ಹೊಸದೆಹಲಿ – ಭಾರತದ ಲೋಕಸಭಾ ಚುನಾವಣೆಯ ಮೂರನೇ ಹಂತದ ಚುನಾವಣೆ ಮುಕ್ತಾಯಗೊಳ್ಳುತ್ತಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗಕ್ಕೆ ಸವಾಲೆಸೆದಿದ್ದು ಎರಡು ಹಂತಗಳ ಚುನಾವಣೆಯ ಪ್ರತಿ ಮತಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯನ್ನು ಆಯೋಗ ಇನ್ನೂ ಯಾಕೆ ಪ್ರಕಟಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
೨೦೨೪ ರ ಲೋಕಸಭಾ ಚುನಾವಣೆಯು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ ಎಂದು ತಮ್ಮ ಎಕ್ಸ್ ( ಟ್ವಿಟರ್) ಪೋಸ್ಟ್ ನಲ್ಲಿ ಬರೆದುಕೊಂಡಿರುವ ಖರ್ಗೆ, ಆಯೋಗದ ಕಾರ್ಯನಿರ್ವಹಣಾ ಮಟ್ಟ ತೀರಾ ಕುಸಿದಿದೆ, ಇತಿಹಾಸದಲ್ಲಿ ಮೊದಲ ಬಾರಿ ಭಾರತೀಯ ಚುನಾವಣಾ ಆಯೋಗವು ಮೊದಲ ಮತ್ತು ಎರಡನೆಯ ಹಂತದ ಚುನಾವಣೆ ಮುಗಿದರೂ ಅಂತಿಮ ಮತದಾರರ ಶೇಕಡಾವಾರು ಸಂಖ್ಯೆ ಪ್ರಕಟಿಸಲು ಸೋತಿದೆ ಎಂದರು.
ಈ ಬಗ್ಗೆ ಇಂಡಿ ಮಿತ್ರಕೂಟದ ಸದಸ್ಯ ಪಕ್ಷಗಳಿಗೆ ಖರ್ಗೆ ಪತ್ರ ಬರೆದಿದ್ದು, ಚುನಾವಣಾ ಆಯೋಗದ ಜವಾಬ್ದಾರಿ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಯತ್ನಪಡಲು ನಾವೆಲ್ಲ ಒಂದಾಗಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ನನ್ನ ೫೨ ವರ್ಷಗಳ ರಾಜಕೀಯ ಜೀವನದಲ್ಲಿ ಮತದಾನದ ಇಷ್ಟು ಹೆಚ್ಚಿದ್ದನ್ನು ನಾನು ನೋಡಿಲ್ಲ, ಮೊದಲಿನ ದಿನಗಳಲ್ಲಿ ಮತದಾನ ಮುಗಿದ ೨೪ ತಾಸುಗಳಲ್ಲಿ ಮತದಾನ ಪ್ರಮಾಣ ಪ್ರಕಟಿಸಲಾಗುತ್ತಿತ್ತು. ಈ ಸಲ ಏನು ಬದಲಾವಣೆಯಾಗಿದೆ ? ಯಾಕೆ ತಡ ವಾಯಿತು ? ಇದಕ್ಕೆ ಕಾರಣ ಹೇಳಲು ಆಯೋಗ ಯಾಕೆ ವಿಫಲವಾಯಿತು ? ಇವಿಎಮ್ ಸರಿಯಾಗಿದೆ ತಾನೆ ? ಎಂದು ಅವರು ಪ್ರಶ್ನೆ ಮಾಡಿದರು.