spot_img
spot_img

ಮನಃಶಾಂತಿಯ ಬೀಗ -ಯೋಗ

Must Read

- Advertisement -

ಇಂದಿನ ಒತ್ತಡದ ಜೀವನದಲ್ಲಿ ನಮಗೆಲ್ಲ ಆರೋಗ್ಯದ ಕುರಿತಾದ ಚಿಂತನೆ ಹೆಚ್ಚಾಗಿದೆ ಆದರೂ ಸ್ನ್ಯಾಕ್ಸ್ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿಲ್ಲ. ಬಾಯಿ ರುಚಿಯ ಪದಾರ್ಥಗಳನ್ನು ತಿಂದು ಉಬ್ಬಿದ ದೇಹವನ್ನು ಕರಗಿಸಲು ಮುಂಜಾನೆದ್ದು ವಾಕಿಂಗ್, ಜಾಗಿಂಗ್‍ಗೆಂದು ಏದುಸಿರು ಬಿಡುತ್ತ ಆಯಾಸ ಪಡುತ್ತೇವೆ. ಇನ್ನೂ ಕೆಲವರು ಯೋಗ ತರಬೇತಿಗೆ ಹೋಗುವುದನ್ನು ಕಾಣುತ್ತೇವೆ.

ಯೋಗ ತುಂಬಾ ಪ್ರಾಚೀನವಾದುದು. ಹೀಗಾಗಿ ನಮಗೆ ಇತಿಹಾಸದಲ್ಲಿ ಹಠಯೋಗಿಗಳು ಕಾಣ ಸಿಗುತ್ತಾರೆ. ಯೋಗ ಎನ್ನುವ ಶಬ್ದದ ಮೂಲ ಅರ್ಥ ಜೋಡಿಸುವುದು ಎಂದಾಗುತ್ತದೆ. ಯೋಗ ಕೇವಲ ದೇಹಾರೋಗ್ಯಕ್ಕಷ್ಟೇ ಅಲ್ಲದೇ ಮಾನಸಿಕ ಉದ್ವೇಗವನ್ನು ಕಡಿಮೆಗೊಳಿಸಿ ಸ್ಥಿತಪ್ರಜ್ಞರಾಗಿರುವಂತೆ ಸಹಕರಿಸುತ್ತದೆ. ನಮ್ಮೆಲ್ಲರ ಬಹುತೇಕ ಜೀವನದ ಗುರಿ ಮೋಕ್ಷ ಸಾಧನೆ. ಅದನ್ನೇ ಚರಕ ಸಂಹಿತೆಯಲ್ಲಿ ಯೋಗೋ ಮೋಕ್ಷ ಪ್ರವರ್ತಕಃ (ಯೋಗವು ಮೋಕ್ಷನನ್ನು ಕೊಡುತ್ತದೆ) ಎಂದು ಉಲ್ಲೇಖಿಸಿ ಯೋಗವು ಮೋಕ್ಷ ಸಾಧಿಸಲು ಅತ್ಯುತ್ತಮ ಸಾಧನ ಎನ್ನುವುದನ್ನು ಸಾರಿ ಹೇಳಿದ್ದಾರೆ. ವ್ಯಾಸ ಮಹರ್ಷಿ ಮತ್ತು ಪತಂಜಲಿ ಯೋಗ ಸೂತ್ರವನ್ನು ಯೋಗಃ ಸಮಾಧಿಃ (ಯೋಗವೇ ಸಮಾಧಿ) ಎಂದು ಹೇಳಿದ್ದಾರೆ.ಚರಕ ವ್ಯಾಸ ಪತಂಜಲಿಯವರು ಉಲ್ಲೇಖಿಸಿದ್ದನ್ನು ನೋಡಿದಾಗ ಯೋಗವೇ ಸುಂದರ ಸರಳ ಕ್ರಿಯಾಶೀಲ ಸಾರ್ಥಕ ಜೀವನಕ್ಕೆ ಆಧಾರವೆಂದೆನಿಸದೇ ಇರದು.

ದೇಹ ಮತ್ತು ಮನಸ್ಸನ್ನು ಸಾಮರಸ್ಯವಾಗಿ ಜೋಡಿಸುವುದೇ ಯೋಗ.

- Advertisement -

ಯೋಗದಲ್ಲಿ ಅನೇಕ ಭೇದಗಳಿವೆ ಅದರಲ್ಲಿ ಹಠಯೋಗ ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾದರೆ. ಕರ್ಮ ಯೋಗವು ಸ್ವಾರ್ಥ ರಹಿತ ಕರ್ಮಕ್ಕೆ ನಾಂದಿಯಾಗುತ್ತದೆ. ಇನ್ನು ಜ್ಞಾನ ಯೋಗವು ಹೆಸರೇ ಸೂಚಿಸುವಂತೆ ತಿಳಿವಳಿಕೆಯ ಸೆಲೆಯನ್ನು ಜೀವಂತವಿರಿಸಿ ಮಾನಸಿಕ ತುಮುಲಗಳಿಗೆ ಪರಿಹಾರ ಒದಗಿಸುತ್ತದೆ. ಸಾಮಾನ್ಯವಾಗಿ ಟಿವಿ ಕಾರ್ಯಕ್ರಮಗಲ್ಲಿ ವಿವಿಧ ಯೋಗದ ಆಸನಗಳನ್ನು ನೋಡಿ ಮಾಡುವ ನಮಗೆ ಒಂದು ಸಲಹೆಯನ್ನು ಯೋಗ ಸಾಧಕರು ಹೇಳುತ್ತಾರೆ ಅದೇನೆಂದರೆ ಇವುಗಳ ಜೊತೆಗೆ ರಾಜಯೋಗದ ಅಭ್ಯಾಸ ತುಂಬಾ ಪ್ರಮುಖವಾದುದು. ರಾಜ ಯೋಗವು ರಾಜನಂತೆ ಪ್ರಭಾವಶಾಲಿಯಾದುದು. ಬಲ ನೀಡುವಂಥದ್ದು. ವೈಜ್ಞಾನಿಕವಾದುದು. ಇದು ನಮ್ಮ ಯೋಚನಾ ಲಹರಿಯನ್ನೇ ಬದಲಿಸುವ ತಾಕತ್ತು ಹೊಂದಿದೆ. ಸಕಾರಾತ್ಮಕವಾದ ಆಲೋಚನೆಗಳು ಉತ್ತಮ ವಿಚಾರಗಳಿಗೆ ಪುಟಿ ಕೊಡುವ ರಾಜ ಯೋಗ ನಮ್ಮ ಸುಪ್ತ ಮನಸ್ಸಿನಲ್ಲಡಗಿದ ವಿವಿಧ ತೆರನಾದ ಆಲೋಚನೆಗಳನ್ನು ಶುದ್ಧೀಕರಿಸಿ ಉಪಯೋಗಿಸಲು ಕಲಿಸುವ ಶಿಕ್ಷಕನಂತೆ ಕಾರ್ಯ ನಿರ್ವಹಿಸುತ್ತದೆ.

ರಾಜ ಯೋಗವು ಎಂಟು ಹಂತಗಳನ್ನು ಹೊಂದಿರುವುದರಿಂದ ಅಷ್ಟಾಂಗ ಯೋಗವೆಂದು ಕರೆಯುತ್ತಾರೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ,ಸಮಾಧಿ.

ಈ ರಾಜ ಯೋಗವು ನಮ್ಮ ಮನಸ್ಸಿನ ಪರಿವರ್ತನೆಗೆ ಸತ್ಕಾರ್ಯಗಳಿಗೆ ಎಡೆಮಾಡುತ್ತದೆ. ಆತ್ಮಾವಲೋಕನ ಮಾಡಿಕೊಳ್ಳುವ ವಾತಾವರಣ ಸೃಷ್ಟಿಸುತ್ತದೆ. ಇದರಿಂದ ಆತ್ಮಶುದ್ಧಿಯಾಗುತ್ತದೆ. ವ್ಯಕ್ತಿತ್ವ ಕಂಗೊಳಿಸುವುದು ಸಹ ಜೀವಿಗಳೊಂದಿಗೆ ಮಧುರ ಬಾಂಧವ್ಯ ಹೊಂದಲು ಕಲಿಸಿಕೊಡುತ್ತದೆ. ಹೀಗೆ ರಾಜಯೋಗವು ಕೇವಲ ದೈಹಿಕ ಆರೋಗ್ಯವನ್ನು ವೃದ್ಧಿಸುವುದಿಲ್ಲ ಬದಲಾಗಿ ಆಂತರಿಕ ವಿಕಾಸಕ್ಕೆ ಕಾರಣವಾಗಿ ಕೆಟ್ಟ ನಡತೆಗಳನ್ನು ತಿದ್ದಿ ಅಂತರ್ಮನದ ಕಲ್ಮಷವನ್ನು ಶುದ್ಧಗೊಳಿಸಿ ಸದ್ಭಾವನೆಗಳನ್ನು ಬಿತ್ತಿ ಮನಃಶಾಂತಿಯನ್ನು ನೆಲೆಗೊಳಿಸುವಂತೆ ಮಾಡುತ್ತದೆ. ಇಂದ್ರಿಯಗಳನ್ನು ತಿದ್ದುವ ಅಧ್ಯಾಯವೂ ಇದೆ ಅದೇ ಸ್ವಾಧ್ಯಾಯ. ಸ್ವಾಧ್ಯಾಯ ಅಂದರೆ ನಮ್ಮನ್ನು ನಾವು ತಿಳಿದುಕೊಳ್ಳುವ ಅತ್ಯುತ್ತಮ ಮಾರ್ಗ ಇದನ್ನು ಆತ್ಮಾವಲೋಕನದ ಮೂಲಕ ಮಾಡಿಕೊಳ್ಳಬಹುದು. ಸ್ವಾಧ್ಯಾಯದ ಇನ್ನೊಂದು ಅರ್ಥ ಗ್ರಂಥಗಳ ಅಧ್ಯಯನವೆಂತಲೂ ಆಗುವುದು. ಹೀಗೆ ಅಧ್ಯಯನ ನಡೆಸಿದರೆ ಜ್ಞಾನ ವೃದ್ಧಿಯಾಗಿ ನಮ್ಮಲ್ಲಿ ದುರ್ನಡತೆ ಮಾಯವಾಗಿ ಸನ್ನಡತೆಗಳು ಮಿಂಚುವವು.

- Advertisement -

ಯೋಗ ಸಾಧಕನು ಜೀವನದಲ್ಲಿ ಏನೆಲ್ಲವನ್ನು ಸಾಧಿಸುವ ಶಕ್ತಿಯನ್ನು ಹೊಂದುತ್ತಾನೆ ಅವನಿಗೆ ಜನ ಸಾಮಾನ್ಯರಿಗೆ ಕಾಡುವ ಆಸೆ ಆಮಿಷಗಳು ಕಾಡುವುದಿಲ್ಲ. ಎಂಥ ಸಂದರ್ಭದಲ್ಲೂ ಧೈರ್ಯದಿಂದ ಮುನ್ನುಗ್ಗುವ ಛಾತಿಯನ್ನು ಪ್ರದರ್ಶಿಸಿ ಗೆಲ್ಲುವ ಹಾದಿಯಲ್ಲಿ ಮುನ್ನಡೆಯುತ್ತಾನೆ. ಸಮಾಧಾನ ಚಿತ್ತದವನಾಗಿರುತ್ತಾನೆ. ನಮ್ಮ ಹಾಗೆ ಸಿಟ್ಟು ಮೂಗಿನ ಮೇಲೆ ಇಟ್ಟುಕೊಂಡುವರಂತೆ ವರ್ತಿಸುವುದಿಲ್ಲ. ಸಾಧನೆ ಮಾಡ ಬಯಸುವವರು ಈ ಯೋಗ ಸಾಧಕರ ಹತ್ತಿರ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಪಡೆಯುತ್ತಾರೆ. ಹೀಗೆ ಮಾರ್ಗದರ್ಶಕನಾಗಿರುವ ಯೋಗಿಯು ತಾನು ಜ್ಞಾನಿಯೆಂದು ಎಂದೂ ಬೀಗುವುದಿಲ್ಲ. ಹೊಗಳಿಕೆ ತೆಗಳಿಕೆಗಳು ಇವರ ಮೇಲೆ ವಿಶೇಷ ಪರಿಣಾಮ ಬೀರವು. ಸದ್ವಿಚಾರಗಳು ಪುಟ್ಟ ಮಗುವಿನಿಂದ ಬಂದರೂ ಖುಷಿಯಿಂದ ಸ್ವೀಕರಿಸುವ ಮನೋಭಾವ ಯೋಗಿಗಿರುತ್ತದೆ. ಯೋಗ ಯಶಸ್ಸಿನ ದಾರಿಯನ್ನು ತೋರುತ್ತದೆ ಎಂಬುವುದು ಬಲ್ಲವರ ಮಾತು ಅದು ನಿಜವೂ ಕೂಡ.

ದೇಹ ಸೌಂದರ್ಯಕ್ಕೆ ಒತ್ತುಕೊಟ್ಟು ಮಾಡುವ ಆಸನಗಳು ಫಲ ನೀಡದೇ ಇರುವುದಿಲ್ಲ.ನಿರ್ಮಲವಾದ ಉಸಿರಾಟದ ಅಭ್ಯಾಸದಿಂದ ಉಲ್ಲಸಿತಗೊಂಡ ಮನಸ್ಸಿನಿಂದ ಸೃಜನಶೀಲತೆ ಪ್ರಯೋಗಶೀಲತೆ ಕ್ರಿಯಾಶೀಲತೆ ಹೆಚ್ಚಿ ಮಾನಸಿಕ ಸೌಂದರ್ಯವನ್ನೂ ಹೆಚ್ಚಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಯೋಗದೊದಂದಿಗೆ ಜೋಡಿಯಾಗಿ ಇನ್ನೊಂದು ಶಬ್ದವನ್ನು ಅದರ ಜೊತೆಯಲ್ಲಿಯೇ ಬಳಸುತ್ತೇವೆ ಅದೇ ಧ್ಯಾನ. ಧ್ಯಾನ ಏಳನೇ ಅಂಗ. ಧ್ಯಾನವನ್ನು ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಹಾರಗಳ ಮೂಲಕ ಮಾಡುವುದನ್ನು ಅನೇಕ ಪುಸ್ತಕಗಳಲ್ಲಿ ವಿವರಿಸಲಾಗಿದೆ. ಅಹಿಂಸೆ, ಸತ್ಯ,ಆಸ್ತೇಯ, ಬ್ರಹ್ಮಚರ್ಯ ಅಪರಿಗ್ರಹ ಇವು ಯಮಗಳು. ಧ್ಯಾನವನ್ನು ಮೆಡಿಟೇಶನ್ ಎಂದು ಅನುವಾದಿಸಲಾಗುತ್ತಿದೆ.ಅದರೆ ಮೆಡಿಟೇಶನ್ ಧ್ಯಾನದ ಸಂಪೂರ್ಣ ಅರ್ಥವನ್ನು ತುಂಬಿಕೊಡುವುದಿಲ್ಲ. ಧ್ಯಾನವನ್ನು ಮನದ ತುಮುಲಗಳನ್ನು ಹೋಗಲಾಡಿಸಲು ಮಾಡುವ ಉದ್ದೇಶಕ್ಕೆಂದು ಸಾಮಾನ್ಯ ಅರ್ಥದಲ್ಲಿ ಬಳಸಲಾಗುತ್ತಿದೆ. ಸ್ಥಿರವಾದ ಧ್ಯಾನ ಭಂಗಿಯು ನಿರ್ಮಲವಾದ ಉಸಿರಾಟವನ್ನು ನೀಡುವುದಲ್ಲದೇ ಮನದ ಚಂಚಲತೆ ಕಡಿಮೆಗೊಳಿಸಿ ನೆಮ್ಮದಿಯ ಭಾವವನ್ನು ಮೂಡಿಸುತ್ತದೆ.

ದೇಹ ಮತ್ತು ಮನಸ್ಸನ್ನು ಸುಸ್ಥಿರದಲ್ಲಿಡುವ ಜೀವಧಾರಕ ಶಕ್ತಿಯೇ ಪ್ರಾಣ. ಪ್ರಾಣಕ್ಕೆ ಉಸಿರಾಟವೇ ಜೀವ. ಉಸಿರಾಟದ ವಿಜ್ಞಾನವೆಂದು ಕರೆಯಲ್ಪಡುವ ಪ್ರಾಣಾಯಾಮ. ರಾಜಯೋಗದ ಪ್ರಮುಖ ಹಂತಗಳಲ್ಲೊಂದು.

ನಿತ್ಯ ಪ್ರಾಣಾಯಾಮವನ್ನು ತಪ್ಪದೇ ಅಭ್ಯಸಿಸುವರಲ್ಲಿ ಸಾಧನೆಗೆ ಪ್ರಮುಖವಾಗಿ ಬೇಕಾದ ಏಕಾಗ್ರತೆ ಚಿತ್ತ ಶಾಂತತೆಯನ್ನು ಕಾಣಬಹುದು. ಇದಲ್ಲದೆ ಬಾಹ್ಯ ಪ್ರಪಂಚದ ಜೊತೆಗಿನ ವರ್ತನೆಯೂ ಸಂತಸದಿಂದ ಕೂಡಿರುತ್ತದೆ. ಯೋಗ ಧ್ಯಾನದ ಅಭ್ಯಾಸದಿಂದ ನಮ್ಮೊಳಗಿನ ಚೈತನ್ಯ ನಮಗೆ ಅರಿವಿಗೆ ಬರುತ್ತದೆ. ದ್ವೇಷ ಅಹಂಕಾರ ಕ್ರೌರ್ಯಗಳನ್ನು ಹೊರಗಟ್ಟಿ ನಮ್ಮ ಮೂಲ ಸ್ವಭಾವಗಳಾದ ಪ್ರೀತಿ ಶಾಂತಿ ಅನುಭೂತಿಗಳನ್ನು ಪಡೆದು ಮಾನಸಿಕ ಪ್ರಗತಿಗೆ ಮುನ್ನುಡಿ ಬರೆಯಬಹುದು.

2015 ಜೂನ್ 21 ರಿಂದ ಪ್ರಾರಂಭವಾಗಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ದಿನವೆಂದು ಕರೆಯಲಾಗುತ್ತಿದ್ದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಂದಿದೆ.ಯೋಗಕ್ಕೆ ಆ ಯೋಗ್ಯತೆಯೂ ಇದೆ. ಈ ವರ್ಷ ಯುನೈಟೆಡ್ ನೇಷನ್ಸ್ ಕೇಂದ್ರಸ್ಥಳವಾದ ನೂಯಾರ್ಕಿನಲ್ಲಿ ಭಾರತದ ಸುಮಾರು 300 ವಿದ್ಯಾರ್ಥಿಗಳು ಮಾರ್ಗದರ್ಶಕರೊಡಗೂಡಿ ಯೋಗಾಸನದಲ್ಲಿ ಭಾಗವಹಿಸಲಿದ್ದಾರೆ. 2015 ರ ಯೋಗದಿನದಲ್ಲಿ ಸುಮಾರು 35985 ಯೋಗ ಪಟುಗಳು ಪ್ರಧಾನಿ ಜೊತೆ 84 ದೇಶದ ಗಣ್ಯರು ಕೂಡಿ ಸುಮಾರು 35 ನಿಮಿಷಗಳವರೆಗೆ 21 ಯೋಗಾಸನಗಳನ್ನು ನವದೆಹಲಿಯಲ್ಲಿ ಪ್ರದರ್ಶಿಸಿದ್ದು ಜಗತ್ತಿನ ನಾನಾ ಮೂಲೆಗಳಲ್ಲಿ ವೀಕ್ಷಿಸಲ್ಪಟ್ಟಿತು. ಮತ್ತು ಗಿನ್ನೀಸ್ ದಾಖಲೆಯಲ್ಲಿ ಹೆಸರು ಬರೆದುಕೊಂಡಿತು. ಯೋಗದ ಪ್ರಯೋಗ ಜಾಗತಿಕವಾಗಿ ಜೋರಾಗಿ ಹಬ್ಬುತ್ತಿದೆ.ಯೋಗ ಈಗ ಒಂದು ಟ್ರೆಂಡ್ ಆಗಿ ಬೆಳೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ.ಯೋಗಕ್ಕೆ ಕಾಲ ದೇಶ ಧರ್ಮ ಲಿಂಗದ ಮಿತಿಗಳಿಲ್ಲವೆಂಬುದನ್ನು ನೆನಪಿನಲ್ಲಿಡೋಣ. ಮನಃಶಾಂತಿಯ ಬೀಗವಾದ ಯೋಗದಲ್ಲಿ ತೊಡಗಿಸಿಕೊಂಡು ದೈಹಿಕ ಮಾನಸಿಕ ಸಾಮರಸ್ಯವನ್ನು ಸಾಧಿಸೋಣ.ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಂಡು ಆರೋಗ್ಯವಂತರಾಗಿ ಬದುಕೋಣವಲ್ಲವೇ?


ಜಯಶ್ರೀ ಅಬ್ಬಿಗೇರಿ, ಬೆಳಗಾವಿ
9449234142

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group