ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ಸಮರ್ಥ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆರಂಭಕ್ಕೆ ಪರವಾನಿಗೆ ನೀಡುವ ಮೊದಲು ತ್ರಿಸದಸ್ಯ ಸಮಿತಿಯು ದಿ. ೧೯.೦೮.೨೦೨೧ ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇಲ್ಲದೆ ಇರುವ ತಂತಿ ಬೇಲಿ ‘ಇದೆ’ ಎಂಬುದಾಗಿ ವರದಿ ನೀಡಿದೆ!
ಆಶ್ಚರ್ಯವೆಂದರೆ ಈ ಪರಿಶೀಲನೆಯನ್ನು ೨೦೨೧ ರಲ್ಲಿ ನೀಡಿದ್ದರೂ ಇನ್ನೂವರೆಗೂ ಅಲ್ಲಿ ತಂತಿ ಬೇಲಿ ಇಲ್ಲ!
ಇದೇ ರೀತಿ ಶಾಲೆಯಲ್ಲಿ ಅಗ್ನಿ ನಂದಕ ಹೊಂದಲಾಗಿದೆ ಎಂದು ವರದಿ ನೀಡಿದ್ದು, ಅಗ್ನಿ ಶಾಮಕ ಇಲಾಖೆಯು ಇತ್ತೀಚೆಗೆ ನೀಡಿದ ಪ್ರಮಾಣಪತ್ರದಂತೆ, ಅಲ್ಲಿ ಇನ್ನೂ ಕೆಲವು ಅಗ್ನಿ ನಂದಕ ಕ್ರಮಗಳನ್ನು ಕೈಗೊಂಡಿಲ್ಲ. ಆದರೂ ಈ ಸಮಿತಿ ಅಗ್ನಿ ನಂದಕ ಇದೆಯೆಂಬುದಾಗಿ ವರದಿ ನೀಡಿದ್ದು ಆಶ್ಚರ್ಯಕರ.
ಸದರಿ ಶಾಲೆಗೆ ಭೇಟಿ ಕೊಟ್ಟಿರುವ ತ್ರಿಸದಸ್ಯ ಸಮಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿಯವರು, ಮೂಡಲಗಿ ಶೈಕ್ಷಣಿಕ ವಲಯದ ದೈಹಿಕ ಶಿಕ್ಷ ಪರಿವೀಕ್ಷಕರಾದ ಎ ಎ ಜುನೇದಿಪಟೇಲ್ ಹಾಗೂ ಶಿಕ್ಷಣ ಸಂಯೋಜಕ ಸತೀಶ ಬಿ ಎಸ್ ಇದ್ದಾರೆ.
ಪ್ರತ್ಯಕ್ಷ ಕಣ್ಣಿಗೆ ಕಾಣುವಂಥ ತಂತಿ ಬೇಲಿಯ ವಿಷಯದಲ್ಲಿಯೇ ಈ ರೀತಿ ಸುಳ್ಳು ವರದಿ ನೀಡಿರುವ ಸಮಿತಿಯು ಸಮರ್ಥ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿಷಯದಲ್ಲಿ ಇನ್ನೂ ಯಾವ ವಿಷಯಗಳನ್ನು ಮುಚ್ಚಿಟ್ಟಿದೆ ಎಂಬ ಪ್ರಶ್ನೆಗೆ ಸಾರ್ವಜನಿಕರಿಗೆ ಉತ್ತರ ಕೊಡಬೇಕಾಗಿದೆ. ರಾತ್ರೋ ರಾತ್ರಿ ಅಲ್ಲಿ ಬೇಲಿ ನಿರ್ಮಾಣವಾದರೂ ಅಚ್ಚರಿಯಿಲ್ಲ.
ಇನ್ನು ಹಲವಾರು ‘ಇಲ್ಲ‘ ಗಳ ಆಧಾರದ ಮೇಲೆ ಆರಂಭವಾಗಿರುವ ಸಮರ್ಥ ಶಾಲೆಯನ್ನು ಹೆಗಲ ಮೇಲೆ ಹೊತ್ತು ನಿಂತಿರುವ ಅಧಿಕಾರಿಗಳ ಜವಾಬ್ದಾರಿಯನ್ನು ಜಿಲ್ಲಾ ಶೈಕ್ಷಣಿಕ ಅಧಿಕಾರಿಗಳು ಹೊರುವರೆ ಎಂಬುದು ಪ್ರಶ್ನೆ.