ಮಕ್ಕಳು ತಮ್ಮ ಹೆತ್ತ ತಾಯಿಗೆ ತೋರಿಸುವ ಮಮತೆಯನ್ನೇ ಕನ್ನಡ ಭಾಷೆಗೂ ತೋರಿಸಬೇಕು. ಆಗ ಮಾತ್ರ ಅವರ ಜನ್ಮ ಸಾರ್ಥಕವಾಗುತ್ತದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ಹಾಗೂ ಡಾ.ರಾಜಕುಮಾರ್, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ವೇದಿಕೆಗಳು ರೂಪಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ವಿಶೇಷ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಕೆ.ಆರ್.ನಗರ ಸಮೀಪವಿರುವ ಹಳೆಎಡತೊರೆಯ ಶ್ರೀ ಸಾಯಿನಳಂದ ಕೇಂದ್ರೀಯ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಂದು ಮನೆಯಲ್ಲಿ ಚಿಕ್ಕಮ್ಮ, ದೊಡ್ಡಮ್ಮ,ಅತ್ತೆ, ಅಜ್ಜಿ ಹೀಗೆ ಎಷ್ಟು ಮಂದಿ ಹಿರಿಯರಿದ್ದರೂ ಹೇಗೆ ಹೆತ್ತ ತಾಯಿಗೆ ವಿಶೇಷ ಪ್ರೀತಿ ತೋರಿಸುತ್ತಾರೋ ಹಾಗೇ ಉದ್ಯೋಗ ಹಾಗೂ ಜ್ಞಾನಕ್ಕಾಗಿ ನೂರು ಭಾಷೆ ಕಲಿತರೂ ಜೀವನದ ಕೊನೆಯ ಕ್ಷಣದವರೆಗೂ ಕನ್ನಡ ನಿಮ್ಮ ಉಸಿರಾಗಿರಲಿ ಎಂದವರು ನುಡಿದರು.
ಕನ್ನಡ ಭಾಷೆ ಅತ್ಯಂತ ಮಹತ್ವದ ಭಾಷೆ. ಈ ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ.ಕನ್ನಡ ಲಿಪಿಗೆ ಐದುನೂರು ವರ್ಷಗಳ ಇತಿಹಾಸವಿದೆ.ಕನ್ನಡ ಭಾಷೆಗೆ ಏಳು ಜ್ಞಾನಪೀಠ ಪ್ರಶಸ್ತಿಗಳು, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ, ಮೂರು ರಾಷ್ಟ್ರಕವಿ ಪ್ರಶಸ್ತಿ, ಮೂರು ಭಾರತ ರತ್ನ ಪ್ರಶಸ್ತಿಗಳು ಸಂದಿವೆ. ಇಂತಹ ಪವಿತ್ರ ಭಾಷೆ ನಮ್ಮದೆಂದು ಕನ್ನಡಿಗರು ಎದೆತಟ್ಟಿ ಹೇಳಬೇಕು ಎಂದವರು ಮಕ್ಕಳಿಗೆ ಕರೆ ನೀಡಿದರು.
ಅಮೃತ ಭಾರತಿಗೆ ಕನ್ನಡದಾರತಿ ವಿಶೇಷ ಕಾರ್ಯಕ್ರಮವು ಸಾಲಿಗ್ರಾಮ ತಾಲ್ಲೂಕಿನ ಭೇರ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ನಂತರ ಕೆ.ಆರ್.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬ್ರೈಟ್ ಪದವಿ ಪೂರ್ವ ಕಾಲೇಜು, ಮಿರ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀ ಚಾಮುಂಡೇಶ್ವರಿ ಶಿಕ್ಷಣ ಸಂಸ್ಥೆ (ಸಿ.ಇ.ಟಿ.), ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು , ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಸಾಲಿಗ್ರಾಮದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆದು ಇದೀಗ ಸಾಯಿ ನಳಂದ ಕೇಂದ್ರೀಯ ಶಾಲೆಯಲ್ಲಿ ಸಮಾರೋಪಗೊಳ್ಳುತ್ತಿದೆ. ಈ ಕಾರ್ಯಕ್ರಮದ ಮೂಲಕ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಸಾವಿರಾರು ಗ್ರಾಮೀಣ ಮಕ್ಕಳಿಗೆ ಕನ್ನಡ ಜಾಗೃತಿ, ತಾಂತ್ರಿಕ ಶಿಕ್ಷಣದ ಜಾಗೃತಿ, ಮಕ್ಕಳಲ್ಲಿ ಏಕಾಗ್ರತೆ,ಜೀವನ ಶ್ರದ್ದೆ ಹಾಗೂ ಉತ್ತಮ ನೈತಿಕ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕನ್ನಡ ಪರ ಸ್ಪರ್ಧೆಗಳನ್ನು ನಡೆಸಿ ಸುಮಾರು ನೂರೈವತ್ತಕ್ಕೂ ಹೆಚ್ಚು ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪುರಸ್ಕಾರ ನೀಡಲಾಯಿತು ಎಂದು ವಿವರಿಸಿದ ಭೇರ್ಯ ರಾಮಕುಮಾರ್
ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಶಿಕ್ಷಣ ಸಂಸ್ಥೆಯ ಪ್ರಮುಖರಿಗೆ ಕೃತಜ್ಞತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಪರ ಚಿಂತಕ ಡಾ.ಎಂ.ಆರ್.ವಿನಯ್ ಅವರು ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕಿನ ಐದು ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಹಾಗೂ ಉದ್ಯೋಗಾವಕಾಶ ಕುರಿತಂತೆ ಜಾಗೃತಿ ಮೂಡಿಸಿದ ತೃಪ್ತಿ ತಮಗಿದೆ. ಯುವ ಜನರು ತಾಂತ್ರಿಕ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಗಳಿಸಿ, ಜೀವನ ರೂಪಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.
ಹಿರಿಯ ಆಧ್ಯಾತ್ಮಿಕ ಚಿಂತಕರಾದ ಗುಣಚಂದ್ರ ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ತಂದೆ-ತಾಯಿಗಳ ಬಗ್ಗೆ, ಗುರು- ಹಿರಿಯರ ಬಗ್ಗೆ ಗೌರವ ಇರಬೇಕು. ಎಂತಹ ಸಂದರ್ಭಗಳಲ್ಲೂ ದೈರ್ಯಗುಂದಬಾರದು. ಕಷ್ಟಗಳು ಶಾಶ್ವತವಲ್ಲ, ಅವು ಬಂದು ಹೋಗುತ್ತವೆ. ನಂತರ ಸುಖದ ದಿನಗಳೂ ಬರುತ್ತವೆ ಎಂಬುದನ್ನು ಅರಿತುಕೊಳ್ಳಬೇಕು. ಯಾವ ಕಾರಣಕ್ಕೂ ಆತ್ಮಹತ್ಯೆಯಂತಹ ಹೇಡಿ ಕೃತ್ಯಕ್ಕೆ ಕೈ ಹಾಕಬಾರದು ಎಂದು ಕರೆ ನೀಡಿದರು. ಈ ಬಗ್ಗೆ ಮಕ್ಕಳಿಂದ ಪ್ರಮಾಣ ಮಾಡಿಸಿದರು.
ಶಾಲೆಯ ಪ್ರಿನ್ಸಿಪಾಲರಾದ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಿಲ್ಪ ಸ್ವಾಗತಿಸಿದರು. ಶ್ರೀಮತಿ ಮೈನಾ ಎಂ.ವಿ. ವಂದಿಸಿದರು. ಉಪನ್ಯಾಸಕರಾದ ಶ್ರೀಮತಿ ಸಾದ್ವಿನಿ,ಶಶಿಕಲಾ,ರೀತು ಮಾವಟ್ಕರ್,ಸುನೈಜಾ, ಸುಶ್ಮಿತ,ಜ್ಯೋತಿ,ಭಾರತಿ, ನಿಕಿಲ ಶ್ರೀ, ಪಲ್ಲವಿ, ಚಂದ್ರಕಲಾ,ಜಗದೀಶ್, ಪಿಲಿಪ್.ಪಿ,ಸುಮಯ್ಯ, ಮೇಘಾ.ವಿ.ಆರ್., ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕನ್ನಡಪರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಡಾ.ಎಂ.ಆರ್.ವಿನಯ್ ಅವರು ಕನ್ನಡ ಗೀತೆಗಳನ್ನು ಹಾಡಿ, ಮಕ್ಕಳಿಂದಲೂ ಸಾಮೂಹಿಕವಾಗಿ ಗಾಯನ ಮಾಡಿಸಿ ಕಾರ್ಯಕ್ರಮಕ್ಕೆ ರಂಗು ತಂದರು .ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.