ತೀರ್ಥಹಳ್ಳಿಯೆಂಬ ಮಲೆನಾಡಿಗೆ ಬಂದ ಮೇಲಷ್ಟೇ ನಾನು ಆರೋಗ್ಯವಾಗಿದ್ದಾಗಲೂ ಕಾಫೀ ಬ್ರೆಡ್ಡು ತಿಂದದ್ದು. ನಾವೆಲ್ಲ ಖಾಯಿಲೆಯಿದ್ದಾಗ ಮಾತ್ರ ಕಾಫೀ ಬ್ರೆಡ್ಡು ಸೇವಿಸಿದ್ದು. ಈಗಲೂ ಕಾಫೀ ಬ್ರೆಡ್ಡು ಎದುರಾದರೆ ‘ಯಾಕೆ ಹುಷಾರಿಲ್ವಾ!?’ ಎಂದು ಕೇಳಬೇಕೆನಿಸುತ್ತದೆ. ಕಾಫೀಯೆಲ್ಲ ಖಾಯಿಲೆ ಕಸಾಲೆಯಿದ್ದಾಗ ಕುಡಿದು ಅಭ್ಯಾಸ. ಸಾಮಾನ್ಯ ಜೀವನದಲ್ಲಿ ನಮಗೆ ಕಾಫೀ ಆಗಿಬರುತ್ತಿರಲಿಲ್ಲ. ಜೊತೆಗೆ ಕಾಫೀ ಮಾಡಲು ಪರಿಣಿತಿ ಬೇಕು. ಆದರೆ ಚಹಾ ಹಾಗಲ್ಲ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹಾಲು ಸಕ್ಕರೆ ಟೀಪುಡಿ ಹಾಕಿ ಕೆನೆಗಟ್ಟದಂತೆ ಕದಡುತ್ತಿದ್ದರಾಯಿತು. ಬಾಲ್ಯದಲ್ಲಿ ಮಾತ್ರ ಹಾಲಿಗೆ ಕೊರತೆಯಿದ್ದ ಕಾರಣ ನೀರು ಸಕ್ಕರೆ ಚಾಪುಡಿಯನ್ನು ಚೆನ್ನಾಗಿ ಕುದಿಸಿ ಕೊನೆಯಲ್ಲಿ ಹೆಪ್ಪಾಕುವಂತಿಷ್ಟು ಹಾಲು ಹಾಕಿದರೆ ಅದೇ ಚಹಾ. ಆಗೆಲ್ಲ ಗುಣಮಟ್ಟದ ಚಾಪುಡಿಗಳೇ ಇರಲಿಲ್ಲ. ಇದ್ದರೂ ನಮ್ಮದು ಚಿಲ್ಲರೆ ಮತ್ತು ಚೌಕಾಸಿ ವ್ಯಾಪಾರವಾದ್ದರಿಂದ ನೀರಿಗೆ ಹಾಕಿದ ಕೂಡಲೆ ಬಣ್ಣ ಬಿಡುತ್ತಿದ್ದ ಟೀಪುಡಿಗಳದ್ದೇ ರಾಜ್ಯಭಾರ.
ಕಾಫಿಯು ತೆಳುವಾಗಿ ನೀರು ನೀರಂತಿದ್ದು ತನ್ನ ಪರಿಮಳ ಸೂಸುತ್ತಿದ್ದರೆ ಚೆನ್ನ….
ಚಹಾ ಮಾತ್ರ ಮಂದಗಿದ್ದರೆ ಚೆನ್ನ !
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕ್ರೈಸ್ತರ ಪರಿಚಯದಿಂದಾಗಿ ಮಲೆನಾಡಿಗೆ ಕಾಫೀ ಆಗಮನವಾದ ವಿಚಾರ ಬರುತ್ತದೆ. ಕರಿಪಾದ್ರಿ ಜೀವರತ್ನಯ್ಯನ ಮಗಳ ಮೂಲಕ ಬೆಟ್ಟಳ್ಳಿ ದೇವಯ್ಯ ಕಾಫೀ ಮಾಡುವುದನ್ನು ಕಲಿತು… ತನ್ನ ಮನೆಯ ಮಡದಿಗೂ ಅದನ್ನು ತಯಾರಿಸುವ ಪರಿಕ್ರಮ ಹೇಳುತ್ತಾನೆ. ನಂತರ ಅದರಲ್ಲಿ ಪಳಗುತ್ತಾರೆ ಕೂಡ. ಆದರೆ ಹೇಗೆ ಮಾಡಬೇಕೆಂಬ ವಿವರಗಳಿಲ್ಲ. ಅದರಲ್ಲೆ ಮೇಗರವಳ್ಳಿಯ ಶೆಟ್ಟರ ಅಂತಕ್ಕನ (ಓಟ್ಲುಮನೆ) ಮನೆಯವರು ಕಾಫಿಯನ್ನು ಮೆಚ್ಚಿ ಅದರಲ್ಲಿ ಪಳಗಿರುತ್ತಾರೆ.
ಕಳೆದುಹೋಗಿದ್ದ ತನ್ನ ಮಗನ ಅನ್ವೇಷಣೆಗೆ ಕಾದಂಬರಿಯಲ್ಲೇ ಹಿರೀಕನಾದ ಹಳೇಮನೆ ಸುಬ್ಬಣ್ಣಹೆಗ್ಗಡೆ ಸಾಹಸ ಮಾಡಿ ಹುಲಿಕಲ್ ನೆತ್ತಿಯನ್ನೇ ಹತ್ತಿಳಿದು ಅಸ್ವಸ್ಥನಾಗಿ ಇದೇ ಅಂತಕ್ಕನ ಮನೆಗೆ ವಿಶ್ರಾಂತಿಗಾಗಿ ಬಂದಿದ್ದಾಗ ಕಾಫೀಯನ್ನು ಬಾಯಿಗಿಟ್ಟು ಅದರ ಕಮಟಿಗೆ ಸಿಡುಕಿ ಮತ್ತದೇ ತನ್ನ ಪ್ರಿಯ ಕುನ್ನೇರಲೆ ಕುಡಿ ಕಷಾಯವನ್ನೇ ಸವಿಯುತ್ತಾನೆ. ಈತನೇ ಮುಂದೆ ವಾಪಾಸ್ಸಾಗುವ ವೇಳೆ ಬೆಟ್ಟಳ್ಳಿ ಮನೆಯಲ್ಲಿ ಮತ್ತದೇ ಕಾಫಿಯನ್ನು ಮೆಚ್ಚಿ? ಕುಡಿದುದಾಗಿ ವರ್ಣಿತವಾಗಿದೆ.
ತೀರ್ಥಹಳ್ಳಿಗೆ ಬಂದು ಹದಿನೇಳು ವರ್ಷಗಳಾದರೂ ಯಾರೊಬ್ಬರ ಮನೆಯಲ್ಲಿ ಕುಡಿದ ಕಾಫೀಯಾಗಲಿ ಚಹಾವಾಗಲಿ ನನಗೆ ಇವತ್ತಿಗೂ ಇಷ್ಟವಾಗಿಲ್ಲ. ಇವರಿಗೆ ಬಿಸಿಬಿಸಿಯಾಗಿಳಿಸಿ ಕುಡಿದೇ ಗೊತ್ತಿಲ್ಲವಾ ಅಂತ. ಒಂದೋ ಸರಿಯಾಗಿ ಕುದಿಸುವುದಿಲ್ಲ, ಕುದಿಸಿದರೂ ಅದು ತಣಿದ ಮೇಲೆ ಕೊಡುವುದು. ಕೆಲವುಕಡೆಯಂತೂ ಕುಡಿದ ಕಾಫೀ ಕೆದರುಗಿಣ್ಣದಂತೆಯೋ ಕಲಗಚ್ಚಿನಂತೆಲ್ಲ ಅನುಭವವಾಗಿದೆ. ಸುಮ್ಮನೆ ಕಾಪಿ…ಕಾಪಿ…. ಚಾ….ಚಾ….ಎಂದು ಉದ್ದುದ್ದನೆಯ ಲೋಟಗಳಲ್ಲಿ ಚಪ್ಪರಿಸುತ್ತಾರೆ. ಚೆನ್ನಾಗಿ ಕಾಫೀ ಚಹಾ ಮಾಡುವವರನ್ನು ನಾನು ಭೇಟಿಯಾಗದೆಯೂ ಇರಬಹುದು. ಆದರೆ ಕಷಾಯ ಮತ್ತೊಂದನ್ನು ಸೊಗಸಾಗಿ ಮಾಡುತ್ತಾರೆ. ಹೋಟೆಲುಗಳಲ್ಲಲ್ಲ ಮನೆಗಳಲ್ಲಿ. ಹಾಗೆ ನೋಡಿದರೆ ಚಹಾ ಕಾಫೀಗಳಿಗೆ ರಸ್ತೆ ಬದಿಯ ಫಿಲ್ಟರ್ ತಾಣಗಳೇ ಉತ್ತಮ. ಚಹಾಕ್ಕೆ ಈ ಮಸಾಲೆಗಳನ್ನೆಲ್ಲ(ಟೀ ಪುಡಿ ಬದಲಾಗಿ ಬಳಸುವ ಮೆಂತ್ಯೆ/ಕೊತ್ತಂಬರಿ ಹೊರತುಪಡಿಸಿ) ಹಾಕಿ ಕೆಡಿಸುವುದು ನನಗಿಷ್ಟವಾಗುವುದಿಲ್ಲ. ಚಹಾವನ್ನು ಚಹಾದ ತರಹವೇ ಸವಿಯಬೇಕು. ಇಲ್ಲವಾದರೆ ಕಷಾಯವನ್ನೇ ಕುಡಿಯಬಹುದಲ್ಲ…
ಇನ್ನು ಚಹಾದ ವಿಚಾರಕ್ಕೆ ಬರುವುದಾದರೆ ಅವರೇಕಾಯಿ ಸೊಡರಿನ ಚಳಿಗಾಲದಲ್ಲಿ ಮಟ್ಟಿ ಹೊಲಕ್ಕೆ ಹೋದಾಗಲೆಲ್ಲ ನೆಲದಾವರೆ(ತಾವರೆ) ಕುಡಿಯನ್ನು ಜಿಗುಟಿಕೊಂಡು, ಕೆರೆಯ ತಿಳಿ ನೀರನ್ನು ತಂದು ಅವೇ ಮೂರುಮೂಲೆ ಕಲ್ಲಿಗೆ ಮಸಿ ಹಿಡಿದ ಪಾತ್ರೆ ಇಟ್ಟು ಕಾಯಿಸಿ ಕುದಿಸಿ ಬೆಲ್ಲ ಬೆರೆಸಿ ಕುಡಿದರೆ ನಮಗದು ಆ ಚಳಿಗೆ ಪಂಚಾಮೃತವಾಗಿತ್ತು. ಹೀಗೆ ನಮ್ಮ ಪ್ರಯೋಗಶೀಲ ಮನಸ್ಸು ಚಹಾದಲ್ಲೇ ಅದ್ಭುತ ರುಚಿಗಳನ್ನು ಕಾರ್ಯರೂಪಕ್ಕೆ ತಂದು ರೋಮಾಂಚನಗೊಳಿಸಿತ್ತು. ಚಹಾಪುಡಿ ನಮಗೆ ದುಬಾರಿಯ ವಸ್ತುವಾದ್ದರಿಂದ ಅದರ ಬದಲಾಗಿ ತಾವರೆಯ ಕುಡಿಯೆಲೆ ಸಿಗದಿದ್ದಾಗ ಕೊತ್ತಂಬರಿ ಕಾಳು ಅಥವಾ ಮೆಂತೆಕಾಳನ್ನು ಬಳಸಿ ಟೀ ಸವಿದ್ದದಿದೆ. ನನ್ನ ಹಳೆ ನೆನಪುಗಳಿಗಾಗಿ ಇಂದಿಗೂ ಆಗಾಗ ಚಹಾಪುಡಿ ಬದಲಾಗಿ ಮೆಂತೆಕಾಳು ಅಥವಾ ಕೊತ್ತಂಬರಿ/ದನಿಯಾ ಕಾಳು ಬಳಸಿ ಟೀ ಮಾಡಿಕೊಂಡು ಕುಡಿದ್ದದಿದೆ.
ಇದರ ನೆಪದಲ್ಲಿ ನಮ್ಮದಿಷ್ಟು…
ಬಾಲ್ಯದಲ್ಲಿ ಹಾಲೆಂಬುದು ನಮಗೆ ಬಂಗಾರವೇ ಆಗಿತ್ತು. ಹಬ್ಬ ಹುಣ್ಣಿಮೆಗಷ್ಟೆ ದನವಿರುವವರ ಮನೆಯಿಂದ ಹಾಲು ತರುತಿದ್ದೆವು. ದೇವರ ನೈವೇದ್ಯಕ್ಕೆ, ನಮ್ಮ ಊಟದಲ್ಲಿ ಶಾವಿಗೆಯಿದ್ದರೆ ದನದ ಹಾಲು ಅವಶ್ಯವಾಗಿ ಬೇಕಿತ್ತು. ಹೋಳಿಗೆಗೆ ಇರುವ ಬಾಳೆಹಣ್ಣನ್ನೇ ಕಿವುಚಿ, ಕಾಯಿಯಿದ್ದರೆ ಕಾಯಿಹಾಲನ್ನೇ ಸೀಕರಣೆಯಾಗಿಸಿಕೊಂಡು ಸವಿಯುತಿದ್ದೆವು. ಉಳಿದಂತೆ ಪ್ರತೀದಿನ ನಮಗೆ ಹಾಲು ಬೇಕಾಗುತಿದ್ದದ್ದು ಚಹಾ ಕಾಯಿಸಲಷ್ಟೆ. ನೀರಿಗೆ ಟೀಪುಡಿ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ಮೇಲೆರಡು ತೊಟ್ಟು ಹಾಲು ಹಾಕಿದರೆ ಅದೇ ನಮಗೆ ಅಮೃತ. ಹಾಲಿಲ್ಲದ ಕಾರಣ ಡಿಕಾಕ್ಷನ್ನನ್ನೇ ಕುಡಿದದ್ದಿದೆ. ಎಂಟಾಣೆ ರೂಪಾಯಿಗೆಲ್ಲ ದನದ ಹಾಲು ಸಿಗುವ ಕಾಲ ಹೋಗಿ ದುರ್ಭಿಕ್ಷ ದಿನಗಳು ಬಂದಾಗ ನಾವು ಬಳಸಿದ್ದು ಆಡಿನ ಹಾಲನ್ನೆ. ನಮ್ಮೂರಿನಲ್ಲಿ ಹಿಂಡು ಹಿಂಡು ಆಡುಗಳಿದ್ದವು. ಅಂಗಡಿ ಶಾಂತವ್ವರ ಮನೆಯ ಓತಗಳಂತು ಎತ್ತರಕ್ಕೆ ಹೆಸರುವಾಸಿಯಾಗಿದ್ದರೆ. ನಮ್ಮದೇ ಕೇರಿಯ ಕುರುಬರ ಮನೆಯ ಆಡುಗಳು ಹಲವರ ಮನೆಯನ್ನು ಆರ್ಥಿಕವಾಗಿ ಬೆಳಗಿದ್ದವು. ಜಾಲಿಕಾಯಿಯೆಂದರೆ ಇವಕ್ಕೆ ಎಲ್ಲಿಲ್ಲದ ಪ್ರೀತಿ. ಪ್ರತೀ ಮನೆಯ ಜಗಲಿಯಲ್ಲಿ ವೈವಿಧ್ಯಮಯ ಸೊಪ್ಪುಗಳನ್ನು ಜಗಲಿಯ ಜಂತಿಗೆ ನೇತು ಹಾಕಿದ್ದಾರೆಂದರೆ ಆ ಮನೆಯಲ್ಲಿ ಆಡು ಓತಗಳಿವೆಯೆಂದೇ ಅರ್ಥ. ನಮ್ಮ ಕುರುಬರ ಹತ್ತಾರು ಮನೆಯ ಆಡಿನ ಹಾಲು ಕುಡಿದು ಬೆಳೆದವರು ನಾವು. ಯಾವುದಾದರೂ ಆಡು ನಮ್ಮ ಹಿತ್ತಲಿಗೋ ಅಂಗಳಕ್ಕೋ ಬಂತೆಂದರೆ ಸಾಕು ನನ್ನ ತಂಗಿ ಅಥವಾ ನಮ್ಮವ್ವ ಓಡಿ ಹೋಗಿ ಅದರ ಹಿಂಗಾಲನ್ನು ಬಿರು ಬೀಸಾಗಿ ಹಿಡಿದು ಉದ್ದನೆಯ ಕಿರುಬೆರಳಿನಂಥ ಮೊಲೆಗಳುಳ್ಳ ಅದರ ಕೆಚ್ಚಲಿಗೆ ಪಟಪಟ ಬಡಿದು ಯಾವಾಗಲೋ ಸಿದ್ಧವಾಗಿಟ್ಟುಕೊಂಡ ಲೋಟವನ್ನು ತುಂಬಿಸಿಕೊಂಡು ಬಿಟ್ಟರೆ ಆ ದಿನ ನಮ್ಮ ಮನೆ ಸಮೃದ್ಧಿಯ ಕಡಲು. ದಿನವೂ ಕಟುವಾಗಿರುವ ಚಹಾ ಅಂದು ಮಂದವಾಗಿ ಗಂಟಲಿಗೆ ಹಿತವೆನಿಸುತಿತ್ತು. ಎಷ್ಟೋ ಬಾರಿ ಆಡಿನ ಹಾಲಿನಿಂದ ಮೊಸರು ಮಾಡಿದ್ದೂ ಉಂಟು.
ನಮ್ಮದೇ ಕೇರಿಯ ಮಣಚಿಕ್ಕಾಣ್ಣರ ಸಿದ್ದಜ್ಜಿ ಮನೆಯಲ್ಲಿ ಹತ್ತಾರು ಆಡುಗಳಿದ್ದವು. ನಮ್ಮ ಬಾಲ್ಯಜೀವನದ ಅರ್ಧದಷ್ಟು ಕಾಲ ನಮಗೆ ಹಾಲು ನೀಡಿದ ತಾಯಿ ಸಿದ್ದಜ್ಜಿ. ಎಂಟಾಣೆಗೆ ಶುರುವಾದ ವ್ಯವಹಾರ ಎರಡು ರೂಪಾಯಿಗೆ ಏರುವವರೆಗೂ ನಾವು ಸಿದ್ದಜ್ಜಿಯ ಬಳಿ ಹಾಲು ಪಡೆದಿದ್ದೆವು. ಎಷ್ಟೋ ಬಾರಿ ನಮ್ಮ ಲೋಟವನ್ನೇ ಹಿಡಿದು ಅದಾಗ ತಾನೇ ಎದುರಲ್ಲೇ ಕರೆದುಕೊಡುತಿದ್ದ ನೊರೆಹಾಲು ನಮ್ಮ ಪುಟ್ಟ ಕೈಗಳಿಗೆ ಹಿತವೆನಿಸುತಿತ್ತು. ಮನೆಗೆ ಯಾರಾದರೂ ನೆಂಟರು ಬಂದಾಗ ಆಡಿನ ಹಾಲಿನ ಚಹಾ ಅವರಿಗೆ ಇರಿಸುಮುರಿಸಾಗಬಹುದೆನಿಸಿ ದನ, ಎಮ್ಮೆಯ ಹಾಲಿಗೆ ಇಡೀ ಊರನ್ನೇ ತಿರುಗಾಡಿ ಕೊನೆಗೆ ಸಿಗದಿದ್ದಾಗ ಅವರಿಗೆ ತಿಳಿಯದಂತೆ ಆಡಿನ ಹಾಲಿನ ಚಹಾವನ್ನೇ ನೀಡಿದ್ದುಂಟು. ನಮಗಂತು ಆಡಿನ ಹಾಲಿನ ಚಹಾ ಬಹು ರುಚಿಕರವಾಗಿತ್ತು. ಸೋಮಿನಕೊಪ್ಪದ ಮಂಜು ದೊಡ್ಡವ್ವರ ಮಟ್ಟಿ ಹೊಲಕ್ಕೆ ಹೋದಾಗೊಮ್ಮೆ ಕಾಡು ಮೇಯಲು ಬಂದ ಆಡುಗಳ ಹಿಂಡಲ್ಲಿ ಒಂದು ಆಡನ್ನು ಹಿಡಿದು ಚೊಂಬಿನಷ್ಟು ಹಾಲನ್ನು ನಮ್ಮ ಗಿರಿಯಕ್ಕ ಕರೆದುಕೊಟ್ಟಾಗ ಯಾವ ಮುಜುಗರವೂ ಇಲ್ಲದೆ ಬೆಚ್ಚನೆಯ ನೊರೆಹಾಲನ್ನು ಒಂದೇ ಗುಟುಕಿಗೆ ಕುಡಿದಿದ್ದೆ. ಹೀಗೆ ಆಡೂ ಕೂಡ ನಮಗೆ ಗೋಮಾತೆಯಾಗಿತ್ತು.
ದನಗಳನ್ನು ಸಾಕಿಕೊಳ್ಳುವಷ್ಟು ಅನುಕೂಲವಿಲ್ಲದ್ದರಿಂದ ಕನಿಷ್ಟ ಆಡನ್ನಾದರೂ ಸಾಕಿಕೊಳ್ಳೋಣವೆಂದು ಅವ್ವ ಒಂದು ಆಡನ್ನು ಖರೀದಿಸಿದ್ದಳು. ಅದೆಷ್ಟು ಜತನದಿಂದ ಅದನ್ನು ಸಾಕಿದ್ದೆವೆಂದರೆ ನಮ್ಮ ಅತಿಯಾದ ನಾಜೂಕು ಅದಕ್ಕೇ ಮುಜುಗರವೆನಿಸಿತ್ತೆನಿಸುತ್ತದೆ. ನನಗೂ ನನ್ನ ತಂಗಿಗೂ ಅದು ಬೇಗ ಮರಿ ಹಾಕಲೆಂಬುದೇ ಹೆಬ್ಬಯಕೆ. ಹೀಗೆ ಪ್ರೀತಿಯಿಂದ ಸಾಕಿದ ಆಡು ಆರಂಭಿಕ ಗರ್ಭಿಣಿಯಿದ್ದ ಸಮಯ ಕತ್ತಲಲ್ಲಿ ಮನೆಯ ಕಟಾಂಜನದಲ್ಲಿಟ್ಟಿದ್ದ ಕೆಟ್ಟಗಾಳನ್ನು ತಿಂದು ಎಳಸು ಭ್ರೂಣವನ್ನೇ ಹೊರಹಾಕಿ ನಿರಾಸೆ ಮೂಡಿಸಿತ್ತು. ಅದೂ ಸಾಯುವುದೆಂಬ ಮಾದರ ದುಂಡ್ಯಣ್ಣನ ಮಾಹಿತಿ ಮೇರೆಗೆ ಸಿಕ್ಕ ಕನಿಷ್ಟ ಬೆಲೆಗೆ ಮಾರಿ ಬಿಟ್ಟೆವು. ಮತ್ತೆ ಅವರಿವರ ಮನೆಯಿಂದ ಹಾಲು ತರುವುದೇ ನಮ್ಮ ಮುಂಜಾನೆಯ ನಿತ್ಯ ಕಾಯಕವಾಯಿತು. ಇದನ್ನೆಲ್ಲ ಕೇಳಿ ನೋಡಿ ಮನಕರಗಿದ್ದ ನಮ್ಮ ಭೈರನಹಳ್ಳಿ ದೊಡ್ಡಮ್ಮನಿಂದ ಬಳುವಳಿಯಾಗಿ ಬರಲು ಜಾನಕಿ ಕಾದಿದ್ದಳು! ಆಗದು ವಿನೋದ ದೊಡ್ಡಮ್ಮನ ಮನೆಯಲ್ಲಿ ಸೊಂಪಾಗಿತ್ತು!!
ಬರೆಯುವೆ….
~ ಅಣ್ಣಪ್ಪ ಅರಬಗಟ್ಟೆ