ನಾನು ಯಾರು ಪಾಲಿಗೆ?
ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.
ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಅವರನ್ನು ಹೆತ್ತು ಹೊತ್ತ ಅವರ ವೃದ್ಧ ತಾಯಿ ಒಂದೆಡೆ ಸೇರುತ್ತಾರೆ. ನಾಲ್ಕು ಜನ ಪುತ್ರರಲ್ಲಿ ಎಲ್ಲರೂ ಸರಕಾರಿ ನೌಕರರೇ ಆಗಿರುತ್ತಾರೆ. ತಂದೆ ತನ್ನ ಹಿಂದೆ ಸಾಕಷ್ಟು ಪ್ರಮಾಣದ ಆಸ್ತಿ ಬಿಟ್ಟು ಹೋಗಿರುತ್ತಾನೆ.
ಪಾಲು ಹಂಚಿಕೊಳ್ಳಲು ಎಲ್ಲರೂ ಕೂಡುತ್ತಾರೆ. ಮೊದಲನೇ ಮಗ ತನಗೆ ಹೊಲದಲ್ಲಿ ಅರ್ಧ ಪಾಲು ಬೇಕೆನ್ನುತ್ತಾನೆ.
ಎರಡನೇ ಮಗ ತನಗೆ ಅಪ್ಪ ನಡೆಸುತ್ತಿದ್ದ ಹಿಟ್ಟಿನ ಗಿರಣಿ ಬೇಕೆನ್ನುತ್ತಾನೆ .
ಮೂರನೇ ಮಗ ತನ್ನ ಅಪ್ಪ ನಡೆಸುತ್ತಿದ್ದ ಕಿರಾಣಿ ಅಂಗಡಿ ತನಗೆ ಬೇಕು ಅಂತ ಹಠ ಹಿಡಿಯುತ್ತಾನೆ.
ನಾಲ್ಕನೇ ಮಗ ಅಪ್ಪನ ಹೆಸರಿನಲ್ಲಿ ಇರುವ ಬ್ಯಾಂಕ್ ನಲ್ಲಿನ ಎಲ್ಲಾ ಹಣಕಾಸು ವ್ಯವಹಾರ ತನ್ನದೆಂದು ಘೋಷಿಸುತ್ತಾನೆ.
ಎಲ್ಲರೂ ತಮಗೆ ಇಷ್ಟವಾದಂತೆ ತಮ್ಮ ಪಾಲು ಮಾಡಿಕೊಂಡು ತುಂಬಾ ಖುಷಿಯಿಂದ ಆನಂದ ತುಂದಿಲರಾಗಿರುತ್ತಾರೆ.
ಎಲ್ಲರೂ ತಮ್ಮ ಹೆಂಡದಿರ ಹತ್ತಿರ ತಾವು ಉಳಿದ ಸಹೋದರರನ್ನು ಯಾಮಾರಿಸಿ , “ಪಾಲು” ಪಡೆದ ಬಗ್ಗೆ ಖುಷಿಯಿಂದ ಹೇಳುತ್ತಿರುತ್ತಾರೆ.
ಕೊನೆಗೆ ಒಂದು ಮೂಲೆಯಲ್ಲಿ , ಅವರ ತಾಯಿ ಅವಕ್ಕಾಗಿ ಗಾಬರಿಯಿಂದ ಪಿಳಿ ಪಿಳಿ ನೋಡುತ್ತ ನಿಂತಿರುತ್ತಾಳೆ.
ಅವಳು ತನ್ನ ನಾಲ್ಕೂ ಜನ ಮಕ್ಕಳನ್ನು ಕರೆದು ಕೇಳುತ್ತಾಳೆ. ಅವಳಿಗೆ ಮಕ್ಕಳೆಲ್ಲರೂ ಆನಂದದಿಂದ ತಾವೆಲ್ಲ ಒಂದಿಷ್ಟೂ ಜಗಳವಾಡದೇ ಖುಷಿಯಿಂದ ಪಾಲು ಹಂಚಿಕೊಂಡಿದ್ದೇವೆ ಅನ್ನುತ್ತಾರೆ.
ಆಗ ಆ ತಾಯಿ ಕೇಳುತ್ತಾಳೆ “ಹೌದಾ , ಮಕ್ಕಳಿರಾ, ಹಾಗಾದರೆ ನಾನು ಯಾರ ಪಾಲಿಗೆ ಬಂದೆ ಎಂದು ಹೇಳುವಿರಾ ? ”
– ನೀಲಕಂಠ ದಾತಾರ.