ಮೈಸೂರು -ನಗರದ ಹಿನಕಲ್‍ನಲ್ಲಿರುವ ವಾತ್ಸಲ್ಯ ಹಿರಿಯ ಜೀವಿಗಳ ಆಶ್ರಯ ತಾಣ ವಾತ್ಸಲ್ಯ ಸೇವಾ ಕೇಂದ್ರದಲ್ಲಿಂದು (ಮೇ 13) ವಿಶ್ವ ತಾಯಂದಿರ ದಿನಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಶುಶ್ರೂಷಕಿ ನಾಗರತ್ನ ಮಾತನಾಡಿ, ಸಮಾಜದಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ. ತಾಯಿಗಿಂತ ಮಿಗಿಲಾದ ದೇವರಿಲ್ಲ. ತಾಯಿಯೇ ಮೊದಲ ಗುರುವೂ ಹೌದು. ಏಕೆಂದರೆ, ತಾಯಿಯ ಋಣವನ್ನು ನಾವು ಎಂದೆಂದಿಗೂ ತೀರಿಸಲು ಅಸಾಧ್ಯ ಎಂದು ಅಭಿಪ್ರಾಯಿಸಿದರು.
ತಾಯಿ ಮಾತೃಹೃದಯಿ, ವಾತ್ಸಲ್ಯಮಯಿ, ಮಮತೆಯ ಸುಳಿ ಹೀಗೆ ತಾಯಿ ಹತ್ತು ಹಲವು ಸ್ಥಾನವನ್ನು ತುಂಬಬಲ್ಲವಳು. ತಾಳ್ಮೆಗೆ ಮತ್ತೊಂದು ಹೆಸರೇ ವಾತ್ಸಲ್ಯಮಯಿ ಅವ್ವ ಎನ್ನಬಹುದು ಎಂದು ತಿಳಿಸಿದರು.
ಮನೆಯಲ್ಲಿ ತಾಯಿಯಾದವಳು ಮಕ್ಕಳಿಗೆ ಒಳ್ಳೆಯ ಆಚಾರ, ವಿಚಾರ, ಸಂಸ್ಕೃತಯನ್ನು ಕಲಿಸಬಲ್ಲ ಮೊದಲ ಶಿಕ್ಷಕಿಯೂ ಆಗಿರುತ್ತಾಳೆ. ತಾಯಿ ಎನ್ನುವ ಎರಡಕ್ಷರಕ್ಕೆ ಅಗಾಧ ಶಕ್ತಿ ಇದೆ. ನಾವು ತಾಯಿಗೆ ಗೌರವವನ್ನು ಕೊಡುವುದರ ಜೊತೆಗೆ, ಹಿರಿಯ ವಯಸ್ಸಿನಲ್ಲಿ ಇರುವವರಿಗೆ ನೆರಳಾಗಿ ಆರೈಕೆಯನ್ನು ಮಾಡಿ ಅವರ ಮನಸ್ಸನ್ನು ಸಂತೋಷಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಒಂಬತ್ತು ತಿಂಗಳು ಹೊತ್ತು-ಹೆತ್ತು ಪೋಷಣೆಯೊಂದಿಗೆ ನಮ್ಮನ್ನು ಈ ಸಮಾಜಕ್ಕೆ ಅರ್ಪಿಸುವವಳೇ ತಾಯಿ. ಆದ್ದರಿಂದ ಮಾತೃಹೃದಯಿ ತಾಯಂದಿರನ್ನು ನಾವೆಲ್ಲರೂ ಸ್ಮರಿಸುವುದು ಅತ್ಯಗತ್ಯ ಎಂದು ಹೇಳಿದರು. ವಿಶ್ವ ತಾಯಂದಿರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವರ್ಷವಿಡೀ ತಾಯಿಯನ್ನು ಗೌರವಿಸಿ, ಮನ್ನಣೆಯನ್ನು ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ವಾತ್ಸಲ್ಯ ಸೇವಾ ಫೌಂಡೇಷನ್‍ನ ಅಧ್ಯಕ್ಷರಾದ ಎ.ಸಿ.ರವಿಕುಮಾರ್ ಅವರು ಮಾತನಾಡಿ, ಹಿರಿಯ ಜೀವಿಗಳ ಮನಸ್ಸನ್ನು ನೋಯಿಸದೇ ಅವರನ್ನು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಶಶಿಕಲಾ, ಆಶ್ರಮದ ಹಿರಿಯ ಜೀವಿಗಳು ಉಪಸ್ಥಿತರಿದ್ದರು.