ಬೆಳಗಾವಿ – ನಗರದ ಲಿಂಗಾಯತ ಭವನದಲ್ಲಿ ‘ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ’ ಇವರ ಆಶ್ರಯದಲ್ಲಿ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಅವರ ಚೊಚ್ಚಲ ಕೃತಿ ‘ನಕ್ಕಿತು ತಲೆದಿಂಬು’ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆ ಮಾಡಿದ ನಿವೃತ್ತ ನ್ಯಾಯಾಧೀಶ ಅರವಿಂದ ಪಾಶ್ಚಾಪುರ ಮಾತನಾಡಿ, ಧರ್ಮ ಎನ್ನುವುದು ತತ್ವ ಹೇಳುವುದಲ್ಲ, ಆದರೆ ಅದನ್ನು ಅಳವಡಿಸಿಕೊಳ್ಳುವುದು. ನಾವು ನಡೆ-ನುಡಿ ಒಂದು ಮಾಡಿಕೊಂಡು ಬದುಕಿದರೆ ಸುಖ ಎಂದರು.
ಕೃತಿ ಪರಿಚಯ ಮಾಡಿದ ಬಸವ ಅಧ್ಯಯನ ಕೇಂದ್ರ ಪುಣೆಯ ಡಾ. ಶಶಿಕಾಂತ ಪಟ್ಟಣ ಮಾತನಾಡಿ ತಾನು ಸೋತು ತನ್ನ ವ್ಯಕ್ತಿತ್ವವನ್ನು ಸೋಲಿಸಿ ಜಗವನ್ನು ಗೆಲ್ಲಿಸುವವ ಕವಿ. ಹೀಗೆ ತನ್ನ ಭಾವನೆಗಳನ್ನು, ಒತ್ತಿದ ಆಸೆಗಳನ್ನು, ಜೀವನದ ಎಲ್ಲಾ ಆಗುಹೋಗುಗಳು, ಅನುಭವ, ನೋಟ ಎಲ್ಲವನ್ನು ಕಾವ್ಯರೂಪದಲ್ಲಿ ಬಳಸಿದ್ದಾರೆ. ದೇಶೀಯ, ಜನಪದ, ಕೌಟುಂಬಿಕ, ಪೌರಾಣಿಕ, ಸ್ತ್ರೀಪರವಾದ, ಆಶಾವಾದದ ಅನೇಕ ಕವನಗಳು ಭಾವನಾತ್ಮಕವಾಗಿ ಈ ಕೃತಿಯಲ್ಲಿ ಬಿಂಬಿತವಾಗಿವೆ ಮತ್ತು ಎಲ್ಲ ಓದುಗರನ್ನು ಆಕರ್ಷಿಸುವಂತಿವೆ ಎಂದರು.
ಇದೇ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಪುಟ್ಟಿ ಅವರ ತಂದೆ ದಿ. ಮಲ್ಲಪ್ಪ ತಿರ್ಲಾಪುರ ಇವರ ಸ್ಮರಣಾರ್ಥ ದತ್ತಿ ಪ್ರಶಸ್ತಿ ‘ಆದರ್ಶ ತಂದೆ’ ಪ್ರಶಸ್ತಿಯನ್ನು ಡಾ. ಶಶಿಕಾಂತ ಪಟ್ಟಣ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಆಶಾ ಕಡಪಟ್ಟಿ ಮಾತನಾಡಿ, ಸರಳ ಜೀವನ ನಡೆಸುತ್ತಿರುವ ಉನ್ನತ ವಿಚಾರದ ಡಾ. ವಿಜಯಲಕ್ಷ್ಮಿ ಪುಟ್ಟಿ ತಮ್ಮ ಭಾವನೆ, ತಮ್ಮ ಸಂಸ್ಕಾರ ಭರಿತ ಜೀವನದಲ್ಲಿಯ ಆಗುಹೋಗುಗಳನ್ನು ಕೃತಿಯಲ್ಲಿ ಬಿಂಬಿಸಿದ್ದಾರೆ ಇಂತಹ ಕಾರ್ಯ ಸಾಹಿತ್ಯಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲಿ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕಲ್ಯಾಣರಾವ ಮುಚಳಂಬಿ, ಇಂದಿರಾ ಮೋಟೆಬೆನ್ನೂರು ಸುನಂದಾ ಎಮ್ಮಿ, ಶೈಲಜಾ ಬಿಂಗೆ, ಸ. ರಾ. ಸುಳಕೂಡೆ, ಬಸವರಾಜ ಗಾರ್ಗಿ, ನೀಲಗಂಗಾ ಚರಂತಿಮಠ, ಜ್ಯೋತಿ ಬಾದಾಮಿ, ರಾಜನಂದಾ ಗಾರ್ಗಿ, ಆಶಾ ಯಮಕನಮರಡಿ, ನಿರ್ಮಲಾ ಬಟ್ಟಲ, ಸುಮಾ ಕಿತ್ತೂರ, ಡಾ. ಮೃತ್ಯುಂಜಯ ತಿರ್ಲಾಪುರ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮ ದ ಆರಂಭದಲ್ಲಿ ಡಾ. ಹೇಮಾ ಸೊನೊಳ್ಳಿ ಸ್ವಾಗತಿಸಿದರು, ರಾಜನಂದಾ ಗಾರ್ಗಿ ವಂದಿಸಿದರು. ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.