ಮೈಸೂರು -ನಗರದ ಭೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಕಾಲೇಜಿನ ವತಿಯಿಂದ ಇತ್ತೀಚೆಗೆ ಮೈಸೂರಿನ ಕರ್ನಾಟಕ ಮುಖ್ಯ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬೆಳ್ಳಿ ಮಹೋತ್ಸವದ ಸಮಾರಂಭವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಎಂ.ಮರಿಸ್ವಾಮಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ಶಾಲೆ ಸತತ 25 ವರ್ಷ ಯಶಸ್ವಿಯಾಗಿ ಪೂರೈಸಿರುವುದಕ್ಕೆ ಅಲ್ಲಿನ ಪರಿಶ್ರಮ ಹಾಗೂ ಪ್ರಾಮಾಣಿಕ ಕೆಲಸಗಳು ಕಾರಣವಾಗಿದೆ ಎಂದು ತಿಳಿಸಿ, ಈ ರೀತಿಯ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಬಗ್ಗೆ ಹಿತವಚನ ನುಡಿದರಲ್ಲದೆ ಈ ಸಂಸ್ಥೆ ಹೀಗೆ ಇನ್ನೂ ಎತ್ತರಕ್ಕೆ ಬೆಳೆದು ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೋತ್ರಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಟಿ.ರಂಗಪ್ಪನವರು ವಹಿಸಿ, ಸಂಸ್ಥೆಯು ಆರಂಭದ ದಿನದಿಂದ ಇಲ್ಲಿಯವರೆಗೆ ನಡೆದಂತಹ ಎಲ್ಲಾ ಏಳು-ಬೀಳುಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಿ.ಎನ್.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಾಗಭೂಷಣ್, ನಿವೃತ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಸಂಸ್ಥೆಯ ಆಡಳಿತಾಧಿಕಾರಿ ಕಾಂತಿ ನಾಯಕ್, ಪ್ರಾಂಶುಪಾಲ ಸುನಿಲ್‍ಕುಮಾರ್ ಎಂ.ಎಸ್., ಮುಖ್ಯೋಪಾಧ್ಯಾಯ ಮೊಹಮ್ಮದ್ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.