ಸಿಂದಗಿ: ಪಾಲಕರು, ಮಕ್ಕಳು, ಶಿಕ್ಷಕರು ಈ ಮೂವರ ಪಾತ್ರ ಪ್ರಮುಖವಾಗಿದ್ದರೆ ಸ್ವಚ್ಚ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಪಾಲಕರು ಯಾವ ರೀತಿಯಾಗಿ ಸಂಸ್ಕಾರ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಮಾತೃ ಭಾಷೆ ಎಂದರೆ ಮಗು ಜನನದಿಂದಲೇ ಕಲಿಯುವ ಮೊದಲ ಭಾಷೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತನಾಡುವ, ಕಥೆ ಹೇಳುವ ಮತ್ತು ಪದ್ಯ ಕಲಿಸುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು ಎಂದು ಜನಪದ ವಿದ್ವಾಂಸೆ ಶಿವಲೀಲಾ ಮುರಾಳ ಹೇಳಿದರು.
ಪಟ್ಟಣದ ಹೂಗಾರ ಲೇಔಟ್‌ನಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ಹಾಗೂ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ನವರಾತ್ರಿ ಉತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಮಕ್ಕಳಿಗೆ ಮೊಬಾಯಿಲ್ ಸಂಸ್ಕೃತಿಯಿಂದ ದೂರವಿಡಬೇಕು. ಸಂಸ್ಕೃತಿಯೊಂದಿಗೆ ಬೆರೆತಿರುವ ಮಾತೃಭಾಷೆಯು ಶಾಲೆಯಲ್ಲಿ ಕಲಿಕೆಯ ಭಾಷೆಯೂ ಆದರೆ ಬಹುಮುಖ ಅನುಕೂಲಗಳಿವೆ. ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯ, ಸಂವೇದನಾಶೀಲತೆ, ಸಕಾರಾತ್ಮಕ ಮನೋಭಾವ ರೂಪುಗೊಳ್ಳುವಂತೆ ಮಾಡುತ್ತದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಲ್ಪಾ ಕುದರಗೊಂಡ ಮಾತನಾಡಿ, ನವರಾತ್ರಿ ಉತ್ಸವ ಎಂದರೆ ೯ದಿನಗಳ ಕಾಲ. ಮಹಿಷಾಸುರನ ನಡುವೆ ನವದುರ್ಗಿಯರಿಂದ ಯುದ್ಧವಾಗಿ ಮಹಿಷನ ಮರ್ಧನವಾಗಿದ್ದರಿಂದ ವಿಜಯದಶಮಿಯನ್ನು ಎಲ್ಲೆಡೆ ಆಚರಿಸುವ ವಾಡಿಕೆ ಬಂದಿದೆ ಅದಕ್ಕೆ ಹಬ್ಬಗಳ ಜೊತೆಗೆ ಅವುಗಳ ಪರಿಚಯವು ಕೂಡಾ ಆಗಬೇಕಾದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕಲಿಯುವುದು ಅತ್ಯಗತ್ಯ. ಮಾತೃಭಾಷೆಯನ್ನು ಸಾಮಾನ್ಯವಾಗಿ ಆತ್ಮದ ಭಾಷೆ ಎಂದು ಪರಿಗಣಿಸಲಾಗುತ್ತದೆ. ಒಬ್ಬರ ಸಂಸ್ಕೃತಿ, ಪರಂಪರೆ ಮತ್ತು ವೈಯಕ್ತಿಕ ಅನುಭವಗಳ ಸಾರವನ್ನು ಒಳಗೊಂಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಸೈನಾಬಿ ಮಸಳಿ ಮಾತನಾಡಿ, ನಮ್ಮ ಮಾತೃಭಾಷೆ ನಮ್ಮ ತುಟಿಗಳಲ್ಲಿ ನೃತ್ಯ ಮಾಡುವ ಮೊಟ್ಟ ಮೊದಲ ಭಾಷೆ. ನಮ್ಮ ಅಸ್ಮಿತೆಗೆ ಆಂತರಿಕವಾಗಿ ನಂಟು ಹೊಂದಿದೆ. ಮಾತೃಭಾಷೆಯಲ್ಲಿ ಕಲಿಕೆಯಿಂದ ಬೌದ್ಧಿಕ ಬೆಳವಣಿಗೆಯಾಗುತ್ತದೆ. ವೈಯಕ್ತಿಕ ಮತ್ತು ಸಾಂಸ್ಕೃತಿಕ ಗುರುತಿಸುವಿಕೆಯನ್ನು ವೃದ್ಧಿಗೊಳಿಸುತ್ತದೆ ಎಂದರು.
ಈ ವೇಳೆ ಶಿಕ್ಷಕ ಶರಣಬಸವ ಲಂಗೋಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷೆ ಕುಸುಮಾ ಯಾಳಗಿ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಸುನಂದಾ ಯಂಪುರೆ, ಶಿಕ್ಷಕಿ ಶೋಭಾ ಚಿಗರಿ, ಅಂಬಿಕಾ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಆನಂದ ಶಾಬಾದಿ, ಪಂಡಿತ ಯಂಪುರೆ, ಎಂ.ಎ.ಗೊಟಗುಣಕಿ, ಶರಣಮ್ಮ ನಾಯಕ, ಸಂಜೀವಕುಮಾರ ಡಾಂಗೆ, ಸುಮಾ ಬಿರಾದಾರ, ರೂಪಾ, ಪ್ರಗತಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು. ಶಿಕ್ಷಕಿ ಸಕ್ಕುಬಾಯಿ ಡಾಂಗಿ ನಿರೂಪಿಸಿದರು. ವಿಕಾಸ ಚೌರ ಸ್ವಾಗತಿಸಿದರು. ಶಿಕ್ಷಕಿ ಅಕ್ಷಯ ದೀಕ್ಷಾ ವಂದಿಸಿದರು.