ಮಾನ್ಯ ಶ್ರೀ ಡಾ ವಚನಾನಂದ ಸ್ವಾಮಿಗಳಿಗೆ
ಅನಂತ ಶರಣು –
ಇತ್ತೀಚೆಗೆ ಒಂದು ವಿಡಿಯೋ ದಲ್ಲಿ ತಾವು ಅಂದು ಇಂದು ಹಿಂದು ಮುಂದು ಬಸವಣ್ಣ ಹಿಂದೂ ಎಂದು ಒಂದು ಸಭೆಯಲ್ಲಿ ಮಾತಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಲಿಂಗಾಯತ ಚಳವಳಿ ಹೋರಾಟದ ಬೆಂಗಳೂರಿನ ಕಾರ್ಯಕ್ರಮದಲ್ಲಿ ತಾವು ಬಂದಿದ್ದು, ಲಿಂಗಾಯತ ಧರ್ಮದ ಪರ ಮಾತನಾಡಿದ್ದು, ನೂರಾರು ಸ್ವಾಮಿಗಳ ಜೊತೆ ಟಿವಿ ಗೆ ಸಂದರ್ಶನ ಕೊಟ್ಟಿದ್ದು ಇಷ್ಟು ಬೇಗ ಮರೆತು ಬಿಟ್ಟಿರೋ ಹೇಗೆ ?. ಯಾವುದೋ ಆಮಿಷಕ್ಕೆ ಒತ್ತಡಕ್ಕೆ ಒಳಗಾಗಿ ನೀವು ನಿಮ್ಮ ಹೇಳಿಕೆ ಕೊಟ್ಟಿರೋ ಅಥವಾ ಪ್ರಜ್ಞಾಪೂರ್ವಕ ನಿಮ್ಮ ನಿಲುವು ಬದಲಾಯಿಸಿದಿರೋ ಹೇಗೆ ?
ಲಿಂಗಾಯತ ಇದು ಅವೈದಿಕ ಹಿಂದುಯೇತರ ಸ್ವತಂತ್ರ ಧರ್ಮ. ಬ್ರಿಟಿಷರ ಕಾಲ ಘಟ್ಟದಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ಪರಿಗಣಿಸಿದ್ದರು. ಸ್ವತಂತ್ರ ಭಾರತದಲ್ಲಿ ಲಿಂಗಾಯತವನ್ನು ಹಿಂದೂ ಧರ್ಮದ ಭಾಗವನ್ನಾಗಿ ಸೇರಿಸಿದ್ದು ನಮ್ಮ ದುರ್ದೈವ.
ಇನ್ನು ಕೆಲ ಲಿಂಗಾಯತರು ಸಮಾಜವನ್ನು ಪ್ರತ್ಯೇಕಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದ್ದೀರಿ.
ನಿಮಗೆ ನನ್ನ ಕೆಲ ಪ್ರಶ್ನೆಗಳು
1 ಮಾನ್ಯರೇ, ಲಿಂಗಾಯತ ಧರ್ಮದ ಭಾಗವಾದ ಪಂಚಮಸಾಲಿ ಪಂಗಡಕ್ಕೆ ಪ್ರತ್ಯೇಕ ಪೀಠ ಏಕೆ ಮಾಡಿಕೊಂಡಿರಿ ?
2 ಪಂಚಮ ಸಾಲಿ ಪೀಠದ ಬದಲಾಗಿ ಹಿಂದೂ ಪೀಠ ಎಂದು ಏಕೆ ಇಟ್ಟು ಕೊಳ್ಳಲಿಲ್ಲ ?
3 ಬಸವಣ್ಣನವರು ಹಿಂದೂ ಧರ್ಮೀಯರು ಆಗಿದ್ದರೆ ಯಜ್ಞೋಪವೀತ, ಜನಿವಾರ ಏಕೆ ತಿರಸ್ಕರಿಸುತ್ತಿದ್ದರು ?
4 ಯಜ್ಞ ಹವನ ಹೋಮ ವೇದಗಳನ್ನು ಧಿಕ್ಕರಿಸಿದ ಬಸವಣ್ಣ ಅದು ಹೇಗೆ ವೈದಿಕ ಸಂಸ್ಕೃತಿಯವರಾಗುತ್ತಾರೆ?
5 ತಮ್ಮ ಹರಿಹರ ಪೀಠದಲ್ಲಿ ದಲಿತ ಸಮಗಾರ ಮಾದಾರ ಮೇದಾರ ಸಮುದಾಯದ ಕಾಯಕದವರನ್ನು ನೀವು ಉತ್ತರಾಧಿಕಾರಿ ಮಾಡಿದರೆ ನಾವೆಲ್ಲರೂ ಹಿಂದೂ ಎಂದು ಅಭಿಮಾನದಿಂದ ಹೇಳುತ್ತೇವೆ ಇದು ನಿಮಗೆ ಸಾಧ್ಯವೇ ?
ಬಹುದೇವೋಪಾಸನೆ ವಿರೋಧಿಸಿ ಸೃಷ್ಟಿ ಬಯಲನ್ನೇ ತನ್ನ ಅಂಗೈಯಲ್ಲಿಟ್ಟ ಜೀವ ಜಾಲವನ್ನು ಪ್ರೀತಿಸುವ ಜಂಗಮ ವ್ಯವಸ್ಥೆ ಹುಟ್ಟು ಹಾಕಿದ ಬಸವಣ್ಣನವರ ಬಗ್ಗೆ ಮತ್ತು ಶಿವಯೋಗ ಸಾಮ್ರಾಟ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಬಗ್ಗೆ ನಿಮಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಕಾರಣ ನೀವೀಗ ಸಂಪೂರ್ಣ ವೈದಿಕ ವ್ಯವಸ್ಥೆಯ ಗುಲಾಮರಾಗಿದ್ದೀರಿ. ನಿಮಗೆ ವೈದಿಕ ಅಗ್ರಹಾರದವರು ಕರ್ನಾಟಕದ ಮುಂದಿನ ಮುಖ್ಯ ಮಂತ್ರಿಯ ಆಸೆ ತೋರಿಸಿರಬಹುದು ಮತ್ತು ನಿಮ್ಮ ಕನಸು ಎಂದೂ ಈಡೇರುವದಿಲ್ಲ.
ಬಸವಣ್ಣನವರ ಲಿಂಗಾಯತ ಚಳವಳಿಗೆ ಅಡ್ಡಗಾಲು ಹಾಕುವುದು ಮತ್ತು ಒಂದು ಸಮಾಜದ ಮುಗ್ಧರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿರಿ.
ನಿಮ್ಮ ಹೆಸರಿನಲ್ಲಿ ವಚನ ಅಂತಾ ಇದೆ ವಚನಗಳು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥೀಕರಣವಲ್ಲದ ಸಮಾಜ ಕಟ್ಟಿದ ಶರಣರ ಪ್ರಬಲ ಅಸ್ತ್ರಗಳು.
ದಯವಿಟ್ಟು ನಿಮ್ಮ ದ್ವಂದ್ವ ನಿಲುವನ್ನು ಪ್ರಕಟಗೊಳಿಸಿ ಜನರ ಚಪ್ಪಾಳೆಗೆ ಮನಸ್ಸಿಗೆ ಬಂದಂತೆ ಮಾತನಾಡಬೇಡಿ .
ಶರಣಾರ್ಥಿ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ