spot_img
spot_img

ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಐವತ್ತು ವರ್ಷ; ಅದರ ಸುತ್ತಮುತ್ತ…

Must Read

- Advertisement -

ಕನ್ನಡದ ಶ್ರೇಷ್ಠ ಕಥೆಗಳಲ್ಲಿ ‘ಭೂತಯ್ಯನ ಮಗ ಅಯ್ಯು’ ಕೂಡ ಒಂದು. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈಯ್ಯಾರಿ ಕಥಾ ಸಂಕಲನದಲ್ಲಿ ಒಂದು  ಕಥೆ ಒಂದು  ಕಾದಂಬರಿಗಾಗುವಷ್ಟು ಸರಕನ್ನು ಒಳಗೊಂಡಿದೆ. ಒಳಿತು ಕೆಡುಕುಗಳ ಪರಿಣಾಮ ಕುರಿತ ಹಳ್ಳಿಯ ಒಂದು ಮನೆತನಕ್ಕೆ ಸೇರಿದ ಕಥಾವಸ್ತು ಮನುಷ್ಯ ಸ್ವಭಾವದಲ್ಲಿ ಕೆಟ್ಟತನ ಎಷ್ಟಿರಬಹುದು ಗಟ್ಟಿತನ ಎಷ್ಟಿರಬಹುದು ಎಂಬುದನ್ನು ಗೊರೂರರು ಎಷ್ಟರಮಟ್ಟಿಗೆ ಕಂಡಿದ್ದಾರೆ ಎನ್ನುವುದನ್ನು ತಿಳಿಯಲು ಈ ಕಥೆ ಓದಬೇಕು.

ಈ ಕಥೆ ಸಿನಿಮಾವಾಗಿ ತೆರೆ ಕಂಡಿದ್ದು ತಾ.2-2-1974ರಲ್ಲಿ. ಇಂದಿಗೆ 50  ವರ್ಷ. ಈ ಚಿತ್ರದ ನಿರ್ದೇಶಕರು ಎಸ್.ಸಿದ್ಧಲಿಂಗಯ್ಯನವರು. ಡಾ. ಗೊರೂರರ ಮಗಳು ಶ್ರೀಮತಿ ವಸಂತಮೂರ್ತಿ ಮೇಡಂ ಕೆನಡದಲ್ಲಿ ನೆಲೆಸಿದ್ದಾರೆ. ಅವರು ಕಳೆದ ವರ್ಷ ಗೊರೂರರ 119ನೇ ವರ್ಷದ ಜನ್ಮ ದಿನ (ಗೊರೂರರ ಜನ್ಮ ದಿನ 4-7-1904) ಸಂದರ್ಭ ಗೊರೂರು ಹಾಸನಕ್ಕೆ ಬಂದಿದ್ದಾಗ ಅವರ ಪರಿಚಯ ನನಗಾಗಿತ್ತು. ಅವರು ಮೊನ್ನೆ ಒಂದು ಯೂ ಟ್ಯೂಬ್ ಚಾನಲ್‍ನ ವಿಡಿಯೋವೊಂದನ್ನು ಹಾಸನ ಜಿಲ್ಲಾ ಬರಹಗಾರರ ಬಳಗಕ್ಕೆ ಕಳಿಸಿದ್ದರು. 

ಭೂತಯ್ಯನ ಮಗ ಅಯ್ಯು ಕಥೆಯ ಹಕ್ಕು ಪಡೆಯಲು ಸಿದ್ಧಲಿಂಗಯ್ಯನವರು ನಿರ್ಮಾಪಕ ಎಸ್.ಪಿ.ವರದಪ್ಪ ಅವರರೊಂದಿಗೆ ರಾಮಸ್ವಾಮಿ ಅಯ್ಯಂಗಾರರನ್ನು ಭೇಟಿ ಮಾಡಲು ಗೊರೂರಿಗೆ ಬಂದು ಅವರ ಈ ಕಥೆಯನ್ನು ಸಿನಿಮಾ ಮಾಡುವ ಪ್ರಸ್ತಾಪ ಮುಂದಿಟ್ಟಾಗ ಲೇಖಕರು 12 ಪುಟಗಳ ಸಣ್ಣ ಕಥೆಯನ್ನು ಯಾರೂ ಚಿತ್ರ ಮಾಡಲು ಸಾಧ್ಯವಿಲ್ಲ ಎಂದು ಅನುಮಾನಗೊಂಡು ನಿರಾಕರಿಸಿದರು. ನಿರ್ದೇಶಕರು, ನಿರ್ಮಾಪಕರು ನಿರಾಶರಾಗಲಿಲ್ಲ.  ಗೊರೂರಿನ ಹೋಟೆಲ್‍ನಲ್ಲಿ ಕಾಫಿ ಕುಡಿದು ರಿಲ್ಯಾಕ್ಸ್ ಆಗಿ ಮತ್ತೊಮ್ಮೆ ಲೇಖಕರ ಮನೆಗೆ ಹೋಗಿ ಅಂತೂ ಗೊರೂರರು ಒಪ್ಪಿಗೆ ನೀಡಿ ಕಥೆಯ ಹಕ್ಕು ಮಾರಿದರು.  ಸ್ವತ: ಸಿದ್ಧಲಿಂಗಯ್ಯನವರೇ 3 ತಿಂಗಳು ಕಥೆಯನ್ನು ಚಿತ್ರಕಥೆಯಾಗಿ ಬರೆದು ಚಿತ್ರ ತೆರೆಕಂಡಾಗ ನನಗೆ 13 ವರ್ಷ. ಆ ದಿನಗಳಲ್ಲಿ ನಮ್ಮ ಮನೆಯ ಪಕ್ಕವೇ ಇದ್ದ ನಮ್ಮ ಚಿಕ್ಕಪ್ಪನವರ ಮನೆಯು ಹೇಮಾವತಿ ಹೋಟೆಲ್ ಆಗಿತ್ತು. ನಮ್ಮ ತಂದೆ ಇದನ್ನು ನೋಡಿಕೊಳ್ಳುತ್ತಿದ್ದರು. ಎಸ್. ಸಿದ್ದಲಿಂಗಯ್ಯನವರು ಕಾಫಿ ಕುಡಿದಿದ್ದು ಇಲ್ಲಿಯೇ..? ನೋ..ಇರಲಿಕ್ಕಿಲ್ಲ.. ನನ್ನ ಮುಗ್ಧ ಆಲೋಚನೆ ನನಗೆ ನಗು ತರಿಸಿತು. ಆದರೆ ಈ ಚಿತ್ರದ ಚಿತ್ರೀಕರಣ ನಮ್ಮೂರಿನಲ್ಲಿ ನಡೆದಿದ್ದರೆ..?  ಎಷ್ಟು ಬೇಷ್ ಇತ್ತು.!  ಚಿತ್ರವು ಹೆಚ್ಚಾಗಿ  ಕಳಸಾಪುರದಲ್ಲಿ ಚಿತ್ರೀಕರಣಗೊಂಡಿದೆ. ಸಿದ್ಧಲಿಂಗಯ್ಯನವರು ಈ ಚಿತ್ರವನ್ನು ಒಂದು ಸವಾಲಾಗಿ ಸ್ವೀಕರಿಸಿದ್ದರು. ಯಾವುದೇ ದೊಡ್ಡ ತಾರೆಯರನ್ನು ಈ ಚಿತ್ರಕ್ಕೆ ತೆಗೆದುಕೊಳ್ಳದಿರಲು ನಿರ್ಧರಿಸಿದ್ದರು. ಅವರ ದೂರದ ಬೆಟ್ಟ, ಬಂಗಾರದ ಮನುಷ್ಯ ಯಶಸ್ವಿ ಚಿತ್ರಗಳ ನಂತರ ಅವರ ಸುತ್ತಲಿನ ಜನ ಈ ಚಿತ್ರಗಳ ಯಶಸ್ವಿಗೆ ರಾಜಕುಮಾರ್ ಕಾರಣವೆಂದು ಹೇಳಿದ್ದು, ಯಾವ ತಾರಾ ಮೌಲ್ಯದ ಆಕರ್ಷಣೆ ಇಲ್ಲದೆ ನಿರ್ದೇಶಕನಾಗಿ  ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಂಬ ಛಲ ಅವರಲ್ಲಿತ್ತು. ಅವರು ಆಗಿನ ಕಾಲದ ಜನಪ್ರಿಯ ರಂಗಭೂಮಿ ಕಲಾವಿದ ಲೋಕೇಶ್ ಅವರನ್ನು ಅಯ್ಯು ಪಾತ್ರಕ್ಕೆ ವಿಷ್ಣುವರ್ಧನ್ ಅವರನ್ನು ಗುಳ್ಳ ಮತ್ತು ಎಂ.ಪಿ.ಶಂಕರ್ ಅವರನ್ನು ಭೂತಯ್ಯನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.

- Advertisement -

 

ಭೂತಯ್ಯ ಜಾಲಹಳ್ಳಿಯ ನಿರ್ದಯಿ ಜಮೀನ್ದಾರ. ಅವನು ಸಾಲ ನೀಡಿದ ಹಳ್ಳಿಗರು ತಮ್ಮ ಸಾಲವನ್ನು ಮರುಪಾವತಿಸಲು ವಿಫಲವಾದಾಗ ಅವರ ಜಮೀನನ್ನು ನಿರ್ದಯನಾಗಿ ಆಕ್ರಮಿಸುತ್ತಾನೆ. ಹಳ್ಳಿಯ ಹೊರವಲಯದಲ್ಲಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಅದು ಪ್ರವಾಹಕ್ಕೆ ಒಳಗಾಗುತ್ತದೆ. ನದಿಯ ದಡದ ಫಲವತ್ತಾದ ಭೂಮಿಯನ್ನು ಪಡೆದು ತನ್ನ ಮಗ ಅಯ್ಯುವಿಗೆ ಮನೆ ಕಟ್ಟುತ್ತಾನೆ. ಕೆಲ ದಿನಗಳ ನಂತರ ಭೂತಯ್ಯ ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಾನೆ. ಜನ ಅವನ ವಿರುದ್ಧ ಎಷ್ಟು ದ್ವೇಷಿಗಳಾಗಿದ್ದಾರೆಂದರೆ ಅವನ ಅಂತ್ಯಕ್ರಿಯೆಗೆ ಯಾರೂ ಬಾರದೆ ಅವನ ಮಗ ಅಯ್ಯು ಗಾಡಿಯಲ್ಲಿ ಹೆಣವನ್ನು ಹೇರಿಕೊಂಡು ಹೋಗುವ ದೃಶ್ಯ ಮರೆಯುವಂತಿಲ್ಲ. ಚಿತ್ರದ ಮುಂದಿನ ಕಥೆಗೆ ಹೋಗುವುದಿಲ್ಲ. ಆದರೆ ಅಂತಿಮ 20 ನಿಮಿಷಗಳ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಅಂದು ನಮಗೆ ಅದ್ಭುತವಾಗಿ ಕಂಡಿತ್ತು. ಇದನ್ನು ಕಳಸಾಪುರ, ಮಾದರಾಯನಕಟ್ಟೆ ಮತ್ತು ಶಿವನಸಮುದ್ರದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಆರಂಭದಲ್ಲಿ ಮನೆಯೊಳಗೆ ನೀರು ಬರುವಂತೆ ಒಂದು ತೊಟ್ಟಿಯನ್ನು ನಿರ್ಮಿಸಲಾಗಿತ್ತು. ಆದರೆ ಕ್ಯಾಮರಾ ಚಲಿಸಲು ಪ್ರಾರಂಭಿಸಿದ ತಕ್ಷಣ ಅದು ಮುರಿದು ಹೋಯಿತು. ಸಿದ್ಧಲಿಂಗಯ್ಯನವರು ಅದನ್ನು ಪುನರ್ ನಿರ್ಮಿಸಿ ಮತ್ತೆ ದೃಶ್ಯವನ್ನು ಚಿತ್ರೀಕರಿಸಿದರು. ಚಿತ್ರವು ಅಂದು ಜನಪ್ರಿಯರಲ್ಲದ ತಾರಾಗಣ ಹೊಂದಿಯೂ ಜಯಭೇರಿ ಬಾರಿಸಿತು.    

ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ನೂರು ದಿನ ಓಡಿತು. ಆಗಿನ 12 ಲಕ್ಷಗಳ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 45 ಲಕ್ಷಕ್ಕೂ ಹೆಚ್ಚು ಗಳಿಸಿತು. ಹೊರಾಂಗಣದಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಮೊದಲ ಕನ್ನಡದ ಬಣ್ಣದ ಚಿತ್ರ ವಾಗಿ ಹಾಲಿವುಡ್‍ನ ದೊಡ್ಡ ನಿರ್ದೇಶಕರು ಮಾತ್ರ ಯೋಚಿಸುವ ಪ್ರಮಾಣದಲ್ಲಿ ಇದನ್ನು ಚಿತ್ರೀಕರಿಸಿದ ಎಸ್.ಸಿದ್ಧಲಿಂಗಯ್ಯ ಇಸ್ ಗ್ರೇಟ್.! ಚಿತ್ರದ ‘ಮಲೆನಾಡ ಹೆಣ್ಣ ಮೈ ಬಣ್ಣ. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ನಿತ್ಯ ಹರಿದ್ವರ್ಣ ಹಾಡುಗಳಲ್ಲಿ ಒಂದಾಗಿ ಉಳಿದಿದೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.  ಲೋಕೇಶ್ ಭವಾನಿಗೆ ಅತ್ಯುತ್ತಮ ನಟ-ನಟಿ, ರುಷ್ಯೇಂದ್ರಮಣಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತು. ತಮಿಳಿನಲ್ಲಿ ಎಲ್ಲೋರಂ ನಲ್ಲವರೆ (1975) ಹಿಂದಿಯಲ್ಲಿ ಏಕ್ ಗಾಂವ್ ಕಿ ಕಹಾನಿ (1975) ತೆಲುಗಿನಲ್ಲಿ ಆಂಧಾರೂ ಮಂಚಿವಾರೆ (1976) ಎಂದು ಮರು ನಿರ್ಮಾಣವಾದವು. 

- Advertisement -

‘ನಾನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಕಾಲ 2006ರಲ್ಲಿ ಒಂದು ದಿನ ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿಯವರಿಂದ ಒಂದು ಪತ್ರ ಬಂತು. ಗೊರೂರಿನಲ್ಲಿ ಕಮ್ಮಾರ ವೀರಭದ್ರಚಾರಿ ಕಿರು ಚಿತ್ರವನ್ನು ಡಿಡಿ 9ಗೆ (ಚಂದನ) ಶೂಟಿಂಗ್ ಮಾಡಲು ಸ್ಥಳೀಯವಾಗಿ ತಮ್ಮ ಸಹಕಾರ ಬೇಕೆಂದಿದ್ದರು.

ನಾನು ಖುಷಿಯಿಂದಲೇ ಒಪ್ಪಿ ಅವರಿಗೆ ಬೇಕಾದ ವ್ಯಕ್ತಿಗಳ ಸಂಪರ್ಕ ಒದಗಿಸಿ ನನ್ನ ಸಹಕಾರ ಪ್ರಾಮಾಣಿಕವಾಗಿ ನೀಡಿದ್ದೆ. ನನಗೊಂದು ಆಸೆ ಇತ್ತು. ಗೊರೂರು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಅವಕಾಶ ಇತ್ತು. ಈಗಲೂ ಇದೆ. ಸಾಕಷ್ಟು ಪ್ರಕೃತಿ ತಾಣಗಳು ಇಲ್ಲಿವೆ. ಸಿನಿಮಾ ಶೂಟಿಂಗ್‍ಗೆ ಹೇಳಿ ಮಾಡಿಸಿದ ತಾಣ. ಭೂತಯ್ಯ ಚಿತ್ರದ ಕತೆ ಇಲ್ಲಿಯ ಪರಿಸರಕ್ಕೆ ಹೊಂದಿಕೊಂಡಂತಿದ್ದರೂ ಶೂಟಿಂಗ್ ನಡೆದಿದ್ದು  ಕಳಸಾಪುರದಲ್ಲಿ.  ಗೊರೂರರ ಹೇಮಾವತಿ ಕಾದಂಬರಿ ಶೂಟಿಂಗ್ ಕೂಡ ಇಲ್ಲಿ ನಡೆಯಲಿಲ್ಲ. ನೇತ್ರ ಪಲ್ಲವಿ ಎಂಬ ಚಿತ್ರದ ಶೂಟಿಂಗ್ ಇಲ್ಲಿ ನಡೆದರೂ ತೆರೆ ಕಾಣಲಿಲ್ಲ. ಪುಟ್ಟಣ್ಣ ಕಣಗಾಲ್ ಗೊರೂರಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿ ಮಸಣದ ಹೂವು ಚಿತ್ರದ ಸ್ಕ್ರಿಪ್ಟ್ ಬರೆದರೂ ಶೂಟಿಂಗ್ ಬೇರೆ ಕಡೆ. ಜೀವನ ಸಂಗ್ರಾಮ  ಚಿತ್ರಕಥೆಯು ಇದೆಯೇ. ಸುನಿಲ್ ಪುರಾಣಿಕ್ ಅವರು ಎಳೆಯರ ಗೆಲುವು ಎಂಬ ಟೆಲಿ ಫಿಲಂ ಶೂಟ್ ಮಾಡಿದ್ದರು. ಆದರೆ ಅದು ಪ್ರಸಾರವಾಯಿತೆ ನನಗೆ ತಿಳಿಯಲಿಲ್ಲ. ಈ ಆಸೆ ನಿರಾಶೆ ನಡುವೆ ಚಂದನದಲ್ಲಿ ಕಮ್ಮಾರ ವೀರಭದ್ರಾಚಾರಿ ಪ್ರಸಾರವಾಗಿ ನನಗೆ ಖುಷಿ ತಂದಿತ್ತು. ನಿರ್ದೇಶಕರು ನನ್ನ ಹೆಸರನ್ನು ಕಡೆಯಲ್ಲಿ ತೋರಿಸಿದ್ದಾರೆ. ಇರಲಿ ಈ ಚಿತ್ರದ ಕಥೆಯಲ್ಲಿ ಕಮ್ಮಾರ ವೀರಭದ್ರಾಚಾರಿಯ ಮನೆ ಕುಸಿದು ಬೀಳುವ ದೃಶ್ಯಕ್ಕೆ ಪೇಟೆ ಬೀದಿಯ ಶ್ರೀರಾಮ ಮಂದಿರವನ್ನು ಬಳಸಿಕೊಂಡಿದ್ದರು. ಅದು ಆಗ ಬೀಳುವ ಸ್ಥಿತಿಯಲ್ಲೇ ಇತ್ತು. ಕಥೆಯಲ್ಲಿ ಕಮ್ಮಾರ ವೀರಭದ್ರಾಚಾರಿ  ಜೋಯಿಸನಾಗಲು ಹೊರಡುತ್ತಾನೆ. ಈ ಕೆಲಸ ಸುಲಭ ಹಾಗೂ ಗೌರವ ತರುವಂಥದ್ದು ಆಗಿದೆ. ಆದರೆ ಇದರಿಂದ ಪುರೋಹಿತರಿಗೆ ಕೆಲಸವಿಲ್ಲದಂತಾಗಿ ಬದುಕಿನ ಕತ್ತಲೆಯನ್ನು ಅನುಭವಿಸುತ್ತಾರೆ. ವೀರಭದ್ರಾಚಾರಿ ಪುರೋಹಿತನಾದ ಮೇಲೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮನೆ ಕಟ್ಟುವ ಕೆಲಸ ನಿಂತು ಹೋಗುತ್ತದೆ. ಆಚಾರಿ ತನ್ನ ಮನೆಯನ್ನು ದುರಸ್ತಿ ಮಾಡಿಕೊಳ್ಳದೇ ಕಾಲ ತಳ್ಳಿಕೊಂಡು ಬಂದು ಒಂದು ಜೋರು ಮಳೆಗೆ  ಅವನ ಮನೆಯೇ ಕುಸಿದುಬೀಳುತ್ತದೆ. ಈ ದೃಶ್ಯ ಸೆರೆ ಹಿಡಿಯಲು ಶ್ರೀರಾಮ ಭಜನೆ ಮನೆಗೆ ನೀರಿನ ಟ್ಯಾಂಕರ್‍ನಿಂದ ಕೃತಕ ಮಳೆ ಸುರಿಸಿ ಕುಸಿದು ಬಿದ್ದ ಮನೆಯಾಗಿ ಚಿತ್ರೀಕರಿಸಲಾಗಿತ್ತು. 

ದಿನಾಂಕ 28-7-1991ರಂದು ನಾನು ಜೀವಮಾನದಲ್ಲಿ ನೋಡಿರದ ಅದ್ಭುತ ದೃಶ್ಯ ಕಂಡೆ..! ಹೇಮಾವತಿ ಜಲಾಶಯದ ಪ್ರದೇಶದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹೇಮಾವತಿ ನದಿಯಲ್ಲಿ ಅನಿರೀಕ್ಷಿತ ಪ್ರವಾಹ ಬಂದು ಅನಿವಾರ್ಯವಾಗಿ ಪೂರ್ಣ ಮಟ್ಟದಲ್ಲಿ ಗೇಟು ತೆರೆದು ನದಿಗೆ ನೀರು ಬಿಟ್ಟಿದ್ದರು. ಶಾಂತವಾಗಿ ಹರಿವ ಹೇಮಾವತಿ ಇದು ನನ್ನ ಕವನದ ಒಂದು ಸಾಲು. ಆದರೆ ಅಂದು ಹೇಮಾವತಿ ರೌದ್ರವಾತಾರ ತಾಳಿದಂತಿತ್ತು. 

ಅದೇ ಭಾನುವಾರ ಬೆಳಿಗ್ಗೆ ನಾನು ಕಣ್ಣು ತೆರೆಯುವ ಮೊದಲೇ ನನ್ನ ಖಾಸಾ ಸಹೋದರ ಮಂಜಣ್ಣನ ಮಗ ಮನು ಬಂದು ಡ್ಯಾಂ ಒಡೀತಂತೆ..! ಎಂದು ಹೇಳುತ್ತಿದ್ದಿದು ಕಿವಿಗೆ ಬಿದ್ದೊಡನೆ ಹಾಸಿಗೆಯಿಂದ ಧಡಕ್ಕನೇ ಎದ್ದು ಹೊರ ಹೋಗಿ ನೋಡಿದರೆ ಅಲ್ಲಿ ಅಬ್ಬ..! ಆ ಅದ್ಬುತ ದೃಶ್ಯ ಹೇಗೆ ವರ್ಣಿಸಲಿ. ಕೈ ಕಾಲುಗಳು ಸೋತು ಓಡಿಹೋಗಲಾಗದ ದುಸ್ಥಿತಿ..! ನೀರು..! ನೀರು..! ಎಲ್ಲೆಲ್ಲೂ ನೀರು..! ಗೊರೂರು ಹಳೆ ಸೇತುವೆ ಎತ್ತರಕ್ಕೂ ನೀರು..! ಅಣೆಕಟ್ಟೆಯೇ ಕಿತ್ತು ಬರುತ್ತಿರುವಂತೆ ನುಗ್ಗಿ ಚಿಮ್ಮಿ ಬರುತ್ತಿರುವ ನೀರು..! ನರಸಿಂಹಸ್ವಾಮಿ ದೇವಸ್ಥಾನ ಸುತ್ತುವರಿದ ನೀರು..! ಗ್ರಾಮದ ಅಂಚಿನ ಮನೆಗಳನ್ನು ಮುತ್ತಿಕ್ಕಲು ಹೊಂಚು ಹಾಕುತ್ತಿರುವ ನೀರು..! ಜನರಿಗೆ ಪೊಲೀಸರು ನೀಡಿದ ಮುಂಜಾಗೃತಿ ಎಚ್ಚರಿಕೆಯಿಂದ ಜನ ಗಾಬರಿಯಾಗಿದ್ದರು. ನಮ್ಮ ಮನೆ ಊರಿನ ಮೇಲ್ಬಾಗ ಇತ್ತಾಗಿ ಎಲ್ಲಾ ಇತ್ತ ಓಡಿ ಬಂದಿದ್ದರು.  ಉರಿನ ಜನ ಪಾತ್ರೆ ಪದಾರ್ಥಗಳೊಂದಿಗೆ ದನಕರಗಳನ್ನು ಹೊಡೆದುಕೊಂಡು ಬಂದು ಸರ್ಕಾರಿ ಪ್ರೌಢಶಾಲೆ ಹೇಮಾವತಿ ವಸತಿ ಮಾಧ್ಯಮಿಕ ಶಾಲೆಯಲ್ಲಿ ಬೀಡು ಬಿಟ್ಟಿದ್ದರು. ಅಂತಹ ಅನಾಹುತ ಏನು ಘಟಿಸದಿದ್ದರೂ ಆ ಸಾಗರದಂತಹ ನೀರ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇದು ಸಿನಿಮಾದ  ಭೂತಯ್ಯನ ಕಟ್ಟೆ ಒಡಿತಂತೆ..! ಎಂಬ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಗುಳ್ಳನ ಹೆಂಡತಿಯನ್ನು ಅಯ್ಯು ಕಾಪಾಡುವ ದೃಶ್ಯ ಕಲ್ಪನೆಗೆ ಹತ್ತಿರವಾಗಿದೆ.

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಳ್ಳಿಯ ಚಿತ್ರಗಳು ಎಂಬ ಕೃತಿಯನ್ನು 1930ರಲ್ಲಿ ಪ್ರಕಟಿಸಿದರು. ಇದರಲ್ಲಿನ ಒಂದು ಪ್ರಬಂಧ ನಾನು ರತ್ನಳ ಮದುವೆಗೆ ಹೋದುದು. 1924ರಲ್ಲಿ ಕಾವೇರಿ ನದಿಯಲ್ಲಿ ದೊಡ್ಡ ಪ್ರವಾಹ ಬಂದಿತ್ತು. ಕನ್ನಂಬಾಡಿ ಕಟ್ಟೆ ಆಗ ಇನ್ನೂ ಪೂರ್ತಿಯಾಗಿರಲಿಲ್ಲ. ಅರೆ ವಾಸಿಯಾಗಿದ್ದ ಕಟ್ಟೆಯ ಮೇಲೆ ಪ್ರವಾಹದ ನೀರು ಜಲಪಾತದ ಹಾಗೆ ಧುಮುಕುತ್ತಿತ್ತು.. ಈ ಪ್ರವಾಹದ ವರ್ಣನೆ ರತ್ನಳ ಮದುವೆಗೆ ಹೋದುದು ಎಂಬ ಚಿತ್ರದಲ್ಲಿ ಬರುತ್ತದೆ. ಶಿವರಾಮಕಾರಂತರ ಔದಾರ್ಯದ ಉರುಳಿನಲ್ಲಿ ಎಂಬ ಕಾದಂಬರಿಯಲ್ಲಿ ಎಂ.ಆರ್.ಶ್ರೀವರ ಮಹಾತ್ಯಾಗ ಕಾದಂಬರಿಯಲ್ಲಿ ತುಂಗಾ ಪ್ರವಾಹದ ವರ್ಣನೆಯಿದೆ. ಕಾಲ ದೇಶನಿಷ್ಠವಾದ ಇಂಥ ವರ್ಣನೆಗಳು ಸಾಹಿತ್ಯ ಕೃತಿಗೆ ಐತಿಹಾಸಿಕ ಮೌಲ್ಯವನ್ನು ನೀಡುತ್ತವೆ. ಇಲ್ಲಿ ಇತಿಹಾಸ ಎಂದರೆ ಕೇವಲ ರಾಜ ಮಹಾರಾಜರ ಪ್ರಭುತ್ವಗಳ ರಾಜಕೀಯ ಘಟನೆಗಳು ಎಂಬ ಸಾಂಪ್ರದಾಯಿಕ ಅರ್ಥ ಮಾತ್ರವಲ್ಲ. ಒಂದು ಕಾಲಘಟ್ಟದ ಜನ ಜೀವನದ ಯಥಾರ್ಥ ನಿರೂಪಣೆ ಎಂಬ ಅರ್ಥ ಕೂಡ ಎಂದು ಡಾ. ಸಿ.ಜಿ.ವೆಂಕಟಯ್ಯರವರು ತಮ್ಮ ಪಿಹೆಚ್‍ಡಿ ಪ್ರಬಂಧ ಗೊರೂರರ ಜಾನಪದ ಸಾಧನೆ ಮತ್ತು ಸಿದ್ದಿ ಕೃತಿಯಲ್ಲಿ ಬರೆಯುತ್ತಾರೆ. ಅಂದ ಹಾಗೇ ನಾನು ಕಂಡ ಪ್ರವಾಹ ದೃಶ್ಯ ಘಟಿಸಿದ ನಂತರ 2 ತಿಂಗಳಲ್ಲೇ  ಗೊರೂರರು ನಿಧನರಾಗಿದ್ದು (ದಿ.28-9-1991) ಆಶ್ಚರ್ಯವೇ.! ಯೂ ಟ್ಯೂಬ್‍ನಲ್ಲಿ ಭೂತಯ್ಯನ ಮಗ ಅಯ್ಯು  ಶೂಟಿಂಗ್ ನಡೆದ ಕಳಸಾಪರ ಗ್ರಾಮದಲ್ಲಿ ಶೂಟಿಂಗ್ ಸ್ಪಾಟ್‍ನ ಅನ್ವೇಷಣೆಯ ವಿಡಿಯೋ ವೀಕ್ಷಿಸಿದೆ. ಕಮ್ಮಾರ ವೀರಭದ್ರಾಚಾರಿ ಟೆಲಿ ಸಿನಿಮಾ ಶೂಟಿಂಗ್ ತೆಗೆದ ಪೇಟೆ ಬೀದಿಯ ಶ್ರೀರಾಮ ಮಂದಿರವು ಪುನಶ್ಛೇತನಗೊಳ್ಳಬಹುದೇ..?



ಗೊರೂರು ಅನಂತರಾಜು, ಹಾಸನ.

ಮೊ: 9449462879. 

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group