ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ಸೈನಿಕರು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಸ್ತು ಮತ್ತು ನಿಸ್ವಾರ್ಥ ಸೇವೆಗೆ ಹೆಸರಾದ ಸೈನಿಕರು ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಮೂಲಕ ವಿಶೇಷ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಷರದ ಜೊತೆಗೆ ಸಂಸ್ಕಾರವನ್ನೂ ಕಲಿಸುವ ಗುರುಗಳಿಗೆ ಸಾಮಾಜಿಕ ಜವಾಬ್ದಾರಿಯಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಬದ್ಧತೆ ಬೆಳೆಸಿಕೊಳ್ಳಬೇಕು. ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ, ಜ್ಞಾನ ನೀಡುವ ಶಿಕ್ಷಕರು ದೇಶದ ಹೆಮ್ಮೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಕರಾದ ವಿ.ಎಂ. ಕುರಿ ಮಾತನಾಡಿ ಬಾಳಿನ ಅಂಧಕಾರವನ್ನು ಕಳೆದು ಜ್ಞಾನದ ಬೆಳಕು ಮೂಡಿಸುವ ಗುರುವಿಗೆ ಜಗತ್ತಿನಲ್ಲಿಯೇ ಶ್ರೇಷ್ಠ ಸ್ಥಾನವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವೆಂಕಣ್ಣ ಬಡಿಗೇರ, ಉಪಾಧ್ಯಕ್ಷರಾದ ಅರ್ಜುನ ನಿಂಬಾಳ್ಕರ, ಕಾರ್ಯದರ್ಶಿಗಳಾದ ದುಂಡಪ್ಪ ಮಡಿವಾಳರ, ಖಜಾಂಚಿಗಳಾದ ರವೀಂದ್ರ ಮನಗುತ್ತಿ, ಸದಸ್ಯರಾದ ಉಮೇಶ ಕಾರಿಮನಿ, ಪ್ರೌಢಶಾಲೆಯ ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ರೇಖಾ ಸೊರಟೂರ, ಮಂಜುಳಾ ಕಾಳಿ, ಕುಮಾರ ಯರಗಂಬಳಿಮಠ, ಪ್ರಾಥಮಿಕ ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಡಿ.ಎ.ಬಾಗೇವಾಡಿ, ಶಿಕ್ಷಕರಾದ ಕೆ.ಎಚ್. ತಂಗೊಂಡರ್, ಎಂ.ಆರ್. ಹುಲಕುಂದ, ಶೋಭಾ ರೊಟ್ಟಿ, ಸಾವಿತ್ರಿ ಮುನವಳ್ಳಿಮಠ, ಟಿ.ಎಸ್.ಮಾದರ, ಆರ್.ಬಿ.ಚಚಡಿ ಉಪಸ್ಥಿತರಿದ್ದರು. ಸೀಮಾ ಹೊಸೂರ ಪ್ರಾರ್ಥಿಸಿದರು. ಲಕ್ಷ್ಮಿ ನಾಗಣ್ಣವರ ಸ್ವಾಗತಿಸಿದರು. ಪೃಥ್ವಿ ಗರಗದ ನಿರೂಪಿಸಿದರು. ಪ್ರೀತಂ ವಾರಿ ವಂದಿಸಿದರು.