ಮೂಡಲಗಿ: ರೈತರು, ಮಹಿಳೆಯರು, ಯುವಜನತೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ, ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಈ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಬಜೆಟ್‌ನ್ನು ಸ್ವಾಗತಿಸಿದ್ದಾರೆ.
ಗುರುವಾರ ಫೆ-01 ರಂದು ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2024-25 ನೇ ಸಾಲಿನ ಮಧ್ಯಂತರ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಲಖ್‌ಪತಿ ದೀದಿ ಯೋಜನೆಯಡಿ ಸರಕಾರವು 2 ಕೋಟಿ ಮಹಿಳೆಯರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಇದನ್ನೀಗ 3 ಕೋಟಿಗೆ ಹೆಚ್ಚಿಸಲು ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕರಿಗೂ ಆರೋಗ್ಯ ವಿಮೆ ಯೋಜನೆ, ಆಯುಷ್ಮಾನ್ ವಿಸ್ತರಣೆ,ಡೇರಿ ಉದ್ಯಮದಲ್ಲಿ ತೊಡಗಿರುವ ಕೃಷಿಕರಿಗೆ ನೆರವು, ಪಿಎಂ ಫಸಲ್ ಬೀಮಾ ಯೋಜನೆ ಅಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆ, ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳ ನಿರ್ಮಾಣ ಗುರಿ, 1 ಕೋಟಿ ಮನೆಗಳಿಗೆ ಉಚಿತ 300 ಯೂನಿಟ್ ವಿದ್ಯುತ್, ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸಮಿತಿ ರಚನೆ, ಮೀನುಗಾರಿಕೆಗೆ ಹೊಸ ಸಚಿವಾಲಯ ಆರಂಭ, ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ, ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ, ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ, 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ, ಉಡಾನ್ ಯೋಜನೆಗೆ 517 ಹೊಸ ಮಾರ್ಗ – ಸಣ್ಣ ನಗರಗಳಿಗೂ ವಿಮಾನ, ಸಂಶೋಧನೆ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸಿರುವ ಈ ಮಧ್ಯಂತರ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದು ಬಜೆಟ್ ನಲ್ಲಿರುವ ಅಂಶಗಳನ್ನು ಕೊಂಡಾಡಿದರು.