‘ಇದ್ದದ್ದು ಇದ್ದ ಹಾಗೆ ಬರೆಯುವುದು ಅಭ್ಯಾಸ. ನೇರವಾಗಿ ಮಾತನಾಡುವುದು ನನ್ನ ಸ್ವಭಾವ. ಗೊರೂರು ಉಡುವಾರೆ ಇವರೆಡೂ ಗ್ರಾಮಗಳು ನನ್ನ ಜೀವನದ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿವೆ. ಏಕೆಂದರೆ ಉಡುವಾರೆ ನನ್ನ ಜನ್ಮದಾತನ ಊರು, ಗೊರೂರು ಜನುಮದಾತೆಯ ತವರೂರು. ಬಾಲ್ಯದಿಂದ ಗೊರೂರು ನನಗೆ ಚಿರಿಪರಿಚಿತ ಸ್ಥಳ. ನನ್ನ ವಿದ್ಯಾಭ್ಯಾಸ ಬಾಲ್ಯ ಜೀವನ ಕಳೆದಿದ್ದು ಇದೆ ಪುಣ್ಯ ಭೂಮಿಯಲ್ಲಿ..ಹೀಗೆ ತಾಯಿ ತವರೂರಿಗೆ ನುಡಿ ನಮನ ಸಲ್ಲಿಸುವ ಸುಂದರೇಶ್ ಡಿ.ಉಡುವಾರೆ ಓರ್ವ ನಟ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದತ್ತಲೂ ಆಸಕ್ತಿ ವಹಿಸಿ ಗೊರೂರು ದರ್ಶನ ಪುಸ್ತಕ ಪ್ರಕಟಿಸಿದ್ದಾರೆ. ಇದು ಇವರ 2ನೇ ಕೃತಿ.
ಹಾಸನ ತಾಲ್ಲೂಕು ಉಡುವಾರೆ ಗ್ರಾಮದಲ್ಲಿ ಶ್ರೀಮತಿ ಚಂದ್ರಮ್ಮ ದೇವರಾಜೇಗೌಡ ಮಗನಾಗಿ ದಿ. 04.03.1980ರಲ್ಲಿ ತುಂಬಾ ಬಡಕುಟುಂಬದಲ್ಲಿ ಜನಿಸಿದ ನಾನು ನಾಗಮಂಗಲ ಆದಿಚುಂಚನಗಿರಿ ಶ್ರೀ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ವನಪಾಲಕ ಸಾಮಾಜಿಕ ನಾಟಕದಲ್ಲಿ ನಟಿಸಿ ರಾಜ್ಯ ಪ್ರಶಸ್ತಿ ಪಡೆದೆ. ಉಡುವಾರೆ ಗ್ರಾಮದಲ್ಲಿ ಬೇಡರ ಕಣ್ಣಪ್ಪ ನಾಟಕದಲ್ಲಿ ಬೇಡನಾಗಿದ್ದೆ. ಗೊರೂರಿನಲ್ಲಿ ಕಾಲೇಜು ಓದುವಾಗ ಸಾಹಿತಿಗಳಾದ ಗೊರೂರು ಅನಂತರಾಜು ವರದಕ್ಷಿಣೆ ಭೂತ ನಾಟಕದಲ್ಲಿ ಭೂತನ ಪಾತ್ರ ನೀಡಿದರು. ಗೊರೂರು ಪ್ರೌಢಶಾಲೆ ಬಯಲು ಮೈದಾನದಲ್ಲಿ ನಾಟಕ ನಡೆದಿದ್ದು ತಾ. 04.09.2002ರಂದು ಹಗಲು ಹೊತ್ತು. ಭೂತದ ಮುಖವಾಡ ಧರಿಸಿ ವಿದ್ಯಾರ್ಥಿನಿಯರ ಹಿಂಭಾಗದಿಂದ ಕಿರುಚುತ್ತಾ ವೇದಿಕೆ ಕಡೆಗೆ ನುಗ್ಗಿ ಬಂದೆ. ನನ್ನ ಕಿರುಚಾಟಕ್ಕೆ ಗಾಬರಿಯಾಗಿ ಚೆಲ್ಲಾಪಿಲ್ಲಿ.! ಎಲ್ಲರಿಗೂ ಗಾಬರಿ.! ನನಗೋ ಮುಖವಾಡ ಧರಿಸಿ ಕಣ್ಣೇ ಕಾಣಿಸುತ್ತಿಲ್ಲ. ಹುಡುಗಿಯರ ಮೆಲೆ ಬಿದ್ದ ಪ್ರಸಂಗ ಮರೆಯುವಂತಿಲ್ಲ.
ಸಕಲೇಶಪುರ ಜಾತ್ರೆ. ಇದೇ ಗೊರೂರು ಅನಂತರಾಜು ವಿರಚಿತ ವ್ಯವಸ್ಥೆ ನಾಟಕ ಪ್ರದರ್ಶನ. ರಾಜಕಾರಣಿಯ ಪ್ರಚಾರ ಭಾಷಣದಲ್ಲಿ ಪೊಳ್ಳು ಭರವಸೆ ಕೇಳಿ ರೊಚ್ಚಿಗೆದ್ದ ಯುವಕ ನಾನು. ಜನರ ಮಧ್ಯೆ ಎದ್ದು ಆಕ್ರೋಶದಿಂದ ಧಿಕ್ಕರಿಸಿ ಕೂಗಿದೆ..ಕೂಗಾಡಿದೆ. ಓರ್ವ ನಿಜ ಪೊಲೀಸ್ ನನ್ನನ್ನು ಠಾಣೆಗೆ ಎಳೆದೊಯ್ದರು. ಸ್ಟೇಷನ್‍ನಲ್ಲಿ ನಿಜಸಂಗತಿ ತಿಳಿದು ಬಿಟ್ಟು ಕಳಿಸಿದರು. ಮತ್ತೇ ಸ್ಟೇಜ್‍ಗೆ ಬರುವಷ್ಟರಲ್ಲಿ ನಾಟಕ ಮುಗಿದಿತ್ತು. ಇಂತಹ ಹತ್ತಾರು ಎಡವಟ್ಟುಗಳನ್ನು ಗೊರೂರು ಅನಂತರಾಜು ಜಾಣ್ಮೆಯಿಂದ ನಿಭಾಯಿಸಿ ನಾಟಕ ಮುನ್ನೆಡೆಸಿದ್ದಾರೆ. ಇರಲಿ ಇವರ ಶಿಷ್ಯನಾಗಿ ಇವರ ಇನ್ನೆರಡು ತೋಳ ಬಂತು ತೋಳ, ವೀರಪ್ಪನ್ ಭೂತ ನಾಟಕಗಳಲ್ಲಿ ನಟಿಸಿದ್ದೇನೆ. ಉಡುವಾರೆಯಲ್ಲಿ ಶನಿಪ್ರಭಾವ ನಾಟಕದಲ್ಲಿ ಚಂದ್ರಸೇನ, ಗೊರೂರಿನಲ್ಲಿ ರಾಮಾಯಣದ ವಾಲಿ, ಅಂಗದ, ಮಾರೀಚ ಪಾತ್ರಗಳಲ್ಲಿ, ಜರಾಸಂಧ ನಾಟಕದಲ್ಲಿ ಶಿಶುಪಾಲನ ಪಾತ್ರ ನಿರ್ವಹಿಸಿರುವೆ.,ಇದು ಸುಂದರೇಶ್ ರಂಗ ಪ್ರವೇಶಿಕೆಯ ಹಾಸುಪಾಸು. ಇನ್ನೂ ಕೃತಿಯಲ್ಲಿ ‘ಸಾಹಿತ್ಯ ಆಸಕ್ತರು ಪ್ರಬಂಧಗಳನ್ನು ಲೇಖನಗಳನ್ನು ಕೃತಿಗಳನ್ನು ಗೊರೂರಿನ ಬಗ್ಗೆ ಬರೆದಿರುವ ವಿಚಾರಗಳು ಸ್ವಲ್ಪಮಟ್ಟಿಗೆ ಓದಿದ್ದೇನೆ. ಗೊರೂರಿನ ಬಗ್ಗೆ ಸಾಕಷ್ಟು ವಿಚಾರಗಳು ನನಗೆ ಗೊತ್ತಿರಲಿಲ್ಲ. ಕೆಲವೊಂದು ವಿಚಾರಗಳನ್ನ ನನ್ನ ತಾಯಿ ನನ್ನ ಕಿವಿಗೆ ಕಥೆಯ ರೂಪದಲ್ಲಿ ದೇಗುಲಗಳ ಬಗ್ಗೆ ಪವಾಡಗಳ ಬಗ್ಗೆ ಹೇಮಾವತಿ ಅಣೆಕಟ್ಟಿನ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರ ವಿಚಾರವನ್ನು ಆ ಊರಿನ ಸಾಹಿತಿಗಳ ಬಗ್ಗೆ ದನ ಮೇಯಿಸುತ್ತಿದ್ದ ವೇಳೆ ಹೇಳುತ್ತಿದ್ದರು. ನಾನು ಕೇಳುತ್ತಿದ್ದೆ.. ಈಗ ಬರೆದಿದ್ದಾರೆ ಅಷ್ಟೇ.
ಅಧ್ಯಾಯ-1 ಗೊರೂರು ಇತಿಹಾಸದ ಇಣುಕು ನೋಟ. ಗೊರವರ ಊರನ್ನು ಆಳಿದ ರಾಜವಂಶಗಳು, ವಿಜಯಾದಿತ್ಯ ಹೆಗ್ಗಡೆ ಯಾರು? ಇವರು ಎಲ್ಲಿಂದ ಬಂದವರು ? ಇವರ ಆಳ್ವಿಕೆಯ ಕಾಲ ಹೇಗಿತ್ತು ? ಹೀಗೆ ಪ್ರಶ್ನೆಗಳ ಮಾಲಿಕೆಯಲ್ಲಿ ಉತ್ತರದ ಹುಡುಕಾಟ. ಗೊರೂರಿನ ಧಾರ್ಮಿಕ ಕೇಂದ್ರಗಳು
2ನೇ ಅಧ್ಯಾಯ. ಇಲ್ಲಿ ಪರವಾಸು ದೇವಸ್ಥಾನ ಇದರೊಳಗಿನ ಅಂಡಾಳಮ್ಮ, ತಿರುಪ್ಪಾರೈ, ನಾಚ್ಚಿಯಾರ್ ತಿರುಮೊಳಿ, ಹೊಯ್ಸಳ ಶೈಲಿಯ ಕೈಲಾಸೇಶ್ವರ ದೇವಸ್ಥಾನದಲ್ಲಿ ಕೆತ್ತಿರುವ ಶಾಸನಗಳು, ಹೇಮಾವತಿ ಯಗಚಿ ನದಿ ಸಂಗಮದಲ್ಲಿ ಮುಳುಗಿದ ಸಂಗಮೇಶ್ವರ ದೇವಸ್ಥಾನದ ಪುನರ್ ಸ್ಥಾಪನೆ, ಗ್ರಾಮದೇವತೆ ಉಡುಸಲಮ್ಮ ಶೃಂಗಾರ ತೋಟ..ಹೀಗೆ ದೇವಾಲಯಗಳ ಸುತ್ತಾ ಒಂದಿಷ್ಟು ನೋಟ ಹರಿಸಿದ್ದಾರೆ. ಹೇಮಾವತಿ ನದಿ ಚರಿತ್ರೆ ಜೊತೆಗೆ ನದಿ ದಡದ ಯೋಗಾನರಸಿಂಹಸ್ವಾಮಿ ದೇವಾಲಯ ಕುರಿತ್ತಾಗಿ 3ನೇ ಅಧ್ಯಾಯದಲ್ಲಿ ವಿಸ್ತøತ ಮಾಹಿತಿ ಕ್ರೂಢೀಕರಿಸಿದ್ದಾರೆ. ಪೌರಾಣಿಕ ಕಥೆಗಳು, ಸ್ತೋತ್ರಗಳು, ನದಿಯ ಸ್ನಾನಘಟ್ಟಗಳು. ಜಾತ್ರೆ ವೈಭವ ಜೊತೆಗೆ ಲೇಖಕರ ಕವಿತೆಯಿದೆ. 4ರಲ್ಲಿ ಹೇಮಾವತಿ ಜಲಾಶಯ ಯೋಜನೆಯ ಕಿರು ಮಾಹಿತಿ ಇದ್ದರೆ 5ರಲ್ಲಿ ಊರಿನ ಮೂವರು ಸ್ವಾತಂತ್ರ್ಯ ಹೋರಾಟಗಾರರು ಡಾ. ಗೊರೂರು, ಜಿ.ಎಸ್. ಸಂಪತ್ತಯ್ಯಂಗಾರ್, ಶಂಕರಶೆಟ್ಟರು ಇವರ ಕುರಿತ್ತಾದ ಫ್ರೀಡಂ ಫೈಟ್.! ಅಧ್ಯಾಯ ಆರರಲ್ಲಿ ಗೊರೂರಿನ ಸಾಧಕರು ಕ್ಯಾಪ್ಟನ್ ಗೋಪಿನಾಥ್, ಜಿ.ಎನ್.ಮುದ್ದೇಗೌಡರು ಬರುತ್ತಾರೆ. ಏಳರಲ್ಲಿ ಗೊರೂರಿನ ಸಾಹಿತಿಗಳು ಡಾ. ಗೊರೂರರ À ಕೃತಿಗಳು, ಡಾ. ಎಸ್.ಎಲ್.ಬೈರಪ್ಪನವರು ಒಂದು ವರ್ಷ ಗೊರೂರಿನಲ್ಲಿ ಓದಿದ್ದು, ಐವತ್ತಕ್ಕೂ ಹೆಚ್ಚು ಪುಸ್ತಕಗಳ ಕರ್ತೃ ಗೊರೂರು ಅನಂತರಾಜು, ಉಪನ್ಯಾಸಕ ಸಾಹಿತಿ ಗೊರೂರು ಶಿವೇಶ್, ಪಂಕಜ ಪ್ರಶಸ್ತಿಗಳು, ಇತ್ತೀಚಿಗಿನ ಕವಯತ್ರಿಯರು ದ್ರಾಕ್ಷಾಯಿಣಿ ಮುರುಗನ್, ಜಮುನರನ್ನು ಪರಿಚಯಿಸುತ್ತಾ ಕಡೆಯಲ್ಲಿ ಡಾ. ಸೀ.ಚ.ಯತೀಶ್ವರ ಅವರ ಬರಹದೊಂದಿಗೆ ಮುಗಿಸಿದ್ದಾರೆ. ಮುನ್ನುಡಿಯಲ್ಲಿ ಡಾ.ಬರಾಳು ಶಿವರಾಮ ಅವರು ಮಹಾಕವಿ ಜಾನ್ ಮಿಲ್ಟನ್ ಮಾತನ್ನು ಉಲ್ಲೇಖಿಸುತ್ತಾರೆ. ‘ಸಮಾಜವು ಆಧುನಿಕತೆಯ ಪ್ರಭಾವಕ್ಕೆ ಒಳಗಾದಂತೆಲ್ಲ ಆ ಸಮಾಜದ ಶ್ರೀಮಂತ, ಸಾಂಸ್ಕøತಿಕ ಹಾಗೂ ಜನಪದೀಯ ಅಡಿಗಲ್ಲು ಅಲುಗಾಡುತ್ತದೆ. ತಮ್ಮ ನಾಡು ನುಡಿಗಳನ್ನು ಕಡೆಗಣಿಸುವುದು ಆ ಜನಾಂಗದ ಮುಂದಿನ ಇಳಿಗಾಲದ ಸೂಚನೆ.. ಆಧುನಿಕತೆಯ ಒಳಸುಳಿಗೆ ಸಿಲುಕಿ ನಮ್ಮನ್ನು ನಾವು ಮರೆಯುತ್ತಿರುವ ಈ ಸಂದರ್ಭದಲ್ಲಿ ಗೊರೂರು ದರ್ಶನ ಕೃತಿಯು ಗೊರೂರು ಪ್ರದೇಶದ ಧಾರ್ಮಿಕ ಐತಿಹಾಸಿಕ ಸಾಂಸ್ಕøತಿಕ ಸಾಮಾಜಿಕ ಪರಂಪರೆಗಳ ಹಿರಿಮೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.. ಸಂಗೀತ ನಿರ್ದೇಶಕ ಹಂಸಲೇಖರ ಹೊನ್ನುಡಿ, ಇವರ ಕಾಲೇಜು ಮೇಡಂ ಪ್ರೊ.ಜಿ.ಎನ್.ಅನುಸೂಯರವರ ಆಶಯ ನುಡಿಯಿದೆ. ಇರಲಿ, ಕಡೆಯಲ್ಲಿ ಒಂದಿಷ್ಟು ಅಡಿಟಿಪ್ಪಣಿ.
1992ರಲ್ಲಿ ನಾನು ಗೊರೂರು ಹೇಮಾವತಿ ದರ್ಶನ ಕೃತಿ ಪ್ರಕಟಿಸಿದೆ. ಇದಕ್ಕೆ ಮುನ್ನುಡಿ ಬರೆದಿದ್ದ ಚಂದ್ರಶೇಖರ್ ಧೂಲೇಕರ್ ಒಂದಿಷ್ಟು ಐತಿಹಾಸಿಕ ಅಂಶ ದಾಖಲಿಸಿದ್ದರು. ಡಾ. ಗೊರೂರರು ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ ಮಹಿಮೆ ಕೃತಿ ಪ್ರಕಟಿಸಿದ್ದು ಇದು ಲೇಖಕರ ಪರಮಾರ್ಶನ ಗ್ರಂಥ ಪಟ್ಟಿಯಲ್ಲಿದೆ. ಒಂದಿಷ್ಟು ಮಾಹಿತಿ ನೀಡಿದ ವಕ್ತøಗಳ ಹೆಸರಿದೆ. ಇರಲಿ ಲೇಖಕರು ಓದಬಹುದಾಗಿದ್ದ ಇನ್ನೂ ಬೇಕಾದಷ್ಟು ಕೃತಿಗಳು ಗೊರೂರು ಗ್ರಾಮ್ಯ ಬದುಕಿನ ಮೇಲೆ ಕ್ಷಕಿರಣ ಬೀರಿವೆ. ಡಾ. ಸಿ.ಜಿ.ವೆಂಕಟಯ್ಯನವರು ತಮ್ಮ ಪಿಹೆಚ್‍ಡಿ ಪ್ರಬಂಧ ‘ಡಾ.ಗೊರೂರರ ಜಾನಪದ ಸಾಧನೆ ಮತ್ತು ಸಿದ್ಧಿ ಕೃತಿ 480 ಪುಟದ್ದು ಓದಬೇಕು. ‘ಗೊರೂರು ನೆನಪುಗಳು.. ಕೃತಿಯಲ್ಲಿ ನಿವೃತ್ತ ಇಂಜಿನಿಯರ್ ಗೊರೂರು ಸೋಮಶೇಖರ್ 220 ಪುಟಗಳಲ್ಲಿ ತಮ್ಮ ಕಾಲಘಟ್ಟದ ಗ್ರಾಮ ನೋಟ ಕಂಡಿದ್ದಾರೆ. ಕ್ಯಾಪ್ಟನ್ ಗೋಪಿನಾಥ್‍ರ ಆತ್ಮ ಕಥೆ ‘ಸಿಂಪ್ಲಿ ಫೈ ಎ ಡಕ್ಕನ್ ಒಡಿಸ್ಸಿ, ನನ್ನ (ಗೊರೂರು ಅನಂತರಾಜು) ಇತ್ತೀಚಿನ ಕೃತಿ ‘ನಮ್ಮೂರು ಹಿಂತಿರುಗಿ ನೋಡಿದಾಗ.. ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್‍ರ ಪ್ರಬಂಧ ಸಾಹಿತ್ಯ, ಅಂತೆಯೇ ಡಾ. ಗೊರೂರರ ಕಥೆ ಪ್ರಬಂಧ ಸಾಹಿತ್ಯದಲ್ಲಿ ಊರ ಬದುಕು ಅನಾವರಣಗೊಂಡಿದೆ. ಸುಂದರೇಶ್ ಕೂಡ ಒಂದಿಷ್ಟು ಹೊಸ ಮಾಹಿತಿಗಳೊಂದಿಗೆ ಗೊರೂರು ದರ್ಶನ ಮಾಡಿಸಿದ್ದಾರೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, 3ನೇ ಕ್ರಾಸ್, ಹಾಸನ.