spot_img
spot_img

ನಾಟಕ, ಸಿನೆಮಾ ಎರಡನ್ನೂ ಬೆಳೆಸಿದ ರಂಗಋಷಿ ಬಿ. ವಿ. ಕಾರಂತರು

Must Read

- Advertisement -

ಇಂದು (ಸೆಪ್ಟೆಂಬರ್ 19, 1929) ಬಿ. ವಿ. ಕಾರಂತ ಅವರ ಜನ್ಮದಿನ. ತನ್ನ ಇಡೀ ಜೀವನವನ್ನು ನಾಟಕ ಮತ್ತು ಸಿನೆಮಾಗಳಿಗೆ ಧಾರೆ ಎರೆದ ಬಾಬುಕೋಡಿ ವೆಂಕಟರಮಣ ಕಾರಂತರು ಕನ್ನಡ ಮತ್ತು ಹಿಂದಿ  ರಂಗಭೂಮಿಯನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದವರು. ಅವರು ನಮ್ಮ ಇಂದಿನ ಐಕಾನ್.

ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಎಂಬ ಪುಟ್ಟ ಊರಿನಲ್ಲಿ. ಬಾಲ್ಯದಲ್ಲಿ ನಾಟಕದ ಹುಚ್ಚು ಅಧಿಕವಾಯಿತು. 3ನೆ ತರಗತಿಯಲ್ಲಿದ್ದಾಗ 

“ನನ್ನ ಗೋಪಾಲ” ನಾಟಕದಲ್ಲಿ ಅಭಿನಯಿಸಿದ್ದು ತಿರುವು. ರಾತ್ರೋ ರಾತ್ರಿ ಮನೆ ಬಿಟ್ಟು ಓಡಿ ಹೋಗಿ ಗುಬ್ಬಿ ವೀರಣ್ಣ ನಾಟಕ ಮಂಡಳಿಯನ್ನು ಸೇರಿದರು. ಆಗ ರಾಜಕುಮಾರ್ ಕೂಡ ಅಲ್ಲಿ ಅಭಿನಯಿಸುತ್ತಿದ್ದರು. ಕಾರಂತರ ಅಗಾಧ ಪ್ರತಿಭೆಯನ್ನು ಗಮನಿಸಿದ ಗುಬ್ಬಿ ವೀರಣ್ಣ ಅವರು  “ಹುಡುಗ, ನಿನ್ನ ಪ್ರತಿಭೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನೀನು ಬನಾರಸಗೆ ಹೋಗು. ಪದವಿ ಸಂಪಾದಿಸಿಕೊಂಡು ಬಾ” ಅಂದರು. ಗುರುವಿನ ಆಶೀರ್ವಾದವನ್ನು ತಲೆ ಮೇಲೆ ಹೊತ್ತುಕೊಂಡು ಕಾರಂತರು ಬನಾರಸ್ಸಿಗೆ ಬಂದರು. ಮಾಸ್ಟರ್ಸ್ ಡಿಗ್ರೀ ಪೂರ್ತಿ ಮಾಡಿದರು. ಓಂಕಾರ ನಾಥ್ ಠಾಕೂರ್ ಅವರಿಂದ ಹಿಂದುಸ್ತಾನಿ ಸಂಗೀತವನ್ನು ಕಲಿತರು. ಅದೇ ಹೊತ್ತಿಗೆ ಸ್ವತಃ ಕಲಾವಿದೆ ಮತ್ತು ನಿರ್ದೇಶಕಿ ಆದ ಪ್ರೇಮಾ ಅವರನ್ನು ಮದುವೆ ಆದರು. 

- Advertisement -

ಬೆಂಗಳೂರಿಗೆ ಬಂದು ಕಾರಂತರು ‘ಬೆನಕ’ ಎಂಬ ನಾಟಕ ತಂಡ ಕಟ್ಟಿದರು. ಅದುವರೆಗೂ ಪರದೆ ನಾಟಕಗಳು ಮಾತ್ರ ಮಿಂಚುತ್ತಿದ್ದ  ನಾಟಕರಂಗದಲ್ಲಿ ಪ್ರಯೋಗಾತ್ಮಕ ಹೊಸ ಅಲೆಯ ನಾಟಕಗಳನ್ನು ಕಾರಂತರು ನಿರ್ದೇಶನ ಮಾಡಿದರು. ಧ್ವನಿ, ಬೆಳಕು, ರಂಗವಿನ್ಯಾಸ, ವೇಷಭೂಷಣ, ಸಂಗೀತ, ಪ್ರಸಾಧನ ಪ್ರತೀ ವಿಭಾಗದಲ್ಲೂ ನೂತನ ಆವಿಷ್ಕಾರ ಮಾಡಿದರು. ಆಗ ಅವರ ಜೀವನದಲ್ಲಿ ಎರಡನೇ ಅತೀ ದೊಡ್ಡ ತಿರುವು ಬಂದಿತು. ದೆಹಲಿಯ ವಿಶಾಲವಾದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ( NSD) ಅವರನ್ನು ಕೈಬೀಸಿ ಕರೆಯಿತು. ಅಲ್ಲಿ ಪದವೀಧರರಾದ ಕಾರಂತರು ಮತ್ತೆ ಹಿಂದಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. 

ಮಧ್ಯಪ್ರದೇಶ ಸರಕಾರವು  ಅವರನ್ನು ಭೋಪಾಲಕ್ಕೆ ಆಮಂತ್ರಿಸಿ ‘ರಂಗ ಮಂಡಲ’ ಎಂಬ ರೆಪರ್ಟರಿ ಯನ್ನು  ಮುನ್ನಡೆಸುವ ಅವಕಾಶ ನೀಡಿತು. ಅಲ್ಲಿ ಕಾರಂತರು ನೂರಾರು ನವ್ಯನಾಟಕಗಳನ್ನು ನಿರ್ದೇಶನ ಮಾಡಿದರು. ಅವರ ರಂಗ ತರಬೇತಿ ಕಾರ್ಯಾಗಾರಗಳು ತುಂಬಾ ಜನಪ್ರಿಯ ಆದವು. ಆದರೆ ಸಜ್ಜನರಿಗೆ ಯಾವಾಗಲೂ ಅಗ್ನಿ  ಪರೀಕ್ಷೆಗಳು ಹೆಚ್ಚು! ವಿಭಾ ಮಿಶ್ರಾ ಎಂಬ ರಂಗನಟಿಯ ಕೊಲೆ ಪ್ರಯತ್ನದ  ಆರೋಪದಲ್ಲಿ ಕಾರಂತರು ಸೆರೆಮನೆಗೆ ಸೇರಿದರು! ಮುಂದೆ ಅವರು ನಿರಪರಾಧಿಯೆಂದು ಪ್ರೂವ್ ಆಯಿತು. ಆಗ  ಸ್ವಾಭಿಮಾನಿ ಕಾರಂತರು ತಮ್ಮ ರೆಪರ್ಟರಿ ಕೆಲಸಗಳನ್ನು ಅರ್ಧಕ್ಕೇ ಬಿಟ್ಟು ಕರ್ನಾಟಕಕ್ಕೆ ಬಂದರು. 

ಮೈಸೂರಿನಲ್ಲಿ ಆಗ ತಾನೇ ಕಣ್ಣು ಬಿಡುತ್ತಿದ್ದ ‘ರಂಗಾಯಣ’ ಎಂಬ ರೆಪರ್ಟರಿ ಸಂಸ್ಥೆಗೆ  ಸ್ಥಾಪಕ ನಿರ್ದೇಶಕರಾಗಿ ಕಾರಂತರನ್ನು ಕರ್ನಾಟಕ ಸರಕಾರವು ನೇಮಕ ಮಾಡಿತು. ಅಲ್ಲಿ ನೆಲೆ ನಿಂತ ಕಾರಂತರು ನೂರಾರು ನಾಟಕಗಳನ್ನು ನಿರ್ದೇಶನ ಮಾಡಿದರು. ಮಕ್ಕಳ ನಾಟಕಗಳನ್ನು ವೇದಿಕೆಗೆ ಏರಿಸಿದರು. ನಾಟಕದ ಜೊತೆಗೆ ಯಕ್ಷಗಾನವನ್ನು ಬ್ಲೆಂಡ್ ಮಾಡಿದರು. 

- Advertisement -

ಹಯವದನ, ಕತ್ತಲೆ ಬೆಳಕು, ಹುಚ್ಚು ಕುದುರೆ, ಯೇವಂ ಇಂದ್ರಜಿತ್, ಸಂಕ್ರಾಂತಿ, ಈಡಿಪಸ್, ಜೋಕುಮಾರ ಸ್ವಾಮಿ, ಸತ್ತವರ ನೆರಳು, ಹುತ್ತವ ಬಡಿದರೆ, ಗೋಕುಲ ನಿರ್ಗಮನ…. ಎಲ್ಲವೂ ಅದ್ಭುತ ಟ್ರೆಂಡ್ ಸೆಟ್ಟರ್ ನಾಟಕಗಳು!  ಪಂಜರ ಶಾಲೆ, ನೀಲಿ ಕುದುರೆ, ಹೆಡ್ದಾಯಣ, ಅಳಿಲು ರಾಮಾಯಣ ಮೊದಲಾದ ಮಕ್ಕಳ ನಾಟಕಗಳು ಸೂಪರ್ ಆಗಿ ಮೂಡಿ ಬಂದವು. ಇಂಗ್ಲಿಷ್ , ಹಿಂದಿ ಮತ್ತು ಸಂಸ್ಕೃತ ಭಾಷೆಯ ಜನಪ್ರಿಯ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ವೇದಿಕೆ ಏರಿಸಿದ ಕೀರ್ತಿ ಕಾರಂತರಿಗೆ ದೊರೆಯಿತು. 

ಸಿನೆಮಾ ಕಾರಂತರಿಗೆ ಒಲಿದ ಇನ್ನೊಂದು ಸಶಕ್ತವಾದ  ಮಾಧ್ಯಮ. ನಾಲ್ಕು ಸಿನೆಮಾ ನಿರ್ದೇಶನ ಮಾಡಿದ ಕಾರಂತರು ಇಪ್ಪತ್ತಾರು ಸಿನೆಮಾಗಳಿಗೆ  ಸಂಗೀತವನ್ನು ನೀಡಿದರು. ಅವರು ಕೆಲಸ ಮಾಡಿದ ವಂಶ ವೃಕ್ಷ, ತಬ್ಬಲಿಯು ನೀನಾದೆ ಮಗನೆ, ಚೋಮನ ದುಡಿ, ಘಟ ಶ್ರಾದ್ಧ, ಋಷ್ಯ ಶ್ರಂಗ ಇವೆಲ್ಲವೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಸಿನೆಮಾಗಳು. ಕಾರಂತರು ತಮ್ಮ ಅಭಿಜಾತ ಪ್ರತಿಭೆಯನ್ನು ಭಾಷೆಯ ಬಂಧನವಿಲ್ಲದೆ ಜಗದಗಲ ಬಿತ್ತರಗೊಳಿಸಿದರು. 

ಅವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ, ಮಧ್ಯಪ್ರದೇಶ ಸರಕಾರವು ಕಾಳಿದಾಸ ಸಮ್ಮಾನ, ಕರ್ನಾಟಕ ಸರಕಾರವು ಗುಬ್ಬಿ ವೀರಣ್ಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿವೆ. ಕಾರಂತರಿಗೆ ನೂರಾರು ಇತರ ಪ್ರಶಸ್ತಿಗಳು ಕೂಡ ಲಭಿಸಿವೆ.  

ನಾಟಕ ಮತ್ತು ಸಿನೆಮಾ ಎರಡೂ ರಂಗದಲ್ಲಿ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿದ ಕಾರಂತರು 2002 ನೆ ಇಸವಿ  ಸೆಪ್ಟೆಂಬರ್ 1 ರಂದು ಕ್ಯಾನ್ಸರಿಗೆ ಬಲಿಯಾದರು. ಬಿ.ವಿ. ಕಾರಂತರು ನಿಜವಾದ  ಅರ್ಥದಲ್ಲಿ ‘ನಾಟಕ ರಂಗದ ಋಷ್ಯಶೃಂಗ’ರೇ ಸರಿ! 

ಇವರಿಗೆ ಸಮಸ್ತ ಕರ್ನಾಟಕ ಶಿಕ್ಷಕರ ಬಳಗದ ವತಿಯಿಂದ ಅನಂತಾನಂತ ನಮನಗಳು.


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group