ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ.
ಯೋಗ ಎನ್ನುವ ಪದ ಸಂಸ್ಕೃತದ ಯುಜ್ ಧಾತುವಿನಿಂದ ಹುಟ್ಟಿದೆ. ಯುಜ್ ಎಂದರೆ ಜೋಡಿಸು, ಕೂಡಿಸು. ಸಂಬಂಧಿಸು. ದೇಹ ಮತ್ತು ಮನಸ್ಸಿನ ಏಕತೆ ಪ್ರತಿನಿಧಿಸುವ ಯೋಗಾಭ್ಯಾಸ ವೇದ ಕಾಲದಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಕ್ರಿ.ಶ. 400 ರಲ್ಲಿ ಪತಂಜಲಿ ಮಹರ್ಷಿ ರಚಿಸಿದ ಯೋಗಸೂತ್ರ ಯೋಗದ ಕುರಿತಾದ ಮೊದಲ ಲಿಖಿತ ಉಲ್ಲೇಖ. ಪತಂಜಲಿ ಮಹರ್ಷಿಗಳ ಪ್ರಕಾರ ಯೋಗಃ ಚಿತ್ತ ವೖತ್ತಿ ನಿರೋಧಃ ಯೋಗವೆಂದರೆ ಚಿತ್ತದ ಚಾಂಚಲ್ಯ ವೖತ್ತಿಗಳನ್ನು ನಿರೋಧಿಸುವುದು.
ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿತ ಯೋಗ ಶಾಖೆಗಳು ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ. ಅನೇಕ ಹಿಂದೂ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿ ಯೋಗದ ವಿವಿಧತೆ ತಿಳಿಸಿವೆ.
ವಶಿಷ್ಠ ಮಹರ್ಷಿಗಳು ಮನಪ್ರಶ ಮನೋಪಾಯಃ ಯೋಗಃ ಇತಿ ಅಬಿಧೀಯತೆ. ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದಿದ್ದಾರೆ.
ಯೋಗ ಅಭ್ಯಾಸ ಮಾಡುವವರನ್ನು ಯೋಗಿ ಯೋಗಿನಿ ಎನ್ನುವರು.
ಪ್ರಾಚೀನ ಕಾಲದ ತಪಸ್ವಿಗಳನ್ನು ಯೋಗಿಗಳೆಂದು ಕರೆದಿದ್ದಾರೆ. ಋಷಿಗಳು ತಪಸ್ಸು ಮಾಡುವ ಕ್ರಿಯೆ ಯೋಗವೆಂದಿದೆ. ಸಿಂಧೂ ಕಣಿವೆ ನಾಗರೀಕತೆಯ ಕಾಲದಲ್ಲಿ ಪತ್ತೆಯಾದ ಮೊಹರುಗಳಲ್ಲಿ ಧ್ಯಾನದ ಭಂಗಿ ಹೋಲುವ ಚಿತ್ರಗಳು ಶಾಸ್ತ್ರೀಯ ಚರ್ಯೆಗಳ ಒಂದು ವಿಧ. ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು ಎಂಬುದು ಪುರಾತತ್ವ ಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯ.
ಹಿಂದೂ ಗ್ರಂಥಗಳಲ್ಲಿ ಯೋಗ ಪದವು ಕಠೋಪನಿಷತ್‌ನಲ್ಲಿ ಇದ್ದು ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ತಿಳಿಸಿದೆ. ಯೋಗಃ ಸಮತ್ವಂ ಉಚ್ಚತೇ. ಯೋಗ ಎಂದರೆ ಕಾರ್ಯ ತತ್ಪರತೆಯಲ್ಲಿ ಸಮಭಾವ, ಸಮಚಿತ್ತವಾಗಿರುವುದು.
ಸ್ತುತಿ ನಿಂದೆ, ಮಾನ ಅಪಮಾನ, ಸುಖ ದುಃಖ, ನೋವು ನಲಿವು ಮುಂತಾದ ದ್ವಂದ್ವ ಜೀವನದಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.
ಯೋಗದ ಪರಿಕಲ್ಪನೆಯ ಗ್ರಂಥಮೂಲಗಳು ಮಧ್ಯಕಾಲೀನ ಉಪನಿಷತ್ತುಗಳು, ಭಗವದ್ಗೀತೆ, ಮಹಾಭಾರತ, ಪತಂಜಲಿಯ ಯೋಗಸೂತ್ರಗಳು.
ಭಾರತೀಯ ತತ್ವಜ್ಞಾನದ ಪ್ರಕಾರ ಯೋಗ
ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು.
ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ. ಇವು ರೂಢಿಯಲ್ಲಿ ಬಂದ ಭಾರತೀಯ ಷಡ್ ದರ್ಶನಗಳು. ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶ್ಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ. ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ.
2014ರ ಸೆಪ್ಟೆಂಬರ್ 27ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು.
ಪ್ರಧಾನಿಗಳ ಈ ಪ್ರಸ್ತಾವನೆಗೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳಿಂದ ಬೆಂಬಲ ದೊರಕಿದೆ.
2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಉತ್ತರ ಗೋಳಾರ್ಧದಲ್ಲಿ ಜೂನ್ 21 ವರ್ಷದ ಅತಿ ಉದ್ದದ ದಿನವಾಗಿದ್ದು ಯೋಗದ ದೃಷ್ಟಿಕೋನದಿಂದ ಇದು ವಿಶೇಷ ಮಹತ್ವ ಪಡೆದಿದೆ.
ಮೊದಲ ಅಂತರಾಷ್ಟ್ರೀಯ ಯೋಗ ದಿನ 21-6-2015 ರಂದು ವಿಶ್ವದಾದ್ಯಂತ ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಉದ್ದೇಶ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಉತ್ತಮ ಮಾರ್ಗವಾಗಿದ್ದು, ಇದು ವ್ಯಕ್ತಿಯ ಸಮಗ್ರ ಯೋಗಕ್ಷೇಮ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ದಿನವು ಯೋಗವನ್ನು ಜೀವನಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ. ಈ ಮೂಲಕ ಯೋಗ ದಿನಾಚರಣೆಯು ಯೋಗದ ಪ್ರಾಚೀನ ಜ್ಞಾನವನ್ನು ಆಧುನಿಕ ಜಗತ್ತಿಗೆ ತಲುಪಿಸಿ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಕಾಪಾಡುವ ಆಶಯ ಹೊಂದಿದೆ.
—
ಗೊರೂರು ಅನಂತರಾಜು
ಹಾಸನ.