ಒಪ್ಪಿಸಿಕೊಳ್ಳಿ.. ಇಲ್ಲಿವೆ ನಾಲ್ಕು ಮಿನಿಗವಿತೆಗಳು. ಮೊಗವರಳಿಸುತ ಮುದಗೊಳಿಸುವ ನಗೆಗವಿತೆಗಳು. ಮದುವೆ ದಿನದ ಮೋಜು ಗೋಜಿನ ಈ ಹಾಸ್ಯದ ಹಣತೆಗಳು, ನಗೆಯುಕ್ಕಿಸುವ ಭಾವಪ್ರಣತೆಗಳು ನಿಮ್ಮ ಹಬ್ಬದ ಹರ್ಷವನ್ನು ಇಮ್ಮಡಿಗೊಳಿಸಲಿ ಎಂದು ಆಶಿಸುತ್ತಾ.
–ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮುಹೂರ್ತ…!
ಮಾಂಗಲ್ಯಧಾರಣೆ ಘಳಿಗೆಯಲ್ಲಷ್ಟೆ
ನಸುನಾಚಿ ನಮ್ರ ವಿನಮ್ರತೆಯಲಿ
ಹುಡುಗಿ ತಲೆ ತಗ್ಗಿಸಿ ಬಾಗಿದ್ದು
ಮತ್ತೆಂದು ತಲೆ ಬಗ್ಗಿಸಲೇ ಇಲ್ಲ.!
ತಾಳಿಕಟ್ಟುವ ಮುಹೂರ್ತದಲ್ಲಷ್ಟೇ
ಮೀಸೆತಿರುವಿ ಗತ್ತು ಗೈರತ್ತಿನಲಿ
ಹುಡುಗ ತಲೆ ಎತ್ತಿ ಬೀಗಿದ್ದು..
ಮುಂದಿನ್ನೆಂದು ತಲೆಯೆತ್ತಲೇ ಇಲ್ಲ.!
ಆಚಾರ-ವಿಚಾರ…!
ಪುರೋಹಿತರನು ಮದುಮಗ ಕೇಳಿದ
“ಸಪ್ತಪದಿ ಅಂದರೆ ಕೇವಲ ಏಳೇ
ಏಳು ಹೆಜ್ಜೆಗಳ ಸಂಪ್ರದಾಯವೇಕೆ.?
ಇನ್ನೊಂದಿಷ್ಟು ಹೆಜ್ಜೆಗಳು ಮುಂದೆ
ನಡೆಯಲು ಬಿಡುವುದಿಲ್ಲ ಏಕೆ.?”
ಪುರೋಹಿತರು ನಕ್ಕು ನುಡಿದರು..
“ಮತ್ತಷ್ಟು ಹೆಜ್ಜೆ ಜೊತೆಜೊತೆಯಾಗಿ
ನಡೆಯಲು ಬಿಟ್ಟರೆ ನಿಮ್ಮಿಬ್ಬರಾ
ಹಿಡಿಯಲು ಕಷ್ಟಾ ಎಂಬ ಅನಿಸಿಕೆ
ಮುಂದಿನ ಶಾಸ್ತ್ರಗಳನೆಲ್ಲ ಮರೆತು
ನೀವಿಬ್ಬರು ಛಂಗನೆ ಮಧುಚಂದ್ರಕ್ಕೆ
ಹಾರಿಬಿಡುವಿರೆಂಬ ಅಂಜಿಕೆ..!”
ಪೂರ್ವ ತಯಾರಿ…!
ಮಾಂಗಲ್ಯಧಾರಣೆಯ ನಂತರದ
ನಾಗವಲ್ಲಿ ಹೋಮದ ಹೊಗೆಗೆ
ಕಣ್ಣು ಉಜ್ಜುತ್ತಾ ವರ ನುಡಿದ..
“ಪುರೋಹಿತರೇ ತಾಳಲಾಗುತ್ತಿಲ್ಲ
ಈ ಹೋಮಕುಂಡದ ಹೊಗೆ ಧಗೆ
ಕಂಗಳಲಿ ಚಿಮ್ಮುತಿದೆ ಕಣ್ಣೀರಬುಗ್ಗೆ
ಎದೆಯಲ್ಲೂ ಉಸಿರು ಕಟ್ಟಿದ ಹಾಗೆ”
ಪುರೋಹಿತರು ಸಮಾಧಾನಿಸುತ್ತಾ
ವರನ ಕೈಗಳ ಹಿಡಿದು ಹೇಳಿದರು..
“ಇದು ನಿನ್ನನು ನಾಳಿನ ಬದುಕಿಗೆ
ತಯಾರಿ ಮಾಡುವ ರಿವಾಜಿನ ಬಗೆ
ತಾಳಿಕಟ್ಟಿದ ಮೇಲೆ ಇವುಗಳನೆಲ್ಲ
ತಾಳಿಕೊಳ್ಳಲೇ ಬೇಕು ಅಡಿಗಡಿಗೆ
ಹೆಂಡತಿಯ ಸಿಡಿಮಿಡಿಗಳ ಹೊಗೆ
ಹಠ ಮಾತು ಮುನಿಸುಗಳ ಧಗೆ
ಇನ್ನು ನಿನ್ನ ಮುಂದಿನ ಬದುಕು
ಭವಿಷ್ಯಗಳಿರುವುದೇ ನಿತ್ಯ ಹೀಗೆ.!”
ಶಾಸ್ತ್ರಾರ್ಥ…!
ನವವಧುವನ್ನು ಗಂಡನ
ಮನೆತುಂಬಿಸಿಕೊಳ್ಳುವಾಗ
ಹೊಸ್ತಿಲಲಿ ಸೇರು ಇಟ್ಟು
ಒದೆಸುವ ಶಾಸ್ತ್ರವೇಕೆ..??
ಗಂಡನಾ ಮನೆಯವರಿಗೆ
ನವವಧುವಿನ ಪಾದಗಳ
ಶಕ್ತಿ ಪರಿಚಯಿಸುವುದಕ್ಕೆ.!!
ಎ.ಎನ್.ರಮೇಶ್. ಗುಬ್ಬಿ.