spot_img
spot_img

ಸಕಲೈಶ್ವರ್ಯ ಕಲ್ಪಿಸುವ ವರಮಹಾಲಕ್ಷ್ಮಿ ಪೂಜೆ

Must Read

- Advertisement -

ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

ಹಿನ್ನೆಲೆ
ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ – ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ “ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ” ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.

ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯನ್ನು ಹಗ್ಗವಾಗಿಸಿ ಮಂದಾರ ಪರ್ವತವನ್ನು ಕಡಗೋಲಾಗಿಸಿ ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ – ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

- Advertisement -

ವ್ರತ ಹೇಗೆ ಮಾಡಬೇಕು?
ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಾನಸಿಕ, ಶಾರೀರಿಕ ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಬಿಂದಿಗೆ ಅಥವಾ ಬೆಳ್ಳಿ ಚೊಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಗಂಧ, ಅಕ್ಷತೆ, ಹೂ, ನಾಣ್ಯ, ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಅಥವಾ ಪಂಚಪಲ್ಲವವನ್ನು ಕಲಶದ ಮೇಲಿಡಬೇಕು . ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತ, ಹರಿದ್ರ, ಪೀತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.
ಶುಕ್ರವಾರ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಇದೇ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂಡಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂಡಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆಗೆ ಹೆಚ್ಚು ಬಲ ಹಾಗೂ ಫಲ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮಿಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮಿಗೆ ಸುಗಂಧದಿಂದ ಕೂಡಿದ ನಿಷಿದ್ಧವಲ್ಲದ ಹೂ ಅರ್ಪಿಸಿ ಲಕ್ಷ್ಮಿಯ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ವಿವಿಧ ಭಕ್ಷ್ಯ, ಅರಿಶಿಣ, ಕುಂಕುಮ, ಎಲ್ಲವನ್ನೂ ಇಡುತ್ತಾರೆ.

ಬಿಲ್ವ ವೃಕ್ಷದಲ್ಲಿ ಲಕ್ಷ್ಮಿಯು ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿಯೂ ಮಾಡುವ ಸಂಪ್ರದಾಯ ಇದೆ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.

ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೇಬೇಳೆ. ಆದ್ದರಿಂದ ವರಮಹಾಲಕ್ಷ್ಮೀ ಹಬ್ಬದ ದಿನದಂದು ನೈವೇದ್ಯಕ್ಕೆ ಕಡಲೇಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನಿಯಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲಾ ಆದ ನಂತರ ಮೊದಲು ವಿಘ್ನಕಾರಕನಾದ ಗಣಪತಿಯನ್ನು ಪೂಜಿಸಿ, ನಂತರ ಯಮುನಾ ಪೂಜೆ, ಅಂದರೆ ಪರಮ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮೀವ್ರತವನ್ನು ಆರಂಭಿಸುತ್ತಾರೆ. ಪೂಜಾ ನಂತರ ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತು ಎಳೆಯ ದಾರವನ್ನು ಕಟ್ಟಿಕೊಂಡು, ಉದ್ಯಾಪನೆ ಮಾಡಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.

- Advertisement -

ವರಲಕ್ಷ್ಮೀ ವ್ರತದ ಮಹತ್ವ
ವರಮಹಾಲಕ್ಷ್ಮಿ ವ್ರತವನ್ನು ವರಲಕ್ಷ್ಮಿ ಪೂಜೆ ಎಂದೂ ಕರೆಯುತ್ತಾರೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರೂ ವರಲಕ್ಷ್ಮಿ ದೇವಿಯನ್ನು ಪೂಜಿಸುವ ಮಹತ್ವದ ಧಾರ್ಮಿಕ ಆಚರಣೆಯಾಗಿದೆ. ಅವಳು ಸಂಪತ್ತು, ಸಮೃದ್ಧಿ, ಧೈರ್ಯ, ಬುದ್ಧಿವಂತಿಕೆ ಮತ್ತು ಫಲವತ್ತತೆಯ ದೈವಿಕ ದತ್ತಿಯಾಗಿ ಪೂಜಿಸಲ್ಪಟ್ಟಿದ್ದಾಳೆ. ಈ ವ್ರತದ ಸಮಯದಲ್ಲಿ, ಭಕ್ತರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಅವಳ ಹೇರಳವಾದ ಆಶೀರ್ವಾದವನ್ನು ಬಯಸುತ್ತಾರೆ.
ವರಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುವುದು ಲಕ್ಷ್ಮೀ ದೇವಿಯ ಎಲ್ಲಾ ಎಂಟು ವೈವಿಧ್ಯಮಯ ಅಭಿವ್ಯಕ್ತಿಗಳನ್ನು ಗೌರವಿಸಲು ಎಂದು ನಂಬಲಾಗಿದೆ. ಈ ಆಚರಣೆಯು ವಿವಿಧ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಎಂದು ಭಾವಿಸಲಾಗಿದೆ, ಅವುಗಳೆಂದರೆ:
* ಧನಮ್ (ಹಣಕಾಸು ಲಾಭಗಳು): ಈ ಆಚರಣೆಯು ನಮಗೆ ಆರ್ಥಿಕ ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತದೆ ಎಂದು ನಂಬಲಾಗಿದೆ.
* ಧಾನ್ಯಮ್ (ಆಹಾರ ಮತ್ತು ಧಾನ್ಯಗಳ ಸಮೃದ್ಧಿ): ಭಕ್ತರು ತಮ್ಮ ಜೀವನದಲ್ಲಿ ಆಹಾರ ಮತ್ತು ಧಾನ್ಯಗಳ ಸಮೃದ್ಧಿಯನ್ನು ನಿರೀಕ್ಷಿಸುತ್ತಾರೆ. ವರಮಹಾಲಕ್ಷ್ಮಿಯು ಎಲ್ಲರಿಗೂ ಆಹಾರ ಮತ್ತು ಧಾನ್ಯಗಳನ್ನು ಸಮೃದ್ಧಿಯಾಗಿ ನೀಡುವಳು ಎಂದು ನಾವು ನಂಬಿದ್ದೇವೆ.
*ಆರೋಗ್ಯಂ (ಉತ್ತಮ ಆರೋಗ್ಯ): ಉತ್ತಮ ದೈಹಿಕ ಯೋಗಕ್ಷೇಮಕ್ಕಾಗಿ ತಾಯಿಯಲ್ಲಿ ಆಶೀರ್ವಾದವನ್ನು ಬೇಡುವುದು.
* ಸಂಪತ್ (ಸಂಪತ್ತು ಮತ್ತು ಆಸ್ತಿ): ಭೌತಿಕ ಆಸ್ತಿ ಮತ್ತು ಸಂಪತ್ತಿನ ಕ್ರೋಢೀಕರಣಕ್ಕಾಗಿ ವರಮಹಾಲಕ್ಷ್ಮಿ ಆಚರಣೆ ಮಾಡುತ್ತೇವೆ.
* ಸಂತಾನಂ (ಸದ್ಗುಣಶೀಲ ಸಂತಾನ): ಸದ್ಗುಣಶೀಲ ಮತ್ತು ಆರೋಗ್ಯಕರ ಸಂತತಿಯ ಜನನದ ನಿರೀಕ್ಷೆಯಲ್ಲಿ ಈ ಪೂಜೆಯನ್ನು ಮಾಡುತ್ತೇವೆ.
* ದೀರ್ಕಾ ಸುಮಂಗಲಿ ಬಕ್ಯಂ (ಗಂಡನ ದೀರ್ಘಾಯುಷ್ಯ): ಪತಿ ಅಥವಾ ಪತ್ನಿಯು ತನ್ನ ಸಂಗಾತಿಯ ದೀರ್ಘಾಯುಷ್ಯಕ್ಕಾಗಿ ಈ ಪೂಜೆಯ ಮೂಲಕ ಹಾರೈಸುವುದು.
* ವೀರಮ್ (ಧೈರ್ಯ): ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆಂತರಿಕ ಶಕ್ತಿ ಮತ್ತು ಧೈರ್ಯವನ್ನು ಹುಡುಕುವುದು.
* ಗಜ ಲಕ್ಷ್ಮಿ (ಸಾಲಗಳಿಂದ ಮುಕ್ತಿ): ಋಣಭಾರ ಮತ್ತು ಆರ್ಥಿಕ ಹೊರೆಗಳಿಂದ ಮುಕ್ತರಾಗುವ ಹಂಬಲ.
ಈ ರೀತಿಯಾಗಿ ಮೇಲಿನ 8 ರೀತಿಯಾಗಿ ನಮಗೆ ಜೀವನದಲ್ಲಿ ಯಶಸ್ಸು ಸಿಗಲಿ ಎಂಬುದಾಗಿ ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡುತ್ತೇವೆ.

ವಿವಾಹಿತ ಮಹಿಳೆಯರು ಸಾಂಪ್ರದಾಯಿಕವಾಗಿ ಈ ದಿನ ಉಪವಾಸ ಮಾಡುತ್ತಾರೆ, ತಾಯಿಯ ಪೂಜೆಯನ್ನು ಮಾಡಿದ ನಂತರ ತಮ್ಮ ಉಪವಾಸವನ್ನು ಮುರಿಯುತ್ತಾರೆ. ವರಲಕ್ಷ್ಮಿ ವ್ರತವು ಭಕ್ತಿಯನ್ನು ವ್ಯಕ್ತಪಡಿಸಲು ಮತ್ತು ವರಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಒಂದು ಮಾರ್ಗವಾಗಿದೆ, ಅಂತಿಮವಾಗಿ ಜೀವನದಲ್ಲಿ ವಿವಿಧ ರೀತಿಯ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ಪಡೆದುಕೊಳ್ಳುವದನ್ನು ಗುರಿಯಾಗಿರಿಸಿಕೊಂಡು ನಾವೆಲ್ಲರೂ ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡುತ್ತೇವೆ.
ಮತ್ತೊಮ್ಮೆ ತಮ್ಮೆಲ್ಲರಿಗೂ ತಾಯಿ ವರಮಹಾಲಕ್ಷ್ಮಿಯು ಶುಭವನ್ನುಂಟು ಮಾಡಲೆಂದು ಸಮಸ್ತ
ಕರ್ನಾಟಕ ಶಿಕ್ಷಕರ ಬಳಗ ದ ವತಿಯಿಂದ ಆಶಿಸೋಣ.

  ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

🙏🙏🙏🙏🙏🙏🙏🙏

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group