ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ, ಶ್ರೀಮತಿ ವೀಣಾ ರಾವ್ ದಂಪತಿಗಳು ಕರೆ ಮಾಡಿ ಮನೆ ಲೊಕೇಶನ್ ತಿಳಿದುಕೊಂಡು, ಸಂಜೆ ಅನಿರೀಕ್ಷಿತವಾಗಿ ನಮ್ಮಲ್ಲಿಗೆ ಭೇಟಿಕೊಟ್ಟರು. ಶ್ರೀಮತಿ ವೀಣಾ ರಾವ್ ಅವರ ಚೊಚ್ಚಲ ಕಾದಂಬರಿ ’ಮಧುರ ಮುರಳಿ’ ಯ ಪ್ರತಿಯನ್ನು ನೀಡಿ, ದಂಪತಿಗಳು ಹಣ್ಣು-ಹಾರ-ಶಾಲುಗಳೊಂದಿಗೆ ಅಕ್ಕರೆ-ಗೌರವಗಳಿಂದ ಸತ್ಕರಿಸಿದಾಗ ನಾನು ನಿಜಕ್ಕೂ ಮೂಕವಿಸ್ಮಿತನಾಗಿದ್ದೆ. ನಮ್ಮ ಮನೆಯವರಿಗೂ ಉಡುಗೊರೆಯೊಂದಿಗೆ ಬಾಗಿನ ನೀಡಿ, ಅತ್ತೆ-ಮಾವ-ಬಾಮೈದ ಎಲ್ಲರೊಂದಿಗೆ ಹೃದಯ ತುಂಬಿ ಮಾತನಾಡಿದರು. ಅವರ ಸಹೃದಯತೆ, ಸರಳತೆ, ಸೌಜನ್ಯತೆಗಳಿಗೆ ನಾವು ಅಕ್ಷರಶಃ ಆಭಾರಿ.
2-3 ತಿಂಗಳ ಹಿಂದೆ ಗುಬ್ಬಚ್ಚಿ ಸತೀಶ್ ಹಾಗೂ ಶ್ರೀಮತಿ ವೀಣಾ ಅವರ ಅಕ್ಕರೆ-ಅಂತಃಕರಣಕ್ಕೆ ಸೋತು, ನಾಲ್ಕು ಹೃದ್ಯನುಡಿಗಳಿಂದ ಕೃತಿಯನ್ನು ಹಾರೈಸಿದ್ದೆ. ನಾನು ಬರೆದು ಹಾರೈಸಿದ “ಬೆನ್ನುಡಿಯೆಂಬ” ನಾಲ್ಕು ಸಾಲುಗಳಿಗೆ ಇಷ್ಟೆಲ್ಲ ದಿವ್ಯ ಮೋಡಿಯಿದೆ. ನಾವು ಬರೆವ ಅಭಿಮಾನದ ನಾಲ್ಕು ಅಕ್ಷರಗಳಿಗೆ, ಹೀಗೆಲ್ಲಾ ಸತ್ಕರಿಸಿ ಆದರಿಸುವ ಅಕ್ಷರಬಂಧುಗಳ ಹೃದ್ಯ ಗಾರುಡಿಯಿದೆ ಎಂದಾಗ ಅದೆಂತಹ ಅವರ್ಣನೀಯ ಸಂಭ್ರಮ. ಇಂತಹ ಅವಿಸ್ಮರಣೀಯ ಕ್ಷಣಗಳೇ ಈ ಸಾಹಿತ್ಯ ಸುಗಂಧವನ್ನು ಉಸಿರಾಗಿಸುವುದು. ಅಕ್ಷರಬಂಧವನ್ನು ಹಸಿರಾಗಿಸುವುದು.
ಕಳೆದ ತಿಂಗಳು ’ಅವ್ವ ಪುಸ್ತಕಾಲಯ’ದ ವಾರ್ಷಿಕೋತ್ಸವದಲ್ಲಿ ಜೋಗಿಯಂತಹ ಸಾಹಿತ್ಯ ದಿಗ್ಗಜರ ಅಮೃತ ಹಸ್ತಗಳಿಂದ ಶ್ರೀಮತಿ ವೀಣಾ ರಾವ್ ಅವರ ಕೃತಿ ಲೋಕಾರ್ಪಣೆಗೊಂಡಿದೆ. ಈಗಾಗಲೇ ನೂರಾರು ಪ್ರತಿಗಳನ್ನು ಓದುಗದೊರೆಗಳು ಕೊಂಡು ಓದಿ ಹಾರೈಸುತ್ತಿದ್ದಾರೆ. ನಿತ್ಯ ಕಾದಂಬರಿಯನ್ನು ಮೆಚ್ಚಿ ಒಬ್ಬರಲ್ಲ ಒಬ್ಬರು ಕರೆ ಮಾಡಿ ತಮ್ಮ ಅನಿಸಿಕೆ, ಆಸ್ವಾದನೆ, ಆನಂದಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದ ವೀಣಾ ರಾವ್ ದಂಪತಿಗಳ ಕಂಗಳಲ್ಲಿ ಸಂತಸ ಸಂಪ್ರೀತಿಗಳ ಮಿನುಗು, ಸಂತೃಪ್ತಿ ಸಾರ್ಥಕ್ಯಗಳ ಮೆರುಗು.
ಗೋಮಿನಿ ಪ್ರಕಾಶನದ ಮೂಲಕ ಆನ್ಲೈನಿನಲ್ಲಿ ಈ ’ಮಧುರ ಮುರಳಿ’ ಲಭ್ಯವಿದೆ. ನೀವೂ ಕೂಡ ಕೊಂಡು ಓದಿ ಉದಯೋನ್ಮುಖ ಲೇಖಕಿಯನ್ನೂ, ಸಹೃದಯೀ ಪ್ರಕಾಶಕರನ್ನು ಹಾರೈಸಿ. ಬರೆಯುವವರ ಸಂತತಿ ಚಿರಾಯುವಾಗಲಿ. ಸಾಹಿತ್ಯಲೋಕ ಶ್ರೀಮಂತವಾಗಲಿ. ಬೆನ್ನುಡಿಯ ಪುಟವನ್ನು ಈ ಕೆಳಗೆ ನಿಮ್ಮ ಓದಿನ ಪ್ರೀತಿಗಾಗಿ ಟೈಪಿಸಿದ್ದೇನೆ. ಒಪ್ಪಿಸಿಕೊಳ್ಳಿ.
NOW OVER TO “ಮಧುರ ಮುರಳಿ”…
ಕನ್ನಡ ಕಾದಂಬರಿಲೋಕಕ್ಕೆ ‘ಮಧುರ ಮುರಳಿ’ಯೊಂದಿಗೆ ಚೊಚ್ಚಲ ಅಡಿಯಿಡುತ್ತಿರುವ ಶ್ರೀಮತಿ ವೀಣಾ ರಾವ್, ಕರುನಾಡಿನ ಸಾರಸ್ವತಲೋಕದಲ್ಲಿ ತಮ್ಮ ಕವನ ಸಂಕಲನ, ಕಥಾ ಸಂಕಲನಗಳ ಮೂಲಕ ಉದಯೋನ್ಮುಖ ಲೇಖಕಿಯೆಂದು ಗುರುತಿಸಿಕೊಂಡವರು. ಅದರಲ್ಲೂ ವಿಶೇಷವಾಗಿ ತಮ್ಮ ವಿಭಿನ್ನ ಕಥಾಕೌಶಲ್ಯದಿಂದ, ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸಿದ್ದಾರೆ.
‘ಮಧುರ-ಮುರಳಿ’ಯನ್ನು ಓದುತ್ತಿದ್ದರೆ.. ಎಲ್ಲಿಯೂ ಇದು ವೀಣಾ ಅವರ ಪ್ರಪ್ರಥಮ ಕಾದಂಬರಿಯೆಂದು ಅನಿಸುವುದೇ ಇಲ್ಲ. ಅಷ್ಟು ಸರಾಗವಾಗಿ, ಸ್ವಾರಸ್ಯಕರವಾಗಿ ನುರಿತ ಕಾದಂಬರಿಗಾರ್ಥಿಯಂತೆ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಕಥಾ ಹಂದರ, ಕಾದಂಬರಿಯ ಸನ್ನಿವೇಶಗಳು ಹಾಗು ಪ್ರತಿ ಪಾತ್ರವೂ ಲೇಖಕಿಯ ಅನನ್ಯ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಪಾತ್ರಪೋಷಣೆ, ನಡೆ-ನುಡಿ, ಸಂಭಾಷಣೆ, ಸಂಘರ್ಷಣೆ, ಭಾವೋತ್ಕರ್ಷಣೆ ವೀಣಾರವರ ಅದ್ಭುತ ಸಂವೇದನಾಶೀಲತೆಗೆ ನಿಚ್ಚಳ ನಿದರ್ಶನ. ಈ ಕಾದಂಬರಿಯನ್ನು ನೀವು ಓದಬೇಕಿಲ್ಲ. ಕೊಂಡು ಒಮ್ಮೆ ಕರಗಳಲ್ಲಿ ಹಿಡಿದುಕೊಂಡರೆ ಸಾಕು, ಪುಟಗಳಲೊಮ್ಮೆ ಕಣ್ಣು ಹಾಯಿಸಿದರೆ ಸಾಕು.. ಮುಂದೆ ಅದು ತಂತಾನೇ ನಿಮ್ಮನ್ನು ಓದಿಸಿಕೊಳ್ಳುತ್ತಾ, ಆವರಿಸಿಕೊಳ್ಳುತ್ತಾ ಹೋಗುತ್ತದೆ.
ಮಧುರ, ಮುರಳಿ, ಮಹಾಬಲ, ಶಿವರಂಜನಿ, ಸುಮಂತ್ ನಿಮ್ಮ ಮನೋಭೂಮಿಕೆಯಲ್ಲಿ ಮೈದಳೆದು, ಕಾದಂಬರಿಯೊಂದಿಗೆ ನಿಮ್ಮನ್ನು ಮೇಳೈಸಿಬಿಡುತ್ತಾರೆ. ನಿಧಾನವಾಗಿ ನಿಮ್ಮನ್ನು ಆಕ್ರಮಿಸುವ ಕಥೆ, ಪುಟಪುಟಕೂ ಕುತೂಹಲ, ಕೌತುಕತೆಗಳಿಂದ ಅಂತಿಮ ಪುಟದವರೆಗೆ ಕರೆದೊಯ್ದುಬಿಡುತ್ತದೆ. ಓದು ಮುಗಿದು ಕಾದಂಬರಿ ಕೆಳಗಿಟ್ಟ ಮೇಲೂ ಪಾತ್ರಗಳು ಕಾಡಲಾರಂಭಿಸಿ, ರೂಪಕ, ಪ್ರತಿಮೆ, ರಸಾನುಭಾವಗಳು ಚಿತ್ತದಂಬರದೊಳಗೆ ಚಿತ್ತಾರ ಮೂಡಿಸುತ್ತಾ ಚಿಂತನೆಗೆ ಒರೆ ಹಚ್ಚುತ್ತವೆ. ಇದು ಈ ಕಾದಂಬರಿಯ ವೈವಿಧ್ಯತೆಯೂ ಹೌದು. ವೈಶಿಷ್ಟ್ಯತೆಯೂ ಹೌದು.
ಚೊಚ್ಚಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಶ್ರೀಮತಿ ವೀಣಾ ರಾವ್ ಅವರನ್ನು ಅಭಿನಂದಿಸುತ್ತಾ, ಮತ್ತಷ್ಟು ಮಹೋನ್ನತ ಕೃತಿಗಳು ಅವರ ಲೇಖನಿಯಿಂದ ಮೂಡಿಬಂದು ಕನ್ನಡ ಕಾದಂಬರಿಲೋಕವನ್ನು ಶ್ರೀಮಂತಗೊಳಿಸಲೆಂದು ಹೃನ್ಮನದುಂಬಿ ಹಾರೈಸುತ್ತೇನೆ. ಕರುನಾಡಿನ ಓದುಗದೊರೆ ಈ ಕೃತಿಯನ್ನು ಕೊಂಡು ಓದಿ, ಮೆಚ್ಚಿ, ಮುದದಿಂದ ಲೇಖಕಿಯನ್ನು, ಪ್ರಕಾಶಕರನ್ನು ಹರಸಿ, ಇನ್ನಷ್ಟು ಕೃತಿಗಳಿಗೆ ಪ್ರೇರೇಪಿಸಲೆಂದು ಆಶಿಸುತ್ತೇನೆ.
ಎ.ಎನ್.ರಮೇಶ್. ಗುಬ್ಬಿ
ಕವಿ, ನಾಟಕಕಾರರು, ನಿರ್ದೇಶಕರು
ಕೈಗಾ. ಕಾರವಾರ – 581400