ಬೆಳಗಾವಿ: ನಗರದ ಮಹಾಂತೇಶ ನಗರದಲ್ಲಿರುವ ಡಾ.ಫ. ಗು.ಹಳಕಟ್ಟಿ ಭವನದಲ್ಲಿ ದಿನಾಂಕ 11.2.2024 ರಂದು ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಆರಂಭದಲ್ಲಿ ಶರಣೆ ಶ್ರೀಮತಿ ಮಹಾದೇವಿ ಅರಳಿ ತಮ್ಮ ಇಂಪಾದ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಶರಣ ಎಂ ವೈ ಮೆಣಸಿನಕಾಯಿ ಇವರು ಉಪನ್ಯಾಸಕರನ್ನು ಪರಿಚಯಿಸುತ್ತ, ಅವರು ರಚಿಸಿದ ಕವನ ಸಂಕಲನಗಳು, ಕಥೆಗಳು, ಸಾಹಿತ್ಯಕ ಕೃತಿಗಳು ಮತ್ತು ಪಡೆದಿರುವ ಪ್ರಶಸ್ತಿಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾ ಪರಿಚಯಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಶರಣೆ ಶ್ರೀಮತಿ ಸುನಂದ ಎಮ್ಮಿಯವರು ಮಾತನಾಡುತ್ತಾ, ಆಧ್ಯಾತ್ಮ ಕ್ಷೇತ್ರದಲ್ಲಿ ಜನಪದರ ಕೊಡುಗೆಯ ಮಹತ್ವವನ್ನು ವಿವರಿಸಿದರು. “ಮಹಾದೇವ ನಿನ ಹೊರತು ನಮಗಾರು ಗತಿ ಇಲ್ಲ” ಎಂದು ಮಹಾದೇವನನ್ನು ಮನಸ್ಸಿನಲ್ಲಿಯೇ ನೆನೆಯುತ್ತಾ ತಮ್ಮ ಬದುಕನ್ನೇ ಅನುಭವಿಸಿ ಹಾಡಿದವರು ತ್ರಿಪದಿಗಳಲ್ಲಿ ಹದವರಿತು ನುಡಿಗಳನ್ನು ಕಟ್ಟಿ, ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಇಷ್ಟಪಟ್ಟು ಹೇಳಿಕೊಂಡರು. ಲಾಭವೋ ನಷ್ಟವೊ ನಮಗೆ ಲೆಕ್ಕಕ್ಕೆ ಇಲ್ಲ,ತಂದೆ-ತಾಯಿ,ಅಣ್ಣ- ತಮ್ಮ,ಅಕ್ಕ-ತಂಗಿ ಹೀಗೆ ಅನೇಕ ಸಂಬಂಧಗಳ ಮೇಲೆ ನಮಗೆ ನಂಬಿಕೆ ಇಲ್ಲ,” ಕರುಣ ಬಂದರೆ ಕಾಯೊ ಮರಣ ಬಂದರೆ ಒಯ್ಯೊ, ಕರುಣೆ ಕಲ್ಯಾಣ ಬಸವಣ್ಣ ಕಾಶಿಲಿಂಗ ಕಡೆತನಕ ಕಾಯೋ ಅಭಿಮಾನ” ಎಂದು ಹಾಡಿದ ನಮ್ಮ ಜನಪದರು ತಮ್ಮ ಜೀವನವನ್ನೇ ಶಿವನಿಗೊಪ್ಪಿಸಿದ ಮಹಾಮಹಿಮರು. ಹಳ್ಳಿಗಳಲ್ಲಿರುವ ನಮ್ಮ ಜನಪದ ಹೆಣ್ಣು ಮಕ್ಕಳು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ದೇವಸ್ಮರಣೆಯೊಂದಿಗೆ ಪ್ರಾರಂಭಿಸುತ್ತಿದ್ದರು. ಉದಾಹರಣೆಗಾಗಿ ಅವರ ಒಂದು ಜನಪದ ಹಾಡನ್ನು ನಾವು ನೆನಪಿಸಿಕೊಳ್ಳಬಹುದು, “ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೊಳ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನಾ” ಎಂದು ಮೊದಲಿಗೆ ಭೂಮಿ ತಾಯಿಯನ್ನು ಸ್ಮರಿಸುತ್ತಾ ನಿಸರ್ಗದ ಜೊತೆ ಸಂತೋಷದಿಂದ, ಪ್ರೀತಿಯಿಂದ ಬದುಕಿದರು. ಆದರೆ ಇಂದು ನಾವೆಲ್ಲ ಬಹಳ ವಿದ್ಯಾವಂತರಾದರೂ ಕೂಡ ಗೊಂದಲದ ಬದುಕಿನಲ್ಲಿ ನಾವಿದ್ದೇವೆ, ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವ ಅತಂತ್ರದ ಮಾನಸಿಕತೆಯಲ್ಲಿ ಬದುಕುತ್ತಿದ್ದೇವೆ. ಇದಕ್ಕೆ ಪರಿಹಾರವೆಂದರೆ ನಿದ್ದೆಗಣ್ಣಲ್ಲಿ ಕಂಡೆ ಶುದ್ಧ ಗುರುವಿನ ಪಾದ ಎನ್ನುವ ಜನಪದ ಉಕ್ತಿಯಂತೆ ನಮ್ಮ ಮನಸ್ಸಿನ ಭಾವನೆಗಳು ಶುದ್ಧವಾಗಿರಬೇಕು. ಪರಿಶುದ್ಧ ಮನಸ್ಸಿನಿಂದ ಪರಮಾತ್ಮನನ್ನು ನೆನೆದರೆ ಮಾತ್ರ ಮುಕ್ತಿ ಮಾರ್ಗವು ತಾನಾಗಿಯೇ ಗೋಚರಿಸುವುದು. ತನ್ಮೂಲಕ ಸಾಕ್ಷಾತ್ಕಾರದ ಹಾದಿ ಸುಗಮವಾಗುವುದು. ಪ್ರತಿ ರವಿವಾರ ಇಷ್ಟೊಂದು ಸಂಖ್ಯೆಯಲ್ಲಿ ವಚನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸಂತೋಷದ ವಿಷಯ, ಲಿಂಗಾಯತ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನಾನು ಕೃತಜ್ಞಳಾಗಿದ್ದೇನೆ, ಎಂದು ಮೌಲ್ಯದ ಮಾತುಗಳನ್ನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಈರಣ್ಣಾ ದೇಯನ್ನವರ ಇವರು ಮಾತನಾಡುತ್ತಾ, ಇಂದು ಶರಣೆ ಶ್ರೀಮತಿ ಸುನಂದ ಎಮ್ಮಿ ಯವರು ಕನ್ನಡ ನಾಡಿನ ಜನಪದಗಳ ಬಗ್ಗೆ ಅತ್ಯುತ್ತಮ ಉಪನ್ಯಾಸವನ್ನು ನೀಡಿದ್ದಾರೆ. ಜನಪದಗಳು ಮತ್ತು ವಚನ ಸಾಹಿತ್ಯದಿಂದ ಕನ್ನಡ ಭಾಷೆಯು ಎಷ್ಟೊಂದು ಸಮೃದ್ಧವಾಗಿದೆ.
ವಿ ಕೆ.ಪಾಟೀಲ,ಅನೀಲ ರಘಶೆಟ್ಟಿ , ಬಸವರಾಜ ಕರಡಿಮಠ,ಲಕ್ಷ್ಮೀಕಾಂತ ಗುರವ, ಜೋತಿ ಬಾದಾಮಿ, ಜಯಶ್ರೀ ಚಾವಲಗಿ, ಕಮಲಾ ಗಣಾಚಾರಿ, ದೀಪಾ ಪಾಟೀಲ ಭಾಗವಹಿಸಿದ್ದರು ವಿದ್ಯಾ ಆನಂದ ಕಕಿ೯ ದಾಸೋಹ ಸೇವೆ ಸಲ್ಲಿಸಿದರು ಸಂಗಮೇಶ ಅರಳಿ ನಿರೂಪಣೆ ಮಾಡಿದರು ಸದಾಶಿವ ದೇವರಮನಿ ವಂದನಾಪ೯ಣೆ ಸಲ್ಲಿಸಿದರು.