ಶರಣ ಮಾದಾರ ಧೂಳಯ್ಯ

0
123

ಕಾಲ : ಕ್ರಿ. ಶ. ಸು 1160. ಈತನು ಬಸವಾದಿ ಶರಣರ ಸಮಕಾಲೀನ ಶರಣ.

ಕಾಯಕ :ಪಾದರಕ್ಷೆ ಸಿದ್ಧಪಡಿಸುವದು.
ತಂದೆ :ಕಕ್ಕಯ್ಯ, ತಾಯಿ :ಮಲ್ಲಿದೇವಿ,
ಹೆಂಡತಿ :ದಾರುಕಿ.
ವಚನಾಂಕಿತ: ‘ಕಾಮಧೂಮ ಧೂಳೇಶ್ವರ ‘
ಈತನು ಬರೆದ 106ವಚನಗಳು ದೊರಕಿವೆ. ಈತ ಒಬ್ಬ ಅಲಕ್ಷಿತ ವಚನಕಾರ. ಈತನ ಜನ್ಮ ಸ್ಥಳ, ಲಿಂಗೈಕ್ಯ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿರುವದಿಲ್ಲ.

ಕಾಯಕ ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ, ಭಕ್ತಿಯ ಶ್ರೇಷ್ಠತೆಯನ್ನು ಪ್ರಮುಖವಾಗಿ ಈತನ ವಚನಗಳು ತಿಳಿಸುತ್ತವೆ. ಕಾಯಕಕ್ಕಿಂತ ಮಿಗಿಲಾದ ಕೈಲಾಸ ಇನ್ನೊಂದಿಲ್ಲ. ಅದಕ್ಕಾಗಿ ನನಗೆ ಕೈಲಾಸದ ಅಗತ್ಯವೇ ಇಲ್ಲ ಎನ್ನುವ ಧ್ಯೇಯವಾದಿ, ಅನುಭಾವಿ ಶರಣ. ಈತನು ಬರೆದ ವಚನಗಳು ಬಸವಣ್ಣ,ಅಲ್ಲಮ ಪ್ರಭು, ಚನ್ನಬಸವಣ್ಣ ಇವರ ಸಮಕಾಲೀನ ಅನುಭಾವಿ ಶರಣನಾಗಿದ್ದನು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಬಸವಣ್ಣನ ಮುಂದಿನ ನೂರು ವರ್ಷಗಳಲ್ಲಿ ಬಂದಂತಹ ಹರಿಹರನ ಯಾವುದೇ ರಗಳೆಯಲ್ಲಿ ಮಾದಾರ ಧೂಳಯ್ಯನ ಉಲ್ಲೇಖ ಇರುವದಿಲ್ಲ. ನಂತರದ ತೆಲುಗಿನಲ್ಲಿ ಬರೆದ ಬಸವಪುರಾಣ, ಸಂಸ್ಕೃತದಲ್ಲಿ ಬರೆದ ಬಸವಪುರಾಣಂ, ಕನ್ನಡದಲ್ಲಿ ಭೀಮಕವಿ ಬರೆದ ಬಸವಪುರಾಣದಲ್ಲಿ ಈತನ ವಚನಗಳು ಸಿಗುತ್ತವೆ, ಜೀವನ, ಇತಿಹಾಸ, ಉಲ್ಲೇಖಗಳು ಸಿಗುತ್ತವೆ. ಅಲ್ಲದೆ, ಏಳುನೂರ ಎಪ್ಪತ್ತು ಅಮರ ಗಣಂಗಳ ಚರಿತ್ರೆಯಲ್ಲಿಯೂ, ತ ಸು ಶಾಮರಾಯರ ಶಿವಶರಣ ಕಥಾ ರತ್ನ ಕೋಶದಲ್ಲಿಯೂ ಮಾದಾರಧೂಳಯ್ಯನ ಜೀವನ ವಿವರ ದೊರೆಯುತ್ತದೆ.

‘ಕಾಮ ಧೂಮ ಧೂಳೇಶ್ವರ’ ಈ ವಚನಾಂಕಿತದ ಅರ್ಥ ವಿವರಣೆ : ಕಾಮ -ಕುರಿತು ಕಾಂಬುದೊಂದು, ಧೂಮ- ಎಂದರೆ ಅದರಲ್ಲಿ ಉದಿಸಿ ತೋರುವ ತಮ ಇಂತೀ ಕಾಮಧೂಮವೆಂಬೀ ಪುಡಿಗಟ್ಟಿ ಧೂಳಿ ಧೂಳೇಶ್ವರನಾದ. ಎಂದು ಶರಣ ತತ್ವದ ಸ್ಥಿತಿಯನ್ನು ಬಯಲುಗೊಳಿಸಿರುವ ವಿಭಿನ್ನ ವಚನಾಂಕಿತವಾಗಿದೆ. ಭವವನ್ನು ಮೀರಿನಿಂತ ಅನುಭಾವಿ ಶರಣನಾಗಿದ್ದನು ಮಾದಾರ ಧೂಳಯ್ಯ. ಈತ ಸಂಸ್ಕೃತವನ್ನು ಆಧಾರವಾಗಿಟ್ಟುಕೊಂಡು ತನ್ನ ಚಿಂತನೆಗಳನ್ನು ವಿವರಿಸಬಲ್ಲ ವಿದ್ವಾಂಸ, ವಾಸ್ತವವಾದಿಯಾಗಿದ್ದನು.

ವಚನ ವಿಶ್ಲೇಷಣೆ 

ಅಂಗ ಪ್ರಾಣ ಸಂಗವುಳ್ಳನ್ನಕ್ಕ
ಲಿಂಗಪೂಜೆಯೆಂಬ ದಂದುಗ ಬಿಡದು
ಈ ಹೊರಗು ಒಳಗಾಗಿಯಲ್ಲದೆ ಪ್ರಾಣಲಿಂಗಿಯೆಂಬ ಸಂಬಂಧಿಯಲ್ಲ
ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ
ಉಭಯಸಂಬಂಧವಾದಲ್ಲಿ
ಉರಿಕೊಂಡ ಕರ್ಪೂರಕ್ಕೆ
ತೊಡರುವದಕ್ಕೆ ಠಾವಿಲ್ಲ
ಕಾಮ ಧೂಮ ಧೂಳೇಶ್ವರ”
(ಸಮಗ್ರ ವಚನ ಸಂಪುಟ-8
ವ ಸಂ-1168)
ಅಂಗ ಎಂದರೆ ಶರೀರ, ಕಾಯ, ಆಕಾರ. ಪ್ರಾಣ ಎಂದರೆ ಜೀವ, ನಿರಾಕಾರ. ಅಕಾರಮಯ ವಾದ ಶರೀರ(ಅಂಗ)ಕ್ಕೆ ನಿರಾಕಾರವಾದ ಜೀವ(ಪ್ರಾಣ)ವೇ ಚೇತನ. ಈ ನಿರಾಕಾರದ ಪ್ರಾಣದ ಲೀಲೆಗೆ ಅಂಗವೇ ಆಧಾರ. ಅಂಗ ಮತ್ತು ಪ್ರಾಣಕ್ಕೆ ಅವಿನಾಭಾವ ಸಂಬಂಧವಿದೆ. ಅಂಗದ ಪರಿಶುದ್ಧಿಗಾಗಿ ಇಷ್ಟಲಿಂಗಧರಿಸಿ ಮನಸ್ಸಿನ ಮೇಲೆ ಪ್ರಾಣಲಿಂಗವನ್ನು ಸ್ಥಾಪಿಸಿ ಮನಪರಿಶುದ್ಧಗೊಳಿಸಬೇಕಾಗುವದು. ಅಂಗ ಈ ಮಾಧ್ಯಮದಿಂದಲೇ ಬಾಹ್ಯಾಂತರಂಗದ ಸುಖ, ನಾನಾರು? ನಿಜದರಿವಿನ ಅನುಭವವನ್ನು ಅನುಭವಿಸಲಿಕ್ಕೆ ಸಾಧ್ಯ ಹೊರತು ಅಂಗದ ಆಧಾರವಿಲ್ಲದೆ ಯಾವ ಕ್ರಿಯೆಗೂ ಆಸ್ಪದವಿಲ್ಲವಾಗುವದು. ಆಗ ಇಲ್ಲಿ ಲಿಂಗಪೂಜೆ ಎನ್ನುವ ದಂದುಗ ನಮ್ಮನ್ನು ಬಿಡದು. ಅಂಗದ ಬಾಹ್ಯಾಸಕ್ತಿಯನ್ನು ಅಳಿದು ಲಿಂಗಾಸಕ್ತಿ (ಕ್ರಿಯಾಜ್ಞಾನ ಶಕ್ತಿ)ಯಲ್ಲಿ ಒಂದಾಗಿ ಆತ್ಮಸ್ವರೂಪಿಯಾದಾಗ ಅಂಗಸಂಗ, ಪ್ರಾಣಲಿಂಗಯೆಂಬ ಸಂಬಂಧ ಅಳಿಯುವದು. ಅಂಗವೇ ಪ್ರಾಣ, ಪ್ರಾಣವೇ ಲಿಂಗ ವೆಂದು ಉಭಯ ಸಂಬಂಧವಾದಲ್ಲಿ ಲಿಂಗಾಂಗ ಸಾಮರಸ್ಯದ ಬೆಳಕು ತೋರುವದು. ಈ ಬಾಹ್ಯ ಅಂತರಂಗದ ಒಳಗಾಗಿ ಪ್ರಾಣಲಿಂಗಕ್ಕೆ ಸಂಬಂಧಿಯಾದಲ್ಲಿ ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗುವದು. ಹೇಗೆ ಕರ್ಪೂರ ಉರಿದ ಮೇಲೆ ಯಾವುದೇ ಮೂಲ ಅಸ್ತಿತ್ವ ಉಳಿಯುವದಿಲ್ಲ. ಲಿಂಗಾಂಗ ಸಾಮರಸ್ಯದಿಂದ ನಿಜೈಕ್ಯತೆಯಾಗುವದು. ಉರಿದ ಕರ್ಪೂರಕ್ಕೆ ತೊಡರುವದಕ್ಕೆ ಠಾವಿಲ್ಲ. ಮೂಲರೂಪ ಕಳೆದು ಲಿಂಗದಲ್ಲಿ ಒಂದಾಗಿ ತಾನೇ ತಾನಾಗಿ ಲಿಂಗಾಂಗ ಸಾಮರಸ್ಯ ನಿಜಸ್ವರೂಪ ಪ್ರಕಾಶ ಗೋಚರಿಸುವದು. ಎನ್ನುವ ಅರ್ಥಪೂರ್ಣ ತಾತ್ಪರ್ಯ ಈ ವಚನದಲ್ಲಿದೆ.

ಡಾ. ಗೀತಾ ಡಿಗ್ಗೆ
ಸೋಲಾಪುರ

LEAVE A REPLY

Please enter your comment!
Please enter your name here