spot_img
spot_img

ಆತಂಕರಹಿತ ಬದುಕಿಗೆ ನಮ್ಮೊಳಗೇ ಇದೆ ಪರಿಹಾರ

Must Read

spot_img
- Advertisement -

ಇಂದಿನ ದಾವಂತದ ಜೀವನದಲ್ಲಿ ಪ್ರತಿಯೊಂದರಲ್ಲೂ ಅವಸರ, ಗಡಿಬಿಡಿ ಆನುಭವಿಸುತ್ತಿದ್ದೇವೆ. ಆತಂಕ ಒತ್ತಡಗಳಂತೂ ಸಾಮಾನ್ಯ ಎನ್ನುವಂತಾಗಿದೆ. ಎಲ್ಲದರಲ್ಲೂ ಆತಂಕ ಹಿನ್ನಡೆಯನ್ನುಂಟು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಆತಂಕವನ್ನು ಒಂದಿಲ್ಲೊಂದು ಸಂದರ್ಭದಲ್ಲಿ ಅನುಭವಿಸಿಯೇ ಇರುತ್ತೇವೆ. ಸರಳವಾಗಿ ಹೇಳಬೇಕೆಂದರೆ ಬದುಕು ಆತಂಕಗಳಿಗೆ ಮುಖಾಮುಖಿ ಆಗುವಂಥದ್ದು. ನಾವು ಅಂದುಕೊಂಡಂತೆ ಇರದು ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇಲ್ಲ. ನಿತ್ಯದ ಅನುಭವವೂ ನವನವೀನ. ಆತಂಕವು ಕಾಲಕಾಲಕ್ಕೆ ಪ್ರತಿಯೊಬ್ಬರೂ ಅನುಭವಿಸುವ ಸಂಗತಿಯಾಗಿದೆ, ಆದರೆ ಕೆಲವರಿಗೆ ಇದು ವ್ಯಾಪಕವಾಗಿ ಮತ್ತು ವಿಪರೀತವಾಗಿ ಪರಿಣಮಿಸಬಹುದು.ಮೇಲಿಂದ ಮೇಲೆ ಕಣ್ಣಂಚನ್ನೂ ತೋಯಿಸಬಹುದು.

ಆತಂಕವೆಂದರೆ?

ಆತಂಕವು ನಿರಂತರವಾದ ಮತ್ತು ಅತಿಯಾದ ಚಿಂತೆಯಿಂದ ನಿರೂಪಿಸಲ್ಪಟ್ಟಿರುತ್ತದೆ. ಸಮಸ್ಯೆ ಶುರುವಾಗಿ ಒಂದೇ ಚಿಂತೆಯಲ್ಲಿ ಕೊನೆಗೊಂಡರೆ ಅದು ಅಷ್ಟು ದೊಡ್ಡ ವಿಷಯವೇನೂ ಅಲ್ಲ. ಬದಲಾಗಿ, ಒಂದು ಚಿಂತೆ ಇನ್ನೊಂದಕ್ಕೆ ಮತ್ತು ಮತ್ತೊಂದಕ್ಕೆ ಕಾರಣವಾದರೆ ಮುಗಿದೇ ಹೋಯಿತು. ಅಲ್ಲಿಂದ ತೊಂದರೆ ಶುರುವಾಗುತ್ತದೆ. ಆತಂಕಪಡುವ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆಯಾಗಿರುತ್ತದೆ. ಕೆಲವು ಜನರು ಯಾವುದೇ ಸಂದರ್ಭವಿರಲಿ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಅವರು ಕೈಗೊಳ್ಳುವ ಕೆಲಸಗಳಲ್ಲಿ ಆತಂಕದ ಚಕ್ರಕ್ಕೆ ಸಿಲುಕಿಕೊಂಡಿರುವ ಅಂಶಗಳು ಎದ್ದು ಕಾಣುತ್ತವೆ. ಜನರು ತಮ್ಮ ಚಿಂತೆಗಳಿಗೆ ಪ್ರತಿಕ್ರಿಯಿಸುವ ವಿಧಾನಗಳಿಂದಾಗಿ ಆತಂಕವು ಮುಂದುವರಿಯಬಹುದು. ಮತ್ತು ಕೆಟ್ಟದಾಗಿ ಬೆಳೆಯಬಹುದು. ಕಣ್ಣೀರಿನ ಭಾರವನ್ನು ಹೆಚ್ಚಿಸಬಹುದು.  

ಉತ್ತಮ ಭಾವನಾತ್ಮಕ ಯೋಗಕ್ಷೇಮವನ್ನು ಆನಂದಿಸುವುದು, ಆತಂಕರಹಿತ ಸುಗಮ ಜೀವನವನ್ನು ಅನುಭವಿಸಬೇಕೆನ್ನುವುದು ನಮ್ಮೆಲ್ಲರ ಹಂಬಲ. ಹಾಗಾದರೆ ಆತಂಕದಿಂದ ಪಾರಾಗುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರವಾಗಿ ಆತಂಕವನ್ನು ಜಯಿಸಲು ಸಾಧ್ಯವಾಗುವ ಕೆಲವು ತಂತ್ರಗಳು ಇಲ್ಲಿವೆ. 

- Advertisement -

ಒಪ್ಪಿಕೊಳ್ಳಲು ಕಲಿಯಿರಿ:

‘ಒಳ್ಳೆಯ ಮನಸ್ಸಿನ ವ್ಯವಸ್ಥೆಯು ಒಂದು ಗುರಿ ತಲುಪಲು ಮಾರ್ಗವನ್ನು ಕಡಿಮೆ ಮಾಡುತ್ತದೆ.’ ಆತಂಕವನ್ನು ಜಯಿಸಲು ಮೊದಲ ಮಾರ್ಗವೆಂದರೆ ಪ್ರತಿ ಒಳನುಗ್ಗುವ ಆಲೋಚನೆಯು ಚಿಂತೆ ಮಾಡಲು ನ್ಯಾಯಬದ್ಧ ಕಾರಣವನ್ನು ಸೂಚಿಸುವುದಿಲ್ಲ ಎಂದು ಒಪ್ಪಿಕೊಳ್ಳಲು ಕಲಿಯುವುದು. ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಆಲೋಚನೆಗಳು ನಿಜವಲ್ಲ, ಆದ್ದರಿಂದ ಬರುವ ಆಲೋಚನೆಗಳನ್ನು ಗುರುತಿಸಬೇಕು. ಅದನ್ನು ಚಿಂತೆ ಅಥವಾ ತೀರ್ಪು ಎಂದು ಲೇಬಲ್ ಮಾಡಬೇಕು. ಆಲೋಚನೆಯು ಬಂದಾಗ ಆ ಕ್ಷಣದ ಅರಿವನ್ನು ಹೊಂದಿರಬೇಕು. ನಾವು ಸಾಮಾನ್ಯವಾಗಿ ಪರಿಹರಿಸಲು, ಸರಿಪಡಿಸಲು, ಅದರೊಂದಿಗೆ ವಾದಿಸಲು ಅಥವಾ ನಂಬಲು ಇರುವ ವಿಷಯಗಳ ಮೇಲೆ ಗಮನ ಹರಿಸುವುದು ಅವಶ್ಯಕವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. 

ಗ್ರಹಿಸುವ ವಿಧಾನ ಬದಲಿಸಿ:

ಆತಂಕವನ್ನು ಕಡಿಮೆ ಮಾಡಲು ಮತ್ತೊಂದು ತಂತ್ರವೆಂದರೆ, ಸನ್ನಿವೇಶಗಳನ್ನು ಗ್ರಹಿಸುವ ವಿಧಾನವನ್ನು ಬದಲಿಸುವುದು. ಆತಂಕ ಶುರುವಾಗುವುದೇ ನಾವು ಗ್ರಹಿಸುವ ವಿಧಾನದ ಮೇಲೆ. ಆದ್ದರಿಂದ ದಿನನಿತ್ಯ ನಡೆಯುವ ಘಟನೆಗಳನ್ನು ಸನ್ನಿವೇಶಗಳನ್ನು ಅವುಗಳ ಪರಿಮಿತಿಯಲ್ಲಿ ಗ್ರಹಿಸುವುದು ಒಳ್ಳೆಯದು. ಇದು ವಿಕೃತ ಆಲೋಚನೆಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಲು ಮಾರ್ಗವನ್ನು ನೀಡುತ್ತದೆ. ಹೆಚ್ಚು ಸಮತೋಲಿತ ದೃಷ್ಟಿಕೋನವನ್ನು ಪ್ರೋತ್ಸಾಹಿಸುವ ನಂಬಿಕೆ ಕುರಿತು ಪ್ರಶ್ನೆಗಳ ಸರಣಿಯನ್ನು ಕೇಳಿಕೊಳ್ಳಲು ಅನುಮಾಡಿಕೊಡುತ್ತದೆ. ಉದಾಹರಣೆಗೆ ಹೇಳಬೇಕೆಂದರೆ:  ನಮ್ಮಲ್ಲಿ ಒಂದು ಸಣ್ಣ ವಾದವಿದ್ದ ಕಾರಣ ನಮ್ಮ ಸಂಬಂಧವು ಕೊನೆಗೊಳ್ಳುತ್ತದೆ ಎಂದು ಅರ್ಥವಲ್ಲ.

ಒಡ್ಡಿಕೊಳ್ಳಿ:

ಆತಂಕಗಳಿಗೆ ಮುಕ್ತ ಮನದಿಂದ ಒಡ್ಡಿಕೊಳ್ಳುವ ಇಚ್ಛೆಯನ್ನು ಬೆಳೆಸಿಕೊಳ್ಳಬೇಕು. ವಾಸ್ತವದಲ್ಲಿ ಆತಂಕವನ್ನು ದೂರತಳ್ಳಬೇಕೆಂದರೆ ಆತಂಕವನ್ನು ಉಂಟುಮಾಡುವ ಸಂದರ್ಭವನ್ನು ತಪ್ಪಿಸುವ ಬದಲು ಎದುರಿಸುವುದು ಒಳ್ಳೆಯದು. ಆತಂಕವನ್ನು ಎದುರಿಸುವ ಮೂಲಕ ಆತಂಕಕ್ಕೆ ಒಡ್ಡಿಕೊಳ್ಳುವುದು ಮತ್ತು ಆತಂಕದತ್ತ ಒಲವು ತೋರುವುದು ಮಾನ್ಯತೆಯ ಮೂಲ ಪರಿಕಲ್ಪನೆಯಾಗಿದೆ. ‘ಭಯಾನಕವಾದುದು ಏನೂ ಸಂಭವಿಸುವುದಿಲ್ಲ ಅಥವಾ ಕೆಟ್ಟ ಫಲಿತಾಂಶಗಳನ್ನು ನಿರ್ವಹಿಸಬಲ್ಲೆ.’ ಎಂಬುದನ್ನು ಕಲಿತುಕೊಳ್ಳುವುದು ಇನ್ನೂ ಉತ್ತಮ ಮಾರ್ಗ. ಉದ್ದೇಶಪೂರ್ವಕವಾಗಿ ಗೆಳೆಯನೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರುವುದು ಅಥವಾ ಪ್ರಮುಖ ವಾದದಲ್ಲಿ ತೊಡಗಿಕೊಳ್ಳುವುದು ಹೇಗಿರುತ್ತದೆಂದು ಊಹಿಸಿಕೊಳ್ಳಬಹುದು. ಹೀಗೆ ಒಡ್ಡಿಕೊಳ್ಳುವಿಕೆಯ ಪುನರಾವರ್ತಿಸುವುದು ಮುಖ್ಯವಾಗಿರುತ್ತದೆ.

- Advertisement -

ಭರವಸೆಯೇ ಬದುಕು:

ಆತಂಕದ ಸಮಸ್ಯೆಯಲ್ಲಿರುವ ಯಶಸ್ವಿ ವ್ಯಕ್ತಿಗಳು ಆತಂಕವನ್ನು ನಿಗ್ರಹಿಸುವ ಮೂಲಕ ತಮ್ಮ ಭಯಗಳಿಗೆ ಪ್ರತಿಕ್ರಿಯಿಸಲು ಒಲವು ತೋರುತ್ತಾರೆ. ಕೆಟ್ಟದ್ದೇನೂ ಸಂಭವಿಸುವುದಿಲ್ಲ ಎಂದು ಭರವಸೆ ನೀಡುತ್ತಾರೆ. ಭರವಸೆಯೇ ಬದುಕು ಎಂದು ಭಯವನ್ನು ಹಿಮ್ಮೆಟ್ಟಿಸುವ ತಂತ್ರಗಳನ್ನು ಬಲಪಡಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಆತಂಕವು ‘ನಮ್ಮ ಬಗ್ಗೆ ನಮಗಿರುವ ನಕಾರಾತ್ಮಕ ಆಲೋಚನೆಗಳಿಂದ ಕೆಲವು ಚಿಂತೆಗಳು ಬಲಗೊಂಡು ರೂಪಿತವಾಗಿದ್ದು.’ ಇದರ ಮೂಲ ಹುಡುಕುತ್ತ ಹೋದರೆ ನಮಗೆ ಸಿಗುವ ಉತ್ತರವೆಂದರೆ ನಮಗೆಲ್ಲ ಅನಿಶ್ಚಿತ ಮತ್ತು ಅನಪೇಕ್ಷಿತ ಫಲಿತಾಂಶವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಬೇರೂರಿದ್ದು.

ನಂಬಿಕೆಯಿಡಿ:

ಆತಂಕವು ಮೇಲ್ನೋಟಕ್ಕೆ ಚಿಕ್ಕ ಸಮಸ್ಯೆಯಾಗಿ ಕಂಡರೂ ಅದರ ದುಷ್ಪರಿಣಾಮ ಅಷ್ಟಿಷ್ಟಲ್ಲ. ಅದು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹಲವಾರು ದುಃಖದ ಪರಿಣಾಮಗಳನ್ನು ಉಂಟುಮಾಡುವುದು. ಚಡಪಡಿಕೆ, ಕಳಪೆ ಏಕಾಗ್ರತೆ, ಆಯಾಸ, ಭಯ, ಸಿಡುಕತನ, ನಿದ್ರಾಹೀನತೆ, ಅನಗತ್ಯವಾಗಿ ಒಳನುಗ್ಗುವ ಆಲೋಚನೆಗಳು. ಹೀಗೆ ಅನಗತ್ಯವಾಗಿ ಒಳನುಗ್ಗುವ ಆಲೋಚನೆಗಳು ಸಂಕಟವನ್ನು ಉಂಟು ಮಾಡಬಹುದು ಮತ್ತು ನಿಭಾಯಿಸಲು ಕಷ್ಟವಿನಿಸಬಹುದು.

ಆದಾಗ್ಯೂ ಅತಿಯಾದ ಆಸಕ್ತಿಯುಳ್ಳ ವ್ಯಕ್ತಿಯು ಈ ಆಲೋಚನೆಯನ್ನು ಬಹಳ ಅರ್ಥಪೂರ್ಣವೆಂದು ಪರಿಗಣಿಸುತ್ತಾನೆ, ಆ ಆಲೋಚನೆಯ ಎಲ್ಲ ಕಾರಣಗಳನ್ನು ವಿಮರ್ಶಿಸಿ, ಅಲ್ಪಾವಧಿಯಲ್ಲಿ ಆತಂಕವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಾನೆ. ಮತ್ತು ಅದರಿಂದ ತುಂಬಾ ಒತ್ತಡಕ್ಕೆ ಒಳಗಾಗುತ್ತಾನೆ. ಈ ವಿಷಯದ ಒಳಹೊಕ್ಕು ನೋಡಿದಾಗ ಆತಂಕವನ್ನು ಮೀರಲು ನಂಬಿಕೆಯು ಹೆಚ್ಚು ಮಹತ್ವದ್ದು ಎಂದು ಕಂಡು ಬರುತ್ತದೆ. 

ಕೊನೆ ಹನಿ:

ಪ್ರಪಂಚದಲ್ಲಿ ಎಂಥವರೇ ಆಗಿರಲಿ ಆತಂಕದಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ. ಇದು ತತ್ವಜ್ಞಾನವಲ್ಲ ಬದುಕಿನ ಸತ್ಯ. ಆತಂಕರಹಿತ ಬದುಕಿಗಾಗಿ ಎಷ್ಟೆಲ್ಲ ಪರದಾಡುತ್ತೇವೆ. ಎಷ್ಟು ದೂರಕ್ಕೆ ಹುಡುಕಿಕೊಂಡು ಹೋಗುತ್ತೇವೆ. ಪರಿಹಾರ ನಮ್ಮೊಳಗೇ ಇದೆ. ನಮ್ಮ ಚಿಂತನೆ ಮತ್ತು ವಿಚಾರಗಳು ಆತಂಕದ ಸನಿಹಕ್ಕೆ ಇಲ್ಲವೇ ದೂರ ಮಾಡುತ್ತವೆ. ಎಲ್ಲ ಆತಂಕದ ಪ್ರಶ್ನೆಗಳಿಗೂ ಉತ್ತರಿಸಬೇಕೆಂದಿಲ್ಲ. ಕೆಲವೊಂದಕ್ಕೆ ಮೌನವೇ ಉತ್ತರ. ಆತಂಕಗಳ ಹಿನ್ನೆಲೆ ಅರಿತು, ಆತಂಕವನ್ನು ಎದುರಿಸುವ ಚೈತನ್ಯ ತುಂಬಿಕೊಂಡಲ್ಲಿ ಕಲ್ಲಿನಿಂದಲೂ ರಸವನ್ನು ಒಸರಿಸಲು ಸಾಧ್ಯ. ಅದು ನಮ್ಮ ಧೀಃಶಕ್ತಿಯಂತೆ. ಬದುಕಿನಲ್ಲಿ ಬಂದದ್ದನ್ನು ಹಸನುಗೊಳಿಸುತ್ತ  ಬಂಗಾರದ ಜೀವನ ಕಟ್ಟಿಕೊಂಡರೆ ಸಿಗುವ ಆನಂದ ವರ್ಣನಾತೀತವಾದುದು. ಆತಂಕದ ಮೊಗದಲ್ಲಿ ನಗುವ ತೋರಣ ಕಟ್ಟಬಹುದು.      ಶಿಕ್ಷಣವೆಂದರೆ ನಮ್ಮೆಲ್ಲರ ತಲೆಯಲ್ಲಿ ಖಾಯಂ ಆಗಿರುವ ವ್ಯಾಖ್ಯಾನವೆಂದರೆ ಪರಿಪೂರ್ಣ ಶಿಕ್ಷಣವು ಮಾನವನ ಪೋಷಣೆಯ ಬಗ್ಗೆ ಸಂಪೂರ್ಣ ಕಾಳಜಿವಹಿಸಬೇಕು. ಬದುಕು ಸಹಜವಾಗಿ ಅರಳುವಂತೆ ನೋಡಿಕೊಳ್ಳಬೇಕು. ಅರಳುವಿಕೆ ತುಂಬ ಮುಖ್ಯ.


ಜಯಶ್ರೀ.ಜೆ. ಅಬ್ಬಿಗೇರಿ

ಇಂಗ್ಲೀಷ್ ಉಪನ್ಯಾಸಕರು

ಬೆಳಗಾವಿ 9449234142

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group