ಮೈಸೂರು – ನಗರದ ಗಾಯಕ ಅರುಣಾಚಲಮ್ ಸಾರಥ್ಯದಲ್ಲಿ ಮಹತಿ ಮ್ಯೂಸಿಕಲ್ ಗ್ರೂಪ್ ವತಿಯಿಂದ ಇತ್ತೀಚೆಗೆ ನಿಧನರಾದ ಗಾಯಕ ಎಂ.ವಿ.ಗೋವಿಂದರಾಜುರವರಿಗೆ ಗೀತ ನಮನ ಕಾರ್ಯಕ್ರಮವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಇದು ಮನರಂಜನಾ ಕಾರ್ಯಕ್ರಮ ಎನ್ನುವುದಕ್ಕಿಂತ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮ ಎಂದೇ ಹೇಳಬಹುದು. ಅಲ್ಲಿ ನೆರೆದಿದ್ದ ಸಭಿಕರು ಚಪ್ಪಾಳೆ ಹೊಡೆಯದೇ ಮೌನವಾಗಿಯೇ ಕಾರ್ಯಕ್ರಮ ವೀಕ್ಷಿಸಿದರು. ಮೊದಲು ಅರುಣಾಚಲಮ್ ‘ಮಲಯ ಮಾರುತ’ ಚಿತ್ರದ ಶಾರದಾ ದಯೆ ತೋರಿದೆ ಹಾಡನ್ನು ಪ್ರಾರ್ಥನೆಯ ಮೂಲಕ ಸಮರ್ಪಿಸಿದರು.
ನಂತರ ವಕೀಲ ಹಾಗೂ ಗಾಯಕ ಎಲ್.ಚಂದ್ರಶೇಖರ್ (ಶೇಕಿ) ಜಯಲಕ್ಷ್ಮಿ ಜೊತೆಗೂಡಿ ‘ಶ್ರಾವಣ ಬಂತು’ ಚಿತ್ರದ ಶ್ರಾವಣ ಮಾಸ ಬಂದಾಗ, ಇದಾದ ಮೇಲೆ ಶ್ರೀನಿವಾಸ್ ಹಾಗೂ ರಾಣಿ ‘ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದ ನಮ್ಮೂರು ಮೈಸೂರು, ಅರುಣಾಚಲಮ್ ಹಾಗೂ ಗೀತಾ ‘ವಸಂತಗೀತ’ ಚಿತ್ರದ ಹಾಯಾದ ಈ ಸಂಜೆ, ಚಂದ್ರಶೇಖರ್ ಹಾಗೂ ರಾಣಿ ‘ಗೀತಾ’ ಚಿತ್ರದ ಜೊತೆಯಲಿ ಜೊತೆ ಜೊತೆಯಲಿ, ನಾಗೇಂದ್ರ ಹಾಗೂ ಜಯಲಕ್ಷ್ಮಿನಾಯ್ಡು ಕಂಠಸಿರಿಯಿಂದ ‘ನಾನೊಬ್ಬ ಕಳ್ಳ’ ಚಿತ್ರದ ಆಸೆಯು ಕೈಗೂಡಿತು, ನಾಗೇಶ್ ಹಿಮದೀಪ ಹಾಗೂ ಗೀತಾ ‘ಮಾನಸ ಸರೋವರ’ ಚಿತ್ರದ ಮಾನಸ ಸರೋವರ, ಚಂದ್ರಶೇಖರ್ ‘ಅಪ್ಪು’ ಚಿತ್ರದ ಆ ದೇವರ ಹಾಡಿದು, ಅರುಣಾಚಲಮ್ ಹಾಗೂ ಶಶಿಕಲಾ ಜೊತೆಗೂಡಿ ‘ಹೊಸ ಬೆಳಕು’ ಚಿತ್ರದ ನೀ ನಾದೆ ಬಾಳಿಗೆ ಜ್ಯೋತಿ, ಶ್ರೀನಿವಾಸ ‘ಮುಳ್ಳಿನ ಗುಲಾಬಿ’ ಚಿತ್ರದ ಈ ಗುಲಾಬಿಯು ನಿನಗಾಗಿ, ಚಂದ್ರಶೇಖರ್ ಹಾಗೂ ಗೀತಾ ಕಂಠಸಿರಿಯಿಂದ ‘ಬೆಂಕಿಯ ಬಲೆ’ ಚಿತ್ರದ ನಿನ್ನ ನಗುವು ಹೂವಂತೆ, ರಾಣಿ ‘ಚಂದನದ ಗೊಂಬೆ’ ಚಿತ್ರದ ಕಂಗಳು ತುಂಬಿರಲು, ಚಂದ್ರಶೇಖರ್ ‘ಅಭಿ’ ಚಿತ್ರದ ವಿಧಿ ಬರಹ ಎಂತ ಕ್ರೂರ ಹೀಗೆ ಹಲವಾರು ದಿ.ಗೋವಿಂದರಾಜುವಿಗೆ ಪ್ರಿಯವಾದ ಗೀತೆಗಳನ್ನು ಹಾಡಿದರು.
ಸುಧೀಂದ್ರರವರು ನಿರೂಪಣೆ ಮಾಡುವುದರ ಜೊತೆಗೆ ‘ಓಹಿಲೇಶ್ವರ’ ಚಿತ್ರದ ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಗೀತೆಯನ್ನು ಭಾವುಕರಾಗಿ ಹಾಡಿದಾಗ ಇಡೀ ಪ್ರೇಕ್ಷಕ ವರ್ಗ ಕಣ್ಣೀರನ್ನು ಹಾಕಿತು. ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ದಿ.ಗೋವಿಂದರಾಜುಗೆ ಇಷ್ಟವಾದ ಗೀತೆಗಳನ್ನೇ ಪ್ರಸ್ತುತಪಡಿಸಲಾಯಿತು. ದಿ.ಗೋವಿಂದರಾಜು ಕುಟುಂಬ ವರ್ಗ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಅರುಣಾಚಲಮ್ ದಿ.ಗೋವಿಂದರಾಜು ಪತ್ನಿಗೆ ನೆನಪಿನ ಕಾಣಿಕೆ ನೀಡಿದರು. ಮೂರು ಗಂಟೆಗೆ ಹೆಚ್ಚು ಕಾಲ ನಡೆದ ಕಾರ್ಯಕ್ರಮವನ್ನು ಸಭಿಕರು ಕೊನೆ ಹಾಡಿನವರೆಗೆ ಇದ್ದು ದಿ.ಗೋವಿಂದರಾಜುವಿಗೆ ಗೀತ ನಮನ ಸಲ್ಲಿಸಿದರು.