spot_img
spot_img

ಹೊಸ ಪುಸ್ತಕ ಓದು ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಪ್ರಯತ್ನ

Must Read

- Advertisement -

ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಪದಪ್ರಯೋಗ ಕೋಶ

ಲೇಖಕರು : ಡಾ. ಎಸ್. ಆರ್. ಗುಂಜಾಳ ಮತ್ತು ಟಿ. ಎಲ್.ಬ್ಯಾಡಗಿ
ಪ್ರಕಾಶಕರು : ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ,
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೧

ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಪದಪ್ರಯೋಗ ಕೋಶ ರಚನೆ ಮಾಡಿದ ಕೀರ್ತಿ ಡಾ. ಎಸ್. ಆರ್. ಗುಂಜಾಳ ಅವರಿಗೆ ಸಲ್ಲುತ್ತದೆ. ಅವರು ರಚಿಸಿದ ‘ಬಸವಣ್ಣನವರ ವಚನಪದಪ್ರಯೋಗ ಕೋಶ’ ‘ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಪದಪ್ರಯೋಗ ಕೋಶ’ ಕನ್ನಡದಲ್ಲಿ ಮೊದಲ ಪ್ರಕಟಗೊಂಡ ಕೃತಿಗಳಾಗಿವೆ.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬಸವೋತ್ತರ ಯುಗದ ಪ್ರಮುಖ ವಚನಕಾರರು. ಏಳುನೂರೊಂದು ವಿರಕ್ತರ ಪಡೆಯನ್ನು ನಿರ್ಮಿಸಿ ಲಿಂಗಾಯತ ಧರ್ಮ ಸಂಸ್ಕೃತಿಗಳ ಪ್ರಸಾರ ಪ್ರಚಾರ ಮಾಡಿದ ಧೀಮಂತ ಯೋಗಿಗಳು. ಬಸವಾದಿ ಶಿವಶರಣರ ಆದರ್ಶ ಮೈಗೂಡಿಸಿಕೊಂಡಿದ್ದ ಶಿವಯೋಗಿಗಳು ವಚನಗಳ ರಚನೆ ಮಾಡಿರುವುದು ಗಮನಾರ್ಹ ಅಂಶ. ೭೦೧ ವಚನಗಳನ್ನು ಷಟ್‌ಸ್ಥಲದ ಚೌಕಟ್ಟಿನಲ್ಲಿ ರಚಿಸಿದ್ದಾರೆ. ಈ ವಚನಗಳಿಗೆ ಪ್ರಾಚೀನ ವ್ಯಾಖ್ಯಾನಕಾರರು ಅನೇಕ ಟೀಕೆ-ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಈ ಎಲ್ಲ ವಚನಗಳನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕಾದ ಸಂದರ್ಭದಲ್ಲಿ ಈ ಪದಪ್ರಯೋಗ ಕೋಶ ತುಂಬ ಪ್ರಯೋಜನಕಾರಿಯಾಗುವುದು.

- Advertisement -

ಇಂಗ್ಲಿಷಿನ Concordance ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಪದಪ್ರಯೋಗ ಕೋಶ(ಶಬ್ದಪ್ರಯೋಗ ಕೋಶ) ಎಂದು ಕರೆಯುತ್ತಿದ್ದಾರೆ. ಅತ್ಯಂತ ಪ್ರಯೋಜನಕಾರಿ ಮತ್ತು ಸಾರ್ವಕಾಲಿಕವಾದ ಇಂಥ ಕೋಶಗಳ ರಚನೆ ಎಂದಿನಿಂದ ಆರಂಭಗೊAಡಿತು ಎಂದು ಹೇಳುವುದು ಕಷ್ಟ. ಆದರೂ ಪಾಶ್ಚಾತ್ಯ ಸಾಹಿತ್ಯ ಇತಿಹಾಸವನ್ನು ಅವಲೋಕಿಸಿದರೆ ಜಾಗತಿಕ ಮಟ್ಟದಲ್ಲಿ ಇಂಥ ಕೋಶಗಳ ರಚನೆಯು ೧೩ನೇ ಶತಮಾನದಿಂದಲೇ ಪ್ರಾರಂಭಗೊಂಡಿತೆಂದು ವಿದ್ವಾಂಸರು ತರ್ಕಿಸಿದ್ದಾರೆ.

ಆದರೆ ಅದು ಪರಿಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದು ಆಧುನಿಕ ಕಾಲದಲ್ಲಿಯೇ. ಬ್ಲೂಮ್‌ಫೀಲ್ಡ್ ಎಂಬ ಪಾಶ್ಚಾತ್ಯ ವಿದ್ವಾಂಸ ಪ್ರಾಚೀನ ಭಾರತೀಯ ಸಾಹಿತ್ಯದ ಕಣಜವಾಗಿರುವ ವೇದಗಳಿಗೆ ಪದಪ್ರಯೋಗ ಕೋಶ ಸಿದ್ಧಪಡಿಸಿದರು. ಇದರಿಂದ ವೇದಗಳಲ್ಲಿ ಅಡಗಿರುವ ಅನೇಕ ಗೂಡಾರ್ಥಗಳನ್ನು ಅರಿಯಲು ಸಹಾಯವಾಯಿತು.

೧೯೩೮ರಲ್ಲಿ ರಾಬರ್ಟ್ ಬೂಸಾ ಎಂಬ ಕ್ರಿಶ್ಚಿಯನ್ ಪಾದ್ರಿ ಇಂಥ ಕೋಶದ ರಚನೆಗೆ ಪ್ರಯತ್ನ ಪಟ್ಟ. ೧೩ನೇ ಶತಮಾನದಲ್ಲಿ ಥಾಮಸ್ ಎಕ್ವಿನಾ ಎಂಬ ಮಹಾಭಾಷ್ಯಕಾರ ಕ್ರೈಸ್ತ ತತ್ವಜ್ಞಾನವನ್ನು ಕುರಿತು ನೂರಾರು ಗ್ರಂಥಗಳನ್ನು ರಚಿಸಿದ. ಅವನು ಬಳಸಿದ ಶಬ್ದಗಳ ಸಂಖ್ಯೆ ಅಂದಾಜು ೧ ಕೋಟಿ! ಇದನ್ನು ತಿಳಿದ ರಾಬರ್ಟ್ ಬೂಸಾ ಈ ಕೋಶ ರಚನೆಗೆ ೫೦ ಜನ ವಿದ್ವಾಂಸರು ೫೦ ವರ್ಷ ಶ್ರಮಪಟ್ಟರೆ ಮಾತ್ರ ಇಂಥ ಕಾರ್ಯ ಸಾಧ್ಯವೆಂದು ಅಂದಾಜು ಮಾಡಿದ. ಆದರೆ ಅಷ್ಟರಲ್ಲಿ ಕಂಪ್ಯೂಟರ್‌ಗಳ ಆವಿಷ್ಕಾರ ಪ್ರಾರಂಭವಾಗಿತ್ತು. ಕಂಪ್ಯೂಟರ್ ಸಹಾಯದಿಂದ ೫ ವರ್ಷದಲ್ಲಿ ೧೯೫೨ರಲ್ಲಿ ಪೂರ್ಣಗೊಳಿಸಿದ.

- Advertisement -

ಪಾಶ್ಚಾತ್ಯ ಶ್ರೇಷ್ಠ ಕವಿಗಳಾದ ಶೆಕ್ಸ್ಪಿಯರ್, ಮಿಲ್ಟನ್ ಮೊದಲಾದ ಅನೇಕ ಕವಿಗಳ ಕೃತಿಗಳಿಗೆ ಪದಪ್ರಯೋಗ ಕೋಶಗಳು ರಚನೆಗೊಂಡಿವೆ. ಭಾರತೀಯ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಆಂಧ್ರಪ್ರದೇಶದ ಪ್ರಸಿದ್ಧ ಕವಿ-ವಿದ್ವಾಂಸರ ಕೃತಿಗಳಿಗೆ ನೂರಾರು ಪದಪ್ರಯೋಗ ಕೋಶಗಳು ರಚನೆಗೊಂಡಿವೆ. ಆದರೆ ಕನ್ನಡದಲ್ಲಿ ಇಂಥ ಕೋಶ ರಚನೆ ಪ್ರಮಾಣ ಅತ್ಯಂತ ವಿರಳಪ್ರಮಾಣದಲ್ಲಿದೆ. ಪಂಪಭಾರತ ಪದಪ್ರಯೋಗ ಕೋಶ ಸಿದ್ಧಗೊಂಡಿದ್ದರೂ ಅದು ಇಂಗ್ಲಿಷಿನಲ್ಲಿರುವುದರಿAದ ಕನ್ನಡದ ಓದುಗರಿಗೆ ಅಷ್ಟು ಸಹಕಾರಿಯಾಗಲಿಲ್ಲ. ಕುಮಾರವ್ಯಾಸ, ಹರಿಹರ ಮುಂತಾದ ಕೆಲವು ಕವಿಗಳ ಕೃತಿಗಳಿಗೆ ಪದಪ್ರಯೋಗಕೋಶಗಳು ರಚನೆಯಾಗಿವೆ. ಆದರೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರನ್ನ-ಜನ್ನ-ಪೊನ್ನ-ನಾಗವರ್ಮ-ಚಾಮರಸ ಮೊದಲಾದವರ ಕೃತಿಗಳಿಗೆ ಪದಪ್ರಯೋಗ ಕೋಶ ರಚನೆಯಾಗಬೇಕಾದ ತೀವ್ರ ಅವಶ್ಯಕತೆ ಇದೆ.

ವಚನಕಾರರನ್ನು ಕುರಿತಾದ ಪದಪ್ರಯೋಗ ಕೋಶಗಳು ಅಲ್ಪಪ್ರಮಾಣದಲ್ಲಿ ಬೆಳಕಿಗೆ ಬಂದಿವೆ. ಡಾ. ಎಸ್.ಆರ್.ಗುಂಜಾಳ ಅವರ ‘ಬಸವ ವಚನ ಪದಪ್ರಯೋಗ ಕೋಶ’ ಕನ್ನಡದಲ್ಲೇ ಮೊದಲ ಪ್ರಯತ್ನ. ತೋಂಟದ ಸಿದ್ಧಲಿಂಗೇಶ್ವರ ವಚನ ಪದಪ್ರಯೋಗ ಕೋಶ, ಅಲ್ಲಮನ ವಚನ ಪ್ರಕೋಶ, ಹರಿಹರನ ರಗಳೆಗಳ ಪದಕೋಶ, ಅಕ್ಕಮಹಾದೇವಿ ವಚನ ಪದಪ್ರಯೋಗ ಕೋಶ, ಜೇಡರ ದಾಸಿಮಯ್ಯನ ವಚನ ಪದಪ್ರಯೋಗ ಕೋಶ, ಅಂಬಿಗರ ಚೌಡಯ್ಯನ ವಚನ ಪದಪ್ರಯೋಗ ಕೋಶಗಳು ಸಿದ್ಧವಾಗಿವೆ. ಮುಖ್ಯವಾಗಿ ಇನ್ನೂ ಚೆನ್ನಬಸವಣ್ಣ, ಸಿದ್ಧರಾಮೇಶ್ವರರು ಮೊದಲಗೊಂಡು ಅನೇಕ ಸುಪ್ರಸಿದ್ಧ ವಚನಕಾರರ ವಚನಗಳಿಗೆ ಇಂಥ ಪದಪ್ರಯೋಗ ಕೋಶಗಳು ರಚನೆಗೊಳ್ಳಬೇಕಾಗಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಇಂಥ ಕೆಲಸಗಳು ಜರುಗಬೇಕಾಗಿದೆ.

ಕೋಶದ ಪ್ರಯೋಜನ: ವಿಮರ್ಶೆ ಮತ್ತು ಅನ್ವೇಷಣೆಯ ಪಥದಲ್ಲಿ ಅನೇಕ ಪಾತಳಿಗಳು ಸೃಷ್ಟಿಯಾಗುತ್ತ ನಡೆದಿರುವುದು ಸಾಹಿತ್ಯಕ್ಷೇತ್ರದ ಉತ್ತಮ ಬೆಳವಣಿಗೆಯಾಗಿದೆ. ಒಬ್ಬ ವಚನಕಾರ, ಕವಿಯ ಕೃತಿಗಳನ್ನು ಪುನರ್‌ವ್ಯಾಖ್ಯಾನಗೊಳಿಸುವ, ಮರು ಚಿಂತನೆಗೈಯುವ, ಸಾಂಸ್ಕೃತಿಕ ಮುಖಾಮುಖಿಯಾಗಿಸುವ, ಅನುಸಂಧಾನಿಸುವ ಪ್ರಕ್ರಿಯೆಗಳು ಇತ್ತೀಚೆಗೆ ತೀವ್ರ ಪ್ರಮಾಣದಲ್ಲಿ ನಡೆಯುತ್ತಿವೆ. ವಿಶೇಷವಾಗಿ ತೌಲನಿಕ ಅಧ್ಯಯನಕ್ಕೆ ಮಹತ್ವ ಬರುತ್ತಿದೆ. ತೌಲನಿಕ ಅಧ್ಯಯನ ಕ್ರಮದಲ್ಲಿ ಕವಿ ಅಥವಾ ವಚನಕಾರರ ಸ್ವೋಪಜ್ಞತೆಯ ಅಂಶಗಳಾವವು, ಅವರು ಬಳಸಿದ ನುಡಿಗಟ್ಟು, ಲಯ, ಛಂದಸ್ಸು, ವ್ಯಾಕರಣ ಹೀಗೆ ಒಟ್ಟಾರೆ ಆ ಕಾಲದ ಭಾಷಾ ಸ್ವರೂಪವನ್ನು ತಿಳಿದುಕೊಳ್ಳಲು ನಮಗೆ ಪದಪ್ರಯೋಗ ಕೋಶ ತುಂಬ ಸಹಕಾರಿಯಾಗುತ್ತದೆ. ವ್ಯಾಪಕ ಮತ್ತು ಸೂಕ್ಷö್ಮ ಅಭ್ಯಾಸಕ್ಕೆ ಈ ಕೋಶದ ಉಪಯೋಗ ಬಹಳಷ್ಟು ಪರಿಣಾಮಕಾರಿಯಾಗಿದೆ.

ಡಾ. ಎಂ. ಚಿದಾನಂದಮೂರ್ತಿಯವರು ಈ ಕೋಶದ ಪ್ರಯೋಜನ ಕುರಿತು ಹೀಗೆ ಹೇಳುತ್ತಾರೆ: ಡಾ. ಎಸ್. ಆರ್. ಗುಂಜಾಳರು ಎಚ್ಚರಿಕೆಯಿಂದ ಈ ಕೋಶವನ್ನು ಸಿದ್ಧಪಡಿಸಿದ್ದಾರೆ. ಸ್ವತಂತ್ರ ರೂಪಗಳನ್ನು ಮಾತ್ರ ಆರಿಸಿಕೊಂಡಿರುವದು ಸರಿಯಾಗಿದೆ. ಸಮಸ್ತ ರೂಪಗಳನ್ನು ಅಖಂಡವಾಗಿ ತೆಗೆದುಕೊಟ್ಟಿರುವುದೂ ಸರಿ. ಕೃತಿಕಾರರ ಎಚ್ಚರಿಕೆ, ತಾಳ್ಮೆ, ಕರ‍್ಯಶ್ರದ್ಧೆ, ಉತ್ಸಾಹಗಳನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರ ಕರ‍್ಯ ವಚನ ಸಾಹಿತ್ಯದ ಅಧ್ಯಯನಕ್ಕೊಂದು ಶ್ರೇಷ್ಠ ಕಾಣಿಕೆಯಾಗಿ ಪರಿಣಮಿಸಿದೆ.’

ಕೃತಿಯನ್ನು ಪ್ರಕಟಿಸಿದ ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕೃತಿಯ ಮಹತ್ವವನ್ನು ಕುರಿತು ಹೇಳಿದ ಮಾತುಗಳು ಮನನೀಯವಾಗಿವೆ. : ‘ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಗಳನ್ನು ವಿಷಯಾನುಗುಣವಾಗಿ ಓದಿ ಅರ್ಥೈಸಿಕೊಳ್ಳಲು ಪದಪ್ರಯೋಗ ಕೋಶದ ಅವಶ್ಯಕತೆ ಇದೆ. ಈ ಕೋಶದ ಸಹಾಯದಿಂದ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಯಾವ ಪದವನ್ನು ಮತ್ತು ಯಾವ ವಿಷಯವನ್ನು ತಮ್ಮ ಯಾವ ಯಾವ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಎಂಬುದನ್ನು ಕ್ಷಣಾರ್ಧದಲ್ಲಿಯೇ ಗುರುತಿಸಬಹುದು. ಆ ಪದ ಅಥವಾ ವಿಷಯ ಬಳಕೆಯಾದ ವಚನಗಳನ್ನೂ ಕೋಶದ ಕೊನೆಯಲ್ಲಿ ಮುದ್ರಿಸಲಾದ ವಚನಗಳಲ್ಲಿ ನೋಡಿಕೊಳ್ಳಬಹುದು. ಹಾಗೆಯೇ ಅದರ ಸಂದರ್ಭ ಹಾಗೂ ಅರ್ಥಗಳನ್ನು ಗುರುತಿಸಿಕೊಳ್ಳಬಹುದು. ಶ್ರೀ ಸಿದ್ಧಲಿಂಗ ಶಿವಯೋಗಿಗಳ ವಚನಗಳನ್ನು ಕುರಿತು ಅಧ್ಯಯನ ಮಾಡುವ ಸಾಹಿತಿ-ಸಂಶೋಧಕರಿಗೆ ಇದರಿಂದ ಸಹಾಯವಾಗುವುದಲ್ಲದೆ ಅವರ ಶ್ರಮ, ಶಕ್ತಿ ಮತ್ತು ಸಮಯಗಳ ಉಳಿತಾಯವಾಗುವುದು’.

ಡಾ. ಎಸ್. ಆರ್. ಗುಂಜಾಳ ಅವರು ಇಂಥ ಪದಪ್ರಯೋಗ ಕೋಶದ ರಚನೆಯ ಮೂಲಕ ಕನ್ನಡದಲ್ಲಿ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಇದರ ಪರಿಣಾಮವಾಗಿ ‘ಡಾ. ಗುಂಜಾಳರ ಮಾರ್ಗವೇ’ ನಿರ್ಮಾಣವಾಯಿತು. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿದ್ದ ಈ ಕೃತಿಯನ್ನು ಈಗ ಗದುಗಿನ ಜಗದ್ಗುರು ತೋಂಟದಾರ್ಯಮಠದ ಶ್ರೀಗಳು ಪುನರ್‌ಮುದ್ರಿಸಿರುವುದು ಸಂತೋಷದ ಸಂಗತಿಯಾಗಿದೆ.

ಕೋಶ ರಚನೆ ಮಾಡಿದ ವಿದ್ವಾಂಸರಾದ ಡಾ. ಎಸ್. ಆರ್. ಗುಂಜಾಳ ಅವರಿಗೆ ಹಾಗೂ ಪ್ರಕಟಿಸಿದ ಪೂಜ್ಯರಿಗೆ ಹಾರ್ದಿಕ ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group