ಬೆಂಗಳೂರು: ಮತದಾರರು ಕಾಂಗ್ರೆಸ್ ಪಕ್ಷವನ್ನು ನೋಡಿ ಮತ ಹಾಕಿಲ್ಲ, ಅದು ನೀಡಿದ ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ದಾರೆ. ಹೀಗಾಗಿ ಗ್ಯಾರಂಟಿಗಳನ್ನು ಬೇಗ ಈಡೇರಿಸಿ. ಇಲ್ಲದ ನೆಪ ಹೇಳಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವ ಕೆಲಸ ನಡೆದಿದೆ. ಸಿಎಂ ಕುರ್ಚಿ ನಶ್ವರ. ಆದರೆ ಪೊಲೀಸ್ ವ್ಯವಸ್ಥೆ ಶಾಶ್ವತವಾಗಿರುತ್ತದೆ ಪೊಲೀಸ್ ಇಲಾಖೆಗೆ ಧಮಕಿ ಹಾಕಿದ್ದು ಸರಿಯಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ ಅವರು, ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ನೀಡಿ. ಒಂದು ವೇಳೆ ಷರತ್ತು ಹಾಕಿದರೆ ಜೂನ್ 1ರ ನಂತರ ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ತನಿಖೆಗೆ ಆದೇಶಿಸಲಿ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸವಾಲು ಹಾಕಿದರು.