ತೇರಾ ಬಾರಾ ತ್ಯ್ರಾಹತ್ತರ 13-12-1973

0
375
  • ಅದು ಮರಾಠಿಯಲ್ಲಿ ತೇರಾ ಬಾರಾ ತ್ಯ್ರಾಹತ್ತರ್
  • ಕನ್ನಡದಲ್ಲಿ ಹದಿಮೂರು ಹನ್ನೆರಡು ಎಪ್ಪತ್ಮೂರು.

ಹೌದು ರಬಕವಿಯ ಮಟ್ಟಿಗೆ 13 ಡಿಸೆಂಬರ್ 1973 ಅತ್ಯಂತ ಕರಾಳ ದಿನವೇ ಅನ್ನಬಹುದು. ಅಂದು ಮಾಂಡವಕರ ಕುಟುಂಬಕ್ಕೂ ಅತ್ಯಂತ ಕೆಟ್ಟ ದಿನವೆನ್ನಬಹುದು.

ಆ ದಿನಗಳಲ್ಲಿ ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಕುರಿತು ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು, ಧರಣಿ ಸತ್ಯಾಗ್ರಹ ಬಿರುಸಿನಿಂದ ನಡೆದಿದ್ದವು. ಕೆಲವು ಕಡೆ ಅವು ಹಿಂಸಾತ್ಮಕವಾಗಿದ್ದವು.

ಹೀಗೆಯೇ ಕೊಲ್ಹಾಪುರದಲ್ಲಿ ಮರಾಠಿ ಭಾಷಿಕರು ಮಾಡಿದ ಆಂದೋಲನದಲ್ಲಿ ಗಲಭೆಯಾಗಿ, ಅಲ್ಲಿಯ ನೂರಾರು ಜನ ಕನ್ನಡಿಗರು ತಮ್ಮದೆಲ್ಲವನ್ನೂ ಕಳೆದುಕೊಂಡು ತಮ್ಮ ಜೀವವನ್ನು ಅಂಗ್ಗೈಯಲ್ಲಿ ಹಿಡಿದು ಅಲ್ಲಿಂದ ಓಡಿ ಕರ್ನಾಟಕದ ಭಾಗದಲ್ಲಿ ಬಂದಿದ್ದರು. ಹಾಗೆ ಕೆಲವೊಂದು ಜನ ಸಂತ್ರಸ್ತರು ರಬಕವಿ – ಬನಹಟ್ಟಿಯ ಕಡೆಗೂ ಬಂದಿದ್ದರು.

ಅವರೆಲ್ಲ ಮಲ್ಲಿಕಾರ್ಜುನ ದೇವಾಲಯದ ಪಟಾಂಗಣದಲ್ಲಿ ಆಶ್ರಯ ಪಡೆದಿದ್ದರು. ಆಗ ಈಗಿನ ಆರ್. ಸಿ. ಸಿ. ಮಲ್ಲಿಕಾರ್ಜುನ ಸಮುದಾಯ ಭವನ ಇದ್ದಿರಲಿಲ್ಲ. ಊರಿನ ಜನರೆಲ್ಲ ಅವರಿಗೆ ರೊಟ್ಟಿ ಕಾಯಿಪಲ್ಲೆ , ಅನ್ನ ಸಾರು ಕೊಡುತ್ತಿದ್ದರು. ಬಹಳಷ್ಟು ಜನರು ಉಟ್ಟ ಬಟ್ಟೆಯಲ್ಲಿಯೇ ಓಡಿ ಬಂದಿದ್ದರಿಂದ, ಅವರಿಗೆ ಒಂದೊಂದು ಜೋಡು ಧೋತರ, ಚಡ್ಡಿ , ಪೈಜಾಮ, ಸೀರೆ ಹೀಗೆ ಎಲ್ಲ ತರಹದ ಸಹಾಯ ಊರಿನ ಜನರು ಮಾಡುತ್ತಿದ್ದರು.

ಬೆಳಗಾವಿಯ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯ ಸುಮ್ಮನೇ ಕಾಲು ಕೆದರಿ ಜಗಳಕ್ಕೆ ಬರುತ್ತಿದೆ. ಅದರ ಜಗಳಗಂಟಿತನದ ಧೋರಣೆಯನ್ನು ಖಂಡಿಸಿ ನಾವೂ ರಬಕವಿಯಲ್ಲಿ ಹರತಾಳ ಮಾಡೋಣ ಎಂದು ಊರಿನ ಎಲ್ಲ ನಾಗರಿಕರು ನಿಶ್ಚಯಿಸಿದರು. ಆಗ ಅರ್ಜುನ್ ಭುಯಾರ್ ಇವರು ಯಂಗ್ ಟಕ್೯ ಮನುಷ್ಯ. ತಕ್ಷಣವೇ ಶಂಕರಲಿಂಗ ಸರ್ಕಲ್ ನಲ್ಲಿರುವ ಕಿಲಾಪ ಕಂಬದ ಹತ್ತಿರ ಒಂದು ಬೋರ್ಡ್ ಬರೆದು ಇಟ್ಟರು. ” ದಿನಾಂಕ 13 – 12 – 1973 ರಂದು ಮರಾಠಿಗರ ನಿಲುವನ್ನು ಖಂಡಿಸಿ ಎಲ್ಲರೂ ‘ ಖಡಕ್ ಹರತಾಳ್ ‘ಆಚರಿಸಬೇಕು ” ಎಂದು ಕರೆ ಕೊಟ್ಟರಲ್ಲದೆ ಅದರ ಹಿಂದಿನ ದಿವಸ ಶಂಕರಲಿಂಗ ಗುಡಿಯಲ್ಲಿ ಖಡಕ್ ಭಾಷಣವನ್ನೂ ಮಾಡಿದರು.

ಮರುದಿನ ಅಂದರೆ ಹದಿಮೂರು ಡಿಸೆಂಬರ್ ರಂದು ಬೆಳಿಗ್ಗೆ ಹರತಾಳ ಪ್ರಾರಂಭವಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಹಾರಾಷ್ಟ್ರ ಸರ್ಕಾರದ ಬೇಡಿಕೆಯ ಬಗ್ಗೆ ಖಂಡಿಸಲಾಯಿತು. ಅನೇಕ ಹಿರಿಯರು , ಕನ್ನಡಾಭಿಮಾನಿಗಳು ಭಾಷಣ ಮಾಡಿದರು. ಅಲ್ಲಿಯವರೆಗೆ ಎಲ್ಲವೂ ಶಾಂತಿಯುತವಾಗಿ ನಡೆದಿತ್ತು.

ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ ಒಮ್ಮೆಲೇ ನೆರೆಯ ಗ್ರಾಮದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ರಬಕವಿಗೆ ಪ್ರವೇಶ ಮಾಡಿದರು. ಅವರು ಬಂದವರೇ ” ಹಿಂಗs ಭಾಷಣ ಮಾಡ್ಕೊಂತ ಕುಂತ್ರ ಆಕ್ತದೇನ್ರೊ ” ಅನ್ನುತ್ತ ಹೊಸಪೇಟೆ ಓಣಿಯಲ್ಲಿಯ ಘಾಟಗೆ ಪಾಟೀಲ್ ಟ್ರಾನ್ಸಪೊರ್ಟ ಆಫೀಸಿನ ಬಾಗಿಲನ್ನು ದೊಡ್ಡ ಗಾತ್ರದ ಕಲ್ಲುಗಳನ್ನು ಎಸೆದು ಕಟ್ಟಿಗೆಯ ಫಳಿಯ ಬಾಗಿಲನ್ನು ಮುರಿಯತೊಡಗಿದರು.

ಆಗ ಅಲ್ಲಿ ಮ್ಯಾನೇಜರ್ ಎಂದು ನರಗುಂದ ವಕೀಲರ ಪುತ್ರ ಅಪ್ಪಾಸಾಹೇಬ ಎಂಬುವನು ಕೆಲಸ ಮಾಡುತ್ತಿದ್ದ. ಆತ ಬಾಗಿಲು ಮುರಿಯುವ ಜನರಿಗೆ ಮುರಿಯಬೇಡಿರೆಂದು ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ, ಯಾರೂ ಆತನ ಮಾತಿನ ಕಡೆಗೆ ಗಮನ ಕೊಡಲಿಲ್ಲ. ಬಾಗಿಲನ್ನು ಮುರಿದು ಆಯಿತು. ಒಳಗಡೆ ಇದ್ದ ಎಲ್ಲ ಮಾಲನ್ನು ಹೊರಗೆ ತಂದು ಚಿಮಣಿ ಎಣ್ಣಿ ಸುರುವಿ ಬೆಂಕಿ ಹಚ್ಚಲಾಯಿತು.

ಗಲಭೆಕೋರರು ಪೂರ್ವ ಯೋಜನೆಯಂತೆ ಘಾಸಲೇಟ ( ಚಿಮಣಿ ಎಣ್ಣೆ ) ಮುಂತಾದವುಗಳನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ತಂದಿದ್ದರು. ಅಲ್ಲಿಂದ ಯಾರೊ ಒಬ್ಬ ಚೀರಿ ಹೇಳಿದ. ” ಈಗ ಎಲ್ಲಾರೂ ಮಾಂಡವಕರ ಮನಿಕಡೆ ನಡ್ರಿ” ಎಂದ.


– ನೀಲಕಂಠ ದಾತಾರ.

( ಉಳಿದ ವಿಷಯ ನಾಳೆ )