ಬಸವಣ್ಣ ನೀ ಬಿಟ್ಟ…
_____________________
ಬಸವಣ್ಣ ನೀ ಕಳಚಿಟ್ಟ
ಕಿರೀಟವನು ಇವರು
ಧರಿಸಿ ಕುಳಿತು ಕುಪ್ಪಳ್ಳಿಸುತ್ತಿದ್ದಾರೆ
ನೀ ತೊರೆದ ಅರಮನೆಯ
ಮಠವ ಮಾಡಿ
ಸಕಲ ಭೋಗಾದಿಯಲಿ
ಮೆರೆಯುತಿಹರು.
ಬಸವಣ್ಣ ನೀ ಬಿಟ್ಟ
ಸಿಂಹಾಸನವನ್ನು
ಹತ್ತಿ ಇಳಿಯದೆ
ಕುಳಿತಿಹರು
ಅಕ್ಕ ಮಾತೆ ಸ್ವಾಮಿ ಶರಣರು
ಕಲ್ಲು ಸಕ್ಕರೆ ಕೊಟ್ಟು.
ಶೋಷಣೆ ವಸೂಲಿ ಕಾಯಕವಾಗಿದೆ
ಜಂಗಮ ಜಾತಿಯಾಗಿದೆ
ಜಾತ್ರೆ ತೇರು ರಥ ಉತ್ಸವ
ಕಾವಿ ಲಾಂಛನಧಾರಿಗಳ ಅಬ್ಬರ
ಇಲ್ಲ ಈಗ ಶಾಂತಿ ಸಮತೆ
ಬಸವಣ್ಣ ನಿನ್ನ ಜಗವೇ
ಹೊತ್ತು ನಡೆದಿದೆ.
ನಿನ್ನನರಿಯದ ದುರುಳರ
ಸಂಗವ ಮಾಡಿ
ನಾನು ಕೆಟ್ಟೆನು
ಬಸವ ಪ್ರಿಯ ಶಶಿಕಾಂತ
————————————-
ಗೆದ್ದು ನಿಲ್ಲುವ ರೀತಿಯು
___________________
ಮರೆತು ನಿನ್ನಯ
ನಿನ್ನೆಯ ನೋವು
ಬರುವ ನಾಳೆಯ
ನಗೆ ಸಿಹಿ ಘಳಿಗೆ
ಗಟ್ಟಿ ಗೊಳ್ಳು ಇಂದು
ನಿನ್ನ ಬಾಳಿಗೆ
ಏರು ಪೇರು ದಿಬ್ಬ ದಿಣ್ಣೆ
ಕಲ್ಲು ಮುಳ್ಳಿನ
ನಿನ್ನ ಪಯಣವು
ನಂಜು ನುಂಗಿ
ನಗೆಯ ಬೀರು
ಸ್ನೇಹ ಒಲವು ತಾಯಿ ಬೇರು
ಕಳೆದು ಕತ್ತಲೆ
ಬೆಳೆಗು ಬೆಳೆಯಲಿ
ಶಾಂತಿ ಸಮರಸ ಪ್ರೀತಿಯು
ಎದ್ದು ನಿಂತು ಹೆಜ್ಜೆ ಹಾಕು
ದಿಟ್ಟ ದೂರದ ದಾರಿಯು
ಗೆದ್ದು ನಿಲ್ಲುವ ರೀತಿಯು
ಡಾ ಶಶಿಕಾಂತ ಪಟ್ಟಣ, ರಾಮದುರ್ಗ