತ್ಮಕವಾಗಿ ವಿವರಿಸುತ್ತ “ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಪೂರ್ವಾಶ್ರಮ ಲಿಂಗಾಯತ ಧರ್ಮದ ಪಂಚಮಸಾಲಿ. ಜ್ಞಾನ ಜಂಗಮನಾಗಲು ಸಿದ್ಧನಾಗಿ ಬಂದ ಸಿದಗೊಂಡನೂ ಲಿಂಗಾಯತ ಧರ್ಮದ ಗಾಣಿಗರು. ಇಬ್ಬರೂ ಜಾತಿ ಜಂಗಮರಲ್ಲ. ಆಗಿನ ವ್ಯವಸ್ಥೆಯಲ್ಲಿ ಇದೂ ಕ್ರಾಂತಿಯ ವಿಷಯವೆ ಆಗಿತ್ತು. ಸೂಕ್ಷ್ಮ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಸಿದಗೊಂಡನಿಗೆ ದೀಕ್ಷೆ ನೀಡಿ, ತಮ್ಮ ಆಶ್ರಮದಲ್ಲಿ ಆಶ್ರಯ ಕೊಟ್ಟು ಜ್ಞಾನಾಮೃತ ಉಣಿಸಿ ‘ಜ್ಞಾನಯೋಗಿ ಶ್ರೀ ಸಿದ್ಧೇಶ್ವರ’ರಿಗೆ ಗುರು ತಂದೆಯಾದವರು ಮಲ್ಲಿಕಾರ್ಜುನ ಸ್ವಾಮಿಗಳು. ಈ ವ್ಯವಸ್ಥೆಯೆಂಬ ಬಿಸಿಲುಗುದುರೆಯಲ್ಲಿ ಅವರೀರ್ವ ಪೂಜ್ಯರ ಅನುಭಾವದ ಆ ಎತ್ತರಕ್ಕೆ ಏರಲಾರದವರು ನಡಗುತ್ತಿದ್ದಾರೆ’(ಪು. ೨೨) ಎಂದು ವ್ಯಾಖ್ಯಾನಿಸಿರುವುದು ಗಮನಿಸಬೇಕಾದ ಅಂಶ. ಇಂದು ಕೆಲವರು ಮಲ್ಲಿಕಾರ್ಜುನ ಸ್ವಾಮಿಗಳ ಮತ್ತು ಸಿದ್ಧೇಶ್ವರ ಸ್ವಾಮಿಗಳು ಹುಟ್ಟಿದ ಜಾತಿಯನ್ನು ಮುಂದಿಟ್ಟುಕೊಂಡು ಮಾತನಾಡುತ್ತಿರುವ ವಿಕೃತ ಮನಸ್ಸುಗಳಿಗೆ ಬೈಚಬಾಳರ ಈ ನುಡಿಗಳು ಸರಿಯಾದ ಚಾಟಿಯೇಟು ಬೀಸಿವೆ ಎಂದೇ ಹೇಳಬೇಕು.

ಈ ಕೃತಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ, ಲಿಂಗಾಯತ ಧರ್ಮವನ್ನು ಕುರಿತು ಸಿದ್ಧೇಶ್ವರ ಅಪ್ಪಗಳು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರೊಂದಿಗೆ ಮುಕ್ತಮನದಿಂದ ಮಾತಾಡಿದ ಸಮಗ್ರ ವಿವರ. ಇಂದು ಕೆಲವು ಉಗ್ರ ಬಸವನಿಷ್ಠರೆನಿಸಿಕೊಂಡವರು ಸಿದ್ಧೇಶ್ವರ ಅಪ್ಪಗಳನ್ನು ಸುಖಾಸುಮ್ಮನೆ ಟೀಕಿಸುತ್ತಾರೆ. ಪೂಜ್ಯರು ಲಿಂಗೈಕ್ಯರಾಗುವ ಪೂರ್ವದಲ್ಲಿ ಎಸ್. ಎಂ. ಜಾಮದಾರ ಅವರು ಬರೆದ ಒಂದು ಕೀಳು ಅಭಿರುಚಿಯ ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತು. ಇದರಿಂದ ಜಾಮದಾರ ಅವರು ಸಣ್ಣವರೆನಿಸಿಕೊಂಡರೆ ವಿನಃ ಸಿದ್ಧೇಶ್ವರ ಅಪ್ಪಗಳ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆಯಾಗಲಿಲ್ಲ ಎಂಬುದನ್ನು ಗಮನಿಸಬೇಕು. ಸಿದ್ಧೇಶ್ವರ ಶ್ರೀಗಳನ್ನು ರವಿ ಬೆಳೆಗೆರೆ ಭೇಟಿಯಾಗಿ ಬಸವಣ್ಣನವರು-ಲಿಂಗಾಯತ ಧರ್ಮದ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ಈ ಕೃತಿಯ ಲೇಖಕರಾದ ಶಂಕರ ಬೈಚಬಾಳರು ಕೂಡ ಸಾಕ್ಷಿಯಾಗಿದ್ದರು. ರವಿ ಬೆಳೆಗೆರೆ ಟಿಪ್ಪಣಿ ಮಾಡಿಕೊಂಡಂತೆ, ಶಂಕರ ಅವರು ಶ್ರೀಗಳ ವಿಚಾರಧಾರೆಯನ್ನು ಬರೆದುಕೊಳ್ಳುತ್ತಾರೆ. ಈ ಸಂದರ್ಶನ ಜರುಗಿ ೨೦ ವರ್ಷಗಳೇ ಆಗಿದೆ. ಆದರೆ ಸಿದ್ಧೇಶ್ವರ ಶ್ರೀಗಳ ವಿನಂತಿ ಮೇರೆಗೆ ರವಿ ಬೆಳೆಗೆರೆ ಆ ಸಂದರ್ಶನವನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಲಿಲ್ಲ. ಶಂಕರ ಬೈಚಬಾಳರು ಅಂದು ನಡೆದ ಎಲ್ಲ ಮಾತುಕತೆಗಳನ್ನು ಪ್ರಸ್ತುತ ಕೃತಿಯಲ್ಲಿ ದಾಖಲಿಸಿದ್ದಾರೆ.

ರವಿ ಬೆಳೆಗೆರೆ ಅವರು “ಬಸವಣ್ಣನವರಿಗೆ ಹೊಸ ಧರ್ಮ ಸ್ಥಾಪನೆಯ ಅವಶ್ಯಕತೆ ಇತ್ತೆ?’ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಸಿದ್ಧೇಶ್ವರ ಶ್ರೀಗಳು ನೀಡಿದ ಉತ್ತರ ಹೀಗಿದೆ: “ಬಸವಣ್ಣನವರಿಗೆ ಹೊಸಮತ ಸ್ಥಾಪನೆಯ ಅವಶ್ಯಕತೆ ಇತ್ತು. ಅದು ಆ ಕಾಲದ ಬಹಳ ಜರೂರ ಅಗತ್ಯವಾಗಿತ್ತು. ಕಾಲಘಟ್ಟದ ಬೌದ್ಧಿಕ ವಾತಾವರಣವೆಂದರೆ, ಅಗ್ರಹಾರ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಚರ್ಚೆಗಳು ಮಾತ್ರ. ವರ್ಣಾಶ್ರಮ ಧರ್ಮದ ಪರಿಪಾಲಕರ ಆಶ್ರಯದಲ್ಲಿದ್ದವು. ಶ್ರುತಿ-ಸ್ಮೃತಿಗಳಲ್ಲಿ ಅಡಕವಾದ ಮತವೆ ಪರಧರ್ಮವೆಂದು ವಾದಿಸುತ್ತಿದ್ದವರಿಗೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಚೈತನ್ಯವಾಯಿತು, ಹೊಸ ಭರವಸೆಯನ್ನು ನೀಡಿತು. ಅಗ್ರಹಾರ ದೇವಾಲಯಗಳಲ್ಲಿ ಸಂಪತ್ತು ಕೊಳೆಯುತ್ತಿತ್ತು. ಕಾಶ್ಮೀರದ ಪ್ರಭು ಹರ್ಷನೆಂಬುವವನು ದೇವಸ್ಥಾನದ ಮೂರ್ತಿಗಳನ್ನೆಲ್ಲಾ ಕಿತ್ತಿಸಿ ಲೋಹವಾಗಿ ಪರಿವರ್ತಿಸಲು ‘ದೇವೋತ್ಪಾಟನ ಮಂತ್ರಿ’ ಎಂಬ ಸಚಿವನನ್ನೆ ಇರಿಸಿದ್ದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಘಜನಿಯ ದೇವಸ್ಥಾನದ ದಾಳಿಗಳ ಬಗ್ಗೆ ಕೇಳಿದ್ದೇವೆ. ಇಂತಹ ವಿಚಾರಗಳನ್ನು ಗಮನಿಸಿದ ಉತ್ತರದ ಅನೇಕ ಆಗಿನ ಶೈವರು, ದಕ್ಷಿಣ ಭಾರತಕ್ಕ ತಮ್ಮ ಅಪಾರ ಸಿರಿ ಸಂಪತ್ತು, ರಾಜಪದವಿಯನ್ನು ತ್ಯಾಗ ಮಾಡಿ ದಕ್ಷಿಣ ಭಾರತಕ್ಕೆ ಬಂದಿದ್ದಾರೆ. ಇವರ್ಯಾರೂ ಸಾಮಾನ್ಯರಲ್ಲ. ಕಾಶ್ಮೀರದ ಮಹದೇವ ಭೂಪಾಲ, ಸುಜ್ಞಾನಿದೇವ, ಬೊಂತಾದೇವಿ ಬಸವಣ್ಣನವರ ವಿಚಾರ ಒಪ್ಪಿ ಬಂದವರು. ಕಲ್ಯಾಣದಲ್ಲಿ ಜನಗಳ ವಾಣಿಯಾಗಿ ರೂಪುಗೊಳ್ಳುತ್ತಿದ್ದ ಅತಿವರ್ಣಾಶ್ರಮಿ ವೀರಶೈವ ಪಂಥ ಬಸವಣ್ಣನವರ ಲಿಂಗಾಯತವಾಗಿ ಪರಿಣಮಿಸುವುದಕ್ಕೆ ಇವರೆಲ್ಲರೂ ಇಂಬುಕೊಟ್ಟರು. ದೇಹವೆ ದೇವಾಲಯ ಎಂದರು, ಗುಡಿ ಸಂಸ್ಕೃತಿಯನ್ನು ಗಡಿಪಾರು ಮಾಡಿದರು…..ನಿಸ್ಸಂಶಯವಾಗಿ ಬಸವಣ್ಣನವರು ಇಷ್ಟಲಿಂಗದ ಮುಖಾಂತರ ಗುಡಿ ಸಂಸ್ಕೃತಿಯನ್ನು ದೇಹಕ್ಕೆ, ಗುಡಿಯ ಅರಿವಿಗೆ ತಮದರು. ಮಾರ್ಟಿನ್ ಲೂಥರ್ ದೇವರನ್ನು ಕೆಥೋಲಿಕ್ ಚರ್ಚಿನಿಂದ ಬಿಡುಗಡೆ ಮಾಡಿ ಹೃದಯಕ್ಕೆ ತಂದು ಮುಟ್ಟಿಸಿದರು. ಇವರಿಬ್ಬರ ಬೋಧೆಗಳು ಒಂದೆ. (ಪು. ೮೬-೮೭)

ಸಿದ್ಧೇಶ್ವರ ಅಪ್ಪಗಳು ಎಷ್ಟು ಸ್ಪಷ್ಟವಾಗಿ ಲಿಂಗಾಯತ ಧರ್ಮದ ಅಸ್ತಿತ್ವ ಮತ್ತು ಅಸ್ಮಿತೆ ಕುರಿತು ಹೇಳಿದ್ದಾರೆ ಎಂಬುದರ ಅರಿವು ಇದರಿಂದ ನಮಗಾಗುತ್ತದೆ. ಈ ಮಾತುಗಳನ್ನು ಎಲ್ಲ ಉಗ್ರ ಬಸವನಿಷ್ಠರು ಗಮನಿಸಬೇಕು. ಎಲ್ಲ ಧರ್ಮಗಳಲ್ಲಿಯೂ ಮತಾಂಧರಿರುವಂತೆ ತಮ್ಮದೇ ಶ್ರೇಷ್ಠ ಎಂಬ ವ್ಯಸನಕ್ಕೆ ಒಳಗಾದ ಬಸವನಿಷ್ಠರೂ ಇದ್ದಾರೆ.

ಸಿದ್ಧೇಶ್ವರ ಶ್ರೀಗಳ ಹೃದಯಾಳದ ಈ ಮಾತುಗಳನ್ನು ಇಂದು ಅವರ ಶಿಷ್ಯರು ಮರೆಮಾಚುವ ಸಂಭವವೇ ಹೆಚ್ಚು. ೨೦೧೭ರಲ್ಲಿ ಲಿಂಗಾಯತ ಸ್ವತಂತ್ರಧರ್ಮ ಹೋರಾಟ ನಡೆದಾಗ, ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಎಂ.ಬಿ.ಪಾಟೀಲ ಅವರ ಮುಂದೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ವರ್ತಮಾನ ಪತ್ರಿಕೆಗಳಲ್ಲಿ ಈ ವಿಷಯ ಬಂದಾಗ, ಅವರ ಕೆಲವು ಬುದ್ಧಿಗೇಡಿ ಶಿಷ್ಯರು ಅವರ ಮೇಲೆ ಒತ್ತಡ ತಂದು, ತಾವು ಹಾಗೆ ಹೇಳಿಲ್ಲವೆಂಬ ಹೇಳಿಕೆ ಬಿಡುಗಡೆ ಮಾಡಿಸಿದರು. ಸಿದ್ಧೇಶ್ವರ ಶ್ರೀಗಳ ವಿಷಯದಲ್ಲಿಯೂ ಹೀಗಾಗಿರುವುದು ನಿಜವೆನಿಸುತ್ತದೆ.

ಇತ್ತೀಚೆಗೆ ಘೊಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು ತಮ್ಮ ಭಾಷಣವೊಂದರಲ್ಲಿ ‘ಸಿದ್ಧೇಶ್ವರ ಶ್ರೀಗಳು ತಮ್ಮ ಜೀವನ ಪರ್ಯಂತ ಇಷ್ಟಲಿಂಗ ಪೂಜೆಯನ್ನು ಮಾಡಿಕೊಳ್ಳುತ್ತಿದ್ದರು’ ಎಂಬ ಸತ್ಯವನ್ನು ಹೇಳಿದರು. ಆದರೆ ಎಷ್ಟೋ ಜನ ಅವರಿಗೆ ಲಿಂಗವೇ ಇರಲಿಲ್ಲವೆಂದು ಸುಳ್ಳು ಹೇಳುತ್ತ ತಿರುಗಿದರು. ಅವರು ವಿಶ್ವ ಸಂತರಾಗಿದ್ದರು. ಆದರೆ ಅವರ ಶಿಷ್ಯರೆನಿಸಿಕೊಂಡ ಒಬ್ಬ ಮರಿ ಜಗದ್ಗುರು ಇಂದು ಒಂದು ಧರ್ಮವನ್ನು ವಿನಕಾರಣ ಟೀಕಿಸುತ್ತ, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಬುದ್ಧ ತನ್ನ ಧರ್ಮವನ್ನು ಸತ್ಯಶುದ್ಧ ಶೀಲ ಚಾರಿತ್ರ್ಯದ ಮೇಲೆಯೇ ನಿರ್ಮಾಣ ಮಾಡಿದ್ದ, ಆದರೆ ಆತನ ಕಾಲಾನಂತರ ಅವನ ಶಿಷ್ಯರು ಅತಿಯಾದ ಮೂಢನಂಬಿಕೆಗಳನ್ನು ಬೆಳೆಸಿ, ತಾಂತ್ರಿಕ ಮಾರ್ಗ ಹಿಡಿದು ಇಡೀ ಬೌದ್ಧ ಧರ್ಮವನ್ನೇ ಹಾಳು ಮಾಡುವ ಕೆಲಸ ಮಾಡಿದರು. ಸಮಾಜದಲ್ಲಿ ಎಲ್ಲರೂ ಪ್ರೀತಿಯಿಂದ ಬಾಳಿರಿ ಎಂದು ಹೇಳಿದ ಸಿದ್ಧೇಶ್ವರ ಶ್ರೀಗಳ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅವರ ಶಿಷ್ಯರಲ್ಲಿ ಕೆಲವರು ನಡೆದುಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯೇ ಆಗಿದೆ.

ಶಂಕರ ಬೈಚಬಾಳ ಅವರು ಸಿದ್ಧೇಶ್ವರ ಶ್ರೀಗಳ ಬದುಕಿನ ವೈಯಕ್ತಿಕ ವಿವರಗಳ ಜೊತೆಗೆ ಅವರ ಪ್ರವಚನಗಳಿಂದ ಆದ ಪರಿಣಾಮಗಳನ್ನು ಕುರಿತು ತುಂಬ ಸ್ವಾರಸ್ಯವಾಗಿ ವಿವರಿಸಿದ್ದಾರೆ. ಶ್ರೀಗಳ ಬದುಕನ್ನು ತುಂಬ ವೈಭವೀಕರಣಗೊಳಿಸದೆ, ವಾಸ್ತವ ನೆಲೆಯಲ್ಲಿ ಅವರ ಜೀವನದ ವಿವರಗಳನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.

ಸಿದ್ಧೇಶ್ವರ ಶ್ರೀಗಳ ಕುರಿತು ಈಗಾಗಲೇ ಹಲವು ಕೃತಿಗಳು ಪ್ರಕಟಗೊಂಡಿವೆ, ಆದರೆ ಭಿನ್ನವಾದ ಆಲೋಚನಾ ಕ್ರಮದಲ್ಲಿ ಅವರ ಬದುಕನ್ನು ಕಟ್ಟಿಕೊಟ್ಟ ಒಂದು ವಿನೂತನ ಪ್ರಯತ್ನ ಶಂಕರ ಬೈಚಬಾಳರ ಕೃತಿಯಲ್ಲಿರುವುದು ಗಮನಿಸುವ ಅಂಶ. ಲಿಂಗಾಯತ ಪುಣ್ಯಪುರುಷ ಮಾಲೆಯ ಒಂದು ಅತ್ಯುತ್ತಮ ಕೃತಿಯಾಗಿದೆ. ಇಂತಹ ಅಪರೂಪದ ವ್ಯಕ್ತಿಚಿತ್ರಣವನ್ನು ಕಟ್ಟಿಕೊಟ್ಟ ಶಂಕರ ಬೈಚಬಾಳ ಅವರಿಗೂ ಪ್ರಕಟಿಸಿದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರಿಗೂ ವಂದನೆ-ಅಭಿವಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group