spot_img
spot_img

ಹೊಸಪುಸ್ತಕ ಓದು: ಆಂಧ್ರದಿಂದ ಬಂದ ಅನುಭಾವಿಯ ಕನ್ನಡ ಸ್ವರವಚನಗಳ ಅಪೂರ್ವ ಸಂಕಲನ

Must Read

- Advertisement -

ಆಂಧ್ರದಿಂದ ಬಂದ ಅನುಭಾವಿಯ ಕನ್ನಡ ಸ್ವರವಚನಗಳ ಅಪೂರ್ವ ಸಂಕಲನ

ಪುಸ್ತಕದ ಹೆಸರು: ಶ್ರೀ ಘನಮಠ ಶಿವಯೋಗಿಗಳವರ ಸ್ವರವಚನಗಳು

ಸಂಪಾದಕರು: ಡಾ. ಕೆ. ಶಶಿಕಾಂತ

ಪ್ರಕಾಶಕರು: ಶ್ರೀ ಘನಮಠೇಶ್ವರ ಮಠ, ಸಂತೆಕೆಲ್ಲೂರ, ೨೦೨೪

- Advertisement -

ಪುಟ: ೨೩೨ ಬೆಲೆ : ರೂ. ೧೫೦

ಸಂಪಾದಕರ ಸಂಪರ್ಕವಾಣಿ: ೭೯೭೫೮೫೧೨೦೮

‘ಶ್ರೀ ಗುರು ಬಸವಲಿಂಗಾಯ ನಮಃ’ ಎಂಬ ಮಂತ್ರವನ್ನು ಹಾಡಿನ ರೂಪದಲ್ಲಿ ಸಮಸ್ತ ಬಸವಭಕ್ತರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದ ಮೊಟ್ಟ ಮೊದಲ ಕೀರ್ತಿ ಘನಮಠದ ನಾಗಭೂಷಣ ಶಿವಯೋಗಿಗಳವರಿಗೆ ಸಲ್ಲುತ್ತದೆ. ಬಸವಣ್ಣನವರ ನಾಮವು ಮಂತ್ರವಾಗಿ ನಿತ್ಯ ಪಠಿಸಬೇಕೆಂಬ ಹಂಬಲದಿಂದ ಶಿವಯೋಗಿಗಳು ತಮ್ಮ ಸ್ವರವಚನಗಳ ಮೂಲಕ ಲೋಕದ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಿದರು. ಅಪ್ಪಟ ಬಸವತತ್ವವನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಘನಮಠ ಶಿವಯೋಗಿಗಳು ನಿಜವಾದ ಶರಣಧರ್ಮದ ಮರ್ಮವನ್ನು  ತೋರಿದವರು. ಲಿಂಗಾಯತ ಧರ್ಮವನ್ನು ಅನುರಿಸುವರು ಬಹುತೇಕ ಕೃಷಿಕರು. ಹೀಗಾಗಿ ಕೃಷಿಕರ ಬದುಕು ಬಂಗಾರವಾಗಲೆಂದು ಘನಮಠ ಶಿವಯೋಗಿಗಳು ‘ಕೃಷಿಜ್ಞಾನ ಪ್ರದೀಪಿಕೆ’ ಎಂಬ ಮೌಲಿಕ ಗ್ರಂಥವನ್ನು ರಚನೆ ಮಾಡಿದರು. ಒಬ್ಬ ಸಾಧಕನು ರೈತನಾಗಿ ಲೋಕದ ಜನತೆಗೆ ಆಹಾರ ಬೆಳೆಯುವಂತೆ, ತನ್ನ ದೇಹವನ್ನೇ ಕೃಷಿಭೂಮಿಯಂತೆ ಪರಿಭಾವಿಸಿ, ಆತ್ಮಕಲ್ಯಾಣವನ್ನು ಸಾಧಿಸುವ ಉಭಯ ಉಪಯೋಗಿ ವಿಚಾರಗಳನ್ನು ಕೃಷಿಜ್ಞಾನ ಪ್ರದೀಪಿಕೆ ಕೃತಿಯ ಮೂಲಕ ತಿಳಿಸಿದ ಶ್ರೇಷ್ಠ ಚಿಂತಕರು ಘನಮಠ ಶಿವಯೋಗಿಗಳು. ಹಾಗೆಯೇ ಸ್ವರವಚನಗಳನ್ನು ರಚಿಸುವ ಮೂಲಕ ಸಾಮಾನ್ಯ ಜನರೂ ಪರತತ್ವ ಚಿಂತನೆಯನ್ನು ಅರಿಯಲು ದಾರಿ ತೋರಿದ್ದಾರೆ. ಇಂತಹ ಮಹಾ ಅನುಭಾವಿಗಳ ೧೫೦ ಅಮೂಲ್ಯ ಸ್ವರವಚನಗಳನ್ನು ಶಾಸ್ತ್ರಶುದ್ಧವಾಗಿ ಶ್ರಮ-ಶ್ರದ್ಧೆಯಿಂದ ಸಂಪಾದಿಸಿದವರು ಡಾ. ಕೆ. ಶಶಿಕಾಂತ ಅವರು.

- Advertisement -

ಡಾ. ಕೆ. ಶಶಿಕಾಂತ ಅವರು ಘನಮಠ ಶಿವಯೋಗಿಗಳ ಜೀವನ-ಸಾಧನೆ-ಅವರ ಸ್ವರವಚನಗಳ ಕುರಿತು ಕಳೆದ ಇಪ್ಪತ್ತೈದು ವರ್ಷಗಳಿಂದ ಅಧ್ಯಯನ-ಸಂಶೋಧನೆ ಮಾಡುತ್ತ ಬಂದಿದ್ದಾರೆ. ‘ಘನಮಠದರ‍್ಯರ ತತ್ವಪದಗಳು : ಒಂದು ಅಧ್ಯಯನ’ ಎಂಬ  ಸಂಶೋಧನಾ ಪ್ರಬಂಧವನ್ನು ಬರೆದು ೨೦೦೧ರಲ್ಲಿಯೇ ಎಂ.ಫಿಲ್ ಪದವಿ ಪಡೆದಿದ್ದರು. ಈ ಕೃತಿಯನ್ನು ದೇಶನೂರು ವಿರಕ್ತಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ಯವರು ಪ್ರಕಟಮಾಡಿದ್ದರು. ಅಂದಿನಿಂದ ಡಾ. ಕೆ. ಶಶಿಕಾಂತ ಅವರು ಘನಮಠದರ‍್ಯರ ಕುರಿತು ನಿರಂತರವಾಗಿ ಅಧ್ಯಯನ ಮಾಡುತ್ತಲೇ ಬಂದಿದ್ದಾರೆ. ಈ ಅಧ್ಯಯನದ ಫಲವಾಗಿ ೧೫೦ ಸ್ವರವಚನಗಳನ್ನು ಸಂಗ್ರಹಿಸಿ ೨೦೦೬ರಲ್ಲಿ ಪ್ರಕಟಿಸಿದ್ದರು. ಈಗ ಮತ್ತಷ್ಟು ಪರಿಷ್ಕರಿಸಿ ನೂತನ ಆವೃತ್ತಿಯನ್ನು ೧೪ ಜನೆವರಿ ೨೦೨೪ರಂದು ಹೊರತಂದಿರುವುದು ನಿಜಕ್ಕೂ ಅಧ್ಯಾತ್ಮ ಮುಮುಕ್ಷುಗಳಿಗೆ ಕೈಪಿಡಿಯೊಂದನ್ನು ಕೊಟ್ಟಂತಾಗಿದೆ.

   ಘನಮಠ ಶಿವಯೋಗಿಗಳು ರಚಿಸಿದ ಸ್ವರವಚನ ಸಾಹಿತ್ಯ ಪ್ರಕಾರದ ಹುಟ್ಟು ಬೆಳವಣಿಗೆ ಬಗ್ಗೆ ಡಾ. ಕೆ. ಶಶಿಕಾಂತ ಅವರು ಅಭ್ಯಾಸಪೂರ್ಣ ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ. ತತ್ವಪದ, ಕೈವಲ್ಯಪದ, ಅನುಭಾವ ಪದ, ಹಾಡುಗಬ್ಬ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗೀತ ಸಾಹಿತ್ಯವನ್ನು ಎರಡು ವಿಧದಲ್ಲಿ ಸಂಪಾದಕರು ವಿಂಗಡಿಸಿರುವುದು ಅವರ ಔಚಿತ್ಯಜ್ಞಾನಕ್ಕೆ ನಿದರ್ಶನವಾಗಿದೆ. ಅವಧೂತರು ಬರೆದ ಪದಗಳನ್ನು ‘ತತ್ವಪದ’ಗಳೆಂದು, ಶರಣ ಮಾರ್ಗಾವಲಂಬಿ ಶಿವಯೋಗಿಗಳು ರಚಿಸಿದ ಪದಗಳನ್ನು ‘ಸ್ವರವಚನ’ಗಳೆಂದು ಸ್ಪಷ್ಟವಾಗಿ ಗುರುತಿಸಿರುವುದು ಅವರ ನಿಶ್ಚಿತ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಶರಣರು ರಚಿಸಿದ ಈ ಹಾಡುಗಳಿಗೆ ಮೊದಲು ‘ವಚನ’ ಎಂದು ಕರೆಯುತ್ತಿದ್ದಂತೆ ಕಂಡುಬರುತ್ತದೆ. ಮುಂದೆ ಗದ್ಯಗಂಧಿಯಾದ ಅವರ ವಚನಗಳಿಂದ ರಾಗ ತಾಳ ಸಮನ್ವಿತವಾದ ಈ ಹಾಡುಗಳನ್ನು ಬೇರ್ಪಡಿಸಿ ಹೇಳಲು ಗೀತ, ಹಾಡು, ಸ್ವರಪದ, ಸ್ವರವಚನ, ತತ್ವಪದ ಎಂದು ಕರೆಯತೊಡಗಿದರೆಂದು ಕಾಣುತ್ತದೆ. ಆದರೆ ಈ ಶರಣರ ಸ್ವರವಚನ ಸಾಹಿತ್ಯದ ದಿಕ್ಕನ್ನು ತಪ್ಪಿಸಿದವರು ಡಾ. ಎಲ್. ಬಸವರಾಜು ಅವರು. ‘ಶಿವದಾಸ ಗೀತಾಂಜಲಿ’ ಎಂಬ ಸಂಕಲನದ ಮೂಲಕ ಶರಣರನ್ನು ದಾಸರ ಮಟ್ಟಕ್ಕೆ ತಂದು ನಿಲ್ಲಿಸಿದರು. ೧೨ನೇ ಶತಮಾನದಲ್ಲಿ ಈ ಸಾಹಿತ್ಯದ ಉಗಮವಾಯಿತು ಎಂದು ಹೇಳುವ ಎಲ್. ಬಸವರಾಜು ಅವರ ವಿವರಣೆ ಹೀಗಿದೆ:

“ಇಡೀ ಭಾರತೀಯ ಸಾಹಿತ್ಯಕ್ಕೆ ವಚನವೆಂಬ ಅಭೂತಪೂರ್ವ ಕಾಣಿಕೆಯನ್ನು ಕೊಟ್ಟ ಶಿವದಾಸರು ತಮ್ಮ ಕಾಲಕ್ಕೆ ಅಥವಾ ತತ್ಪೂರ್ವಕ್ಕೆ ಕನ್ನಡದಲ್ಲಿಲ್ಲದಿದ್ದ ಹಾಡುಗಳನ್ನು ಬರೆಯಲೂ ಮೊದಲಿಗರಾದರು.  ಶಿವಶರಣರು ಬರೆದ ಈ ಹಾಡುಗಳು ಪಲ್ಲವದಿಂದ ಕೂಡಿ ಬೇರೆ ಬೇರೆ ರಾಗಗಳಲ್ಲಿ ಹಾಡಲು ಅನುವರಿತು ರಚಿತವಾದ ಗೇಯಕೃತಿಗಳು. ಮುಂದೆ ೧೫-೧೬ನೆಯ ಶತಮಾನಗಳಲ್ಲಿ ಹರಿದಾಸರು ಯಾವ ಕೀರ್ತನ ಸಾಹಿತ್ಯ ಪ್ರಕಾರದಿಂದ ಇಡೀ ದಕ್ಷಿಣ ಭಾರತದ ಸಂಗೀತ ಮತ್ತು ಸಾಹಿತ್ಯ ಪ್ರಪಂಚಗಳೆರಡರಲ್ಲೂ ಅದ್ವಿತೀಯ ಕೀರ್ತಿಯನ್ನು ಗಳಿಸಿದರೋ ಆ ಕೀರ್ತನ ಪ್ರಕಾರಕ್ಕೆ ೧೨ನೆಯ ಶತಮಾನದ ಬಸವಾದಿ ಶಿವದಾಸರ ಈ ಗೀತಾ (ಹಾಡುಗಳ) ಪ್ರಕಾರವು ಮೂಲವೂ ಮಾದರಿಯೂ ಆಗಿದ್ದವು.”

 ಹರಿದಾಸರಿಗಿಂತ ಶಿವಶರಣರಿಗೆ ಹೆಚ್ಚಿನ ತೂಕ ತಂದುಕೊಡುವ ಅಭಿಮಾನದ ಅವರಸದಲ್ಲಿ ಘನ ವಿದ್ವಾಂಸರಾದ ಬಸವರಾಜು ಅವರು  ತಮ್ಮ ಸಂಕಲನಕ್ಕಿಟ್ಟ ‘ಶಿವದಾಸ ಗೀತಾಂಜಲಿ’ ಹೆಸರು ತಪ್ಪಾಗಿದೆ. ಹರಿದಾಸರಿಗೆ ಶಿವಶರಣರನ್ನು ಪ್ರತಿಸ್ಪರ್ಧಿಗಳಂತೆ ಕಲ್ಪಿಸಿ ‘ಶಿವದಾಸ’ರನ್ನಾಗಿಸಿದರು. ‘ಶರಣ’ ‘ದಾಸ’ ಎಂಬ ಪದಗಳ ನಿಘಂಟಿನ ಅರ್ಥಗಳಲ್ಲಿ ಸಾಮ್ಯತೆ ಇರಬಹುದು. ಆದರೆ ಅವುಗಳಿಗಿರುವ ಸಾಂಸ್ಕೃತಿಕ ಅರ್ಥವನ್ನು ಬಸವರಾಜು ಅವರು ಗ್ರಹಿಸದೇ ಹೋದರು. ‘ದಾಸರು’ ಎಂದರೆ ಹರಿದಾಸರು ಮಾತ್ರ ಶರಣರು ಎಂದರೆ ಶಿವಶರಣರು ಮಾತ್ರ. ‘ಶಿವ’ಶರಣರನ್ನು ‘ದಾಸ’ರನ್ನಾಗಿಸುವುದು, ‘ಹರಿ’ದಾಸರನ್ನು ಹರಿ ‘ಶರಣ’ರನ್ನಾಗಿಸುವುದು ಸಂಸ್ಕೃತಿಯ ಮಿಡಿತನವನ್ನರಿಯದ ಪಾಂಡಿತ್ಯದ ಕಸರತ್ತು ಅಷ್ಟೇ. ಈ ಸಂಕಲನಕ್ಕೆ ‘ಗೀತಾಂಜಲಿ’ ಎಂದುದೇಕೆ? ನಮ್ಮಲ್ಲಿ ‘ಹಾಡು’ ‘ಪದ’ ರೂಢಿಯಲ್ಲಿವೆ. ‘ಗೀತ’ ಎಂಬುದು ಒಂದು ಕಾಲಕ್ಕೆ ಶುದ್ಧಶಾಸ್ತ್ರೀಯವಾಗಿ ಹಾಡುತ್ತಿದ್ದ ಒಂದು ರಚನೆ. ಇದು ಶಿವಶರಣರಿಗೆ ಮೇಲ್ತರದ ಅಂತಸ್ತು ದೊರಕಿಸಿಕೊಡುವ ಉದ್ದೇಶದಿಂದ ನಡೆಸಿದ ಸಂಸ್ಕೃತೀಕರಣದ ಪ್ರಕ್ರಿಯೆ ಏನೋ ಎಂದೆನಿಸುತ್ತದೆ.

ಜಾಗತೀಕರಣದ ಸುಳಿಗಾಳಿಗೆ ಸಿಲುಕಿ, ಭೋಗದ ಬೆನ್ನು ಹತ್ತಿರುವ ಮನುಷ್ಯನ ಮನಸ್ಸಿಗೆ ಶಾಂತಿ ಸಮಾಧಾನ ದೊರೆಯಬೇಕಾದರೆ ಇಂತಹ ಸ್ವರವಚನಗಳಿಗೆ ಮೊರೆ ಹೋಗದೇ ಬೇರೆ ದಾರಿ ಇಲ್ಲ. ಇಂತಹ ಅಪರೂಪದ ಸ್ವರವಚನಗಳನ್ನು ಸಂಪಾದಿಸಿದ ಡಾ. ಕೆ. ಶಶಿಕಾಂತ ಅವರಿಗೆ ವಂದನೆ-ಅಭಿನಂದನೆಗಳು. 

ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group