spot_img
spot_img

ಶಾಸ್ತ್ರಿಗಳ ಸಾಹಿತ್ಯ ಕಾಲ

Must Read

spot_img
- Advertisement -

ಕವಿ – ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)

” ಕವನ ಬರೆಯುವವರು ಕವಿಗಳು, ಕವಿ ಬರೆದದ್ದು ಕಾವ್ಯ” – ಹಾಗಿರುವಾಗ ಇದಕ್ಕೆ ಬೇರೆ ಲಕ್ಷಣಗಳ ಅಗತ್ಯವೇನಿದೆ? ಅಗತ್ಯವಿದ್ದರೆ ಆ ಲಕ್ಷಣಗಳು ಯಾವವು, ಆ ಲಕ್ಷಣಗಳ ಸ್ವರೂಪ ಏನು, ಅವು ಕವಿಗೆ/ ಕಾವ್ಯಕ್ಕೆ ಯಾಕೆ ಬೇಕು, ಅವನ್ನು ತಿಳಿದುಕೊಳ್ಳದೆ ಕವನ ಬರೆಯಲು ಬರುವುದಿಲ್ಲವೇ, ಬರೆದರೆ ಏನಾಗುತ್ತದೆ ಇತ್ಯಾದಿ ಪ್ರಶ್ನೆಗಳು ಕೆಲವರಲ್ಲಾದರೂ ಹುಟ್ಟಿಕೊಂಡರೆ ಅಚ್ಚರಿಯೇನಿಲ್ಲ. ಅದು ಸಹಜ ಕೂಡ. ಆ ಪ್ರಶ್ನೆಗಳಿಗೆ/ ಸಂದೇಹಗಳಿಗೆ ಉತ್ತರ ಹುಡುಕುವುದೇ ಈಗ ನಮ್ಮ ಕೆಲಸ. ನಾನೂ ಹಲವರಂತೆ ಒಬ್ಬ ಜಿಜ್ಞಾಸುವೇ. ಜಿಜ್ಞಾಸುಗಳಲ್ಲಿ ಪ್ರಶ್ನೆಗಳಿರುತ್ತವೆ, ವಿದ್ವಾಂಸರಲ್ಲಿ ಉತ್ತರಗಳಿರುತ್ತವೆ. ಅಂತಹ ಸಮರ್ಥ ವಿದ್ವಾಂಸರುಗಳು ನಮ್ಮ ಈ ಬಗೆಯ ಪ್ರಶ್ನೆಗಳಿಗೆ ಬಹಳ ಹಿಂದೆಯೇ ಉತ್ತರಗಳನ್ನು ತಿಳಿಸಿದ್ದಾರೆ. ಸಂದೇಹಗಳಿಗೆ ಸಮಾಧಾನ ಹೇಳಿದ್ದಾರೆ. ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದ್ದಾರೆ. ಅವರೆಲ್ಲ ಹೇಳಿದ್ದನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಇದರಲ್ಲಿ ನನ್ನ ಹೆಚ್ಚುಗಾರಿಕೆಯೇನೂ ಇಲ್ಲ. ಏಕೆಂದರೆ ನಾನೇನೂ ವಿದ್ವಾಂಸ ಅಲ್ಲ. ಇಂದಿಗೂ ಜಿಜ್ಞಾಸುವಾಗಿಯೇ ಉಳಿದುಕೊಂಡಿದ್ದೇನೆ. ಆದ್ದರಿಂದ ಇದು ಕೇವಲ ನನ್ನ ಕಾಲಂ ಅಲ್ಲ. ನಮ್ಮೆಲ್ಲರದೂ ಹೌದು. ನಾವೆಲ್ಲ ಒಟ್ಟಾಗಿಯೇ ವಿಷಯವನ್ನು ಮಥಿಸೋಣ. ಬೇಂದ್ರೆಯವರು ಹೇಳಿದಂತೆ ” ಮಾತು ಮಾತು ಮಥಿಸಿ ನಾದದ ನವನೀತ”ವನ್ನು ಹೊರತೆಗೆಯೋಣ.

ಅದು ಕವಿಕಾವ್ಯದ ಬಗ್ಗೆ, ಭಾಷೆಯ ಪರಿಶುದ್ಧತೆಯ ಬಗ್ಗೆ ಕಾಳಜಿ ಎಲ್ಲರಿಗೂ ಬೇಕು. ಅದರಲ್ಲೂ ಹೊಸದಾಗಿ ಬರೆಯುವವರಿಗೆ ಬೇಕು. ನಾವು ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಹಂಚಿಕೊಳ್ಳಬೇಕು. ಆಗ ಮನಸ್ಸು ಹಗುರಾಗುತ್ತದೆ.

- Advertisement -

ನಾವೆಲ್ಲ ಬರಹಗಾರರು. ಕವನ, ಕತೆ, ಕಾದಂಬರಿ, ನಾಟಕ, ಚುಟುಕು ಹರಟೆ ಏನೆಲ್ಲ ಬರೆಯುತ್ತಿರುತ್ತೇವೆ. ಕಾವ್ಯ ಲಕ್ಷಣ ಎಂದರೆ ಕೇವಲ ಅದು ಕವನಗಳಿಗಷ್ಟೇ ಸಂಬಂಧಿಸಿದ್ದು ಎಂದು ಭಾವಿಸಬೇಕಿಲ್ಲ. ಹಿಂದೆ “ಕಾವ್ಯ” ಎಂಬ ಶಬ್ದವನ್ನು ಎಲ್ಲದಕ್ಕೂ ಬಳಸುತ್ತಿದ್ದುದಿತ್ತು. “ಕಾವ್ಯೇಷು ನಾಟಕಂ ರಮ್ಯಂ” ಎಂಬ ಮಾತು ಇದನ್ನು ಸ್ಪಷ್ಟ ಪಡಿಸುತ್ತದೆ. “ಕಾವ್ಯಗಳಲ್ಲಿ ನಾಟಕವೇ ರಮ್ಯವಾದದ್ದು”. ಅಂದರೆ ನಾಟಕವೂ ಕಾವ್ಯವೇ ಎಂದಾಯಿತಲ್ಲ. ಅದೇನೇ ಇದ್ದರೂ ಮೊದಲು ಸಂಸ್ಕೃತದಲ್ಲಿ ಲಕ್ಷಣ ಗ್ರಂಥಗಳು ಬಂದವು. ನಂತರ ಕನ್ನಡದಲ್ಲೂ ಬಂದವು. ಈ ಲಕ್ಷಣ ಗ್ರಂಥ ರಚಿಸಿದವರನ್ನು ಲಾಕ್ಷಣಿಕರು ಎನ್ನುತ್ತಾರೆ. ಅವರು ನಮ್ಮ ಸಾಹಿತ್ಯ ರಚನೆಗೆ ಬೇಕಾದ ಕೆಲವು ಮೂಲ ಸೂತ್ರಗಳನ್ನು ತಿಳಿಸಿದರು. ನಾವು ಏನೇ ಬರೆಯಲಿ, ಅದು ಉತ್ತಮವೆನಿಸಲು ನಾವು ಮಾಡಬೇಕಾದ್ದೇನು, ನಾವು ಅನುಸರಿಸುವ ದಾರಿ ಯಾವುದು ಎಂದು ತಿಳಿಸುವ ಮಾರ್ಗದರ್ಶಕ ಸೂತ್ರಗಳಿಂದೊಡಗೂಡಿದ ಗ್ರಂಥಗಳಿವು. ಹಾಗಿದ್ದರೆ ಅವನ್ನು ಓದಿದಾಕ್ಷಣ ಒಬ್ಬ ಕವಿ ಹುಟ್ಟಿಬರುತ್ತಾನೆಯೇ?

ಹಾಗೇನಿಲ್ಲ. ಪುಸ್ತಕ ಓದಿ ಅಥವಾ ಕಮ್ಮಟಗಳಲ್ಲಿ ಕವಿ ತಯಾರಾಗುತ್ತಾನೆಂದೇನಿಲ್ಲ. ಅವೆಲ್ಲ ನಮಗೆ ಕವಿತ್ವ ಶಕ್ತಿ / ಕಾವ್ಯಶಕ್ತಿ ನೀಡಲು ಪೂರಕವಾದ ಸಂಗತಿಗಳಷ್ಟೆ. ಮುಖ್ಯವಾಗಿ ನಮಗೆ ಬೇಕಾದದ್ದು ‘ಪ್ರತಿಭೆ’. ಪ್ರತಿಭೆಯಿಲ್ಲದವರು ಕವಿಯಷ್ಟೇ ಅಲ್ಲ, ಏನೂ ಆಗುವುದಿಲ್ಲ. ಅದು ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದ ಶಬ್ದ. ಪ್ರತಿಭೆ ಎನ್ನುವುದು ನಮ್ಮೊಳಗೆ ಅಡಗಿರುವ ಒಂದು ಶಕ್ತಿ. ಒಬ್ಬ ಶ್ರೇಷ್ಠ ಕಲಾವಿದ, ಕ್ರೀಡಾಪಟು, ವಿಜ್ಞಾನಿ, ಸಾಹಿತಿ, ಸಂಶೋಧಕ ಏನೇ ಆಗಬೇಕಿದ್ದರೂ ಅವರಲ್ಲಿರಬೇಕಾದ ಮೂಲ ಶಕ್ತಿ ಪ್ರತಿಭೆ.
ಆದರೆ ಕೇವಲ ಪ್ರತಿಭೆ ಇದೆ ಎಂದಾಕ್ಷಣ ಅದು ತನ್ನಿಂದ ತಾನೇ ಪ್ರಕಟಗೊಳ್ಳುವುದಿಲ್ಲ. ಅದನ್ನು ಹೊರಗೆ “ಪುಶ್” ಮಾಡಬೇಕಾಗುತ್ತದೆ ಅಂದರೆ ಅದನ್ನು ಬೆಳೆಸಲು ಅಗತ್ಯವಾದ ಅಂಶಗಳನ್ನು ನಾವು ಒದಗಿಸಬೇಕಾಗುತ್ತದೆ. ಒಂದು ಬೀಜ ಮೊಳಕೆಯೊಡೆದಾಗ ಅದು ಬೆಳೆಯಲು ನೀರು ಗೊಬ್ಬರ ಎಲ್ಲ ಹಾಕಬೇಕಲ್ಲವೆ. ಒಂದು ರುಚಿಕರವಾದ ಸಾರು/ ಸಾಂಬಾರು ತಯಾರಿಸಲು ನೀರು , ಬೆಂಕಿ, ಪಾತ್ರೆ, ಬೇಳೆ ಇವು ಮೂಲತ: ಬೇಕು. ಆದರೆ ಅದು ರುಚಿಕರವಾಗಲು ಎಣ್ಣೆ, ಮೆಣಸು, ಜೀರಿಗೆ, ಮೆಂತೆ, ಕರಿಬೇವು, ಇಂಗು , ಉಪ್ಪು ಎಲ್ಲ ಬೇಕು. ಏನೆಲ್ಲ ಸೇರಿಸಿ ಒಗ್ಗರಣೆ ಹಾಕಿದಾಗಲೇ ಅದು ಘಮ್ ಎಂದು ಪರಿಮಳ ಬೀರಿ ನಮ್ಮ ಊಟಕ್ಕೆ ರುಚಿ ತಂದುಕೊಡುತ್ತದೆ. ಕಾವ್ಯ / ಸಾಹಿತ್ಯವೂ ಹಾಗೇ ಎನ್ನುವುದನ್ನು ನಾವು ಮರೆಯಬಾರದು. ಕಾವ್ಯ ಓದುಗನಿಗೆ ರುಚಿಸುವಂತೆ ಮಾಡಲು ನಾವು ನಮ್ಮಲ್ಲಿರಬಹುದಾದ “ಪ್ರತಿಭೆ”ಗೆ ಏನೆಲ್ಲ ಇತರ ಪೂರಕ ಸಂಗತಿಗಳನ್ನು ಒದಗಿಸಬೇಕಾಗುತ್ತದೆ. ಇಲ್ಲಿ “ಇರಬಹುದಾದ” ಎಂಬ ಶಬ್ದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಏಕೆಂದರೆ “ಕಾವ್ಯ ಪ್ರತಿಭೆ” ಎಲ್ಲರಲ್ಲೂ ಇರುತ್ತದೆ ಎಂಬ ” ಗ್ಯಾರಂಟಿ” ಯನ್ನು ಯಾರಿಗೆ ಯಾರೂ ಕೊಡಲು ಸಾಧ್ಯವಿಲ್ಲ. ಅದಕ್ಕೇ ” ಸಾಹಿತ್ಯವೆಲ್ಲರಿಗಿ( ಗ)ಲ್ಲ” ಎಂಬ ಸರ್ವಜ್ಞನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಎಲ್ಲರಿಗೂ ಇದ್ದಿದ್ದರೆ ಕರ್ನಾಟಕದಲ್ಲಿ ಅದೆಷ್ಟು ಕೋಟಿ ಕವಿಗಳಿರುತ್ತಿದ್ದರೋ ಅಲ್ಲವೆ?

“ಪ್ರತಿಭೆ” ಗೆ ಪೂರಕವಾದ ಅಂಶಗಳ ಕುರಿತು ನಮ್ಮ ಲಾಕ್ಷಣಿಕರು ಏನು ಹೇಳಿದ್ದಾರೆ, ಕವಿಯಾಗಲು ಬೇಕಾದ ಇತರ ಪರಿಕರಗಳೇನು ಎನ್ನುವ ವಿಚಾರವಾಗಿ ಯೋಚಿಸೋಣ.

- Advertisement -

( ಸಶೇಷ).
– ಎಲ್. ಎಸ್. ಶಾಸ್ತ್ರಿ

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group