ಬೀದರ – ಬೀದರ್ ಜಿಲ್ಲೆಯ ಭಾಲ್ಕಿ ಉಪವಿಭಾಗದ ಭಾಲ್ಕಿ ನಗರ ಠಾಣೆ ಪೊಲೀಸರು, ತೊಗರಿ ತುಂಬಿದ್ದ ಚೀಲಗಳನ್ನು ಕಳ್ಳತನ ಮಾಡಿರುವ ಆರೋಪದ ಮೇಲೆ ಐದು ಜನರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ತೊಗರಿ ಚೀಲಗಳು ಹಾಗೂ ಎರಡು ಕ್ರೂಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಿಂದ ಅಂದಾಜು ರೂ. 4,16,200/- ಮೌಲ್ಯದ ತೊಗರಿ ತುಂಬಿರುವ 66 ಚೀಲಗಳು ಮತ್ತು ಅಪರಾಧ ಕೃತ್ಯಕ್ಕೆ ಬಳಸಿದ ಅಂದಾಜು ರೂ. 4,00,000/- ಮೌಲ್ಯದ ಎರಡು ಕ್ರೂಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾಲ್ಕಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ, ಎಪಿಎಂಸಿ ಮಾರ್ಕೆಟ್‌ನಲ್ಲಿರುವ, ಶಿವಶಂಕರ ಟ್ರೇಡಿಂಗ್ ಆಡತ ಅಂಗಡಿಯಲ್ಲಿ, ತೊಗರಿ ತುಂಬಿದ್ದ 25 ಚೀಲಗಳು, ಸುರೇಶ ಮಾಣಿಕಪ್ಪ ಭೂರೆ ಟ್ರೇಡಿಂಗ್‌ನಲ್ಲಿನ 13, ಜಗದೀಶ ಮನ್ಮಥಪ್ಪ ಮಲ್ಲಾಸೂರೆ ಟ್ರೇಡಿಂಗ್‌ನಲ್ಲಿ 20 ಮತ್ತು ಶಂಕರ ಪ್ರಭುರಾದ ಕೊಟಗ್ಯಾಳೆ ಟ್ರೇಡಿಂಗ ಅಂಗಡಿಯಲ್ಲಿನ ತೊಗರಿ ತುಂಬಿದ್ದ 8 ಚೀಲಗಳನ್ನು, ವಿವಿಧ ದಿನಾಂಕಗಳಂದು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು ಎಂದು ದೂರು ದಾಖಲಾಗಿತ್ತು . ಈ ಪ್ರಕರಣದ ಬೆನ್ನಟ್ಟಿ ತನಿಖೆ ನಡೆಸಿರುವ ಭಾಲ್ಕಿ ನಗರ ಠಾಣೆ ಪೊಲೀಸರು, ದಿ. 10 ರಂದು, ಐದು ಜನ ಆರೋಪಿಗಳನ್ನು ಬಂಧಿಸಿ, ಕಳತನ ಮಾಡಿದ್ದ ಮಾಲು ಸಮೇತ ಮತ್ತು ಅದನ್ನು ಸಾಗಿಸಲು ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್ ಜಿಲ್ಲೆ ಎಸ್ಪಿ ಡಿ.ಎಲ್. ನಾಗೇಶ್ ಮತ್ತು ಅಡಿಷನಲ್ ಎಸ್ಪಿ ಡಾ ಗೋಪಾಲ್ ಎಂ.ಬ್ಯಾಕೋಡ್ ರವರುಗಳ ಮಾರ್ಗದರ್ಶನ, ಭಾಲ್ಕಿ ಉಪವಿಭಾಗದ ಡಿವೈಎಸ್ಪಿ ಡಾ. ಬಿ. ದೇವರಾಜ್ ರವರ ನೇತೃತ್ವ ಹಾಗೂ ಭಾಲ್ಕಿ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಆರ್. ರಾಘವೇಂದ್ರರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಶೇಖ ಷಾ ಪಾಟೀಲ ಮತ್ತು ಅಪರಾದ ವಿಭಾಗದ ಸಿಬ್ಬಂದಿಯವರಾದ ಸಿ ಹೆಚ್ ಸಿ 528 ಉಮಾಕಾಂತ ದಾನಾ, ಹೆಚ್ ಸಿ 593 ನಾಗಪ್ಪ ಖೇಡ, ಸಿಪಿಸಿ 1018 ರಮೇಶ ಮೇತ್ರಿ, ಸಿಪಿಸಿ1315 ಹಾವಪ್ಪ ಪೂಜಾರಿ, ಸಿಪಿಸಿ 1117 ಶಿವಣ್ಣ, ಸಿಪಿಸಿ1521 ವಿಕ್ರಮ್ ಮತ್ತು ಸಿಪಿಸಿ 1461 ಶ್ಯಾಮರಾಯ ಈ ಭರ್ಜರಿ ಬೇಟೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸರ ಕಾರ್ಯಕ್ಕೆ ಜೈ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ ಎಪಿಎಂಸಿ ಅಡತ ಮಾಲಿಕರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ