ಸವದತ್ತಿಃ ಇಲ್ಲಿಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಲದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅಪ್ನಾದೇಶ ಫೌಂಡೇಶನ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವರು.
೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು. ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹೃದಯರು ಇದರ ಪದಾಧಿಕಾರಿಗಳಾದರು. ನನ್ನ ದೇಶಕ್ಕೆ ನನ್ನಿಂದ ಏನನ್ನು ಮಾಡಲು ಸಾಧ್ಯ ಎಂಬುದನ್ನು ಚಿಂತನೆ ಮೂಲಕ ಸಮಾಜೋಪಯೋಗಿ ಚಟುವಟಿಕೆಗಳನ್ನು ತನ್ನಷ್ಟಕ್ಕೆ ತಾನೇ ಮಾಡುತ್ತ ಸಾಗುವುದು ಇವರ ಗುರಿಯಾಗಿತ್ತು. ಈ ಸಂಘಟನೆಯ ೨೦೨೪ ರಿಂದ ಮುಂದಿನ ಮೂರು ವರ್ಷಗಳವರೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನೂತನ ಅಧ್ಯಕ್ಷರಾಗಿರುವರು ಎಂದು ಹಿಂದಿನ ಅಧ್ಯಕ್ಷರಾದ ಎಲ್.ಐ.ಲಕ್ಕಮ್ಮನವರ ಪ್ರಕಟಣೆಯಲ್ಲಿ ತಿಳಿಸಿರುವರು.
ಇದೇ ಮಾರ್ಚ ೯ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಚೇತನ ಪೌಂಡೇಶನ್ ಕರ್ನಾಟಕ ಇವರ ಸಂಘಟನೆಯಲ್ಲಿ ಜರುಗುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ವನಿತಾ ಪ್ರಶಸ್ತಿ ಹಾಗೂ ಹುಬ್ಬಳ್ಳಿ ಧಾರವಾಡದ ಅತ್ಯುತ್ತಮ ಮಹಿಳಾ ಮಂಡಳ ಪ್ರಶಸ್ತಿ ಹಾಗೂ ವೈ.ಬಿ.ಕಡಕೋಳರ ಬಲ್ಲವರ ಬಳಗ ಮತ್ತು ಹವಳದ ರಾಶಿ ಕೃತಿಗಳ ಬಿಡುಗಡೆ ಜೊತೆಗೆ ಅಪ್ನಾದೇಶ ಸಂಸ್ಥೆಯ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ಜರುಗುವುದು ಎಂದು ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ತಿಳಿಸಿರುವರು.
ಅಪ್ನಾದೇಶ ಬಳಗವು ೨೦೧೧ ರಿಂದ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಅಜ್ಞಾನ, ಮೂಢನಂಬಿಕೆ ಇವುಗಳನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿ ಜನ ಜಾಗೃತಿ ಕಲಾಜಾಥಾ ಮೂಲಕ ಮತ್ತು ಸಭೆ ಸಮಾರಂಭಗಳನ್ನು ಏರ್ಪಡಿಸಿ ಜನಜಾಗೃತಿ ಮಾಡುತ್ತಾ ಜನರಲ್ಲಿ ವಿಜ್ಞಾನದ ಬಗ್ಗೆ ತಿಳಿವಳಿಕೆಯನ್ನು ಮೂಡಿಸುವುದು ಮತ್ತು ಪರಿಸರ ಪ್ರಜ್ಞೆಯನ್ನು ಮೂಡಿಸುವುದು ಹಾಗೂ ಸ್ವಚ್ಛತೆಯ ಅರಿವನ್ನು ಮೂಡಿಸುವುದು, ಗಿಡ ಮರಗಳನ್ನು ನೆಡಲು ಪ್ರೋತ್ಸಾಹಿಸುವುದು, ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ದಾಖಲಾತಿ ಹೆಚ್ಚಿಸುವುದು, ನೀರನ್ನು ಮಿತವ್ಯಯವಾಗಿ ಬಳಸುವಂತೆ ಜನರಲ್ಲಿ ತಿಳಿವಳಿಕೆ ಹೇಳುವುದು, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆಯನ್ನು ನೀಡುವುದು ಇಂತಹ ಕಾರ್ಯಗಳನ್ನು ಅಪ್ನಾದೇಶ ಬಳಗ ಮಾಡುತ್ತ ಬಂದಿರುವುದು ಎಂದು ಎಲ್.ಐ.ಲಕ್ಕಮ್ಮನವರ ತಿಳಿಸಿದ್ದಾರೆ.