spot_img
spot_img

ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯಲಿ –  ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ  ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಅಭಿಮತ

Must Read

spot_img
- Advertisement -

ಇಡೀ ಜಗತ್ತಿನ ಆದಿಮ ಸಂಸ್ಕೃತಿಯಾದ ಜಾನಪದವು ಪ್ರಕೃತಿಯ ಸತ್ಯಗಳನ್ನು ಮಾತಾಡುತ್ತಾ ಜನಸಮುದಾಯಗಳ ನಡುವೆ ಸಂಬಂಧಗಳನ್ನು ಬೆಸೆಯಿತೇ ಹೊರತು ಬೇಧಗಳನ್ನು ಸೃಷ್ಟಿಸಲಿಲ್ಲ. ಸೀಮಾತೀತ ಜಾನಪದ ವಿವೇಕವನ್ನು ಆಧುನಿಕರು ಅರಿಯುವ ಮೂಲಕ ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯುವಂತಾಗಲಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ’ ಕುರಿತಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಮಾನವಜೀವನದ ಹುಟ್ಟಿನಿಂದ ಚಟ್ಟದವರೆಗೂ ಜಾನಪದ ಜೊತೆಯಾಗಿರುವಂಥದ್ದು. ಹಾಡಾಗಿ ಪಾಡಾಗಿ ಶ್ರಮಸಮುದಾಯವನ್ನು ಕಟ್ಟುತ್ತಾ ಬಂದ ಜಾನಪದವು ತನ್ನ ಜೀವನಪ್ರೀತಿ ಹಾಗೂ ಜೀವಪರತೆಯಿಂದ ಸದಾ ಜೀವಂತವಾಗಿದೆ. ಆಧುನಿಕತೆಯ ಅಸಂಖ್ಯ ಸಂಗತಿಗಳ ಅಭಿವ್ಯಕ್ತಿಯಲ್ಲಿ ಜಾನಪದವೇ ತಾಯಿಬೇರಾಗಿ ಕಂಡುಬರುತ್ತದೆ. ನಾಗರಿಕತೆಯ ನಾಗಾಲೋಟದಲ್ಲಿ ನಾವೆಲ್ಲರೂ ಖಂಡಿತ ಉನ್ನತ ವ್ಯಕ್ತಿಗಳಾಗೋಣ. ಆದರೆ ಕೆಡಹುವ ಉನ್ನತ ವ್ಯಕ್ತಿಗಳಾಗದೆ ಕಟ್ಟುವ, ಕೂಡಿಸುವ ಉನ್ನತ ವ್ಯಕ್ತಿಗಳಾಗಬೇಕು. ನಮ್ಮ ಜಾನಪದ ಪರಂಪರೆಯು ಕಲಿಸಿದ್ದು ಇಂತಹ ಕಟ್ಟುವ ಉನ್ನತ ವ್ಯಕ್ತಿಗಳಾಗುವುದನ್ನು. ಜಾನಪದರು ಕೆರೆಕುಂಟೆಗಳನ್ನು ಕಟ್ಟಿದರು, ಗಿಡಸಸಿಗಳನ್ನು ನೆಟ್ಟರು. ಮುಂದಿನ ತಲೆಮಾರಿಗಿರಲಿ ಅಂತ ಎಲ್ಲವನ್ನೂ ಕೊಟ್ಟರು. ಹೀಗೆ ಜಾನಪದರು ಕಟ್ಟಿದ್ದು, ನೆಟ್ಟಿದ್ದು, ಕೊಟ್ಟಿದ್ದು ಬಿಟ್ಟರೆ ಏನನ್ನೂ ಕೆಡಹುವ ಕೆಲಸ ಎಂದೂ ಮಾಡಿದವರಲ್ಲ. ಹೀಗಾಗಿ ಜಾನಪದರು ಸದಾಸ್ಮರಣೀಯ ಸಾಧಕರಾಗಿದ್ದಾರೆ ಎಂದರು.
ಜಾನಪದ ಪಾಂಡಿತ್ಯವು ಅಪರಿಮಿತವಾದುದು. ವಿಶ್ವವಿದ್ಯಾಲಯಗಳ ಪಠ್ಯಗಳನ್ನು ಮೀರಿದ ಪಾಂಡಿತ್ಯ ಜಾನಪದರದ್ದು. ಅಕಾಡೆಮಿಕ್ ವಲಯಗಳಲ್ಲಿ ತಜ್ಞರು, ವಿದ್ವಾಂಸರು ಎನ್ನಿಸಿಕೊಂಡವರ ಜ್ಞಾನಮೂಲವೇ ಜಾನಪದವಾಗಿದೆ. ಭಿನ್ನಬೇಧಗಳಿಲ್ಲದ, ದ್ವೇಷಾಸೂಯೆಗಳಿಲ್ಲದ ಜಾನಪದರ ಪಾಂಡಿತ್ಯವನ್ನು ವಿದ್ಯಾವಂತರು ಕಲಿಯಬೇಕಿದೆ. ಈ ಸಂಬಂಧವಾಗಿ ಜಾನಪದದ ಮಹಾಪ್ರಯಾಣದಲ್ಲಿ ಕಲಾವಿದರು ಹಾಗೂ ವಿದ್ವಾಂಸರು ಜೋಡೆತ್ತುಗಳಂತೆ ನಡೆದುಕೊಂಡು ಹೋಗಬೇಕಿದೆ. ಜೀವನದ ಬಂಡಿಯನ್ನು ಜಾನಪದ ವಿವೇಕದಿಂದ ಮುಂದೊಯ್ಯಬೇಕಾದ ಜವಾಬ್ದಾರಿ ಕಲಾವಿದರು ಹಾಗೂ ವಿದ್ವಾಂಸರ ಮೇಲಿದೆ. ಇವರಿಬ್ಬರೂ ಕೈಕೈ ಹಿಡಿದುಕೊಂಡು ಜಾನಪದದ ತಿರುಳನ್ನು ಜಗತ್ತಿಗೆ ಸಾರಬೇಕಿದೆ ಎಂದು ತಿಳಿಸಿದರು.

- Advertisement -

ಇಂದು ರಿಯಾಲಿಟಿ ಅಲ್ಲದ ರಿಯಾಲಿಟಿ ಹೆಸರಿನ ಶೋಗಳು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ. ಸಂಬಂಧಗಳು ನುಚ್ಚುನೂರಾಗ್ತಾ ಇವೆ. ಇದರ ನಡುವೆ ಸತ್ಯದ ಸೋಗಿನ ಸುಳ್ಳುಗಳು, ಥಳುಕು ಬಳುಕುಗಳು, ನಯವಂಚಕತನಗಳು ಮೆರೆದಾಡುತ್ತಿವೆ. ಸತ್ಯವನ್ನು, ಸಮತೆಯನ್ನು, ಜೀವಪರತೆಯನ್ನು ಜನಪರತೆಯನ್ನು ಬುಲ್ಡೋಜ್ ಮಾಡುವಂಥ ದುರಂತ ಕಾಲದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಸತ್ಯವನ್ನೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಬಂಧುಬಳಗ, ಸತ್ಯವೇ ನಮ್ಮ ದೈವ ಎಂದು ಸತ್ಯಮಾರ್ಗವನ್ನು ತೋರಿದ ಜಾನಪದ ವಿವೇಕ ನಮ್ಮೊಳಗೆ ಅಂತಸ್ಥವಾಗಬೇಕಿದೆ ಎಂದು ತಿಳಿಸಿದರು.

ಜಾನಪದರಾದಿಯಾಗಿ ನಮ್ಮ ನೆಲದಲ್ಲಿ ಸತ್ಯಪರವಾದ, ಜನಪರವಾದ, ಜೀವಪರವಾದ ಅನೇಕ ಸಂತರು, ಶರಣರು, ದಾರ್ಶನಿಕರು, ತತ್ವಪದಕಾರರು, ಅನುಭಾವಿಗಳು, ತತ್ವಜಾನಿಗಳು ನಮಗೆ ಸತ್ಯ-ಸಮತೆಯ ಜೀವನತತ್ವಗಳನ್ನು ಬೋಧಿಸಿಹೋಗಿದ್ದಾರೆ. ಅವರನ್ನು ಜಾನಪದ ಲೋಕವು ತನ್ನ ಪದಗಳಲ್ಲಿ, ಬದುಕುಗಳಲ್ಲಿ ಕಾಪಿಟ್ಟುಕೊಂಡು ಬಂದಿದೆ. ಅದನ್ನು ನಾವೆಲ್ಲರೂ ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗಿದೆ. ನಾವು ಖಂಡಿತ ಉನ್ನತ ವ್ಯಕ್ತಿಗಳಾಗೋಣ. ಆದರೆ ಕೆಡಹುವ ಉನ್ನತ ವ್ಯಕ್ತಿಗಳಾಗದೆ ಕಟ್ಟುವ, ಕೂಡಿಸುವ ಉನ್ನತ ವ್ಯಕ್ತಿಗಳಾಗಬೇಕು. ನಮ್ಮ ಜಾನಪದ ಪರಂಪರೆಯು ಕಲಿಸಿದ್ದು ಇಂತಹ ಕಟ್ಟುವ ಉನ್ನತ ವ್ಯಕ್ತಿಗಳಾಗುವುದನ್ನು. ಜಾನಪದರು ಕೆರೆಕುಂಟೆಗಳನ್ನು ಕಟ್ಟಿದರು, ಗಿಡಸಸಿಗಳನ್ನು ನೆಟ್ಟರು. ಮುಂದಿನ ತಲೆಮಾರಿಗಿರಲಿ ಅಂತ ಎಲ್ಲವನ್ನೂ ಕೊಟ್ಟರು. ಹೀಗೆ ಜಾನಪದರು ಕಟ್ಟಿದ್ದು, ನೆಟ್ಟಿದ್ದು, ಕೊಟ್ಟಿದ್ದು ಬಿಟ್ಟರೆ ಏನನ್ನೂ ಕೆಡಹುವ ಕೆಲಸ ಎಂದೂ ಮಾಡಿದವರಲ್ಲ. ಜಾನಪದರು ಏನೇ ಕೆಲಸ ಮಾಡುತ್ತಿರುವಾಗಲೂ ಪದ ಹಾಡ್ತಾ ಬಂದ್ರು. ಆ ಪದಗಳೇ ಜಾನಪದರ ಬದುಕಾಗಿತ್ತು; ಜಾನಪದರ ಬದುಕೇ ಮಹಾಪದ ಆಗಿತ್ತು ಎಂದರು.
ನಾನು ಈವರೆಗೆ ಏನು ಪದ ಹಾಡಿದ್ದೇನೋ, ಬರೆದಿದ್ದೇನೋ, ಮಾತನಾಡಿದ್ದೇನೋ, ಬದುಕಿದ್ದೇನೋ ಅದೆಲ್ಲ ನನಗೆ ನನ್ನ ನೆಲದ ಜನರ ಪರಂಪರೆಯಿಂದ ಬಂದದ್ದು. ಈ ನೆಲದ ಪರಂಪರೆಯ ಅಜ್ಜಿತನ, ಅಮ್ಮತನ, ಅಪ್ಪತನ, ಅಣ್ಣತನ, ಅಕ್ಕತನ, ಗುರುವುತನ, ದರುವುತನಗಳು ನನ್ನನ್ನು ನುಡಿಸಿದವು, ನಡೆಸಿದವು, ದುಡಿಸಿದವು. ಹೀಗಾಗಿ ನಾವು ಜಾನಪದ ಪರಂಪರೆಯ ತಾಯಿಬೇರಿನಿಂದ ಮಣ್ಣಿನ ವಾಸನೆಯಿಂದ ಅರಳುವ ಕುಸುಮಗಳಾಗಬೇಕೇ ಹೊರತು ಷೋಕೇಸ್ ಪೀಸುಗಳಾಗಬಾರದು. ಸಂಬಂಧಗಳಿಗೆ ಬೆಲೆಯಿಲ್ಲದಂತೆ ದುರಾಸೆಯಿಂದ ದೂರವಾಗಬಾರದು. ಅಂತಹ ಯಾವುದೇ ಬಗೆಯ ಕೆಟ್ಟ ಸಂಸ್ಕೃತಿ-ಪರಂಪರೆಯನ್ನು ನಾವೆಂದೂ ಪೋಷಿಸಬಾರದು, ಪಾಲಿಸಬಾರದು. ಅತಿಯಾದ ಆಧುನಿಕತೆಯ ಅಮಲುಗಳಿಂದ ಅವಸಾನಕ್ಕೆ ಒಳಗಾಗದೆ ಸಂಬಂಜ ಅನ್ನೋದು ದೊಡ್ಡದು ಕಣಾ ಎಂದ ಮಣ್ಣಿನ ಗಟ್ಟಿ ಜೀವಗಳಾಗಬೇಕಾಗಿದೆ ಎಂದು ಕರೆ ನೀಡಿದರು.

*ಜಾನಪದವೆಂಬುದು ಜಗದಗಲ!: ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಡಾ.ಮೈ.ಶ್ರೀ.ನಟರಾಜ್*
ಅಮೆರಿಕಾ ಡಲ್ಲಾಸ್‌ನಿಂದ ಆನ್ಲೈನ್ ಮೂಲಕ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಮೈ.ಶ್ರೀ.ನಟರಾಜ್ ಅವರು, ಅಮೆರಿಕದ ಜಾನಪದವನ್ನು ಅವಲೋಕಿಸಿದಾಗ ನಮಗೊಂದು ಪರಮ ಸತ್ಯ ಗೋಚರವಾಯಿತು. ಜಾನಪದವೆಂಬುದು ಜಗದಗಲ! ಅಮೆರಿಕದ ಮೂಲನಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳು ಎದುರಿಸಿದ ಸಮಸ್ಯೆಗಳು ಬೇರೆಯಲ್ಲ, ಇವರ ಸವಾಲುಗಳು ಬೇರೆಯಲ್ಲ. ಭಾರತದ ಆದಿವಾಸಿಗಳ ಸಮಸ್ಯೆ ಮತ್ತು ಸವಾಲುಗಳನ್ನು, ಚರಿತ್ರೆಯನ್ನು, ಸಂಸ್ಕೃತಿಯನ್ನೂ ಇತರ ದೇಶಗಳ ಸಮಸ್ಯೆ ಮತ್ತು ಸವಾಲುಗಳೊಂದಿಗೆ ತುಲನೆ ಮಾಡಿದಲ್ಲಿ, ಜಗತ್ತಿನ ವಿವಿಧ ದೇಶಗಳಲ್ಲಿನ ಮೂಲನಿವಾಸಿಗಳ ಸಂಗ್ರಾಮದಲ್ಲಿ ಬಹಳಷ್ಟು ಸಾಮ್ಯವಿದೆ ಎಂಬ ಅರಿವಿನಿಂದ ನಮ್ಮ ಕಣ್ತೆರೆಯಿತು! ಎಂದು ತಿಳಿಸಿದರು.
ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲದಂತೆ, ಪರಸ್ಪರ ಅಪರಿಚತರಂತೆ ತೋರಿದರೂ ಅಧಿಕಾರಶಾಹಿ ಆಕ್ರಮಣಕಾರರು ಸ್ವಾರ್ಥ ಸಾಧನೆಗಾಗಿ ಸೃಷ್ಟಿಸಿದ ಮೇಲು ಕೀಳುಗಳ ಕೃತ್ರಿಮ ಜಗತ್ತಿನ ಪದರುಗಳನ್ನು ಸರಿಸಿ ನೋಡಿದರೆ ಎಲ್ಲ ಮೂಲ ನಾಗರಿಕತೆಗಳು ಕಣ್ಣಿಗೆ ಕಾಣದ ಸೂತ್ರವೊಂದರಿAದ ಬೆಸೆಯಲ್ಪಟ್ಟಿವೆ ಎಂಬ ಹೊಳಹು ಸ್ಪಷ್ಟ ಅನುಭೂತಿಗೆ ಸಿಗುತ್ತದೆ. ವಸುಧೈವ ಕುಟುಂಬಕA ಎಂಬ ನುಡಿಯ ನೈಜ ಅಂತರಾರ್ಥ ಮನಸ್ಸಿಗೆ ವೇದ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

- Advertisement -

ಅಲಕ್ಷಿತ ಸಾಹಿತ್ಯ ಚಳವಳಿ ರೂಪುಗೊಳ್ಳಲು ಇದು ಸಕಾಲ: ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್

ಪ್ರಧಾನಗೋಷ್ಠಿಯಲ್ಲಿ ವಿಚಾರ ಮಂಡನೆ ಮಾಡಿದ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್ ಅವರು, ಸಾಹಿತ್ಯದಲ್ಲಿಯೂ ಅಲಕ್ಷ್ಯಕ್ಕೆ ಒಳಗಾದ, ಅಂಚಿಗೆ ತಳ್ಳಲ್ಪಟ್ಟ, ತಳಮೂಲ ಸಂಸ್ಕೃತಿಯಿಂದ ರೂಪಗೊಂಡ ಸ್ಥಳೀಯ ಜ್ಞಾನ ಪರಂಪರೆಗಳ ಅಧ್ಯಯನಗಳು ಹೆಚ್ಚು ಹೆಚ್ಚು ಆಗಬೇಕು. ಅದು ಇದುವರೆಗೂ ಸಾಧ್ಯವಾಗಿಲ್ಲ. ಬಂಡಾಯ-ದಲಿತ ಸಾಹಿತ್ಯ ಚಳುವಳಿಯ ಆಶಯವೂ ಇದೇ ಆಗಿತ್ತಾದರೂ ಅದು ಅಂದುಕೊಂಡ ಗುರಿಯನ್ನು ಮುಟ್ಟಲಾಗಿಲ್ಲ ಎಂಬುದು ನನ್ನ ತಿಳಿವಳಿಕೆ. ಹಾಗಾಗಿಯೇ ಅದರ ಮುಂದುವರೆದ ಭಾಗವಾಗಿ “ಅಲಕ್ಷಿತ ಸಾಹಿತ್ಯ ಚಳವಳಿ ರೂಪುಗೊಳ್ಳುವುದಕ್ಕೆ ಇದು ಸಕಾಲ”. ಅಲಕ್ಷಿತ ಸಾಹಿತ್ಯ ಎಂದರೆ ಅದು ಹಲವಾರು ನೆಲೆಗಳಲ್ಲಿ ಅಂತರ್ಗತವಾಗಿದೆ. ಅದು ನಮ್ಮ ಪ್ರಾಚೀನ ಜ್ಞಾನ ಪರಂಪರೆಯನ್ನು ಕಾಪಿಟ್ಟುಕೊಂಡು ಬಂದಿದೆ. ಅಂದರೆ ಶ್ರಮ ಮೂಲ ಸಮುದಾಯಗಳು, ಅಂಚಿಗೆ ತಳ್ಳಲ್ಪಟ್ಟ ಜಾತಿ, ಬುಡಕಟ್ಟು, ಅಲೆಮಾರಿ ಜನಾಂಗಗಳ ಕಲೆ, ಸಾಹಿತ್ಯ, ಜನಪದ ನಂಬಿಕೆ, ವೈದ್ಯಕೀಯ, ವೃತ್ತಿ-ಕಸುಬು, ಆಚರಣೆ, ದೈವ ಪರಿಕಲ್ಪನೆ, ಆಚಾರ ವಿಚಾರಗಳು, ವೇಷಭೂಷಣ, ಆಹಾರ, ಪಾನೀಯ, ವಲಸೆ ಮುಂತಾದವುಗಳನ್ನು ಶೋಧಿಸಿ ಮುಖ್ಯ ವಾಹಿನಿಗೆ ತರಬೇಕಾದ ಜವಾಬ್ದಾರಿ ಇಂದಿನ ವಿದ್ಯಾವಂತ ಯುವ ಬರಹಗಾರರ ಮೇಲಿದೆ ಎಂದು ತಿಳಿಸಿದರು.

ಜಾನಪದ ಆಪ್ತ ಮುಕ್ತ ಮಾನವೀಯ ಮೌಲ್ಯವುಳ್ಳದ್ದು: ಡಾ.ಸುಜಾತ ಅಕ್ಕಿ

‘ಜಾನಪದ-ಶಿಷ್ಟ ಕಲಾಜಗತ್ತು ಮತ್ತು ಸ್ತ್ರೀ ಅಭಿವ್ಯಕ್ತಿ’ ಕುರಿತು ವಿಚಾರ ಮಂಡನೆ ಮಾಡಿದ ಜಾನಪದ ವಿದ್ವಾಂಸರಾದ ಡಾ.ಸುಜಾತ ಅಕ್ಕಿ ಅವರು, ‘ಮಾನವನ ಜೀವನ ಚರಿತ್ರೆಯಲ್ಲಿ ಏನೆಲ್ಲಾ ಆವಿಷ್ಕಾರ ಮಾಡುತ್ತಲೇ ಕಲಾ ಜಗತ್ತಿನಲ್ಲಿ ಸ್ತ್ರೀ ಅಭಿವ್ಯಕ್ತಿ ಮೆರೆದಿರುವುದು ಸ್ತ್ರೀ ಅನನ್ಯತೆಗೆ ಸಾಕ್ಷಿಯಾಗಿದೆ. ಕಲಾ ಜಗತ್ತೇ ಸ್ತ್ರೀ ಅಭಿವ್ಯಕ್ತಿ; ಸ್ತ್ರೀ ಅಭಿವ್ಯಕ್ತಿಯೇ ಕಲಾ ಜಗತ್ತು. ಕಲೆಯ ಜಗತ್ತೇ ಮಹಿಳೆಯರ ಲೋಕ. ಮಹಿಳೆಯರ ಲೋಕವೇ ಕಲೆಗಳ ಆಗರ. ಕೃಷಿಯನ್ನು ಕಂಡು ಹಿಡಿದದ್ದು ಮಹಿಳೆಯೇ. ಬೇಟೆ, ಶೌರ್ಯ, ಸಾಹಸಗಳನ್ನು ಮೆರೆದದ್ದು ಪುರುಷರು. ಶ್ರಮ ಮತ್ತು ಕಲಾ ಅಭಿವ್ಯಕ್ತಿ ಒಂದೇ ನಾಣ್ಯದ ಮುಖವಾಗಿ ಮಹಿಳೆಯರಲ್ಲಿ ಬೆಳೆದು ಬಂದಿದೆ. ಕೈ ಕಾಲು ಕೆಲಸ ಮಾಡುವಾಗ ಬುದ್ದಿವಂತ ಮನವು ಹಾಗೇ ಕಾಲವ್ಯಯ ಮಾಡದೇ ಕಲ್ಪನಾ ಲೋಕದಲ್ಲಿ ಭಾವ ಲಹರಿಯಂತೆ ಜೋಗುಳ, ಕಾವ್ಯ, ಕಥೆ, ಮಹಾಕಾವ್ಯ, ಖಂಡಕಾವ್ಯ, ಕಥಾ ಕಾವ್ಯ, ಸೋಬಾನೆ, ತ್ರಿಪದಿ ಗೀತೆ, ಲಾವಣಿ, ಗೀಗೀ ಹಾಡುತ್ತಲೇ ಮಹಿಳೆಯರು ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಕೃಷಿ ಚಟುವಟಿಕೆಗಳನ್ನು ಒಳಗೊಂಡAತೆ ಏನೆಲ್ಲಾ ಕೆಲಸ ಕಾರ್ಯಕ್ರಮಕ್ಕೆ ಅನೂಚಾನವಾಗಿ ಹಾಡುತ್ತಾ, ತಮ್ಮ ಈ ಕಲಾಭಿವ್ಯಕ್ತಿಯಿಂದಲೇ ಮಹಿಳೆಯರು ಮುಖ್ಯ ವಾಹಿನಿಗೆ ಬಂದಿದ್ದಾರೆ. ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಏಳು ಲಲಿತಕಲೆಗಳಾದ ‘ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ’ ಈ ಕಲೆಗಳಲ್ಲಿ ಮಹಿಳಾ ಅಭಿವ್ಯಕ್ತಿ ಬೆಳೆದು ಬಂದಿದ್ದು, ಸಂಗೀತ, ಸಾಹಿತ್ಯ, ನೃತ್ಯ, ಇತ್ತೀಚೆಗೆ ನಾಟಕಗಳಲ್ಲಿಯೂ ಮಹಿಳಾ ಕಲಾಅಭಿವ್ಯಕ್ತಿಯು ಸಮೃದ್ಧವಾಗಿ ಬೆಳೆದು ಬಂದಿದೆ. ಹೀಗೆ ಜಾನಪದ ಆಪ್ತ ಮುಕ್ತ ಮಾನವೀಯ ಮೌಲ್ಯವುಳ್ಳದ್ದಾಗಿದೆ ಎಂದು ತಿಳಿಸಿದರು.
ವಿಚಾರ ಸಂಕಿರಣದ ಭಾಗವಾಗಿ ಕನ್ನಡ ಅಧ್ಯಾಪಕರು ಸಂಶೋಧಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಲ್ಲಿಸಿದ್ದ ಸಂಶೋಧನ ಪ್ರಬಂಧಗಳನ್ನು ಒಳಗೊಂಡ “ಜಾನಪದ ವಿಶ್ವಪಥ” ಎಂಬ ಶೀರ್ಷಿಕೆಯ ಎರಡು ಸಂಪುಟಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಜಾನಪದ ಕಲಾಪ್ರದರ್ಶನದ ಅಂಗವಾಗಿ ಮುಖವೀಣೆ ಕಲಾವಿದರಾದ ಮುಖವೀಣೆ ಆಂಜಿನಪ್ಪ ಅವರು ಎಕಕಾಲದಲ್ಲಿ ಹಲವು ವಾದ್ಯಗಳನ್ನು ನುಡಿಸುವ ಮೂಲಕ ನಾದಪ್ರದರ್ಶನ ನೀಡಿದರು. ಬಾಯಿಯ ಮೂಲಕ ಮಾತ್ರವಲ್ಲದೇ ಮೂಗಿನ ಮೂಲಕ ನಾದಸ್ವರವನ್ನು ಹೊಮ್ಮಿಸಿದ ಪ್ರದರ್ಶನವು ಸಭಿಕರನ್ನು ರೋಮಾಂಚನಗೊಳಿಸಿತು. ಜಾನಪದ ಗಂಗ ಖ್ಯಾತಿಯ ಹಾಡುಗಾರರಾದ ಗಂಗಣ್ಣ ಅವರು ಮಂಟೇಸ್ವಾಮಿ ಹಾಗೂ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು.
ಪರ್ಯಾಯಗೋಷ್ಠಿಗಳಲ್ಲಿ ೫೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು. ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾಡಿ “ಅತ್ಯುತ್ತಮ ಸಂಶೋಧನ ಪ್ರಬಂಧ ಪ್ರಶಸ್ತಿ”ಗೆ ಭಾಜನರಾದ ಡಾ.ಜಗದೀಶ್ ಬಾಬು ಬಿ.ವಿ.(ಅಧ್ಯಾಪಕರ ವಿಭಾಗ), ರಶ್ಮಿ ಪಿ. (ಸಂಶೋಧನಾರ್ಥಿಗಳ ವಿಭಾಗ), ಕೆಂಪರಾಜು ಕೆ.ಜಿ.(ಸ್ನಾತಕೋತ್ತರ ವಿಭಾಗ) ಅವರನ್ನು ಅಭಿನಂದಿಸಲಾಯಿತು. ಕ್ರಿಸ್ತು ಜಯಂತಿ ಕಾಲೇಜಿನ ಹಣಕಾಸು ಅಧಿಕಾರಿಗಳಾದ ರೆ.ಫಾ.ಜೇಸ್ ವಿ. ಥಾಮಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ವಂದಿಸಿದರು. ಪ್ರಾಧ್ಯಾಪಕರಾದ ಡಾ.ರವಿಶಂಕರ್ ಎ.ಕೆ. ಅವರು ನಿರೂಪಿಸಿದರು. ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ಪ್ರೇಮ್‌ಕುಮಾರ ಕೆ ಹಾಗೂ ಡಾ.ಕಿರಣಕುಮಾರ್ ಹೆಚ್.ಜಿ ಅವರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group