spot_img
spot_img

ಬೆಳಗಾವಿ ಜಿಲ್ಲೆ: ಕಿರು ನೋಟ

Must Read

- Advertisement -

ಶೈಕ್ಷಣಿಕ ಶಕ್ತಿ

ಅತ್ಯಾಧುನಿಕ ಸೌಕರ್ಯಗಳೊಡನೆ ಬಹುಮುಖೀ ಶಿಕ್ಷಣವನ್ನು ಪಡೆಯುವ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಮಕ್ಕಳು ಶಿಕ್ಷಣ ಪಡೆಯದಿದ್ದರೂ ನಡೆಯುತ್ತದೆ, ಹೇಗಾದರೂ ದುಡಿದು ತಿನ್ನುವ ಶಕ್ತಿ ಪಡೆದರಾಯಿತು ಎಂದು ಭಾವಿಸುತ್ತಿದ್ದ ಕಾಲವನ್ನು ದಾಟಿ ಬಂದಿದ್ದೇವೆ. ಮಕ್ಕಳಿಗೆ ಕಾಲಕ್ಕೆ ತಕ್ಕ ಶಿಕ್ಷಣ ಕೊಡಿಸುವದು ಅನಿವಾರ್ಯ ಎಂಬ ಭಾವನೆ ಹಿರಿಯರಲ್ಲಿ ಬೆಳೆದಿದೆ. ಅದರಲ್ಲೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರಕುತ್ತಿದೆ. ಉಚಿತ ಶಿಕ್ಷಣದ ಸೌಲಭ್ಯವನ್ನೂ ನೀಡಲಾಗುತ್ತಿದೆ. ಜಗತ್ತಿನ ಬೆಳವಣಿಗೆ ಮತ್ತು ಜನರ ಬೆಳವಣಿಗೆ ಬೇರೆಬೇರೆ ಅಲ್ಲ ಎಂಬ ತಿಳಿವಳಿಕೆ ಬೆಳೆಯತೊಡಗಿದೆ. ಅದಕ್ಕೆ ತಕ್ಕಂತೆ ಬದುಕಿನ ವಿವಿಧ ಮಗ್ಗುಲುಗಳನ್ನು ಸ್ಪರ್ಶಿಸುವ ವೈವಿಧ್ಯಮಯ ಶಿಕ್ಷಣದ ಅವಕಾಶಗಳು ಇಂದು ಜನರ ಎದುರಿಗಿವೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಿಕ್ಷಣ ಕ್ಷೇತ್ರ ಇಂದು ಅಗಾಧ ಸ್ವರೂಪ ಪಡೆದುಕೊಂಡಿದ್ದು ಇಲ್ಲಿ ಎಲ್ಲ ಬಗೆಯ ಶಿಕ್ಷಣವನ್ನೂ ಪಡೆಯುವ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬೆಳಗಾವಿಯಲ್ಲಿ ಆರಂಭವಾದದ್ದು ಸುಮಾರು ೧೫೦ ವರ್ಷಗಳ ಹಿಂದೆ. ಅದಕ್ಕೂ ಮೊದಲು ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಇತಿಹಾಸದತ್ತ ಕಣ್ಣು ಹೊರಳಿಸಿದರೆ ಅದು ಸಾವಿರ ವರುಷಗಳ ಹಿಂದಿನ ಅಗ್ರಹಾರ ಸಂಸ್ಕೃತಿಯ ಕಡೆ ಹೊರಳುತ್ತದೆ. ಒಂದು ಹಂತದಲ್ಲಿ ಮಠಮಂದಿರಗಳೇ ಮಕ್ಕಳ ಶಿಕ್ಷಣ ಕೇಂದ್ರಗಳಾಗಿದ್ದವು. ಶಾಲೆಗಳಿಗೆ ಮಠ ಎಂದೇ ಕರೆಯಲಾಗುತ್ತಿತ್ತು. ೧೮೬೫ ರಲ್ಲಿ ಬೆಳಗಾವಿಯಲ್ಲಿ “ಮಠಪತ್ರಿಕೆ” ಎಂಬ ಹೆಸರಿನ ಶೈಕ್ಷಣಿಕ ಪತ್ರಿಕೆ ಹುಟ್ಟಿಕೊಂಡಿತ್ತು. ಮುಂದೆ ಅದು ” ಜೀವನ ಶಿಕ್ಷಣ” ಎಂಬ ಹೆಸರಿನಲ್ಲಿ ಬದಲಾಗಿ ಇಂದಿಗೂ ಧಾರವಾಡದಲ್ಲಿ ಮುಂದುವರಿದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾದದ್ದು ಬ್ರಿಟಿಷರ ಆಡಳಿತಾವಧಿಯಲ್ಲಿ. ೧೮೩೦ ರಲ್ಲಿ ಮೊದಲ ಮರಾಠೀ ಶಾಲೆಯನ್ನು ಸ್ಥಾಪಿಸಲಾಯಿತು. ಮರಾಠಾ ಪೇಶ್ವೆ ಆಡಳಿತದ ಪರಿಣಾಮವಾಗಿ ಅಂದು ಬೆಳಗಾವಿಯ ಮೇಲೆ ಮರಾಠಿ ಭಾಷೆಯ ದಟ್ಟ ಪ್ರಭಾವ ಹರಡಿಕೊಂಡಿತ್ತು. ಮುಂದೆ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳೂ ಆರಂಭವಾದವು. ಶತಮಾನದ ಇತಿಹಾಸ ಹೊಂದಿದ ಸರ್ದಾರ್ಸ್ ಶಿಕ್ಷಣ ಸಂಸ್ಥೆ, ಸೇಂಟಪಾಲ್ಸ್ ಹೈಸ್ಕೂಲ್, ಬೆನನ್ ಸ್ಮಿತ್ ಹೈಸ್ಕೂಲು ಗಳು ನಗರದ ಶೈಕ್ಷಣಿಕ ಬೆಳವಣಿಗೆಗೆ ತಳಹದಿ ಹಾಕಿಕೊಟ್ಟವು. ಈ ತಳಹದಿ ಭದ್ರಗೊಳಿಸಲು ಕಾರಣವಾದದ್ದು ೧೯೧೬ ರಲ್ಲಿ ಪ್ರಾರಂಭವಾದ ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿ ( ಕೆ. ಎಲ್. ಇ. ಸೊಸೈಟಿ). ಶಿಕ್ಷಣ ರಂಗದ ಸಪ್ತರ್ಷಿಗಳೆಂದೇ ಕರೆಯಲ್ಪಡುವ ಏಳು ಜನ ಶಿಕ್ಷಕರು ಸೇರಿ ಜಿ. ಎ. ಹೈಸ್ಕೂಲ್ ( ಗಿಲಗಿಂಚಿ ಅರಟಾಳ ) ಸ್ಥಾಪಿಸಿದರು. ಕೆಲಕಾಲ ಈ ಸಂಸ್ಥೆ ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸೈಟಿ ಎಂಬ ಹೆಸರನ್ನೂ ಪಡೆದುಕೊಂಡಿತ್ತು. ಮುಮದೆ ಲಿಬರಲ್ ಎಂಬ ಶಬ್ದದ ಬದಲು ಲಿಂಗಾಯತ ಎಂಬ ಶಬ್ದ ಬಳಕೆಗೆ ತರಲಾಯಿತು. ಇಂದು ಈ ಸಂಸ್ಥೆಯಡಿ ೨೦೦ ಕ್ಕೂ ಹೆಚ್ಚು ವೈವಿಧ್ಯಮಯ ಶಿಕ್ಷಣ ನೀಡುವ ಶಾಲೆ ಕಾಲೇಜುಗಳು ನಡೆದಿವೆಯಲ್ಲದೆ ಇದು ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನವನ್ನೂ ಪಡೆದುಕೊಂಡು ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ. ಬೆಳಗಾವಿ ಜಿಲ್ಲೆಯಲ್ಲಷ್ಟೇ ಅಲ್ಲ , ಬೆಂಗಳೂರು, ದಿಲ್ಲಿ ಸಹಿತ ಹಲವೆಡೆ ತನ್ನ ರೆಂಬೆಕೊಂಬೆಗಳನ್ನು ಚಾಚಿ ಬೆಳೆದಿದೆ. ೧೯೩೩ ರಲ್ಲಿ ಆರಂಭಗೊಂಡ ಲಿಂಗರಾಜ ಕಾಲೇಜು, ಆರ್. ಎಲ್. ಎಸ್. ಕಾಲೇಜು , ಜೆಎನ್ಎಂಸಿ ಮೆಡಿಕಲ್ ಕಾಲೇಜು , ಇಂಜಿನಿಯರಿಂಗ್, ತಾಂತ್ರಿಕ, ವಾಣಿಜ್ಯ, ಕೃಷಿ, ಆಯುರ್ವೇದಿಕ ಸಹಿತ ಹಲವು ಬಗೆಯ ಶಿಕ್ಷಣ ಸಂಸ್ಥೆಗಳನ್ನು ಕೆಎಲ್ಇ ಸ್ಥಾಪಿಸಿದೆ.

- Advertisement -

೧೯೩೦ ರ ದಶಕದವರೆಗೂ ದಕ್ಷಿಣ ಭಾರತದಲ್ಲಿ ಕಾನೂನು ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ. ಮುಂಬಯಿ ಮದ್ರಾಸುಗಳಿಗೆ ಹೋಗಬೇಕಿತ್ತು. ಆಗ ಕೆಲವು ಶಿಕ್ಷಣ ಪ್ರೇಮಿಗಳು ಒಂದಾಗಿ ಶ್ರೀಮಂತ ರಾಜಾ ಲಖಮನಗೌಡರ ನೆರವು ಪಡೆದುಕೊಂಡು ಕರ್ನಾಟಕ ಕಾನೂನು ಸಂಸ್ಥೆ ಕಟ್ಟಿ ( ಕೆಎಲ್ಎಸ್) ೧೯೩೯ ರಲ್ಲಿ ಆರ್. ಎಲ್. ಲಾ ಕಾಲೇಜ್ ಆರಂಭಿಸಿದರು. ಈ ಕಾಲೇಜಿನಲ್ಲಿ ಉನ್ನತ ಕಾನೂನು ಶಿಕ್ಷಣ ಪಡೆದ ಹಲವರು ಸುಪ್ರೀಂ ಕೊರ್ಟ್, ಹೈಕೋರ್ಟ್ ಮುಖ್ಯ ನ್ಯಾಯಾಧೀಶರುಗಳಾಗಿ, ನ್ಯಾಯಾಧೀಶರುಗಳಾಗಿ ಖ್ಯಾತಿವೆತ್ತಿದ್ದಾರೆ. ಇದೇ ಸಂಸ್ಥೆ ನಂತರ ಗೋಗಟೆ ಕಾಮರ್ಸ್ ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳನ್ನೂ ಆರಂಭಿಸಿತು.
೧೯೩೯ ರಲ್ಲೇ ಆದ ಇನ್ನೊಂದು ಬೆೞವಣಿಗೆಯಲ್ಲಿ ಅಂದಿನ ಮುಂಬಯಿ ಸರಕಾರದಿಂದ ಮಾಧ್ಯಮಿಕ ಶಿಕ್ಷಕರ ತರಬೇತಿ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಅದೇ ಇಂದಿನ ಗವರ್ನಮೆಂಟ್ ಕಾಲೇಜ್ ಆಫ್ ಎಜ್ಯುಕೇಶನ್. ಸ್ವಾತಂತ್ರ್ಯದ ನಂತರ ಬೆಳಗಾವಿಯ ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ರಭಸದ ಬೆಳವಣಿಗೆ ಕಂಡಿತು. ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆಯಿಂದ ೧೯೪೮ ರಲ್ಲಿ ರಾಣಿ ಪಾರ್ವತಿದೇವಿ ಕಾಲೇಜು ಸಾವಂತವಾಡಿಯಿಂದ ಬೆಳಗಾವಿಗೆ ವರ್ಗಾಯಿಸಲ್ಪಟ್ಟಿತು. ( ಆರ್. ಪಿ. ಡಿ. ಕಾಲೇಜು. ) ಅದೇ ಸಂಸ್ಥೆ ಜಿ.ಎಸ್. ಸಾಯಿನ್ಸ್ ಕಾಲೇಜನ್ನೂ ಆರಂಭಿಸಿತು.

ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಪಾತ್ರವೂ ಬಹಳ ದೊಡ್ಡದು. ಸೇಂಟ್ ಪಾಲ್ಸ್, ಸೇಂಟ್ ಝೇವಿಯರ್, ಸೇಂಟ್ ಜೊಸೆಫ್ಸ್, ಸೇಂಟ್ ಮೇರಿ,ಬೆನನ್ ಸ್ಮಿತ್, ಡಿವೈನ್ ಪ್ರೊವಿಡೆನ್ಸ್ ಮೊದಲಾದವುಗಳನ್ನಿಲ್ಲಿ ಉದಾಹರಿಸಬಹುದು. ಇವೆಲ್ಲ ಆಂಗ್ಲ ಮಾಧ್ಯಮ ಶಾಲೆಗಳೇ.

(ಸಶೇಷ)

- Advertisement -

 

ಎಲ್ ಎಸ್ ಶಾಸ್ತ್ರಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group