spot_img
spot_img

ಅಮ್ಮನ ಜಗತ್ತಿನ ಕವಿತೆಗಳು

Must Read

spot_img

ಕ್ಷಮಯಾಧರಿತ್ರಿ..

- Advertisement -

ಅಮ್ಮಾ, ನೀ ಸುಖ-ದುಃಖಗಳ ಗಣಿ,
ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ,
ತುಂಬಿದ ಅವಿಭಕ್ತ ಕುಟುಂಬವ
ಸಂತೈಸುವುದರಲ್ಲೇ ಅರ್ಧ ಜೀವನ ಕಳೆದ,
ಗೃಹಿಣಿಯಾಗಿ ಅರ್ಧದಶಕ ಕಳೆದರೂ ಮಕ್ಕಳಾಗಲಿಲ್ಲವೆಂಬ
ಜನರ ಮಾತ,ಮನದ ಕೊರಗ ಹೇಗೆ ಸಹಿಸಿದೆಯಮ್ಮಾ ?

ಅರ್ಧದಶಕದ ನಂತರ ನಾ ಜನಿಸಿದಾಗ
ಗಂಡಾದರೇನು ಕಾಲು ಸರಿಯಿಲ್ಲ,
ಎಂಬ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮಾ?
ಮಗುವಾದ ಸಂತಸ ಒಂದೆಡೆ,
ವಿಕಲಾಂಗನೆಂಬ ದುಃಖ ಮತ್ತೊಂದೆಡೆ
ಹೇಗೆ ಎದುರಿಸಿದೆಯಮ್ಮಾ ಆ ದಿನಗಳ….

ಮನೆಗೆಲಸದಲ್ಲಿ ನೀನೊಬ್ಬ ಸಿಪಾಯಿ
“ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬಂತೆ
ಸರಳ ಸುಂದರ ಸಂಸಾರ ನಡೆಸಿದ ನೀನು
ಸೊಸೆ ತರುವಾಗಲೂ ಶ್ರೀಮಂತಿಕೆಯ
ಆಸೆ ತೋರಲಿಲ್ಲವಲ್ಲ-ಏನಮ್ಮ ನಿನ್ನ ಮನಸು!!!

- Advertisement -

ಅತ್ತೆಮಾವಂದಿರ ಸೇವೆ
ಬರುವ ಬಂಧುಬಳಗದವರ ಸೇವೆ,
ಅಕ್ಕಪಕ್ಕದವರ,ಅಶಕ್ತರ ಸೇವೆ,
ಚಿಕ್ಕಮಕ್ಕಳ ಬಾಳಕಷ್ಟಗಳಿಗೆ ಸ್ಪಂದಿಸಿದ
ನಿನ್ನಲ್ಲೊಬ್ಬ ಸಮಾಜಸೇವಕಿಯ ನಾ ಕಂಡೆ…

ಮಕ್ಕಳು ಮೊಮ್ಮಕ್ಕಳೊಂದಿಗೆ
ನಲಿಯುತ್ತಿದ್ದ ನಿನ್ನ ಮನಕೆ
ಹಠಾತ್ ಸಿಡಿಲ ಬಡಿತ,
ಪ್ರಾಣದಂತೆ ಪ್ರೀತಿಸುತ್ತಿದ್ದ
ಮಗಳಿಗೆ ಕ್ಯಾನ್ಸರ್ ರಾಕ್ಷಸನ ಆಕ್ರಮಣ..

ಹಣ್ಣಾದ ಜೀವಕೆ ,ಸಿಡಿಲ ಬಡಿತ
ಮಗಳ ಸಾವಿನ ಆಕ್ರಂದನ,
ಎಲ್ಲ ಸಹಿಸಿದೆಯಲ್ಲ ಅಮ್ಮಾ,
ಭವಿಷ್ಯದ ಕನಸುಗಳ ಕಟ್ಟುತ್ತಾ
ಬಾಳುತಿರುವ ನೀ ಆದರ್ಶಗಳ ಮಹಾಮಾತೆ,
ದೇವರು ಇಳಿಗಾಲದಲ್ಲಿ ನೀಡಿದ
ಈ ನೋವನ್ನೂ ಕ್ಷಮಿಸಿಬಿಟ್ಟೆಯಲ್ಲಾ,
ನೀನು ನಿಜವಾಗಿಯೂ
ಭೂಮಿಯಂತೆ ಕ್ಷಮಯಾ ಧರಿತ್ರಿ…

- Advertisement -

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು,ಪತ್ರಕರ್ತರು,
ಮೊ-94496 80583
63631 72368

ಅವ್ವಾ

ಸಕಲ ನೋವುಗಳ ಸಹಿಸಿ
ಗರ್ಭದಲ್ಲಿ ಎನ್ನ ಬೆಳೆಸಿ
ಜಗದ ಬೆಳಕನು ತೋರಿಸಿ
ಕೈ ಹಿಡಿದು ನಡೆಸಿ
ವಿದ್ಯಾ ಬುದ್ಧಿ ಕಲಿಸಿ
ಉತ್ತಮ ಸಂಸ್ಕಾರದಲಿ ಬೆಳೆಸಿ
ಜೀವನ ರೂಪಿಸಿದ ನಿನಗೆ
ಕೋಟಿ ನಮನಗಳು ಅವ್ವಾ.

ನನ್ನ ಮೊದಲ ಅರಿವಿನ ಸಿರಿ ನೀನು
ನಿಜವಾದ ದೇವರನು ಕಂಡಿಲ್ಲ ನಾನು
ನನ್ನ ಪಾಲಿನ ದೇವರು ನೀನು
ಹೇಗೆ ತೀರಿಸಲಿ ನಿನ್ನ ಋಣವನು ನಾನು
ನಿನ್ನ ಪ್ರೀತಿಯ ಸಂಸ್ಕಾರ ಪಡೆದ
ಪುಣ್ಯವಂತಳು ನಾನು
ಭಕ್ತಿ ಪೂರ್ವಕ ನಮನಗಳು ಅವ್ವಾ.

ಅತ್ತಾಗ ಕಣ್ಣೊರೆಸಿ ನಕ್ಕಾಗ ಕಣ್ಣು ಅರಳಿಸಿ
ಕೀಳರಿಮೆ ಬಂದಾಗ ಸ್ಪೂರ್ತಿ ತುಂಬಿ
ಸಾಮರ್ಥ್ಯ ನೆನಪಿಸಿದ ಚೇತನ ನೀನು
ಗೆಲುವಿನ ದಾರಿ ತೋರಿಸಿ
ಸ್ವಾಭಿಮಾನದಿ ಬದುಕೆಂದು
ಹರಸಿದ ದಿವ್ಯ ಶಕ್ತಿ ನೀನು
ಮನದಾಳದ ನೆನಪು ನೀನು
ಕೋಟಿ ಕೋಟಿ ನಮನ ಸಲ್ಲಿಸುವೆ ಅವ್ವಾ.

ಅಮ್ಮಂದಿರ ದಿನದ ಶುಭಾಶಯಗಳು

ಪುಷ್ಪಾ ಮುರಗೋಡ.

ನನ್ನ ಅವ್ವಾ…

ನನ್ನ ಅವ್ವಾ….
ತೀರಿಸಲಾಗದು ನಿನ್ನ ಋಣ
ನಿನ್ನ ಉಪಕಾರ ಸ್ಮ್ಮರಣೆಗೆ
ಹೇಳುವೆ ನಿನಗಿಂದು ಶುಭಾಶಯ💐

ನವಮಾಸಗಳು ಗರ್ಭದೊಳಿರಿಸಿಕೊಂಡು
ನೂರುನೋವುಗಳ ಸಹಿಸಿಕೊಂಡು
ಜೀವದ ಜೊತೆ ಹೋರಾಡಿ ಜೀವ ನೀಡುವಾಗ ದಣಿಯಲಿಲ್ಲ

ಮಡಿಲು ತೊಟ್ಟಿಲು ಮಾಡಿ
ಎದೆಯ ಹಾಲುಬಸಿದು ಮಮತೆಯ
ತೊರೆಯ ಹರಿಸಿ ಹಸಿವು ತಣಿಸಿ
ಜೋಗುಳ ಹಾಡುತ ದಣಿವು ಮರೆತೆಯಲ್ಲಾ

ಬೆಳೆವ ಕರುಳ ಕುಡಿಗಳಿಗೆ
ಎರೆಮಣ್ಣು ಗೊಬ್ಬರವಾಗಿ
ನೀರೆರೆದು ಬೆಳೆಸುವಾಗ
ನಿನ್ನ ಹಸಿವು ಮರೆತೆಯಲ್ಲಾ

ಅವ್ವಾ… ನಿನ್ನ ಪ್ರೀತಿ ತ್ಯಾಗಕ್ಕೆ
ಬೆಲೆ ಕಟ್ಟಲಾದೀತೇನವ್ವ ?
ನಿನ್ನಂತೆ ನಾನಾದಾಗ ಅವ್ವ …
ಅರಿತೆನವ್ವ ನಿನ್ನ ಹೆಳಿಕೊಳ್ಳದ ಕಷ್ಟಗಳ
ನನ್ನಿಂದೇನಾದರು ತಪ್ಪಾದರೆ
ಕ್ಷಮಿಸಿ ಬಿಡವ್ವಾ …🙏🙏

ಡಾ. ನಿರ್ಮಲಾ ಬಟ್ಟಲ

ಮೊದಲು ತಪ್ಪು ಕ್ಷಮಿಸು

ನಾನಿಲ್ಲಿಗೆ ಬಯಸಿ ಬಂದದ್ದೊ
ಬಯಸದೆ ಬಂದದ್ದೊ ಹೇಗೆಂದು
ಅರಿತ ಮನ ಹೇಳದೆ ಮೌನದಲ್ಲಿದೆ
ನಿನಗದು ತಿಳಿದದ್ದರೆ ತಿಳಿಸು ತಾಯಿ

ನೀನು ನನಗಷ್ಟೆ ಹುಟ್ಟು ಕೊಡಲಿಲ್ಲ
ನನ್ನೊಂದಿಗೆ ಆಶೆಗಳಿಗೂ ಹುಟ್ಟು ಕೊಟ್ಟಿದ್ದಿ
ನನಗದರ ಅರಿವು ಆಗುವ ಮೊದಲೆ
ನಿನ್ನ ತೊಡೆಯಿಂದಿಳಿದು ತುಳಿದಿದ್ದೆ ನೆಲ

ಮೊದಲು ತಪ್ಪು ಇದೆ ನಾ ಮಾಡಿದ್ದು
ಇನ್ನೊಂದಾಶೆಗ ಹುಟ್ಟು ಹಾಕಿತ್ತು ಅದು
ಹಾವಿನಂತೆ ತೆವಳುತ್ತ ಬೋರಲು ಬಿದ್ದು
ಒಲೆಯಲ್ಲಿದ್ದ ಕೆಂಡ ಮುಟ್ಟಿ ಅರಚಿದ್ದೆ

ಚಿಟ್ಟನೆ ಚೀರಿದ ನೀನು ನನ್ನನ್ನೆತ್ತಿ ನೆಟ್ಟಗೆ
ದುರ್ಗವ್ವನ ಗುಡಿಗೊಯ್ದು ಜಾತ್ರೆಯ ಕಿಚ್ಚಿಗೆ
ಹರಕೆ ಹೊತ್ತು ಬಂದಾಗ ಮನೆಗೆ
ನನ್ನಳು ನಿಂತಿತ್ತು ಹೊಂದಿಕೊಂಡು ಹೊತ್ತಿಗೆ

ಜಾತ್ರೆಯ ಕಿಚ್ಚಲ್ಲಿ ನಡೆದು ಬಂದಿ ಉಸ್ಸೆನ್ನಲಿಲ್ಲ
ಇಂದು ಆಶೆಯ ಕಂಡಗಳೆ ನನ್ನ ಸುತ್ತೆಲ್ಲ
ನಿಗಿನಿಗಿಸುತ್ತಿವೆ ಅವನ್ನು ಕಂಡು ಚೀರುವೆ
ನನ್ನ ತಪ್ಪಿನರಿವಾಗಿ ನಿನ್ನನ್ನು ನೆನೆಯುವೆ

ನನ್ನನ್ನೆತ್ತಿ ನಿನ್ನ ಕಂಕುಳದಲ್ಲಿ ಮುಚ್ಚಿಕೊಳ್ಳುತ್ತಿಲ್ಲ
ನಿನ್ನ ತೊಡೆಯಿಂದಿಳಿದ ತಪ್ಪಮಗೆ ಕ್ಷಮೆಯೆ ಇಲ್ಲ
ನೀನಾದರು ಏನು ಮಾಡುವಿ ಇಂದು
ದುರ್ಗವ್ವನ ಜಾತ್ರೆಯ ಕಿಚ್ಚು ನಿಂತು ಹೋಗಿದೆ

—ಜೆಪಿ ವಿಜಯಕುಮಾರ

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group