spot_img
spot_img

ಶ್ರೀಕ್ಷೇತ್ರ ದುರ್ಗಾಸ್ಥಳ ದರ್ಶನ ಪ್ರಸಿದ್ಧ ಅಯ್ಯನಕೆರೆಯಲ್ಲಿ ಬೋಟಿಂಗ್ ವಿಹಾರ -ಗೊರೂರು ಅನಂತರಾಜು, ಹಾಸನ

Must Read

- Advertisement -

“ರೀ, ಕಡೂರು ಹತ್ತಿರ ಇರುವ ಶ್ರೀಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬರೋಣ ಹೊರಡಿ ಎಂದಳು ಮಡದಿ ಶಕುಂತಲೆ. ಸಂಜೆ ಐದರವರೆಗೂ ದೇವಸ್ಥಾನ ಓಪನ್ ಇರುತ್ತದೆ ಎಂಬ ಖಾತ್ರಿಯಲ್ಲಿ  ನಾವು ಮಧ್ಯಾಹ್ನ ಊಟ ಮುಗಿಸಿ ಹಾಸನ ಚಿಕ್ಕಮಗಳೂರು ರಸ್ತೆಯಲ್ಲಿ ಹೊರಟು ಹಗರೆ ಬಳಿ ಸ್ವಲ್ಪ ದೂರ ಕಡಿಮೆಯಾಗಬಹುದೆಂದು ಹಳೆಬೀಡು ಮಾರ್ಗ  ಕಾರಿನ ಗೂಗಲ್ ಮ್ಯಾಪ್ ತೋರಿಸಿದಂತೆ ಚಲಿಸಿ ಸಖರಾಯಪಟ್ಟಣ ಬಳಿ ಕಡೂರು ಮುಖ್ಯ ರಸ್ತೆಗೆ ಬಿದ್ದಾಗ ಸದ್ಯ ದಾರಿ ತಪ್ಪಿಲ್ಲವೆಂಬ ಸಮಾಧಾನ. ಕಡೂರಿನಿಂದ 7 ಕಿ.ಮೀ. ಹಿಂದಕ್ಕೆ ಸರಸ್ವತಿಪುರ ಗೇಟ್ ಬಳಿ ಮುಖ್ಯ ರಸ್ತೆಯಿಂದ 3 ಕಿ.ಮೀ ಒಳಸಾಗಿ  ದೇವಾಲಯ ಸಂಜೆ 5ರ ಒಳಗೆ ತಲುಪಿದೆವು.

ಇಲ್ಲಿ ಬೆ. 9 ರಿಂದ ಸಂಜೆ 5ರವರೆಗೂ ದೇವಿಯ ದರ್ಶನ ಅವಕಾಶ ಇರುತ್ತದೆ. ಟಾರ್ ರಸ್ತೆಯಿಂದ ದೇವಸ್ಥಾನಕ್ಕೆ ಅರ್ಧ ಕಿ.ಮೀ. ಹೊಲದ ಹಾದಿಯಲ್ಲೇ ಸಾಗಿದ್ದೆವು.  ಈ ಕ್ಷೇತ್ರವಿನ್ನೂ ಅಭಿವೃದ್ಧಿ ಆಗುತ್ತಿದೆ. ಇಲ್ಲಿಯ ಶ್ರೀಯುತ ರಾಮಚಂದ್ರ ಗುರುಗಳು ತಮ್ಮ ಜಮೀನಿನಲ್ಲಿ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದ್ದು ಇದು ಇತ್ತೀಚೆಗೆ ಪ್ರಸಿದ್ಧಿಯಾಗಿದೆ. ಯೂ ಟ್ಯೂಬ್‍ನಲ್ಲಿ ಪವಾಡ ಕಥೆಗಳು ಪ್ರಸಾರಗೊಂಡು ಜನ ಭಕ್ತಿಭಾವದಿಂದ ಧಾವಿಸಿ ಬರುತ್ತಿದ್ದಾರೆ. ರಾಮಚಂದ್ರ ಗುರುಗಳು 14 ವರ್ಷ ಡ್ರೈವರ್ ಆಗಿದ್ದರಂತೆ. ಇವರು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದು ಕರೋನ ಕಾಲದಲ್ಲಿ ಇಲ್ಲಿಗೆ ವಾಪಸ್ಸಾಗಿ ಬಾವಿಯಲ್ಲಿ ದೊರೆತ ವಿಗ್ರಹ ಎತ್ತಿ ತಂದು ದೇವಿಯನ್ನು ಪೂಜಿಸುತ್ತಿರುವರು. ಈ ದೇವಿಯ ಮಹಿಮೆಗೆ ಜನತೆ ಬೆರಗಾಗಿದ್ದಾರೆ. ಇಲ್ಲಿ ದಿನಾ ಪೂಜೆ  ಇರುತ್ತೆ. ಯಾವ ಜಾತಿ ಭೇದ ಭಾವ ಇಲ್ಲದೆ ಶುದ್ಧ ಮನಸ್ಸಿನಿಂದ ಬಂದು ದೇವಿಯನ್ನು ಪ್ರಾರ್ಥಿಸಿಕೊಳ್ಳಬಹುದೆಂದು ಕೋರುತ್ತಾರೆ. ನಾವು ಯಾರನ್ನು ಹಣ ಅಕ್ಕಿ ಫಸಲು ಯಾವೂದೂ ಕೇಳುತ್ತಿಲ್ಲ. ಆದರೂ ಜನ ಭಕ್ತಿಯಿಂದ ತಂದುಕೊಟ್ಟಿದ್ದನ್ನು ಸ್ವೀಕರಿಸಿ ಅದರಲ್ಲೇ ಸೇವಾಕಾರ್ಯ ನಿರ್ವಹಿಸಲಾಗುತ್ತಿದೆ. ನಿತ್ಯ ದಾಸೋಹ ಇದೆ. ಈ ಜಾಗದಲ್ಲಿ ಎಣ್ಣೆ ಹಾಕೋರಿಗೆ ಕಳ್ಳತನ ಮಾಡುವವರಿಗೆ ತಾಯಿ ಸುಮ್ನೆ ಬಿಡೋದಿಲ್ಲವೆನ್ನುತ್ತಾರೆ. ಹಳೆಯ ಕಾಲು ನೋವು ಮತ್ತಿತರೆ ಕಾಯಿಲೆ ವಾಸಿಯಾದ ಬಗೆಯನ್ನು ಭಕ್ತರು ವಿವರಿಸುತ್ತಾರೆ. ಇದು ಈ ಕ್ಷೇತ್ರದ ಜನಾಕರ್ಷಣೆಗೆ ಕಾರಣವಾಗಿದೆ. ಇಲ್ಲಿ ಹೊಸದಾಗಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆದಿದೆ.  ದೇವಸ್ಥಾನ ಮುಂಭಾಗ ಬೃಹತ್ ಮರದ ಕೆಳಗೆ ಕುಳಿತುಕೊಳ್ಳಲು ಕಲ್ಲು ಆಸನಗಳಿವೆ. ಇದು ಧಾರ್ಮಿಕ ಕ್ಷೇತ್ರವಾಗಿ ಪ್ರಗತಿ ಕಾಣುತ್ತಿದೆ.

- Advertisement -

ನಾವು ಚಿಕ್ಕಮಗಳೂರು ಕಡೆಗೆ ವಾಪಸ್ಸು ಬರುವಾಗ ಸಖರಾಯಪಟ್ಟಣದಿಂದ ಐದೂವರೆ ಕಿ.ಮೀ. ದೂರವಿರುವ ಅಯ್ಯನಕೆರೆಗೆ ಹೋದೆವು. ಅಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಶೇಷ ಬೋಟಿಂಗ್ ವಿಹಾರ ಏರ್ಪಡಿಸಲಾಗಿತ್ತು. ಅದು ಸಖರಾಯಪಟ್ಟಣ ಜಾತ್ರೆ ಪ್ರಯುಕ್ತ ಏರ್ಪಡಿಸಿ ನಾವು ಬೋಟ್‍ನಲ್ಲಿ ವಿಹರಿಸಿ ಆನಂದಿಸಿದೆವು. ನಾವು ದೋಣಿಯಲ್ಲಿ ವಿಹರಿಸುವಾಗಲೇ ಸಂಜೆಯ ಸೂರ್ಯ ಮುಳುಗುತ್ತಿರುವ ರಮ್ಯ ದೃಶ್ಯ ಮನ ಸೆಳೆಯಿತು. ಕೆರೆಗಿರುವ ಜಾನಪದ ಕಥೆಯು ಯೂ ಟ್ಯೂಬ್‍ನಲ್ಲಿದೆ. ಇದು ಕರ್ನಾಟಕದ 2ನೇ ಅತಿ ದೊಡ್ಡ ಕೆರೆ. 1ನೇಯದು ದಾವಣಗೆರೆ ಜಿಲ್ಲೆಯ ಸೂಳೆಕೆರೆ. ನಾವು ಸಖರಾಯಪಟ್ಟಣದಿಂದ ಅಯ್ಯನ ಕೆರೆಗೆ ಹೋದ ದಾರಿಯಲ್ಲಿ ಹಸಿರು ಹೊಲ ಗದ್ದೆ ತೆಂಗು ಅಡಿಕೆ ತೋಟಗಳು ರಸ್ತೆ ಬದಿಯಲ್ಲಿ ಕಾಲುವೆ ಹರಿದಿತ್ತು. ಕೆರೆ 1574 ಹೆಕ್ಟೇರ್ ವಿಸ್ತಾರ ಪ್ರದೇಶದಲ್ಲಿ ಮಿನಿ ಸರೋವರದಂತೆ ಗೋಚರಿಸುತ್ತದೆ. ಉತ್ತರಕ್ಕೆ ತ್ರಿಕೋನಕಾರದ ಶಕುನಗಿರಿ ಸು. 4600 ಅಡಿ ಎತ್ತರವಿದ್ದು ಕೆರೆಗೆ ಶೋಭೆ ತಂದಿದೆ.   ಕೆರೆಯ ಮಧ್ಯೆ  ನಡುಗಡ್ಡೆಯಲ್ಲಿ ಪಕ್ಷಿಗಳ ಚಿಲಿಪಿಲ ಕಲರವವನ್ನು ಕೇಳಬಹುದು. ಕೆರೆಗೆ 900 ವರ್ಷಗಳ ಇತಿಹಾಸವಿದೆ. ಹೊಯ್ಸಳರ ಸಾಮಂತ (12ನೇ ಶತಮಾನ) ರುಕ್ಮಾಂಗದ ಈ ಪ್ರದೇಶದಲ್ಲಿ ಆಳ್ವಿಕೆ ಮಾಡುತ್ತಿರಲು  ಮಳೆಯಿಲ್ಲದ ಕಾಲದಲ್ಲೂ ರೈತರು ನೀರಿಗೆ ಪರಿತಪಿಸದೆ ಬೆಳೆ ಬೆಳೆಯಲೆಂಬ ಸದುದ್ದೇಶದಲ್ಲಿ ಈ ಕೆರೆ ಕಟ್ಟಿಸಿದನೆಂದು  ಹೇಳಲಾಗಿದೆ. ಒಂದು ದಂತಕಥೆಯಂತೆ ಹಿಂದೆ ಈ ಕೆರೆಯು ಮೇಲಿಂದ ಮೇಲೇ ಬತ್ತಿಹೋಗುತಿತ್ತು. ಆಗ ಈ ಪ್ರದೇಶದ ಸಂತರು ಶ್ರೀ ನಿರ್ವಾಣಸ್ವಾಮಿಯವರು ಸೂಚಿಸಿದಂತೆ ಆಚರಣೆಗಳನ್ನು ನಡೆಸಲಾಗಿ ತೊಂದರೆ ನಿವಾರಣೆ ಆಯಿತು. ನಿರ್ವಾಣಸ್ವಾಮಿಗಳನ್ನು ಅಯ್ಯ ಎಂತಲೂ ಜನ ಕರೆಯುತ್ತಿದ್ದು. ಈ ಕೆರೆಗೆ ಅಯ್ಯನಕೆರೆ ಎಂಬ ಹೆಸರು ಬಂದಿತು. ಇನ್ನೊಂದು ಕಥೆಯಂತೆ ರಾಜ ರುಕ್ಮಾಂಗದನ ಆಡಳಿತದಲ್ಲಿ ಹೊನ್ನಾಬಿಲ್ಲಾ ಚೆನ್ನಬಿಲ್ಲಾ ಎಂಬಿಬ್ಬರು ಕೆರೆಯ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಒಂದು ಪೌರ್ಣಿಮೆಯ ದಿನ ದೇವತೆಯ ಆಕಾಶವಾಣಿ ಯೊಂದು ಕೇಳಿ ಬಂದು ಈ ಕೆರೆಯಲ್ಲಿ ನೀರು ತುಂಬಿ ಪ್ರವಾಹ ಉಂಟಾಗಿ ಹಳ್ಳಿಯು ಕೊಚ್ಚಿಕೊಂಡು ಹೋಗುವುದಾಗಿ ಹೇಳಲು ಇಬ್ಬರೂ ಚಿಂತಕ್ರಾಂತರಾದರು. ತಾವು ತಮ್ಮ ಒಡೆಯನನ್ನು ಬೇಟಿಯಾಗಿ ಮರಳುವವರೆಗೆ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಕೋರಿಕೊಂಡರು. ಇಬ್ಬರೂ ಹಳ್ಳಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಯೋಚಿಸಿ ತಮ್ಮ ಶಿರಗಳನ್ನು ಕಡಿದುಕೊಂಡು ಪ್ರಾಣತ್ಯಾಗ ಮಾಡಿದರು.  ಅವರಿಬ್ಬರು  ಮರಳಿ ಬಾರದೇ ಇರುವುದಕ್ಕೆ ಕೆರೆಯಲ್ಲಿ ಪ್ರವಾಹ ಬಂದಿಲ್ಲವೆಂದು ಪ್ರತೀತಿ ಇದೆ. ಈ ಇರ್ವರ ಬಲಿದಾನದ ಕುರುಹಾಗಿ ಕೆರೆಯ ಒಂದು ಸ್ಥಳದಲ್ಲಿ ಮಂಟಪವಿದೆ. ನಾವು ಅಯ್ಯನಕೆರೆ ವೀಕ್ಷಿಸಿ ಸಖರಾಯಪಟ್ಟಣದ ದೇವಸ್ಥಾನಕ್ಕೆ ಹೋದೆವು. 2 ದಿನಗಳ ಹಿಂದೆ ರಥೋತ್ಸವ ಜರುಗಿತ್ತು. ಜಾತ್ರೆಗೆ ಬಂದ ಅಂಗಡಿಗಳು ದೇವಸ್ಥಾನದ ರಸ್ತೆಯುದ್ದಕ್ಕೂ ಇದ್ದವು. ಶ್ರೀ ಶಕುನ ರಂಗನಾಥಸ್ವಾಮಿ ದರ್ಶನ ಮಾಡಿ ಹಾಸನಕ್ಕೆ ಹಿಂತಿರುಗಿದಾಗ ರಾತ್ರಿ ಹೊತ್ತಾಗಿತ್ತು. ಸಮಯ ಹತ್ತಾಗಿತ್ತು.



ಗೊರೂರು ಅನಂತರಾಜು, ಹಾಸನ. 

ಮೊ: 9449462879

- Advertisement -

 ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group