ಬೀದರ – ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದ ಪೊಲೀಸ ಇಲಾಖೆ ಎಚ್ಚೆತ್ತುಕೊಂಡಿದ್ದು ಜಿಲ್ಲೆಯ ಹುಲಸೂರು ಪಿ.ಎಸ್.ಐ ಗೌತಮ್ ಅವರು ಮಹಾರಾಷ್ಟ್ರದಿಂದ ಬರುವ ತರಕಾರಿ ವ್ಯಾಪಾರಿಗಳಿಗೆ ಹುಲಸೂರು ಪಟ್ಟಣದಲ್ಲಿ ನಡೆಯುವ ಸಂತೆಗೆ ನಿಷೇಧಗೊಳಿಸಿ ವಾಪಸ್ ಕಳಿಸಿರುವ ಘಟನೆ ನಡೆದಿದೆ.
ಹುಲಸೂರು ನಗರದಲ್ಲಿ ಪ್ರತಿ ಸೋಮವಾರ ನಡೆಯುವ ತರಕಾರಿ ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆ ಬರುವ ಮಹಾರಾಷ್ಟ್ರದ 15ರಿಂದ 20 ವ್ಯಾಪಾರಿಗಳನ್ನು ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ನಿಷೇಧ ಮಾಡಿದ್ದರಿಂದ 15 ರಿಂದ 20 ಜನ ವ್ಯಾಪಾರಿಗಳು ಹೈರಾಣಾಗಿದ್ದು, ಮೊದಲೇ ತಿಳಿಸಿದರೆ ನಾವು ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಿರಲಿಲ್ಲ ಈಗ ಸಂತೆಗೆಂದು ತರಕಾರಿ ಕಟಾವು ಮಾಡಿ ಬಾಡಿಗೆ ವಾಹನದಲ್ಲಿ ತರಕಾರಿ ತಂದಿದ್ದೇವೆ. ಸುತ್ತ ಮುತ್ತ ಎಲ್ಲಿಯೂ ಸಂತೆ ನಡೆಯುವುದಿಲ್ಲ ಎಲ್ಲಿ ಮಾರಾಟ ಮಾಡುವುದು ರೈತರಿಂದ ಖರೀದಿಸಿ ತಂದ ತರಕಾರಿ ಏನು ಮಾಡುವುದು ಇದೊಂದು ದಿವಸ ಸಂತೆ ಮಾಡಲು ಅನುಮತಿ ನೀಡಿ ಎಂದು ಪೊಲೀಸ ಅಧಿಕಾರಿಗಳಿಗೆ ಮನವಿ ಮಾಡಿದರೂ ಪೊಲೀಸರು ಅನುಮತಿ ನೀಡಲಿಲ್ಲ.
ಮಹಾರಾಷ್ಟ್ರದ ನಿಲಂಗಾ, ಔಷಾ, ಶಾಜಿನಿ, ಔರಾದಗಳಿಂದ ವ್ಯಾಪಾರಸ್ಥರು ಬಂದಿದ್ದು ಪೊಲೀಸರ ನಿಷೇಧದಿಂದಾಗಿ ವ್ಯವಸ್ಥೆಯ ಮೇಲೆ ಹಿಡಿಶಾಪ ಹಾಕುತ್ತ ವಾಪಸ್ ಹೊರಟುಹೋದರು.