spot_img
spot_img

ಇವರು ಜನಸೇವಕರಲ್ಲ; ಜನಸೇವೆ ಮಾಡುವವರು ಹೀಗೆ ಮಾಡುವುದಿಲ್ಲ !

Must Read

- Advertisement -

ಇವರು ಮಾತೆತ್ತಿದರೆ ತಾವು ಜನರ ಸೇವಕರು, ಅಭಿವೃದ್ಧಿಯ ಪರವಾಗಿ ಇರುವವರು ಎಂದು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ ಆದರೆ ಮಾಡುವುದು ಮಾತ್ರ ಸಂಪೂರ್ಣ ಸ್ವಾರ್ಥದ ರಾಜಕಾರಣ. ಕೇವಲ ಟಿಕೆಟ್ ಸಿಗಲಿಲ್ಲ ಎಂಬ ಮಾತ್ರಕ್ಕೇ ಹತ್ತು ಹಲವಾರು ವರ್ಷಗಳಿಂದ ಬೆಳೆದು ಬಂದ ಪಕ್ಷವನ್ನೇ ತೊರೆದು ಹೋಗಿಬಿಡುತ್ತಾರಲ್ಲ ಇದು ಶುದ್ಧ ಮುಠ್ಠಾಳತನ ಮಾತ್ರವಲ್ಲ ಅತ್ಯಂತ ಕೀಳು ಮಟ್ಟದ ರಾಜಕಾರಣ ಎನ್ನಬಹುದು.

ಲಕ್ಷ್ಮಣ ಸವದಿಯವರು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು. ಆದರೆ ಪಕ್ಷವು ಟಿಕೆಟ್ ನೀಡದ ಕಾರಣ ನನ್ನ ನಿಷ್ಠೆಗೆ ಬೆಲೆ ಸಿಗಲಿಲ್ಲ ಎಂದು ಅಲವತ್ತುಕೊಂಡಿದ್ದಾರೆ.  ಬೇರೆ ಪಕ್ಷದಿಂದ ವಲಸೆ ಬಂದ ರಮೇಶ ಜಾರಕಿಹೊಳಿಯವರ ಮಾತು ಕೇಳಿ ಭಾರತೀಯ ಜನತಾ ಪಕ್ಷ ಸವದಿಯವರಿಗೆ ಈ ರೀತಿಯ ಅನ್ಯಾಯ ಮಾಡಬಾರದಿತ್ತು ಅದು ಸರಿ, ಆದರೆ ತಾಯಿ ತಂದೆಯ ಜೊತೆ ಜಗಳ ಬಂದ ಮಾತ್ರಕ್ಕೆ ಸ್ವಂತ ಮನೆಯನ್ನೇ ಹಾಳು ಮಾಡಬಹುದಾ? ಎಂಬ ಪ್ರಶ್ನೆ ಏಳುತ್ತದೆ.

ಹಾಗೆ ನೋಡಿದರೆ ರಮೇಶ ಜಾರಕಿಹೊಳಿಯವರಿಗೆ ಪಕ್ಷ ನಿಷ್ಠೆ ಇಲ್ಲ. ಎಷ್ಟಂದರೂ ಅವರು ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಪಕ್ಷದಿಂದ ಬಂದವರು. ಬಿಜೆಪಿಯ ತತ್ವಗಳ ಅನುಸರಣೆ ಜಾರಕಿಹೊಳಿಯವರಿಗೆ ಕಷ್ಟವಾಗಬಹುದು. ಸದ್ಯಕ್ಕೆ ಅಧಿಕಾರ ಇದ್ದಿದ್ದರಿಂದ ಅವರು ಸುಮ್ಮನಿದ್ದಾರೆ.

- Advertisement -

ಮುಂದೆಯೂ ಏನಾದರೂ ಹೆಚ್ಚು ಕಡಿಮೆ ಆಗಬಾರದು ಎಂಬ ದೂರಾಲೋಚನೆಯಿಂದ ತಮಗೆ ಬೇಕಾದವರಿಗೇ ಟಿಕೆಟ್ ಕೊಡಿಸುವ ಹಠ ಹಿಡಿದು ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ ರಮೇಶ ಜಾರಕಿಹೊಳಿ ಎಂಬ ಅಭಿಪ್ರಾಯ ಜನಜನಿತವಾಗಿದೆ. ನಾಳೆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೂ ಇವರಿಂದ ನೆಮ್ಮದಿ ಮಾತ್ರ ಇರಲಾರದು ಎಂಬುದು ಒಂದು ಭವಿಷ್ಯದ ನುಡಿ  ಆದರೂ… ಸವದಿಯವರು ಸ್ವಲ್ಪ ಸಹನೆಯಿಂದ ಇರಬೇಕಿತ್ತು. ಟಿಕೆಟ್ ಸಿಗದ ಒಂದೇ ಕಾರಣಕ್ಕೆ ತಾವು ಕಟುವಾಗಿ ಟೀಕಿಸುತ್ತ ಬಂದ, ತಮ್ಮನ್ನೇ ಕಟುವಾಗಿ ಹೀಯಾಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಅವರು ಅನೈತಿಕ ರಾಜಕಾರಣದ ಪಥ ತುಳಿದಿದ್ದಾರೆ ಎನ್ನಬಹುದು. 

ಇದೇ ರೀತಿಯ ಅಭಿಪ್ರಾಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ವಿಷಯದಲ್ಲೂ ವ್ಯಕ್ತವಾಗುತ್ತದೆ. ಶೆಟ್ಟರ ಅವರು ೪೦ ವರ್ಷಗಳಿಂದ ಬಿಜೆಪಿಯಲ್ಲಿ ಇದ್ದವರು. ಅಂಥವರಿಗೆ ಪಕ್ಷದ ಒಂದೇ ಒಂದು ನಿರ್ಧಾರದಿಂದ ಇಡೀ ಪಕ್ಷವೇ ವಿರೋಧಿಯಾಗುವುದು ವಿಪರ್ಯಾಸಕರ. ಇದು ನೈತಿಕ ರಾಜಕಾರಣದ ಲಕ್ಷಣವಲ್ಲ. ಅಭಿವೃದ್ಧಿ ಅಥವಾ ಜನ ಸೇವೆ ಮಾಡಬೇಕೆನ್ನುವವರು ಇದೇ ಪಕ್ಷ ಬೇಕು, ಅಧಿಕಾರವೇ ಬೇಕು ಎಂದು ಹಠ ಹಿಡಿಯುವುದು ಗೋಸುಂಬೆತನ ಎನ್ನಿಸುತ್ತದೆ. ಬಿಜೆಪಿ ಎಂಬ ಪಕ್ಷಕ್ಕೆ ಇದು ಶೋಭೆ ತರುವುದಿಲ್ಲ. 

ಇವರಂತೆಯೇ ಟಿಕೆಟ್ ಸಿಗದವರು ವಿರೋಧಿ ಪಕ್ಷ ಕಾಂಗ್ರೆಸ್ ಗೆ ಸೇರಿರಬಹುದು. ಅವರ್ಯಾರೂ ಜನಸೇವಕರಲ್ಲ.  ಕೇವಲ ಅಧಿಕಾರದಾಹಿಗಳು. ತಾವು ಲಿಂಗಾಯತರು, ಒಕ್ಕಲಿಗರು, ಹಾಲುಮತದವರು… ಎಂದೆಲ್ಲ ಜಾತಿ ಧರ್ಮಕ್ಕೆ ಸೀಮಿತವಾಗಿ ಮಾತನಾಡುತ್ತ ಸೀಮಿತ ರಾಜಕಾರಣ ಮಾಡುವವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎನ್ನುವ ಮೋದಿಯವರ ದೃಷ್ಟಿಕೋನದ ರಾಜಕಾರಣಕ್ಕೆ ಇವರು ಒಗ್ಗುವುದಿಲ್ಲ.

- Advertisement -

ಇವರು ಕಾಂಗ್ರೆಸ್ ಪಕ್ಷವನ್ನೇನೋ ಸೇರಿದ್ದಾರೆ ಆದರೆ ಆ ಕಾಂಗ್ರೆಸ್ ಪಕ್ಷದ ಹಣೆಬರಹವೇನು? ೨೦೧೮ ರಲ್ಲಿ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಿದ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರಿಗೇ ಟಿಕೆಟ್ ನೀಡಿಲ್ಲ! ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ದುಷ್ಕರ್ಮಿಗಳು ಅಖಂಡ ಅವರ ಮನೆಗೆ ಬೆಂಕಿ ಹಚ್ಚಿದಾಗ ಒಂದು ಖಂಡನಾ ನುಡಿಯನ್ನು ಕೂಡ ಮಾತನಾಡಲಾರದಷ್ಟು ಒಂದು ಕೋಮಿಗೇ ಸರೆಂಡರ್ ಆದ ಪಕ್ಷವನ್ನು ಇವರು ಸೇರಿಕೊಂಡಿದ್ದಾರೆ ! ಇನ್ನು ಇವರು ವಲಸೆಗಾರರಾದರೆ ಇವರಿಗೆ ಆ ಪಕ್ಷದಿಂದ ಭವಿಷ್ಯದಲ್ಲಿ ಯಾವ ರೀತಿಯ ಉಪಚಾರ ಸಿಗಬಹುದು ಎಂಬುದನ್ನು ಊಹಿಸಬಹುದು.

ಏನೇ ಆಗಲಿ ಈ ಸಲದ ಚುನಾವಣೆ ಕೆಲವು ರಾಜಕಾರಣಿಗಳ ನಿಜವಾದ ಗೋಸುಂಬೆತನವನ್ನು ಬಯಲು ಮಾಡಿದೆಯೆನ್ನಬಹುದು. ಇಲ್ಲಿ ಪಕ್ಷಾಂತರವೆನ್ನುವುದು ಶೌಚಾಲಯಕ್ಕೆ ಹೋಗಿ ಬಂದಷ್ಟು ಸುಲಭವಾಗಿದೆ. ಹಿಂದೆ ದಿ. ರಾಜೀವ ಗಾಂಧಿಯವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು ಅದರ ಗತಿಯೇನಾಯಿತು ಎಂಬುದು ಕೂಡ ಗೊತ್ತಾಗದಷ್ಟು ಪ್ರಮಾಣದಲ್ಲಿ ಈ ಪಕ್ಷಾಂತರವೆಂಬ ಹೊಗೆ ಹರಡಿಕೊಂಡಿದೆ.

ಟಿಕೆಟ್ ಸಿಗಲಿಲ್ಲವೆಂದು ಒಬ್ಬ ನಾಚಿಕೆಯಿಲ್ಲದೆ ಕಣ್ಣೀರು ಹಾಕಿದರೆ, ಇನ್ನೊಬ್ಬ ತನ್ನನ್ನು ಬೆಳಸಿದ ಪಕ್ಷವನ್ನೇ ಬಯ್ಯತೊಡಗುತ್ತಾನೆ, ಮತ್ತೊಬ್ಬ ಮುನಿಸಿಕೊಂಡು ಕಾರ್ಯಕರ್ತರ ಮುಖಾಂತರ ಬೆಂಕಿ ಹಚ್ಚಿಸುತ್ತಾನೆ, ಮಗದೊಬ್ಬ ತನ್ನ ಕುಟುಂಬದ ಚಿಂತೆ ಮಾಡದೇ ವಿಷ ಕುಡಿಯಲು ಹೋಗುತ್ತಾನೆ…

ರಾಜಕಾರಣವೆಂಬ ಭ್ರಷ್ಟಾಚಾರದ ಪಾಶದ ಬಗ್ಗೆ ಇಷ್ಟೊಂದು ಮೋಹ…? ತನ್ನನ್ನೇ ನೈತಿಕವಾಗಿ ಹಾಳು ಮಾಡಿಕೊಳ್ಳುವಷ್ಟು?


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group