ನಾನು ಹಿಂದೆ ಹಾಗೆ ಮಾಡಿದ್ದೆ ಹೀಗೆ ಮಾಡಿದ್ದೆ ಎಂದು ಜಂಭ ಕೊಚ್ಚಿಕೊಳ್ಳುವ ಜನರನ್ನು ಉದ್ದೇಶಿಸಿಯೇ ‘ಹಿಂದಿನದು ತೆಗೆದು ಹಿತ್ತಲದಾಗ ಅತ್ತರು.’ ಎನ್ನುವ ಗಾದೆ ಮಾತೊಂದು ಹಳ್ಳಿಗಾಡಿನಲ್ಲಿ ಪ್ರಚಲಿತದಲ್ಲಿದೆ. ಈಗೀಗ ನಮ್ಮ ಸುತ್ತ ಮುತ್ತಲೂ ಇಂಥ ಜನರು ನಮ್ಮ ಕಣ್ಣಿಗೆ ಬಹಳ ಸಂಖ್ಯೆಯಲ್ಲಿ ಬೀಳುತ್ತಾರೆ. ಅದರಲ್ಲಿ ಒಮ್ಮೊಮ್ಮೆ ನಾವೂ ಒಬ್ಬರಾಗಿರಬಹುದು. ಮನೆತನದ ಬಗ್ಗೆ ಇಲ್ಲ ತಮ್ಮ ಮನೆಯಲ್ಲಿ ಯಾರೋ ಒಬ್ಬರು ಏನೋ ಸಾಧನೆ ಮಾಡಿದ್ದರೆ ಅದನ್ನು ಊರು ತುಂಬ ಡಂಗುರ ಸಾರುತ್ತ ಗರ್ವ ಪಡುವುದನ್ನೇ ಗೀಳಾಗಿಸಿಕೊಳ್ಳುವುದು. ಯಾರೋ ಮಾಡಿದ ಉತ್ತಮ ಕೆಲಸಗಳನ್ನು ನಾನೇ ಅದನ್ನು ಮಾಡಿದ್ದು ಎಂದು ಬೊಗಳೆ ಬಿಡುವುದು. ಇವೆಲ್ಲ ನಮ್ಮನ್ನು ಎಂದೆಂದೂ ಏಳ್ಗೆ ಮಾಡಿ ಕೊಡುವುದಿಲ್ಲ. ಸುಳ್ಳು ಹೇಳುವುದರಿಂದ ಜಂಭ ಕೊಚ್ಚಿಕೊಳ್ಳುವುದರಿಂದ ಅಲ್ಪ ಖುಷಿ ಸಿಗಬಹುದು. ಇತರರನ್ನು ಕೆಲ ಕಾಲ ಸೆಳೆಯಬಹುದು ಆದರೆ ಆತ್ಮ ಸಾಕ್ಷಿಗೆ ಎಲ್ಲವೂ ಗೊತ್ತಿರುತ್ತದೆ. ‘ಯಾವುದು ತಪ್ಪು ಯಾವುದು ಸರಿ ಎಂದು ನಮ್ಮ ಅಂತರಾತ್ಮ ಹೇಳುತ್ತಲೇ ಇರುತ್ತದೆ. ತಿಳಿಯಲಿಲ್ಲವೆಂಬುದು ನಮ್ಮನ್ನು ನಾವೇ ವಂಚಿಸಿಕೊಂಡಂತೆ” ಎಂಬ ಮಾರ್ಟಿನ್ ಲೂಥರ್ ಕಿಂಗ್ ಮಾತುಗಳು ಪಶ್ಚಾತ್ತಾಪ ಪಡುವ ಸ್ಥಿತಿಯನ್ನು ಎದುರಿಸದಂತೆ ಎಚ್ಚರಿಸುತ್ತವೆ. ‘ಒಂದು ಸತ್ಯ ಸ್ವಲ್ಪ ಹೊತ್ತು ಬಾಧಿಸಬಹುದು. ಆದರೆ ಒಂದು ಸುಳ್ಳು ಜೀವನದುದ್ದಕ್ಕೂ ನೋಯಿಸುತ್ತದೆ.’ಎಂಬ ಫ್ರಾಂಕ್ಲಿನ್ ನುಡಿ ನಿಜಕ್ಕೂ ವಾಸ್ತವಿಕವಾಗಿವೆ.
ನಾವು ಯಾವ ಮನೆತನದಲ್ಲಿ ಹುಟ್ಟಿದ್ದೇವೆ? ಎಂಬ ವಿಷಯದಿಂದ ನಾವು ಮೇಲ್ಮೆ ಮೆರೆಯಲು ಇಲ್ಲವೇ ಕೀಳರಿಮೆ ಹೊಂದುವುದು ಸಲ್ಲದು. ಜನ್ಮದಿಂದ ಮಾತ್ರ ಯಾವನೊಬ್ಬನೂ ದೊಡ್ಡವನೆನಿಸಿಕೊಳ್ಳಲಾರ. ಅಬ್ರಾಹಂ ಲಿಂಕನ್ ಮಾತಿನಂತೆ,’ ನಾವು ಮಾಡುವ ಕೆಲಸ ಶ್ರೇಷ್ಠವಾದರೆ ಸಾಕು ಅದೇ ನಮ್ಮನ್ನು ಶ್ರೇಷ್ಠರನ್ನಾಗಿಸುತ್ತದೆ. ಹಿಂದಿನದನ್ನು ನೆನೆಯದೇ ಇದ್ದರೆ ತಪ್ಪುಗಳನ್ನು ತಿದ್ದಿಕೊಳ್ಳಲಾಗುವುದಿಲ್ಲ. ಸಂಭ್ರಮಿಸಿ ಖುಷಿ ಪಡಲು ಆಗುವುದಿಲ್ಲ ಎನ್ನುವದೇನೋ ಸರಿ. ಆದರೆ ಹಿಂದಿನದನ್ನು ನೆನೆಯುವುದರಲ್ಲಿಯೇ ಇಂದಿನದನ್ನು ಕಳೆದುಕೊಳ್ಳುವಂತಾಗಬಾರದು.ಕಳೆದುಕೊಂಡದ್ದಕ್ಕೆ ಮುಂದೆ ನೋವು ಪಡುವಂತಾಗಬಾರದು. ನಾವು ನಮ್ಮ ಅರ್ಹತೆಯಿಂದ ಮೇಲೆ ಬರಬೇಕು. ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಕೊಂಡಾಗ ಮಾತ್ರ ಅರ್ಹತೆಯಲ್ಲಿ ಬಡ್ತಿ ಸಿಗುವುದು.ಜೊತೆಗೆ ಬೇರೆ ಬೇರೆ ಸುವರ್ಣಾವಕಾಶಗಳು ಹೊಣೆಗಾರಿಕೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ನಮ್ಮ ನಡುವಳಿಕೆ ಶ್ರಮದ ಬಗೆಗಿರುವ ನಮ್ಮ ನಿಲುವು ಜವಾಬ್ದಾರಿಯನ್ನು ಸ್ವೀಕರಿಸುವುದು ಇವೆಲ್ಲ ಮನೋಭಾವವನ್ನು ನಿರ್ಧರಿಸುತ್ತವೆ ಎಂಬುದು ವೇದ್ಯವಾಗಿದೆ. ಒಳ್ಳೆಯ ಕಾರ್ಯಗಳಿಗೆ ಬಹಳ ಜನ ತಾವೇ ವಾರಸುದಾರರೆಂದು ಹೇಳಿಕೊಂಡು ತಿರುಗಾಡುವರು. ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುವರು.
ಸೋಲಾದರೆ, ಎಡವಟ್ಟಾದರೆ ಇದು ನಾನು ಮಾಡಿದ್ದಲ್ಲವೆಂದು ಬೇರೆಯವರ ಕಡೆ ಬೆರಳು ತೋರಿಸುತ್ತೇವೆ. ಇದೆಲ್ಲ ನಿಮ್ಮಿಂದಲೇ ಆದದ್ದು ಎಂದು ದೂಷಿಸುತ್ತೇವೆ. ‘ಶ್ರೇóಷ್ಠತೆಗೆ ತೆರಬೇಕಾದ ಬೆಲೆಯೆಂದರೆ ಜವಾಬ್ದಾರಿ..’ ಎಂಬ ವಿನಸ್ಟನ್ ಚರ್ಚಿಲ್‍ರ ನುಡಿಮತ್ತು ನಾವು ಅಂಥವರು ಇಂಥವರೆಂದು ಹೇಳಿಕೊಳ್ಳದೇ ಅರ್ಹತೆಯಿಂದ ಜವಾಬ್ದಾರಿಯಿಂದ ಅಮೂಲ್ಯವಾದ ಹೆಸರನ್ನು ಗಳಿಸಬೇಕೆಂಬುದನ್ನು ಸೂಚಿಸುತ್ತದೆ. ಅರ್ಹತೆಯಿಲ್ಲದೇ ಪಡೆದಿದ್ದು ಇತರರಿಗೆ ತಿಳಿಯದೇ ಇರದು ಮಾನ ಕಳೆಯದೇ ಇರದು. ಒಣ ಜಂಭದಲ್ಲಿ ನಾನೇನು ಮಾಡಬೇಕೆನ್ನುವುದನ್ನು ಮರೆಯಬಾರದು. ನಮ್ಮ ತಪ್ಪುಗಳಿಗೆ ಇತರರೆಡೆ ಬೊಟ್ಟು ಮಾಡುವ ಕೆಟ್ಟ ಚಟ ಬೆಳೆಸಿಕೊಳ್ಳಬಾರದು. ಜವಾಬ್ದಾರಿಯೆಂದರೆ ಆಲೋಚನೆಯಿಂದ ಕೂಡಿದ ಕ್ರಿಯೆ. ಕರ್ತವ್ಯದ ಜವಾಬ್ದಾರಿಯನ್ನು ಹೊತ್ತು ನಡೆದರೆ ಅರ್ಹವಾದುದು ನಮ್ಮನ್ನು ತಾನೇ ಅರಸಿಕೊಂಡು ಬರುತ್ತದೆ. ಸಾಕ್ರೆಟಿಸ್ ಹೇಳಿದಂತೆ,’ ಮರ್ಯಾದೆಯಿಂದ ಕೇಳುವುದು ವಿವೇಕದಿಂದ ಉತ್ತರಿಸುವುದು ಪ್ರಶಾಂತವಾಗಿ ಆಲೋಚಿಸುವುದು ನಿಷ್ಪಕ್ಷರಾಗಿ ನಿರ್ಧಾರ ತೆಗೆದುಕೊಳ್ಳುವುದು ಪ್ರತಿ ಮನುಷ್ಯನಿಗೆ ಅಗತ್ಯ.’ ಇನ್ನಾದರೂ ನಾನು ಹಾಗೆ ಹೀಗೆ ಎಂದು ಜಂಭ ಕೊಚ್ಚಿಕೊಳ್ಳುವುದನ್ನು ಬಿಟ್ಟು ನಮ್ಮ ಅರ್ಹತೆಯಿಂದ, ಜವಾಬ್ದಾರಿ ನಿರ್ವಹಣೆಯಿಂದ ಗೌರವ ಸಂಪಾದಿಸೋಣ.ಶ್ರೇಷ್ಠತೆಯತ್ತ ಮುಖ ಮಾಡೋಣ.
ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ . 9449234142