spot_img
spot_img

Varavi Kolla: ತಪಸ್ವಿಗಳ ತಾಣ ವರವಿಕೊಳ್ಳ

Must Read

- Advertisement -

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹತ್ತಿರ ಐದು ಕಿ.ಮೀ. ಅಂತರದಲ್ಲಿ ಎಕ್ಕೇರಿ ಎಂಬ ಗ್ರಾಮವಿದೆ. ಈ ಗ್ರಾಮದ ಅಧಿದೇವತೆ ಕರೆಮ್ಮಾದೇವಿ’ಈ ದೇವಾಲಯಕ್ಕೆ ಮುಂಚೆ ರಸ್ತೆ ಬದಿ ವರವಿಕೊಳ್ಳಕ್ಕೆ ಮಾರ್ಗ“ ಎಂಬ ನಾಮಫಲಕ ಕಾಣುವುದು. ಮುನವಳ್ಳಿ ನರಗುಂದ ಮಾರ್ಗದಲ್ಲಿ ಸಾಕಷ್ಟು ವಾಹನ ಸೌಕರ‍್ಯವಿದೆ. “ವರವಿಕೊಳ್ಳ“ ಕ್ರಾಸ್ ನಿಲುಗಡೆ ಅಂತಾ ಹೇಳಿದರೆ, ಅಲ್ಲಿ ಇಳಿಯಬಹುದು.

ಆ ಮಾರ್ಗ ಕಚ್ಚಾ ರಸ್ತೆಯಾಗಿದ್ದು  ಇತ್ತೀಚಿನ ವರ್ಷಗಳಲ್ಲಿ ರಸ್ತೆ ನಿರ್ಮಾಣ ಗೊಂಡು ಕಾರು ಬೈಕ್ ಪ್ರಯಾಣ ವರವಿಕೊಳ್ಳ ದವರೆಗೂ ಸರಾಗವಾಗಿ ಬರಲು ಅನುಕೂಲ ಆಗಿದೆ.ಇದು ಪುರಾತನ ತಾಣ. ಈ ಸ್ಥಳವನ್ನು “ವರವಿ ಸಿದ್ದೇಶ್ವರ” ಕೊಳ್ಳ ಎಂದು ಕರೆಯುವರು. ಅಂದರೆ “ಸಿದ್ದಿ ಪುರುಷರು“ ತಪಸ್ಸಿಗೆ ಬಳಸಿಕೊಂಡ ತಾಣವಾಗಿದೆ. ಅಥವಾ “ಸಿದ್ದೇಶ್ವರ“ ಎಂಬ ಋಷಿಗಳು ತಪಗೈದ ತಾಣ ಎಂದು ಹೇಳುವರು. ಒಟ್ಟಿನಲ್ಲಿ ಇದು  ತಪಸ್ವಿಗಳಿಗೆ ಯೊಗ್ಯವಾದ ಸ್ಥಳ. ಕಡಿದಾದ ಬೆಟ್ಟ.ಬೆಟ್ಟದಲ್ಲಿ ಕೊರೆದಿಟ್ಟಂತೆ ಕಂಡು ಬರುವ ಜಲಧಾರೆ, ಗುಹೆ, ಗುಹೆಯೊಳಗೆ ನಂದಿ, ಲಿಂಗ ವಿಗ್ರಹಗಳು ಸುತ್ತಲೂ ಬೆಳೆದು ನಿಂತ ದಟ್ಟವಾದ ಗಿಡ, ಮರಗಳು. ಪ್ರಶಾಂತ ವಾತಾವರಣ ಇವೆಲ್ಲ ಕಂಡರೆ ನಿಜಕ್ಕೂ ಧ್ಯಾನಕ್ಕೆ ಹೇಳಿ ಮಾಡಿಸಿದ ಸ್ಥಳ ಎಂದು ಎಂಥವರೂ ಸಹ ಹೇಳಲು ಸಾಧ್ಯ.

ಈ “ವರವಿ ಸಿದ್ದೇಶ್ವರಕೊಳ್ಳ“ಕ್ಕೆ ಕೆಲವು ವರ್ಷಗಳ ಹಿಂದೆ ಸರಿಯಾದ ರಸ್ತೆ ಮಾರ್ಗವಿರಲಿಲ್ಲ. ಇತ್ತೀಚೆಗೆ ಸರಕಾರ ಈ ಜಾಗ ತಲುಪಲು ಪ್ರತ್ಯೇಕ ಕಚ್ಚಾ ರಸ್ತೆ ಮಾರ್ಗ ನಿರ್ಮಾಣದ ಜೊತೆಗೆ ಗುಹೆ ಒಳಗೆ ಹೋಗಲು ವ್ಯವಸ್ಥೆ ಮೆಟ್ಟಿಲುಗಳ ನಿರ್ಮಾಣ ಮಾಡುವ ಮೂಲಕ ಯಾರೇ ಬಂದರೂ ಸುಲಭವಾಗಿ ಈ ತಾಣ ತಲುಪಲು ಅನುಕೂಲ ಕಲ್ಪಿಸಲಾಗಿದೆ. ನಿಜಕ್ಕೂ ಇದು “ಯಾಣ“ ದಷ್ಟೇ ಅದ್ಭುತ ತಾಣ. ಸಾಹಸಿಗರಿಗೆ, ಚಾರಣ ಪ್ರಿಯರಿಗೂ ಕೂಡ ಹೇಳಿ ಮಾಡಿಸಿದ ಸ್ಥಳ. ಪ್ರತಿ ಅಮಾವಾಸ್ಯೆ, ಮಂಗಳವಾರ, ಶುಕ್ರವಾರದಂದು “ಎಕ್ಕೇರಿ ಕರೆಮ್ಮಾದೇವಿ“ ದೇವಾಲಯಕ್ಕೆ ಆಗಮಿಸುವ ಸದ್ಭಕ್ತರು “ವರವಿಕೊಳ್ಳ“ ಕ್ಕೂ  ಸಹ ಬರುತ್ತಾರೆ. ಇಲ್ಲಿಯೂ ಪೂಜೆಗೈದು ಹೊರಡುತ್ತಾರೆ. ಇದನ್ನು ಹೊರತು ಪಡಿಸಿದರೆ, ಶ್ರಾವಣ ಮಾಸದ ಇಡೀ ತಿಂಗಳೂ ಇಲ್ಲಿ ಅರ್ಚನೆ ಜರುಗುತ್ತದೆ. ನಂತರ ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶ ಮೂರ್ತಿಗಳ (ಸಾರ್ವಜನಿಕ) ವಿಸರ್ಜನೆಗೆ ಮೊದಲು ಮುನವಳ್ಳಿಯ ಸೋಮಶೇಖರ ಮಠದ ಸ್ವಾಮೀಜಿಯವರಾದ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳು ಸದ್ಭಕ್ತರೊಂದಿಗೆ ಈ ಸ್ಥಳಕ್ಕೆ ಬಂದು ತಮ್ಮ ಪೂಜಾ ಕಾರ್ಯ ನೆರವೇರಿಸಿ, ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗಿಸುವ ವಿಶಿಷ್ಠ ಪರಂಪರೆ ಜರುಗುತ್ತಿರುವುದು. 

- Advertisement -

ಸ್ವಾಮೀಜಿಗಳು ಈ ಸ್ಥಳಕ್ಕೆ ಕಳೆದ ಹತ್ತು ವರ್ಷದಿಂದಲೂ ಆಗಮಿಸುತ್ತಿದ್ದು, ಇಂಥ ತಪೋನಿಷ್ಠ ತಾಣ, ಸ್ವಾಮೀಜಿಗಳೆಂದರೆ ಭಕ್ತರಲ್ಲೂ ಕೂಡ ಒಡಮೂಡುವ ಭಕ್ತಿ ಭಾವಣೆ, ಪೂಜಾ ಕ್ರಿಯಗಳ ಪರಿಕಲ್ಪನೆ, ಮಂತ್ರೋಚ್ಚಾರಣೆ, ಎಲ್ಲವೂ ಜರುಗುವ ರೀತಿ, ಭಕ್ತರ ಸಮ್ಮುಖದಲ್ಲಿ ಎಲ್ಲರೂ ಓಂಕಾರ ಮಂತ್ರ ಹೇಳುವ ಮೂಲಕ ಭಕ್ತಿ ಭಾವ ಸಮರ್ಪಿಸುವ ಜೊತೆಗೆ ಪ್ರತಿವರ್ಷವೂ ಹೆಚ್ಚು ಹೆಚ್ಚು ಜನ ಈ ತಾಣ ಪರಿಚಯ ಮಾಡಿಕೊಂಡು ಹೊರಡುವ ಕಾರ್ಯ ಕೂಡ ನಡೆಯುವಂತಾಗಿದ್ದು ನಿಜಕ್ಕೂ ಶ್ಲಾಘನೀಯ.

ವರವಿಸಿದ್ದೇಶ್ವರ ತಾಣಕ್ಕೂ ಇಲ್ಲಿಗೆ ಸಮೀಪದ ಐತಿಹಾಸಿಕ ತಾಣ “ಹೂಲಿ“ ಗೂ ನಂಟಿದೆ. “ಹೂಲಿ“ ಗ್ರಾಮದಲ್ಲಿ ಸಿದ್ದಿ ಪುರುಷರ ಹೆಸರಲ್ಲಿ ಆರು ಕೆರೆಗಳಿವೆ. ಜೊತೆಗೆ ಹೂಲಿ ಗ್ರಾಮದ ಬೆಟ್ಟದಲ್ಲಿ ಮಾರ್ಗವಾಗಿ ನಡೆದುಕೊಂಡು ಬಂದರೆ “ವರವಿಕೊಳ್ಳ” ತಲುಪುತ್ತಾರೆ. “ಹೂಲಿ“ ಗ್ರಾಮದ ಜನತೆ ಈ ಸ್ಥಳಕ್ಕೆ ಅಮವಾಸ್ಯೆ ದಿನ ಬರುವುದು ಹೆಚ್ಚು. ಅಂದರೆ ಈ ಬೆಟ್ಟದ ತಾಣ ಒಂದು ಕಾಲಕ್ಕೆ ಅನೇಕ ಸಿದ್ದಿಪುರುಷರ ತಪೋನಿಷ್ಟರ ಋಷಿಮುನಿಗಳ ಆಶ್ರಯ ತಾಣವಾಗಿರಲು ಸಾಧ್ಯ ಎನ್ನುವುದು ಗೋಚರವಾಗುತ್ತದೆ. ಜೊತೆಗೆ ಎಲ್ಲಮ್ಮ ದೇವಾಲಯ ಜಮದಗ್ನಿ ಪರುಶುರಾಮರಿಂದಲೂ ಮುನವಳ್ಳಿಯ ವಿಶ್ವಾಮಿತ್ರ ವಸಿಷ್ಠರ ಭಾರದ್ವಾಜ ಮೊದಲಾದ ಮುನಿಗಳ ತಾಣವಾಗಿ “ಹೂಲಿ’ಯೂ ಕೂಡ ಅನೇಕ ಮುನಿಗಳ ತಾಣವಾದ ಕಾರಣ ಸುತ್ತಮುತ್ತಲ ಪ್ರದೇಶಗಳು ಋಷಿಮುನಿಗಳ ತಪೋ ಭೂಮಿಯಾಗಿರುವ ಹಿನ್ನೆಲೆಯಲ್ಲಿ ವರವಿಕೊಳ್ಳ ಕೂಡ ಋಷಿಮುನಿಗಳ ತಾಣವಾಗಿರಲು ಸಾಧ್ಯ. 

- Advertisement -

ಅಂದಹಾಗೆ, ಕಾಲ್ನಡಿಗೆಯಲ್ಲಿ ನಡೆದು ಬಂದರೆ ಮೊದಲು ಜುಳು ಜುಳು ನೀರಿನ ಸದ್ದು. ಪ್ರಶಾಂತ ವಾತಾವರಣದಲ್ಲಿ ಕೇಳಿಬರುತ್ತದೆ. ನೀವು ನಡೆದುಕೊಂಡು ಬರುವ ದಾರಿಯುದ್ದಕ್ಕೂ ಚಿಕ್ಕ ಕಾಲುವೆಯಲ್ಲಿ ನೀರು ಹರಿದು ಹೋಗುತ್ತಿರುವುದನ್ನು ಕಾಣುವಿರಿ. ಹಾಗೆಯೇ ಮುಂದೆ ಬಂದಾಗ ಜಲಧಾರೆ ನೀರನ್ನು ನೀರಾವರಿ ಬಳಕೆಗೆ ಬ್ರಿಟಿಷರ ಕಾಲಕ್ಕೆ ನಿರ್ಮಿಸಿದ ತಡೆಗೋಡೆ ಕಾಣುತ್ತದೆ. ೧೯೨೧ರಲ್ಲಿ ನಿರ್ಮಾಣವಾದ ಈ ತಡೆಗೋಡೆ ಇಂದಿಗೂ ತನ್ನದೇ ಅವಶೇಷಗಳಿಂದ ಉಳಿದುಕೊಂಡಿದೆ.

ಎಂಥ ಬಿರುಬೇಸಿಗೆಯಲ್ಲೂ ತಕ್ಕ ಮಟ್ಟಿನ ನೀರು ಸಂಗ್ರಹ  ಇಲ್ಲಿರುವುದು ಇಲ್ಲಿ ಸ್ವಲ್ಪ ಎಚ್ಚರವಹಿಸಿ ನಿಧಾನವಾಗಿ ದಾಟಿ ಮುಂದೆ ಬನ್ನಿ ಹುಲುಸಾಗಿ ಬೆಳೆದ ಗಿಡಗಳು. ಅವುಗಳ ಹೂವುಗಳಲ್ಲಿ ಝೇಂಕಾರ ಮಾಡುತ್ತಾ ಮುತ್ತಿಕ್ಕುತ್ತಿರುವ ದುಂಬಿಗಳು, ಜೇನ್ನೊಣಗಳು ಕತ್ತಲೆ ಆವರಿಸಿದಂತೆ ಕಂಡು ಬರುವ ಹಸಿರು ಪ್ರಕೃತಿಯ ಐಸಿರಿ ಕಂಡು ಈ ಪ್ರಕೃತಿಸಿರಿಗೆ ಮನಸೋಲದ ಹೃದಯವೇ ಇಲ್ಲ.

ಇಲ್ಲಿ ಹಸಿರುಟ್ಟ ಬೆಟ್ಟದ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕುವ ಜಲಧಾರೆ ಕಂಡು ಬರುವುದು. ಈ ಜಲಧಾರೆ ಕಂಡು ಅದರಲ್ಲಿ ನೀವು ಇಷ್ಟೊಂದು ಹೊತ್ತು ನಡೆದುಕೊಂಡು ಬಂದಿರುವ ಆಯಾಸ ಕರಗಲು ಜಲಧಾರೆಯ ಕೆಳಗೆ ನಿಂತು ಶರೀರ ತಣಿಸಿಕೊಳ್ಳಿ. ಇಡೀ ಪರಿಸರದ ಜೊತೆಗೆ ನಮ್ಮ ಶರೀರ ಕೂಡ ಕಾವ್ಯಾತ್ಮಕವಾಗಿ  ಮೈಮನಗಳಿಗೆ ನೀರಿನ ರಭಸದ ಹೊಡೆತ ಇಷ್ಟೊತ್ತು ನಡೆದು ಬಂದ ಆಯಾಸವನ್ನೆಲ್ಲಾ ಕರಗಿಸಿ ಬಿಡುತ್ತದೆ. ಸ್ನಾನ ಮುಗಿಸಿಕೊಂಡು ಪಕ್ಕದಲ್ಲಿ ಕಾಣುವ ಗುಹೆಯತ್ತ ಧಾವಿಸಿ, ಏಕಾಂತದಲ್ಲಿ ಎಲೆನಿಂತ ನಂದಿ ವಿಗ್ರಗಳು, ಈಶ್ವರಲಿಂಗಗಳು. ಗುಹೆಯಲ್ಲೂ ಕೂಡ ಜಿನುಗುತ್ತಿರುವ ನೀರಿನ ಸೆಲೆ, ಕತ್ತಲು ಇರುವ ಕಾರಣ ಒಂದು ಗುಹೆ ಪ್ರವೇಶಿಸುವಾಗ ಕೈಯಲ್ಲಿ ಟಾರ್ಚ್ ಇದ್ದರೆ ಅನುಕೂಲ.

ಅದರ ಬೆಳಕಿನಲ್ಲಿ ಈಶ್ವರಲಿಂಗ ದರ್ಶನ ಮಾಡಿ ನಿಮ್ಮ ಭಕ್ತಿ ಭಾವ ಸಮರ್ಪಿಸಿ ಆಯಾಸವಾಗಿದ್ದರೆ ಅಲ್ಲಿಯೇ ಪವಡಿಸಿ ಒಂದು ಎಚ್ಚರಿಕೆ ಇಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಕೋತಿಗಳು ಹೆಚ್ಚು. ಅವು ನಿಮ್ಮನ್ನು ಬೆಂಬಿಡದೇ ಹಿಂಬಾಲಿಸುತ್ತಿರುತ್ತವೆ. ನೀವು ಒಂಟಿಯಾಗಿದ್ದಲ್ಲಿ ನಿಮ್ಮ ಜೊತೆ ತಂದಿರುವ ಸಾಮಗ್ರಿಗಳ ಬಗ್ಗೆ ಜೋಪಾನ. ನಾಲ್ಕಾರು ಜನ 

ಬಂದಿದ್ದಲ್ಲಿ ಕೋತಿಗಳ ಕಾಟ ಇರದು. ಈ ಸ್ಥಳಕ್ಕೆ ಬರುವುದಾದಲ್ಲಿ ಸಾಕಷ್ಟು ತಿಂಡಿ-ತಿನಿಸುಗಳ ಸಹಿತ ಬಂದರೆ ಅನುಕೂಲ. ಏಕೆಂದರೆ ನಿಮಗಿಲ್ಲಿ ತಿನ್ನಲು ಏನೂ ಸಿಗದು. ಅಷ್ಟೇ ಅಲ್ಲ ಇದೊಂದು ನಿರ್ಜನ ಪ್ರದೇಶ. ಯಾವ ಮೂಲಭೂತ ಸೌಕರ್ಯವಿರದು. ಗುಹೆಯಲ್ಲಿ ನಂದಿ, ಲಿಂಗಗಳ ದರ್ಶನ ಮಾಡಿ. ಭಕ್ತಿಭಾವದಿಂದ ಸಮರ್ಪಣೆ ಮಾಡಿ ಹೊರಗೆ ಬಂದರೆ ಎದುರಿಗಿನ ಬೆಟ್ಟದಲ್ಲಿ ಶಿಲಾಲೇಖ ಕೂಡ ಇದೆ.

ಇಲ್ಲಿನ ಶಿಲಾಲೇಖ  ಹಾಳಾಗಿದ್ದು ಈ ಶಿಲಾಲೇಖವು ಕ್ರಿ.ಶ. ೬ನೇ ಶತಮಾನಕ್ಕೆ ಸಂಬಂಧಿಸಿದ್ದು ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನೊಳಗೊಂಡಿದ್ದು ಜೈನ ಧರ್ಮದ ಸ್ತುತಿಯೊಂದಿಗೆ ಆರಂಭವಾಗುವ ಇದರಲ್ಲಿ ಕಲ್ಯಾಣ ಚಾಳುಕ್ಯ ಅರಸ ಎರಡನೆಯ ತೈಲಪನ ಆಳ್ವಿಕೆಯ ಕಾಲಕ್ಕೆ ಪ್ರಥ್ವಿರಾಮನ ಮಗ ಶಾಂತಿವರ್ಮರಸನು ಸುಗಂಧವರ್ತಿ(ಸವದತ್ತಿ)ಯಲ್ಲಿ ಜೈನ ಬಸದಿಯನ್ನು ಕಟ್ಟಿಸಿ ೧೫೦ ಮತ್ತರು ಭೂಮಿಯನ್ನು ದತ್ತಿ ನೀಡಿದನು ಈ ಭೂಮಿಯನ್ನು ಬಾಹುಬಲಿ ಭಟ್ಟಾರಕರು ಪಡೆದರು ಹಾಗೂ ಶಾಂತಿ ವರ್ಮನ ತಾಯಿಯಾದ ವಿಜಯಬ್ಬರಸಿ ಅದೇ ಬಸದಿಗೆ ಪುನಃ ೧೫೦ ಮತ್ತರು ಭೂಮಿಯನ್ನು ದತ್ತಿ ನೀಡಿದಳು ಎಂಬ ವಿವರಗಳಿವೆ ಎಂಬ ಮಾಹಿತಿಯನ್ನು ಸವದತ್ತಿ ತಾಲೂಕಿನ ಶಾಸನಗಳು ಎಂಬ ಬರಹದಲ್ಲಿ  ಡಾಃ ಕೆ.ಎಸ್.ಪಾಟೀಲರು ಉಲ್ಲೇಖಿಸಿರುವರು. 

ಮತ್ತೆ ಕಾಡಿನ ಒಳಗೆ ಹೋದರೆ ಮತ್ತೊಂದು ಗುಹೆ ಕೂಡ ಕಂಡು ಬರುವುದು. ಇಲ್ಲಿ ತೊಗಲುಬಾವಲಿ ಪಕ್ಷಿಗಳು ಹೆಚ್ಚಾಗಿರುವ ಕಾರಣ ಯಾರೂ ಈ ಗುಹೆ ಪ್ರವೇಶ ಮಾಡಲಾರರು.ಒಟ್ಟಿನಲ್ಲಿ “ವರವಿ ಸಿದ್ದೇಶ್ವರ” ಪುಣ್ಯಕ್ಷೇತ್ರ ಇತ್ತೀಚಿನ ದಿನಗಳಲ್ಲಿ ರಸ್ತೆ ನಿರ್ಮಾಣದಿಂದಾಗಿ ಹೆಚ್ಚು ಹೆಚ್ಚು ಜನರ ಆಕರ್ಷಣೀಯ ತಾಣವಾಗಿದೆ. ಇಲ್ಲಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಶ್ರಾವಣ ಮಾಸ, ಭಾದ್ರಪದ ಮಾಸದ ಅವಧಿ ಜನರ ಇರುವಿಕೆ ಹೆಚ್ಚು. ಉಳಿದ ದಿನಗಳಲ್ಲಿ ಜನರ ಒಡನಾಟ ಈ ಸ್ಥಳದಲ್ಲಿ ಇರದು.

ಈ ಬೆಟ್ಟದ ಮೇಲೆ ಪವನ ವಿದ್ಯುತ್ ಕಂಬಗಳನ್ನು ಹಾಕಿದ್ದು ಅವುಗಳ ತಿರುಗುವಿಕೆಯ ಸದ್ದು ಎತ್ತರದ ಸ್ಥಳದಲ್ಲಿ ನೀರು ಧುಮುಕುವ ದೃಶ್ಯ ನಯನಮನೋಹರ. ನೇರವಾಗಿ ಈ ಸ್ಥಳದವರೆಗೂ ಬಸ್ ಸಂಚಾರವಿಲ್ಲ. ಮುನವಳ್ಳಿಯಿಂದ ಆಟೋ ಮೂಲಕ ಬರಬಹುದಾಗಿದೆ. ಅಥವ ನರಗುಂದ ಬಸ್ ಮೂಲಕ ಎಕ್ಕೇರಿಯವರೆಗೂ ಬಂದು ಅಲ್ಲಿನ ಬಸ್ ನಿಲ್ದಾಣದಲ್ಲಿ ಇಳಿದು ಕಾಲ್ನಡಿಗೆಯ ಮೂಲಕ ಕೂಡ ಬರಲು ಅನುಕೂಲವಿದೆ.

ಮುನವಳ್ಳಿ ಸವದತ್ತಿಯಿಂದ ೧೬.ಕಿ.ಮೀ. ಧಾರವಾಡದಿಂದ ೫೬ ಕಿ.ಮೀ. ಬೆಳಗಾವಿಯಿಂದ ೫೬ ಕಿ.ಮೀ. ಬೈಲಹೊಂಗಲದಿಂದ ೩೬ ಕಿ.ಮೀ. ಗೋಕಾಕ ಮೂಲಕ ೪೬ ಕಿ.ಮೀ. ನರಗುಂದದಿಂದ ೩೦ ಕಿ.ಮೀ. ರಾಮದುರ್ಗದಿಂದ ೩೦ ಕಿ.ಮೀ ಅಂತರದಲ್ಲಿದ್ದು ಮುನವಳ್ಳಿಯವರೆಗಂತೂ ಯಾವುದೇ ಮಾರ್ಗದಿಂದ ಬಂದರೂ ಸಾಕಷ್ಟು ಸಾರಿಗೆ ವ್ಯವಸ್ಥೆ ಇದ್ದು ಅಲ್ಲಿಂದ ಮುಂದೆ ಎಕ್ಕೇರಿವರೆಗೂ ಕೂಡ ಸಾರಿಗೆ ವ್ಯವಸ್ಥೆ ಇದೆ.ದ್ವಿಚಕ್ರವಾಹನದಲ್ಲಿ ಕೂಡ ಈ ಸ್ಥಳ ಸುಲಭವಾಗಿ ತಲುಪಬಹುದು. ಋಷಿ ಮುನಿಗಳ, ಸಿದ್ದಿ ಪುರುಷರ ತಪೋನುಷ್ಠಾನದ ತಾಣವಾದ ವರವಿ ಸಿದ್ದೇಶ್ವರ ಕ್ಷೇತ್ರ ಕ್ಕೆ ಒಮ್ಮೆಯಾದರೂ ಭೇಟಿ ನೀಡಿ.


ವೈ.ಬಿ.ಕಡಕೋಳ

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group