ಈ ಶಾಲೆ ಆರಂಭಗೊಂಡಿದ್ದು ೧೯೪೫ ರಲ್ಲಿ. ಇರುವ ಎಂಟು ಶಾಲಾ ಕೊಠಡಿಗಳ ಪೈಕಿ ನಾಲ್ಕು ಕೊಠಡಿಗಳು ಕುಸಿಯುವ ಹಂತದಲ್ಲಿವೆ. ಆ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಉಳಿದ ಎಂಟು ಕೊಠಡಿಗಳೂ ಸಹ ಹೆಂಚಿನ ಮೇಲುಹೊದಿಕೆ ಹೊಂದಿದ್ದು, ಹೆಂಚುಗಳು ಜರುಗಿವೆ.
ಮೇಲ್ಚಾವಣಿಗೆ ಹಾಕಿರುವ ಮರದ ಪಟ್ಟಿಗಳು ಪೊಳ್ಳಾಗಿವೆ.ಶಾಲಾ ಕೊಠಡಿಗಳೊಳಗೆ ಶೀತವೇರಿದೆ. ಇಂತಹ ದುಸ್ಥಿತಿಯಲ್ಲಿ ಚಿಕ್ಕ ಮಕ್ಕಳು ಪಾಠ ಕೇಳಬೇಕಿದೆ. ಇದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕರುಣಾಜನಕ ಸ್ಥಿತಿ ಎಂದು ಹಿರಿಯ ಸಾಹಿತಿ , ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರಿಗೆ ದೂರು ನೀಡಿದ್ದು, ಸದರಿ ಶಾಲೆಯ ತುರ್ತುದುರಸ್ಥಿಗೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ ಸುಮಾರು 190 ಮಕ್ಕಳಿದ್ದಾರೆ. ಎಂಟು ಮಂದಿ ಶಿಕ್ಷಕರಿದ್ದಾರೆ. ಇದೇ ಶಾಲೆಯ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಯೂ ಇದೆ. ಅಲ್ಲಿ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಮ್ಮ ಪತ್ರದಲ್ಲಿ ವಿವರಿಸಿರುವ ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರತಿದಿನವೂ ಆತಂಕದಲ್ಲೇ ಪಾಠ ಕೇಳುವ ಪರಿಸ್ಥಿತಿ ಇದೆ. ಶಾಲೆಯ ಶೌಚಾಲಯಗಳು ಅತ್ಯಂತ ದುಸ್ಥಿತಿಯಲ್ಲಿವೆ. ಬಾಲಕಿಯರ ಶೌಚಾಲಯ ಗಳು ಬಳಸಲು ಅನರ್ಹ ವಾಗಿದ್ದು, ಇವುಗಳಿಗೆ ಬೀಗ ಜಡಿಯಲಾಗಿದೆ ಎಂದು ಭಾವಚಿತ್ರಗಳ ಸಹಿತ ವಿವರಿಸಿದ್ದಾರೆ.
ಇನ್ನು ಶಾಲೆಯ ದಾಸೋಹ ಭವನದ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಇದೀಗ ಇದಕ್ಕಾಗಿ ಶಾಲಾ ಕೊಠಡಿಯನ್ನು ಬಳಸಲಾಗುತ್ತಿದೆ.ಕುಡಿಯುವ ನೀರಿನ ವ್ಯವಸ್ಥೆ ಇದೆ.ಆದರೆ ಅದನ್ನು ಶುದ್ದೀಕರಿಸುವ ಯಾವುದೇ ವ್ಯವಸ್ಥೆ ಇಲ್ಲ.
ಈ ಪ್ರಾಥಮಿಕ ಶಾಲೆಗೆ ಸುತ್ತಲಿನ ಗ್ರಾಮಗಳಾದ ಉಂಡುವಾಡಿ,ಹೆಜ್ಜೊಡ್ಲು , ಅತ್ತಿಗುಪ್ಪೆ, ಲಕ್ಕನ ಕೊಪ್ಪಲು,ಹುಲ್ಯಾಳು, ಮಾಚಬಾಯನಹಳ್ಳಿ, ಹಾಗೂ ಮುಳ್ಳೂರು ಗ್ರಾಮಗಳೂ ಸೇರಿ ಏಳು ಗ್ರಾಮಗಳ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಹಿಂದುಳಿದ ವರ್ಗಗಳ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಈ ಶಾಲೆಯ ವಿಶಿಷ್ಟ.
ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳು ಅತ್ಯಂತ ದುರವಸ್ಥೆಗೆ ಒಲಕಗಾಗಿವೆ. ಯಾವುದೇ ಗಳಿಗೆಯಲ್ಲಿ ಶಾಲಾ ಕೊಠಡಿಗಳ ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದೆ.ಸದರಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿ , ಕೂಡಲೇ ಕ್ರಮಕೈಗೊಳ್ಳುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ.ಭೇರ್ಯ ರಾಮಕುಮಾರ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.