ನಾವು ಟಿ. ನರಸೀಪುರ, ಬಿಳಿಗಿರಿ ರಂಗನಬೆಟ್ಟ, ಮೂಗೂರು ಕ್ಷೇತ್ರ ದರ್ಶನ ಮುಗಿಸಿ ತಲಕಾಡು ತಲುಪುವಷ್ಟರಲ್ಲಿ ಮೂರು ಗಂಟೆ. ತಲಕಾಡು ಪ್ರವೇಶಿಸಿದಂತೆ ಡ್ರೈವರ್ ಬಸ್ ನಿಲ್ಲಿಸಿ ನಮ್ಮ ತಂಡದ ಮುಖ್ಯಸ್ಥರನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿ ಊಟಕ್ಕೆ ಆರ್ಡರ್ ಮಾಡಿ ನಮ್ಮನ್ನು ಕಾವೇರಿ ನದಿ ದಡದಲ್ಲಿ ಬಿಟ್ಟರು. ಬಸ್ಸಿನಿಂದ ಇಳಿದವರೇ ಕೆಲವರು ತೆಪ್ಪ ಹತ್ತಿ ನದಿವಿಹಾರ ಹೊರಟರು. ನಾವು ಆಗಲೇ ಟಿ.ನರಸೀಪುರದಲ್ಲಿ ತೆಪ್ಪವಿಹಾರ ಮಾಡಿದ್ದರಿಂದ ತೆಪ್ಪ ಹತ್ತದೆ ತಪ್ಪಗೆ ಹೊಳೆಯ ದಡದ ಮರಳಿನಲ್ಲಿ ಅಡ್ಡಾಡಿದೆವು. ಕೆಲವು ಪುಣ್ಯಾತ್ಮರು ನದಿಯಲ್ಲಿ ಮುಳುಗಿ ಪಾಪ ತೊಳೆದುಕೊಂಡರು. ನಾವು ಸುಡುವ ಬಿಸಿಲಿನಲ್ಲಿ ಕಾದ ಮರಳಿನಲ್ಲಿ ಕಾಲು ಸುಟ್ಟುಕೊಂಡು ನರಳಿದೆವು. ಬಿಸಿಲಿಗೆ ಬಳಲಿ ಕಡೆಗೆ ಮರಗಳ ಕೆಳಗಿನ ಬೆಂಚು ಕಲ್ಲಿನಲ್ಲಿ ಕುಳಿತು ವಿಶ್ರಮಿಸಿದೆವು.
ಕಾವೇರಿ ತೀರದ ಪುಣ್ಯ ಕ್ಷೇತ್ರ ತಲಕಾಡು ಮೈಸೂರಿನಿಂದ ಟಿ. ನರಸೀಪುರ ಹೆಮ್ಮಿಗೆ ಮಾರ್ಗ 58 ಕಿ.ಮೀ. ದೂರದಲ್ಲಿದೆ. ತಲ ಮತ್ತು ಕಾಡ ಎಂಬ ಇಬ್ಬರು ಬೇಡರಿಗೆ ಶಿವನ ಕೃಪೆಯಿಂದ ಮುಕ್ತಿ ದೊರಕಿದೆ ಈ ಕ್ಷೇತ್ರಕ್ಕೆ ತಲಕಾಡು ಎಂಬ ಹೆಸರು ಬಂದಿದೆ. ಬಹು ಹಿಂದೆ ಅರಣ್ಯ ಪ್ರದೇಶವಾಗಿದ್ದ ಈ ಕ್ಷೇತ್ರಕ್ಕೆ ತಲವನಪುರ ಎಂಬ ಹೆಸರಿತ್ತಾಗಿ ಇಲ್ಲಿ ಹಿಂದೆ ಆಳಿದ್ದ ಗಂಗರಸ ಹರಿವರ್ಮನ ಶಾಸನದಲ್ಲಿ ಉಲ್ಲೇಖವಿದೆ. ಸೋಮದತ್ತ ಮತ್ತು ಅವನ ಶಿಷ್ಯರು ಇಲ್ಲಿ ಗಜರೂಪದಿ ಜನ್ಮ ತಳೆದು ಶಿವನ ಸೇವೆ ಮಾಡಿ ಮುಕ್ತಿ ಪಡೆದರೆಂದು ಇವರ ಸ್ಮರಣಾರ್ಥ ಈ ಕ್ಷೇತ್ರಕ್ಕೆ ಗಜಾರಣ್ಯ ಕ್ಷೇತ್ರ ಎಂಬ ಹೆಸರಿದೆ. ಇಲ್ಲಿ ಪುರಾತನ ಕಾಲದಲ್ಲಿ ತಪಸ್ವಿಗಳು ತಪಸ್ಸು ಮಾಡುತ್ತಿದ್ದರೆಂದೂ, ಗಾದಿರಾಜ ಕುಬೇರನು ಸಂತಾನ ಪ್ರಾಪ್ತಿಗಾಗಿ ಇಲ್ಲಿ ತಪಸ್ಸು ಮಾಡಿ ಫಲ ಪಡೆದನೆಂದೂ ಪ್ರತೀತಿ ಇದೆ.
ತಲಕಾಡಿನಲ್ಲಿ ಕಾವೇರಿ ಚತುರ್ ವಾಹಿನಿಯಾಗಿ ಪ್ರವಹಿಸುತ್ತದೆ. ನದಿಯ ಹರಿಯುವಿಕೆಯ ದಿಕ್ಕನ್ನು ಬದಲಿಸಿದಂತೆ ನದಿ ದಂಡೆಯಲ್ಲಿ ಒಂದೊಂದು ಶಿವಾಲಯಗಳು ಇವೆ. ಇಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ದೇವಾಲಯಗಳಿದ್ದುದಾಗಿ ಹೇಳಲಾಗಿದ್ದು, ಇಲ್ಲಿನ ಬೃಹತ್ ಮರಳು ರಾಶಿಯಲ್ಲಿ ಕೆಲವು ಹೂತು ಹೋಗಿರಬಹುದೆಂದು ಹೇಳಲಾಗಿದೆ. ಗಂಗರಸರ ರಾಜಧಾನಿಯಾಗಿದ್ದ ತಲಕಾಡಿನಲ್ಲಿ ಗಂಗರ ಹಾಗೂ ಚೋಳರ ಕಾಲದ ದೇವಾಲಯಗಳು, ಹೊಯ್ಸಳರ ಮತ್ತು ಮೈಸೂರು ಅರಸರ ಕಾಲದ ದೇವಾಲಯಗಳು ಇವೆ. ಇಲ್ಲಿನ ವೈದ್ಯೇಶ್ವರ, ಅರ್ಕೇಶ್ವರ, ಮರಳೇಶ್ವರ, ಪಾತಾಳೇಶ್ವರ ಮತ್ತು ಮುಡುಕುತೊರೆಯ ಮಲ್ಲಿಕಾರ್ಜುನೇಶ್ವರ ದೇವಾಲಯಯಗಳ ದರ್ಶನವು ಪಂಚಲಿಂಗ ದರ್ಶನವೆಂದು ಖ್ಯಾತಿಯಾಗಿದೆ.
ಪಂಚಲಿಂಗಗಳಲ್ಲಿ ಪ್ರಧಾನ ಲಿಂಗ ಕ್ಷೇತ್ರಾಧಿಪತಿಯಾದ ವೈದ್ಯನಾಥೇಶ್ವರ ದೇವಾಲಯವು ಪ್ರಾಚೀನ ಕಾಲದ್ದಾಗಿದೆ. ತಲಕಾಡಿಗೆ ಸಂಸ್ಕøತದಲ್ಲಿ ತಲವನಪುರವೆಂದೂ ತಮಿಳಿನಲ್ಲಿ ತಲೈಕಾಡು ಎಂದು ಕನ್ನಡದಲ್ಲಿ ತಲಕಾಡು ಎಂದು ಹೆಸರು. ಚೋಳರು ಈ ಊರನ್ನು ಜಯಿಸಿದ ನಂತರ ಇದಕ್ಕೆ ರಾಜಪುರ ಎಂದ ಹೆಸರಿಟ್ಟರು. ಕ್ರಿ.ಶ. 247 ರಿಂದ 266ರವರೆವಿಗೆ ಇಲ್ಲಿ ಹರಿವರ್ಮನು ಆಳುತ್ತಿದ್ದನೆಂದು 8ನೇ ಶತಮಾನದಲ್ಲಿ ಆಳುತ್ತಿದ್ದ ಗಂಗರಾಜನಾದ ಶ್ರೀ ಪುರುಷನ ಆಳ್ವಿಕೆಯಲ್ಲಿ ತಲಕಾಡು ರಾಜ್ಯವು ಅತ್ಯುನ್ನತ ಸ್ಥಿತಿಯಲ್ಲಿತ್ತೆಂದು 9ನೇ ಶತಮಾನದ ಹೊತ್ತಿಗೆ ಗಂಗರಾಜ ಶ್ರೀ ಸಾಮಾಂತನಾಗಿ ಆಳುತ್ತಿದ್ದು ತಲಕಾಡು ರಾಷ್ಟ್ರಕೂಟ ರಾಜ್ಯಕ್ಕೆ ಸೇರಿತ್ತು. ಕ್ರಿ.ಶ.972ರಲ್ಲಿ ಚಾಲುಕ್ಯರಿಂದ ಪರಾಜಿತರಾದ ಗಂಗರು ಚೋಳರ ಅಧೀನರಾದರು. ಪೆರ್ಮಾನಡಿ ಗಂಗರಾಜನು ಕ್ರಿ.ಶ.996ರಲ್ಲಿ ಆಳುತ್ತಿರುವಾಗ ಇವನನ್ನು 1ನೇ ರಾಜರಾಜನ ಮಗನಾದ ರಾಜೇಂದ್ರ ಚೋಳನು ಜಯಿಸಿದನೆಂದೂ ಶಾಸನಗಳು ಹೇಳುತ್ತವೆ. ಈ ಜಯದ ಜ್ಞಾಪಕಾರ್ಥವಾಗಿ ಊರಿಗೆ ರಾಜರಾಜಪುರವೆಂದು ಹೆಸರನ್ನು ಕೊಟ್ಟು ರಾಜೇಂದ್ರ ಚೋಳನು ಗಂಗೈ ಕೊಂಡ ಚೋಳ ಎಂಬ ಬಿರುದನ್ನು ಧರಿಸಿದನು. ವಿಕ್ರಮ ಚೋಳನು ಆಳುತ್ತಿರುವಾಗ 1116ರಲ್ಲಿ ಹೊಯ್ಸಳ ವಿಷ್ಣುವರ್ಧನನ ಆಶ್ರಯದಲ್ಲಿದ್ದ ಗಂಗ ವಂಶೀಯನಾದ ಗಂಗರಾಜನೆಂಬುವನು ತಲಕಾಡನ್ನು ಪುನ: ಜಯಿಸಿದನು. ತಲಕಾಡು ಹೊಯ್ಸಳರ ದಕ್ಷಿಣ ರಾಜಧಾನಿ ಆಯಿತು. ವಿಷ್ಣುವರ್ಧನನು ತಲಕಾಡು ಗೊಂಡ ಎಂಬು ಬಿರುದನ್ನು ಪಡೆದನು. ಇಲ್ಲಿಂದ ಮುಂದೆ 14ನೇ ಶತಮಾನದ ಮಧ್ಯದಲ್ಲಿ ವಿಜಯನಗರ ರಾಜರು ಜಯಿಸುವವರೆಗೂ ಇದು ಹೊಯ್ಸಳರ ವಶದಲ್ಲಿತ್ತು. 3ನೇ ಬಲ್ಲಾಳನ ಕಾಲದಲ್ಲಿ (ಕ್ರಿ.ಶ.1291-1342) ಅವನ ಪ್ರಧಾನಿಯಾದ ಪೆರುಮಾಳು ಡಣಾಯಕನು ತಲಕಾಡಿನ ಹತ್ತಿರವೇ ಹೊಳೆಯ ದಡದ ಮೇಲಿರುವ ಮಾಲಂಗಿ ಎಂಬ ಊರಿನಲ್ಲಿ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅದಕ್ಕೆ ಜಹಗೀರುಗಳನ್ನು ಬಿಟ್ಟನು. 1348ರಲ್ಲಿ ರಾಮರಾಜನೆಂಬ ಸಾಳ್ವ ರಾಜನು ತಲಕಾಡಿನಲ್ಲಿ ಅಧಿಕಾರಿಯಾಗಿ ಆಳುತ್ತಿದ್ದನೆಂದೂ ಅವನು ಮುಸ್ಲಿಂರೊಂದಿಗೆ ಯುದ್ಧ ಮಾಡುತ್ತಿದ್ದಾಗ ತೋತಾಕೊಂಡದಲ್ಲಿ ಮಡಿದನೆಂದು ಗೊತ್ತಾಗುತ್ತದೆ. 1839ರಲ್ಲಿ ತಲಕಾಡಿನ ಅಧಿಕಾರಿಯಾಗಿದ್ದ ಪೆರುಮಾಳ ದೇವರಸನು 2ನೇ ದೇವರಾಯನ ಆಳ್ವಿಕೆಯಲ್ಲಿ ಕೀರ್ತಿನಾರಾಯಣಸ್ವಾಮಿಗೆ ಭೂಮಿಯನ್ನು ಬಿಡಿಸಿಕೊಟ್ಟನು. 1612ರವರೆವಿಗೂ ತಲಕಾಡು ವಿಜನಗರದ ರಾಜರ ಅಧೀನಲ್ಲಿತ್ತು. ಬೆಟ್ವದ ಚಾಮರಾಜ ಒಡೆಯರ ತಮ್ಮಂದಿರಾದ ರಾಜ ಒಡೆಯರು ಇದನ್ನು ಅವರಿಂದ ಕಿತ್ತುಕೊಂಡರು. (ಮಾಹಿತಿ ಕೃಪೆ: ತಲಕಾಡು ಶ್ರೀ ಪಂಚಲಿಂಗ ದರ್ಶನ ಮಹಾತ್ಮೆ, ಕುಮಾರ್ ತಲಕಾಡು)
ರಾಜೇಂದ್ರ ಚೋಳನು ತಲಕಾಡಿಗೆ ಅಧಿಪತಿಯಾದ ಕಾಲಕ್ಕೆ ಇಲ್ಲಿನ ವೈದ್ಯೇಶ್ವರ ದೇವಾಲಯಕ್ಕೆ ನವರಂಗ ಮಂಟಪವನ್ನು, ದ್ವಾರಪಾಲಕರ ವಿಗ್ರಹವನ್ನು ನಿರ್ಮಿಸಿದ. ಕ್ರಿ.ಶ. 1450ರ ವಿಜಯನಗರದರಸರ ಕಾಲದಲ್ಲಿ ಈ ದೇವಸ್ಥಾನವು ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಶಿವನು ತನ್ನ ತಲೆಯ ಗಾಯಕ್ಕೆ ತಾನೇ ಔಷಧಿಯನ್ನು ಹೇಳಿದ ಕಾರಣದಿಂದ ಈ ದೇವಾಲಯಕ್ಕೆ ವೈದ್ಯನಾಥೇಶ್ವರ ಎಂಬ ಹೆಸರಿದೆ. ದೇವಾಲಯದ ಪ್ರವೇಶ ದ್ವಾರದ ವಿಗ್ರಹಗಳನ್ನು ತಲ ಮತ್ತು ಕಾಡರ ವಿಗ್ರಹಗಳೆಂದೂ ಗರ್ಭಗೃಹದಲ್ಲಿ 2 ಅಡಿ ಚದರದ ಪಾಣಿಪೀಠದ ನಡುವೆ ಇರುವ ವೈದ್ಯನಾಥೇಶ್ವರ ಲಿಂಗದ ತಲೆಯ ಮೇಲಿನ ಗುರುತನ್ನು ತಲ ಕಾಡರು ಕೊಡಲಿಯಿಂದ ಹೊಡೆದ ಗುರುತು ಎಂದು ಹೇಳುತ್ತಾರೆ.
ದೇವಸ್ಥಾನದ ಸುತ್ತಣ ಗೋಡೆಗಳಲ್ಲಿ ಸುಂದರ ಕಲಾಕೃತಿಗಳನ್ನು ಕೆತ್ತಲಾಗಿದೆ. ವೈದ್ಯೇಶ್ವರ ದೇವಾಲಯದ ಎಡಪಾಶ್ರ್ವದಲ್ಲಿ ಶ್ರೀ ಮನೋನ್ಮಣಿಯಮ್ಮನ ದೇವಸ್ಥಾನವಿದೆ. ತಾಂಡವಮೂರ್ತಿ ಗಣಪತಿ, ರಾಮೇಶ್ವರ ಶಿವಲಿಂಗಗಳೂ, ನಾರಾಯಣಸ್ವಾಮಿ, ಶಿವನ ಮತ್ತು ವಿಷ್ಣುವಿನ ಲೀಲೆಗಳ ವಿಗ್ರಹಗಳು ಕೆತ್ತಲ್ಪಟ್ಟಿವೆ. ಕತ್ತಲೆ ಮಂಟಪದಲ್ಲಿ ಚೌಡಿಕೇಶ್ವರಿ, ದಕ್ಷಿಣಮೂರ್ತಿ, ಬ್ರಹ್ಮನ ಮೂರ್ತಿಗಳಿವೆ. ಕಲ್ಲಿನ ಬ್ರಹ್ಮನ ವಿಗ್ರಹವನ್ನು ಕೈಯಿಂದ ಕುಟ್ಟಿದರೆ ಕಂಚಿನ ಶಬ್ದ ಬರುತ್ತದೆ. ದೇವಾಲಯದಲ್ಲಿ ಗಂಗರ ಮತ್ತು ತಮಿಳು ಶಾಸನಗಳಿವೆ. ವೈದ್ಯೇಶ್ವರ ಲಿಂಗದ ಮೂಲದಲ್ಲಿ ಅನಾದಿಯಿಂದ ಪವಿತ್ರ ಮೃತ್ತಿಕೆ ಇದೆ. ದೇವಾಲಯದ ಈಶಾನ್ಯ ಮೂಲೆಯಲ್ಲಿ ಕಲ್ಲಿನ ಎರಡು ಬಲೆಗಳಿವೆ. ಈ ದೇವಾಲಯದ ಉತ್ತರ ಭಾಗದಲ್ಲಿ ಗೋಕರ್ಣ ತೀರ್ಥ ಸರೋವರವಿದೆ. ಪರಮೇಶ್ವರನು ಮಣಿಕರ್ಣಿಕಳೊಂದಿಗೆ ಭಕ್ತರನ್ನು ನೋಡಲು ಸಿದ್ಧಾರಣ್ಯಕ್ಕೆ ಬಂದು ವೈದ್ಯನಾಥನಾಗಿ ಪ್ರತ್ಯಕ್ಷನಾದಾಗ ಮಣಿಕರ್ಣಿಕೆಯು ಅಲ್ಲಿಯೇ ಒಂದು ಸರೋವರವಾಗಿ ರೂಪಾಂತರಗೊಂಡಳು ಎಂಬುದು ಸರೋವರಕ್ಕಿರುವ ದಂತಕಥೆ.
ವೈದ್ಯೇಶ್ವರ ದೇವಾಲಯದಿಂದ ನಾಲ್ಕು ಶಿವಾಲಯಗಳು ನಾಲ್ಕು ದಿಕ್ಕಿನಲ್ಲಿ ಸುಮಾರು ನಾಲ್ಕೈದು ಕಿ.ಮೀ. ಗಳ ಅಂತರದಲ್ಲಿ ಇದೆ. ಉತ್ತರಕ್ಕಿರುವ ವಿಜಯಪುರ ಎಂಬಲ್ಲಿ ಕಾವೇರಿ ತೀರದಲ್ಲಿ ಅರ್ಕೇಶ್ವರ ಲಿಂಗವಿದೆ. ಶಿವನು ಸೂರ್ಯದೇವನಿಂದ ಅರ್ಚಿಸಲ್ಪಟ್ಟವನೆಂದೂ ಈ ದೇವಸ್ಥಾನಕ್ಕೆ ಅರ್ಕೇಶ್ವರ ಎಂಬ ಹೆಸರು ಬಂದಿದೆ. ಈ ದೇವಾಲಯದ ಎದುರು ಸೂಂiÀರ್iನ ಚಿಕ್ಕಗುಡಿಯಿದೆ. ರಥಸಪ್ತಮಿ ದಿನಗಳ ಉದಯಕಾಲದಲ್ಲಿ ಸೂರ್ಯನ ಕಿರಣವು ಈ ದೇವಾಲಯದ ನಾಲ್ಕು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿರುವ ಲಿಂಗದ ಮೇಲೆ ಬೆಳಕು ಚೆಲ್ಲುವುದೆಂದು ಹೇಳುತ್ತಾರೆ. ಕಾವೇರಿ ಇಲ್ಲಿ ಉತ್ತರ ವಾಹಿನಿಯಾಗಿ ಹರಿಯುತ್ತದೆ.
ವೈದ್ಯೇಶ್ವರ ದೇವಾಲಯದ ಪೂರ್ವಭಾಗದಲ್ಲಿ ಮೂರು ಮೈಲಿ ದೂರದಲ್ಲಿ ಕಾವೇರಿ ತೀರದಲ್ಲಿ ಮರುಳೇಶ್ವರ ದೇವಾಲಯವಿದೆ. ಕಾವೇರಿಯು ಇಲ್ಲಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಬ್ರಹ್ಮನು ಶಿವನ ಪೂಜಾ ಪ್ರಭಾವದಿಂದ ವಿವಾಹಿತನಾದವನೆಂದೂ, ಬ್ರಹ್ಮನು ಪೂಜಿಸಿದ ಶಿವಲಿಂಗವೇ ಈ ಮರುಳೇಶ್ವರ ಎಂದು ಮರುಳುರಾಶಿಯ ನಡುವೆ ಇರುವ ಈ ದೇವಾಲಯಕ್ಕೆ ಐತಿಹ್ಯವಿದೆ.
ಸಕ್ಕರೆಯಂತಹ ಮರುಳುರಾಶಿಯ ಮಧ್ಯೆ ವೈದ್ಯೇಶ್ವರ ದೇವಾಲಯದಿಂದ 3 ಮೈಲಿ ದೂರದಲ್ಲಿ ಕಾವೇರಿ ತೀರದಲ್ಲಿ ಪಾತಾಳೇಶ್ವರ ದೇವಾಲಯವಿದೆ. ಕಾವೇರಿ ಇಲ್ಲಿ ಪೂರ್ವವಾಹಿನಿಯಾಗಿ ಹರಿಯುತ್ತದೆ. ನಾಗಲೋಕದೊಡೆಯ ವಾಸುಕಿಯಿಂದ ಪೂಜಿಸಲ್ಪಟ್ಟ ಲಿಂಗವೆಂದು ಈ ದೇವಾಲಯಕ್ಕೆ ಪ್ರತೀತಿ ಇದೆ. ಇದು ಗಂಗ ಚೋಳರ ಕಾಲದ್ದು. ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿ ಲಿಂಗದ ದರ್ಶನವು ಸೇರಿ ಪಂಚಲಿಂಗ ದರ್ಶವನೆಂದೂ, ಕಾಶಿಯಲ್ಲಿ ನಡೆಯುವ ಪಂಚಕೋಶ ಯಾತ್ರೆಯಂತೆ ಈ ಕ್ಷೇತ್ರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹೋತ್ಸವದ ದಿನ ಯಾತ್ರೆಯು ನಡೆಯುತ್ತದೆ. ಈ ದಿವಸಗಳಲ್ಲಿ ಅಪಾರ ಜನಸಂದಣಿ ಸೇರುವುದರಿಂದ ಭಕ್ತರಿಗೆ ಮೂಲ ಲಿಂಗಗಳ ದರ್ಶನ ಭಾಗ್ಯ ಅಲಭ್ಯವಾದರೆ ಆಯಾಯ ಬಲಿಪೀಠಗಳ ದರ್ಶನ ಮಾಡಿದರೂ ಸಾಕು ಪಂಚಲಿಂಗ ದರ್ಶನದ ಪೂರ್ಣಫಲ ಪ್ರಾಪ್ತಿಯಾಗುವುದೆಂದು ನಂಬಿಕೆ ಇದೆ.
ತಲಕಾಡಿನಲ್ಲಿ ಶೈವ ದೇಗುಲಗಳಷ್ಟೇ ಇಲ್ಲ. ವೈಷ್ಣವ ದೇವಾಲಯಗಳು ಇವೆ. ಶೈವ ವೈಷ್ಣವ ಪಂಥಗಳ ಸಮನ್ವಯ ಕ್ಷೇತ್ರವೆನ್ನಬಹುದಾದ ತಲಕಾಡಿನ ಶ್ರೀ ಕೀರ್ತಿನಾರಾಯಣ ದೇವಾಲಯವು ಕ್ರಿ.ಶ. 1117 ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನು ತಾನು ಚೋಳರನ್ನು ಗೆದ್ದುದರ ಕುರುಹಾಗಿ ಕಟ್ಟಿಸಿದ ದೇವಾಲಯವಾಗಿದೆ. ಕೀರ್ತಿನಾರಾಯಣ ವಿಗ್ರಹ 10 ಅಡಿ ಎತ್ತರದ ಚತುರ್ಭುಜ ಮೂರ್ತಿ. ಇದರ ಪ್ರಭಾವಳಿಯ ಮೇಲೆ ವಿಷ್ಣುವಿನ ದಶಾವತಾರ ಚಿತ್ರಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಮರುಳು ರಾಶಿಯಲ್ಲಿ ಹೂತು ಹೋಗಿದ್ದ ಈ ದೇವಾಲಯವನ್ನು ಕ್ರಿ.ಶ. 1811 ರಲ್ಲಿ ಮೈಸೂರು ಶಾಸನ ಇಲಾಖೆಯು ಹೊರ ತೆಗೆಸಿದೆ. ವಿಶಾಲವಾದ ನವರಂಗದಲ್ಲಿ ವೇದಾಂತ ದೇಶಿಕರು, ಶ್ರೀ ರಾಮಾನುಜಚಾರ್ಯರು ಆಳ್ವಾರರ ವಿಗ್ರಹಗಳಿವೆ. ಗರ್ಭಗುಡಿ ಎತ್ತರವಾದ ಜಗುಲಿಯ ಮೇಲಿದೆ. ಚಿಕ್ಕದೇವರಾಯ ಒಡೆಯರ ಕಾಲದ ಗೌರಿಶಂಕರ ದೇವಾಲಯ, ವೀರಭದ್ರ, ಗೋಕರ್ಣೇಶ್ವರ, ಪಂಚಲಿಂಗೇಶ್ವರ ಇವು ತಲಕಾಡಿನ ಇತರ ದೇವಾಲಯಗಳು.
ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೆ ಹೋಗಲಿ ಎಂಬ ಅಲಮೇಲಮ್ಮನ ಶಾಪಗ್ರಸ್ತ ಭೂಮಿಯಾದ ತಲಕಾಡು ಕರ್ನಾಟಕದ ಮಿನಿಥಾರ್ ಮರುಭೂಮಿ, 400 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ, ನೆಲದಿಂದ ಸುಮಾರು 20-30 ಅಡಿಗಳಷ್ಟು ಎತ್ತರವಿರುವ ಈ ಮರಳ ರಾಶಿಯ ಬಗ್ಗೆ ಒಂದು ಕಥೆಯಿದೆ. ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣವನ್ನು ಕ್ರಿ.ಶ. 1612ರ ಕಾಲಕ್ಕೆ ತಿರುಮಲರಾಯನೆಂಬುವನು ಆಳುತ್ತಿದ್ದಾಗ್ಗೆ ಅವನು ಗುಣಪಡಿಸಲಾಗದ ಕಾಯಿಲೆಯೊಂದಕ್ಕೆ ತುತ್ತಾಗುತ್ತಾನೆ. ಈತನ ಪತ್ನಿ ಅಲಮೇಲಮ್ಮನ ಬಳಿ ಮುತ್ತಿನ ಮೂಗುತಿ ಮತ್ತು ಇತರ ಸ್ವರ್ಣಾಭರಣಗಳು ಇದ್ದು ಅವುಗಳನ್ನು ಪಡೆಯಬೇಕೆಂಬ ಆಸೆಯಿಂದ ಮೈಸೂರಿನ ಚಿಕ್ಕದೇವರಾಜ ಅರಸರು ಇವುಗಳನ್ನು ಕಿತ್ತುಕೊಂಡು ಬರಲು ಸೈನಿಕರನ್ನು ಕಳಿಸುತ್ತಾರೆ. ಒತ್ತಡಕ್ಕೆ ಸಿಲುಕಿದ ಅಲಮೇಲಮ್ಮ ಒಡವೆಗಳನ್ನು ಅರಸರಿಗೆ ಕೊಡಲು ಇಷ್ಟಪಡದೆ ಒಡವೆಗಳನ್ನು ಸೆರಗಿಗೆ ಕಟ್ಟಿಕೊಂಡು ಮಾಲಂಗಿ ದಡದಿಂದ ಕಾವೇರಿ ನದಿಗೆ ಹಾರುತ್ತಾಳೆ. ಹಾರುವಾಗ ಶಾಪ ಕೊಡಲಾಗಿ ಮರಳಾಯ್ತೆಂದು ಕಥೆಯಿದೆ. ಈ ಬಗ್ಗೆ ವೈಜ್ಞಾನಿಕವಾಗಿ ಯೋಚಿಸಿದಾಗ…. ಕಾವೇರಿ ಇಲ್ಲಿ ಮುನ್ನೂರು ಕೋಟಿ ವರ್ಷಗಳ ಪುರಾತನ ಬಂಡೆಯ ಮೇಲೆ ಹರಿಯುತ್ತಿದೆ. ಈ ಪುರಾತನ ಬಂಡೆಗಳನ್ನು ನೀರಿನ ಒತ್ತಡದಿಂದ ಕೊರೆದರೆ ಅಪ್ಪಟ ಸ್ಫಟಿಕದಂಥ ಮರಳು ಸಿಗುತ್ತದೆ. ಇಲ್ಲಿ ಮಾಲಂಗಿಯ ಬಳಿ ಕಾವೇರಿ ಹಠತ್ತಾಗಿ ತಿರುವು ಪಡೆದಿದೆ. ತಿರುವಿದ್ದಲ್ಲಿ ನದಿ ಸೆಳೆತ ಅತಿಯಾಗಿ, ಬಂಡೆಯ ಕೊರೆತವು ಹೆಚ್ಚುತ್ತದೆ. ಜೊತೆಗೆ ನದಿಪಾತ್ರದ ಕೊಂಚ ಮೇಲ್ಗಡೆ ಮಾಧವ ಮಂತ್ರಿ ಒಡ್ಡನ್ನು ನಿರ್ಮಿಸಿರುವುದರಿಂದ ನದಿಯಲ್ಲಿ ನೀರು ಕಮ್ಮಿಯಾಗಿ, ಮರಳಿನ ರಾಶಿಯ ಬಹುಭಾಗ ಗಾಳಿಗೆ ಮೈಚಾಚಿಕೊಂಡಂತಾಗಿ, ಗಾಳಿಯೂ ತೀವ್ರವಾಗಿ ಇಲ್ಲಿ ಬೀಸುವುದರಿಂದ ಭಾರತದ ಬೇರೆ ಯಾವ ನದಿ ತೀರದಲ್ಲೂ ಕಾಣಸಿಗದಂಥ ಅಪರೂಪದ ಮರಳುಭೂಮಿ ನಿರ್ಮಿತವಾಗಿದೆ.
ಕಾವೇರಿ ಇಲ್ಲಿ ಚತುರ್ವಾಹಿನಿಯಾಗಿ ಅಂಕುಡೊಂಕಾಗಿ ಹರಿದು ತನ್ನ ಪಾತ್ರದುದ್ದಕ್ಕೂ ಸ್ವಯಾರ್ಜಿತ ಕೊಚ್ಚಿ ತಂದ ಮರಳುರಾಶಿಯನ್ನು ಜಾಲಿಸಿ ದಡಕ್ಕೆ ಹೊರಳಿಸಿದೆ. ನೈಋತ್ಯ ದಿಕ್ಕಿನಿಂದ ಬಲವಾಗಿ ಬೀಸುವ ಗಾಳಿ ನದಿ ಹೊರಳಿಸಿದ ಮರಳ ರಾಶಿಯನ್ನು ತಲಕಾಡಿನತ್ತ ತೂರಿ ಮರಳು ಕಾಡು ನಿರ್ಮಿಸಿದೆ ಎಂದು ಶ್ರೀ ಟ.ಆರ್. ಅನಂತರಾಮು ವಿಶ್ಲೇಷಿಸುತ್ತಾರೆ. ಬಹುಶ: ಹಿಂದಿನಷ್ಟು ಮರಳು ಈಗ ದಡದಲ್ಲಿ ಉಳಿದಿಲ್ಲವೆನಿಸುತ್ತದೆ.
ವಿಜಯನಗರದ ಅರಸರ ಕಾಲದಲ್ಲಿ ಮಾಧವಮಂತ್ರಿ ಕಟ್ಟಿಸಿದ ಮಾಧವ ಮಂತ್ರಿ ಅಣೆಕಟ್ಟು ಹೆಮ್ಮಿಗೆ ಬಳಿ ಕಾವೇರಿ ನದಿಗೆ ನಿರ್ಮಿಸಲಾಗಿದೆ. ದೇವರಾಜ ಅಣೆಕಟ್ಟು, ವಿರುಜಾನದಿ ಕಾಲುವೆ, ಚಿಕ್ಕದೇವರಸಾಗರ, ಯಡತಿಟ್ಟ ಅಣೆಕಟ್ಟು, ಬಂಗಾರದೊಡ್ಡಿ, ಮಹದೇವಪುರ ಅಣೆಕಟ್ಟು, ರಾಜಾ ಪರಮೇಶ್ವರಿ ಅಣೆಕಟ್ಟು ಇವು ಕೃಷ್ಣರಾಜಸಾಗರದ ಕೆಳಭಾಗದಲ್ಲಿ ಬರುವ ಚಿಕ್ಕ ಅಣೆಕಟ್ಟೆಗಳು. ಈ ಅಣೆಕಟ್ಟೆಗಳಿಂದ ಶ್ರೀರಂಗಪಟ್ಟಣ ಮತ್ತು ಟಿ. ನರಸೀಪುರ ತಾಲ್ಲೂಕಿನ 21,640 ಎಕರೆ ಭೂಮಿಗೆ ನೀರು ದೊರೆಯುತ್ತದೆ. ಇವುಗಳಲ್ಲದೆ ಲಕ್ಷ್ಮಣಪುರ ಅಣೆಕಟ್ಟನ್ನೂ ಸಹ ನಿರ್ಮಿಸಲಾಗಿದ್ದು, ಇದರ ಅಚ್ಚುಕಟ್ಟು ಪ್ರದೇಶ ಪೂರ್ಣವಾಗಿ ನುಗು ಜಲಾಶಯದಲ್ಲಿ ಮುಳುಗಡೆಯಾಗಿದೆ.
ತಲಕಾಡಿನಿಂದ ನಾಲ್ಲು ಕಿ.ಮೀ.ಹತ್ತಿರವಿದ್ದರೂ ಮುಡುಕುತೊರೆ ಕ್ಷೇತ್ರಕ್ಕೆ ಹೋಗದೆ ಹೋಟೆಲ್‍ಗೆ ಹೋದೆವು. ಅದು ಹಳೆಯ ಮನೆ ಹೋಟೆಲ್. ವೈದ್ಯನಾಥೇಶ್ವರ ದೇವಾಲಯ ಸಮೀಪವೇ ಇದೆ. ಅಲ್ಲಿ ಮಾಡಿದ ಐವತ್ತು ರೂ.ನ ಊಟ ನಮ್ಮ ಹೊಟ್ಟೆಯನ್ನು ಅಚ್ಚುಕಟ್ಟಾಗಿ ತುಂಬಿಸಿತು. ನಾವು ಹೆಂಚು ಗಳದ ಹಿತ್ತಿಲ ಗುಡಿಸಲಿನಲ್ಲಿ ಊಟ ಮಾಡುವಾಗ ಹಳ್ಳಿ ಅಜ್ಜನ ಮನೆಯ ಹಿತ್ತಿಲು ಕಂಡಂತಾಯಿತು.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.