ಮೂಡಲಗಿ: ಕಲ್ಲೋಳಿಯ ಶ್ರೀ ಸತ್ಯ ಸಾಯಿ ಸಮಿತಿಯವರು ತಮ್ಮ ಟ್ರಸ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳನ್ನಷ್ಟೇ ಅಲ್ಲದೇ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಂಡು ಶಾಲಾ ಅಬಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತುಕ್ಕಾನಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಬಾರಿತೋಟ ಶಾಲೆಯ ಮುಖ್ಯಾಧ್ಯಾಪಕ ಎ.ವ್ಹಿ.ಗಿರೆಣ್ಣವರ ಹೇಳಿದರು.
ಅವರು ತಾಲೂಕಿನ ಕಲ್ಲೋಳಿಯ ಶ್ರೀ ಸತ್ಯ ಸಾಯಿ ಸಮಿತಿಯವರು ವಿದ್ಯಾಜ್ಯೋತಿ ಕಾರ್ಯಕ್ರಮದಡಿಯಲ್ಲಿ ತುಕ್ಕಾನಟ್ಟಿ ಬಾರಿತೋಟ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡ ಸಂದರ್ಭದಲ್ಲಿ ಮಾತನಾಡಿ, ಸಮಿತಿಯವರು ಅನೇಕ ಗ್ರಾಮೀಣ ಪ್ರದೇಶದ ಹಿಂದುಳಿದ ಶಾಲೆಗಳನ್ನು ದತ್ತು ತೆಗೆದುಕೊಂಡು ನಾಡಿನ ಸಂಸ್ಕೃತಿ ಸಂಸ್ಕಾರಗಳ ಜೊತೆಗೆ ವಿದ್ಯಾರ್ಥಿಗಳಿಗೆ ವೇದ, ಉಪನಿಷತ್ತುಗಳನ್ನು ಕಲಿಸುತ್ತಿರುವದು ಹಾಗೂ ಪ್ರತಿವರ್ಷ ಗುರುಪೂರ್ಣಿಮೆ ಸಂದರ್ಭದಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಟ್ರಸ್ಟನಿಂದ ಗೌರವಿಸಿ ಸಾಯಿಬಾಬಾರವರ ಕೃಪಾ ಕಟಾಕ್ಷಕ್ಕೆ ಒಳಪಡಿಸುತ್ತಿರುವದು ಹಾಗೂ ಪ್ರತಿಯೊಂದು ಸೇವೆಯನ್ನು ಉಚಿತವಾಗಿ ಮಾಡುತ್ತಿರುವದು ತುಂಬಾ ಅಭಿನಂದನೀಯ ಎಂದರು.
ಕಾರ್ಯಕ್ರಮನ್ನು ಉದ್ಘಾಟಿಸಿದ ಜಿಲ್ಲಾ ಆಧ್ಯಾತ್ಮಿಕ ಸಂಯೋಜಕ ಸುರೇಶ ಕಬ್ಬೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿಯ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸುವದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಅಲ್ಲದೇ ಪಾಲಕರು ಮಕ್ಕಳನ್ನು ಸಾಕುವ ರೀತಿ ಹಾಗೂ ವಿದ್ಯಾರ್ಥಿಗಳು ತಂದೆ ತಾಯಿ ಜೊತೆ ನಡೆದುಕೊಳ್ಳುವ ರೀತಿ ಇವೆಲ್ಲವುಗಳನ್ನು ಕಲಿಸಿಕೊಡಲಾಗುತ್ತದೆ. ಏಕೆಂದರೆ, ಪ್ರತಿಯೊಂದು ಕುಟುಂಬವು ಸೌಖ್ಯದಿಂದ ಇದ್ದರೆ ಹಾಗೂ ಸಂಸ್ಕಾರವಂತರಾಗಿದ್ದರೆ, ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ಅಲ್ಲದೆ ನಾವು ಯಾವುದೇ ವೃತ್ತಿ ಮಾಡಿದರೂ ಕೂಡ ಅದನ್ನು ಪ್ರೀತಿಸಬೇಕು, ಗೌರವಿಸಬೇಕು ಇದರಿಂದ ನಮಗೆ ಮಾನಸಿಕ ನೆಮ್ಮದಿ ಸಿಗುವದರ ಜೊತೆಗೆ ಕುಟುಂಬವೂ ಕೂಡ ಸುಖೀ ಕುಟುಂಬವಾಗುತ್ತದೆ ಮಾಡುವ ವೃತ್ತಿಯಲ್ಲಿ ಲಂಚಗುಳಿತನ ಭ್ರಷ್ಟಾಚಾರ ವೃತ್ತಿಧರ್ಮಕ್ಕೆ ಮೋಸ ಮಾಡಿದರೆ ಅವರೆಂದಿಗೂ ಸುಖೀಗಳಾಗುವದಿಲ್ಲ ಹೀಗಿರುವಾಗ ನಾವು ಸಮಿತಿಯಿಂದ ಸಮಾಜಮುಖಿಯಾಗಿ ಏನೇ ಕೆಲಸಮಾಡಿದರೂ ಉಚಿತವಾಗಿ ಸೇವೆ ಎಂದು ಮಾಡುತ್ತೇವೆ ಎಂದರು.
ಮತ್ತೋರ್ವ ಸಾಯಿ ಸೇವಾ ಸಮೀತಿಯ ಸಂಚಾಲಕರಾದ ಲೋಹಿತ ಕಲಾಲ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಹೀಗಿರುವಾಗ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನಾವು ಕಾಣುತ್ತೇವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸಂಸ್ಕಾರ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗಿ ನಿರ್ಮಾಣಗೊಳ್ಳಲು ಸಾಧ್ಯ ಇಂತಹ ಸಂಸ್ಕಾರ ಸಂಸ್ಕೃತಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸನಾತನ ಧರ್ಮದ ರೂಡಿಯಂತೆ ಶಾಂತಿ ಮಂತ್ರ, ವೇದ ಘೋಷ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಹಿರಿಯರಾದ ಬಸವರಾಜ ಕಡಾಡಿ, ಸಾಯಿಕಿರಣ ಪಟ್ಟಣಶೆಟ್ಟಿ, ಬಸವರಾಜ ಗಾಣಿಗೇರ, ಬಾಲವಿಕಾಸ ಶಿಕ್ಷಕಿಯರಾದ ಅಂಜನಾ ಪಟ್ಟಣಶೆಟ್ಟಿ, ಸೌಜನ್ಯಾ ಬಡಿಗೇರ, ಸಂಜೀವಿನಿ ಗಾಣಿಗೇರ, ಶಾಲಾ ಶಿಕ್ಷಕರಾದ ಶಿಕ್ಷಕರಾದ ದೀಪಾ ದಂಡಿಗದಾಸರ, ವ್ಹಿ.ಎನ್. ಕಳ್ಳಿಮನಿ, ಕೆ.ಬಿ.ಮಮದಾಪುರ, ಬಿ.ಯು.ಗದಾಡಿ, ಎಸ್.ವಾಯ್, ಬಿಸನಾಳ ನೂರಾರು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು.
ಶಿಕ್ಷಕಿ ದೀಪಾ ದಂಡಿಗದಾಸರ ಸ್ವಾಗತಿಸಿ ನಿರೂಪಿಸಿದರು.