spot_img
spot_img

ಏಪ್ರಿಲ್ ಫೂಲ್ಸ್ ಡೇ – ನಗಿಸುತ್ತಿದ್ದ ನಗೆ ಮಿತ್ರ ಕೋ.ಲ.ರಂಗನಾಥರಾವ್

Must Read

- Advertisement -

ಏಪ್ರಿಲ್ ತಿಂಗಳ 1ನೇ ತಾರೀಖನ್ನು ಏಪ್ರಿಲ್ ಫೂಲ್ಸ್ ಡೇ ಅರ್ಥಾತ್ ಮೂರ್ಖರ ದಿನಾಚರಣೆ ಎಂದು ಕರೆಯಲಾಗಿದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಒಬ್ಬರನ್ನೊಬ್ಬರು ಗೇಲಿ ಕುಚೋದ್ಯದ ಮೂಲಕ ತಮಾಷೆ ಮಾಡಿ ಮೂರ್ಖರನ್ನಾಗಿ ಮಾಡಿ ನಗುವುದು ನಗಿಸುವುದು ಪೂರ್ವದಿಂದಲೂ ನಡೆದುಬಂದಿದೆ.

ಏಪ್ರಿಲ್ 1ರಂದು ಮೂರ್ಖರನ್ನಾಗಿಸುವ ರೂಢಿಗೆ ಹಲವಾರು ಕಥೆಗಳಿವೆ. ಏಪ್ರಿಲ್ 1ರಂದು ಮೂರ್ಖರನ್ನಾಗಿಸುವ ಈ ಪದ್ದತಿ ರೋಮನ್‍ರಿಂದ ನಡೆದುಬಂದಿದೆ. ಬಹಳ ವರ್ಷಗಳ ಹಿಂದೆ ರೋಮನ್ನರ ಹೊಸ ವರ್ಷ ಆರಂಭವಾಗುತ್ತಿದ್ದುದು ಮಾರ್ಚ್ 1ರಿಂದ. ನಂತರ ಬಂದ ರೋಮನ್ ಚಕ್ರವರ್ತಿ ಆವರೆಗಿನ ರೂಢಿಯ ದಿನವನ್ನು ಬದಲಾಯಿಸಿ ಏಪ್ರಿಲ್ ತಿಂಗಳ ಮೊದಲ ದಿನವನ್ನು ವರ್ಷದ ಮೊದಲ ದಿನವೆಂದು  ಪರಿಗಣಿಸಿ ಆಚರಿಸುವಂತೆ ಆಜ್ಞೆ ಮಾಡಿದ. ಪ್ರಜೆಗಳಿಗಿದು ಸರಿ ಕಾಣಲಿಲ್ಲ. ಪರಿಣಾಮ ಅವರು ಚಕ್ರವರ್ತಿಯನ್ನು ಮೂರ್ಖನೆಂದು ಪರಿಗಣಿಸಿದರು. ಆ ಕಾರಣವಾಗಿ ರೋಮನ್‍ನಲ್ಲಿ ಏಪ್ರಿಲ್ ತಿಂಗಳ ಮೊದಲ ದಿನವು ಮೂರ್ಖರ ದಿನವೆಂದು ಪರಿಗಣಿಸಲ್ಪಟ್ಟು ಆಚರಣೆಗೆ ಮೊದಲಾಯಿತು. ರೋಮನ್‍ರು ಅದನ್ನು ಮೊದಲಿಗೆ ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದರು. ಆಗದು ಆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆನಂತರ ಅದು ಇತರ ದೇಶಗಳಿಗೂ ಹಬ್ಬಿತು.  ಫ್ರಾನ್ಸ್ ದೇಶದಲ್ಲಿ ನೂತನ ವರ್ಷವು ಏಪ್ರಿಲ್ 1ರಂದು ಆರಂಭವಾಗುತ್ತಿತ್ತು. ಕ್ರಿ.ಶ.1564ರಲ್ಲಿ ಫ್ರಾನ್ಸ್ ದೇಶದಲ್ಲಿ ಜಗತ್ತಿನ ಮೊಟ್ಟಮೊದಲ ಕ್ಯಾಲೆಂಡರ್ ಅಸ್ತಿತ್ವಕ್ಕೆ ಬಂತು. ಕ್ಯಾಲೆಂಡರಿನಲ್ಲಿ ಏಪ್ರಿಲ್ 1ರ ಬದಲಾಗಿ ಜನವರಿ 1 ಹೊಸ ವರ್ಷದ ಪ್ರಾರಂಭ ದಿನವಾಯಿತು. ಇದನ್ನು ಫ್ರಾನ್ಸಿನ ಕೆಲವು ರೂಢಿವಾದಿಗಳು ವಿರೋದಿಸಿದರು. ಇವರನ್ನು ಸುಧಾರಣಾವಾದಿಗಳು ಮೂರ್ಖರೆಂದು ಜರಿದು ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸತೊಡಗಿದರು.

ಕ್ರಿ.ಶ.1550 ರಿಂದ 1574ವರಗೆ ಫ್ರಾನ್ಸ್‍ನ್ನು ಆಳಿದ 1ನೇ ಚಾರ್ಲ್ಸ್ ವರ್ಷಾರಂಭವನ್ನು ಏಪ್ರಿಲ್ 1ಕ್ಕೆ ಬದಲಾಗಿ ಜನವರಿ 1ರಿಂದ ಆಗಬೇಕೆಂದು ಆದೇಶ ಹೊರಡಿಸಿದ. ಏಪ್ರಿಲ್ 1ರಂದು ನಡೆಸುತ್ತಿದ್ದ ಪರಂಪರಾಗತ ರೀತಿ ರಿವಾಜುಗಳು ಜನವರಿ 1ರಂದು ನಡೆಯಬೇಕೆಂದು ಆದೇಶದಲ್ಲಿ ತಿಳಿಸಿದ. ಏಪ್ರಿಲ್ 1ರಂದು ಮುಗ್ದರನ್ನು ಹುಡುಕಿ ‘ಏಪ್ರಿಲ್ ಮೀನು’ಎಂದು ಕರೆದು ಗೇಲಿ ಮಾಡುವ ಈ ಚಟುವಟಿಕೆಯನ್ನು ‘ಮೀನಿನ ಬೇಟೆ’ ಎಂದು ಕರೆಯಲಾಯಿತು. ಫ್ರಾನ್ಸ್ ದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ಮೀನುಗಳು ಮರಿಗಳಾಗಿದ್ದು ಸುಲಭವಾಗಿ ಬಲೆಗೆ ಸಿಕ್ಕಿ ಬೀಳುತ್ತವೆಯಂತೆ. ಹೀಗೆಯೇ ಮುಗ್ದರು ಸಲೀಸಾಗಿ ಕುಚೋದ್ಯಗಾರರ ಜಾಲಕ್ಕೆ ಸಿಕ್ಕಿ ಬೀಳುವುದರಿಂದ ಅವರನ್ನು ಹೀಗೆ ‘ಏಪ್ರಿಲ್ ಮೀನು’ ಎಂದು ಕರೆದು ಗೇಲಿ ಮಾಡುತ್ತಿದ್ದರಂತೆ.

- Advertisement -

ಈ ಏಪ್ರಿಲ್ ಫೂಲ್‍ಗಳನ್ನು ಸ್ಕಾಟ್ಲೆಂಡಿನಲ್ಲಿ ಏಪ್ರಿಲ್ ಗೋಕ್ ಎಂದು ಫ್ರಾನ್ಸಿನಲ್ಲಿ ರಾಜರ್ ದಿ ಅಪಿರಲ್ ಎಂದು, ಜರ್ಮನಿಯಲ್ಲಿ ನಾರ್ ಎಂದು ಕರೆಯಲಾಗಿದೆ. ಸ್ಕಾಟ್ಲೆಂಡಿನಲ್ಲಿ ಕೋಗಿಲೆಗಳನ್ನು ದಡ್ಡ ಪಕ್ಷಿ ಎಂದು ತಿಳಿಯಲಾಗುತ್ತಿದ್ದು ಏಪ್ರಿಲ್ 1ರಂದು ಹುಂಬರನ್ನು ತಮಾಷೆ ಮಾಡಲು ‘ಎಲೈ ಕೋಗಿಲೆ ಕೋಳಿಯ ಬಾಯಲ್ಲಿ ಹಲ್ಲು ತೋರಿಸು ಚೌಕಾಕಾರದ ವೃತ್ತ ರಚಿಸು.. ಎಂದು ಚುಡಾಯಿಸುವರಂತೆ.

ಕ್ರಿ.ಶ.1781ರ ಮುಂಚಿನ ಕ್ಯಾಲೆಂಡರ್ ಪ್ರಕಾರ ಯುರೋಪಿನಲ್ಲಿ ಏಪ್ರಿಲ್ 1 ಸಂವತ್ಸರದ ಆರಂಭ ದಿನವಾಗಿ ಬಳಕೆಯಾಗುತ್ತಿತ್ತು. ನಂತರ 18ನೇ ಶತಮಾನದಲ್ಲಿ ಹೊಸ ಕ್ಯಾಲೆಂಡರ್ ರೂಪುಗೊಂಡು ಏಪ್ರಿಲ್1ರ ಬದಲು ಜನವರಿ 1 ಸಂವತ್ಸರದ ಆರಂಭದ ದಿನವಾಗಿ ಮಾರ್ಪಾಡಾಯಿತು. ಈ ಬದಲಾವಣೆಗೆ ಕೆಲವು ಸನಾತನೀಯರು ಸಂಪ್ರದಾಯಸ್ಥರು ಮೂಢರು ವಿವೇಕ ಶೂನ್ಯರೆಂದು ಜರಿದು ಅವರುಗಳನ್ನು ಫೂಲ್ಸ್ ಗಳೆಂದು ಕರೆದು ಗೇಲಿ ಮಾಡುತ್ತಾ ಏಪ್ರಿಲ್ ಫೂಲಿಂಗ್ ಪ್ರಾರಂಭಿಸಿದರೆಂದು ಅದೇ ಏಪ್ರಿಲ್ ಫೂಲ್‍ನ ಹುಟ್ಟುವಿಕೆಗೆ ನಾಂದಿಯಾಗಿದೆ ಎಂದು ಒಂದು ಕಥೆ ಹೇಳುತ್ತದೆ.

ಕ್ರೈಸ್ತಮತದ ಕಥೆಯಂತೆ ನೋವಾ ಅನ್ನು ಆರ್ಕ್‍ನಿಂದ ಬಿಡುಗಡೆ ಮಾಡಿರುವುದು ಹಿಬ್ರೂ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1ನೇ ತಾರೀಖಿನಂದೇ. ಈ ಸಂದರ್ಭದಲ್ಲಿ ಎಲ್ಲರೂ ಜೋಕ್ಸ್ ಮಾಡುತ್ತಾ, ಪರಿಹಾಸ್ಯದಿಂದ ಒಬ್ಬರಿಗೊಬ್ಬರು ಮೂರ್ಖರನ್ನಾಗಿ ಮಾಡಿಕೊಂಡು ಕಾಲ ಕಳೆದಂತೆ ಅದೇ ಏಪ್ರಿಲ್ ಫೂಲ್ಸ್ ಎಂದು ಮುಂದುವರಿದುಕೊಂಡು ಬಂದಿದೆ ಎಂದು ಹೇಳಲಾಗಿದೆ.

- Advertisement -

ಪ್ರಪಂಚದ ಹಲವೆಡೆ ಮಾರ್ಚ್ 21 ಮತ್ತು 22ರಂದು ಹಗಲು ರಾತ್ರಿಗಳ ಪ್ರಮಾಣವು ಸಮನಾಗಿದ್ದು ಆಗಿನಿಂದ ಏಪ್ರಿಲ್ 1ರಂದು ಮೋಜು ಮಜಾದ ಉತ್ಸವವೊಂದನ್ನು ಆಚರಿಸಲಾಗುತ್ತಿತ್ತು. ಈ ಉತ್ಸವದಲ್ಲಿ ನಗುವ ನಗಿಸುವ ಕ್ರಿಯೆಗೆ ಪ್ರಧಾನ್ಯ. ಬಹುಶಃ ಈ ಉತ್ಸವವೂ ಮೂರ್ಖರ ದಿನಾಚರಣೆಯ ಪ್ರೇರಕ ಎಂದು ಕೂಡ ಹೇಳಲಾಗಿದೆ. 

ಕ್ರಿ.ಶ.18ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಮೂರ್ಖರ ದಿನಾಚರಣೆ ದೇಶಾದ್ಯಂತ ವ್ಯಾಪಿಸಿ ಮುಗ್ದರು ಮಾತ್ರವಲ್ಲದೆ ಸದ್ಗ್ರಹಸ್ಥರನ್ನೂ  ಪೇಚಾಟಕ್ಕೆ ಸಿಲುಕಿಸಿ ಮೋಜು ಮಜಾ ಉಡಾಯಿಸುವ ಹಿಂಸಾರತಿಯ ರೂಪವನ್ನು ತಾಳಿತು. ಆಗ ಅನೇಕ ಪ್ರಾಜ್ಞರು ಇತರರನ್ನು ಗೇಲಿ ಮಾಡಿ ಸಂತಸ ಪಡುವುದಕ್ಕಿಂತ ನಮ್ಮನ್ನು ನಾವು ಹಾಸ್ಯ ಮಾಡಿಕೊಂಡು ನಗೆ ಉಕ್ಕಿಸುವುದು ಉತ್ತಮ ಎಂದು ಪ್ರತಿಪಾದಿಸಿದರು. 

ಏಪ್ರಿಲ್ ಫೂಲ್ಸ್‍ಗೆ ಸಂಬಂಧಿಸಿದಂತೆ ಒಂದು ಜೋಕ್ ಚಾಲ್ತಿಯಲ್ಲಿದೆ. ಒಂದು ಸಲ ಫ್ರೆಂಚ್ ವನಿತೆ ಏಪ್ರಿಲ್ 1ರಂದು ಮನೆಯೊಂದರಲ್ಲಿ ಒಡವೆಗಳನ್ನು ಕಳ್ಳತನ ಮಾಡಿದಳು. ಆಕೆಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಆಕೆ ‘ಏಪ್ರಿಲ್ 1ರ ಸಂದರ್ಭವಾಗಿ ಮನೆಯವರನ್ನು ಫೂಲ್ ಮಾಡುವ ನಿಮಿತ್ತವಾಗಿ ಕೇವಲ ತಮಾಷೆಗೋಸ್ಕರ ಈ ಕಳ್ಳತನ ಮಾಡಿದೆ ಅಷ್ಟೇ.. ಎಂದು ನಗುನಗುತ್ತಾ ಹೇಳಿಕೆ ನೀಡಿದಾಗ, ಹಾಸ್ಯಪ್ರಿಯರಾದ ನ್ಯಾಯಾಧೀಶರು ಕೂಡ ನಗುತ್ತಾ ‘ತಮಾಷೆಗೋಸ್ಕರ ಮಾಡಿದ ಈ ಕಳ್ಳತನದ ಶಿಕ್ಷೆ ಏನೆಂದರೆ ಬರುವ ಏಪ್ರಿಲ್ 1ನೇ ತಾರೀಖಿನವರೆಗೆ ಜೈಲಿನಲ್ಲಿದ್ದು ತಮಾಷೆಯಾಗಿ ನಗುನಗುತ್ತಾ ಕಾಲ ಕಳಿ.. ಎಂದು ತೀರ್ಪು ನೀಡಿದರಂತೆ!

ಮೂರ್ಖರ ದಿನಾಚರಣೆಯು ಬ್ರಿಟಿಷ್‍ರೊಂದಿಗೆ ಭಾರತಕ್ಕೂ ಪಾದಾರ್ಪಣೆ ಮಾಡಿದೆ. ಭಾರತದಲ್ಲಿ ಹೋಳಿ ಹಬ್ಬದ ಅಂಗವಾಗಿ ಅಚರಿಸಲಾಗುವ ರೀತಿ ರಿವಾಜುಗಳೇ ಮೂರ್ಖರ ದಿನಾಚರಣೆಯ ಪ್ರೇರಣೆ ಎಂದು ಕೂಡ ಹೇಳುತ್ತಾರೆ. ಈಗಲೂ ಭಾರತದಲ್ಲಿ ಹಾಸ್ಯ ಸಂಘಗಳ ಆಶ್ರಯದಲ್ಲಿ ಮೂರ್ಖರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಹಾಸ್ಯ ಚಟಾಕಿಗಳನ್ನು ಹಾರಿಸುವುದು, ಹಾಸ್ಯ ಕವಿ ಗೋಷ್ಠಿಯನ್ನು ಏರ್ಪಡಿಸುವುದು, ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸುವುದು ಪರಸ್ಪರ ಮೂರ್ಖರನ್ನಾಗಿ ಮಾಡಲು ಯತ್ನಿಸುವ ಚಟುವಟಿಕೆಗಳು ಚಾಲ್ತಿಯಲ್ಲಿವೆ.

ತುಮಕೂರಿನ ದಿವಂಗತ ಗೌಡನಕಟ್ಟೆ ತಿಮ್ಮಯ್ಯನವರು ತಾವೇ ಸ್ಥಾಪಿಸಿದ ನಗೆಮಲ್ಲಿಗೆ ವತಿಯಿಂದ ಪ್ರತಿವರ್ಷ ತುಮಕೂರಿನಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಏಪ್ರಿಲ್ 1ರಂದು ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ನಾನು (ಗೊರೂರುಅನಂತರಾಜು) ಮತ್ತು ಹಿರಿಯ ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಒಮ್ಮೆ ಇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದೆವು. ಗೌಡನಕಟ್ಟೆ ತಿಮ್ಮಯ್ಯನವರು ಅಂದು ಬೆಳಿಗ್ಗೆ ತುಮಕೂರಿನಲ್ಲಿ ಕತ್ತೆಗೆ ಹಾರ ಹಾಕಿ ವಾದ್ಯ ಸಮೇತ ಮೆರವಣಿಗೆ ಮಾಡಿ ಜನರನ್ನು ಸಂಜೆಯ ಹಾಸ್ಯಕಾರ್ಯಕ್ರಮಕ್ಕೆ ಸೆಳೆಯುತ್ತಿದ್ದರು.  ಹಾಸ್ಯ ಸಾಹಿತ್ಯದಲ್ಲಿ ಹೆಸರು ಮಾಡಿದ ಸಾಹಿತಿಗಳು ಮತ್ತು ಕಲಾವಿದರನ್ನು ಕರೆಸಿ ನಡೆಸಿಕೊಡುತ್ತಿದ್ದ ಹಾಸ್ಯ ಕಾರ್ಯಕ್ರಮಕ್ಕೆ ಕಲಾಮಂದಿರ ತುಂಬಿರುತ್ತಿತ್ತು. 

ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಹಾಸ್ಯ ಕಾರ್ಯಕ್ರಮ ನೀಡುವಲ್ಲಿ ಹೆಸರುವಾಸಿಯಾಗಿದ್ದರು. ಹೇಮಾವತಿ ನದಿಗೆ ಅಣೆಕಟ್ಟು ಕಟ್ಟುವ ಕಾಮಗಾರಿ ಆರಂಭವಾಗಿ ಈ ಯೋಜನೆಗಾಗಿಯೇ ನಿವಾಸಿ ಲೆಕ್ಕ ಪರಿಶೋಧನಾಧಿಕಾರಿಯ ಕಛೇರಿ ಗೊರೂರಿನಲ್ಲಿ ಆರಂಭವಾಯಿತು. ಬೆಂಗಳೂರಿನಿಂದ 1976ರಲ್ಲಿ ಗೊರೂರಿಗೆ ಬಂದು ಹೇಮಾವತಿ ವಸತಿ ಕಾಲನಿಯಲ್ಲಿ ನೆಲೆ ನಿಂತ ಕೋ.ಲ.ರಂ. ಅವರ ಪರಿಚಯ ನನಗೆ ಆದದ್ದು 1985ರಲ್ಲಿ. ಇವರು ತೆಲುಗು ಭಾಷೆಯ ಕಥೆಗಳನ್ನು, ಹಾಸ್ಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಪತ್ರಿಕೆಗಳಿಗೆ ಕಳಿಸುತ್ತಿದ್ದರು. ಅವರ ಹಾಸ್ಯ ಲೇಖನಗಳು ಹೆಚ್ಚಾಗಿ ವಿನೋದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ತರಂಗ, ತುಷಾರ, ಸುಧಾ ಮುಂತಾದ ಪತ್ರಿಕೆಗಳನ್ನು ಮೇಜಿನ ಮೇಲೆ ಎತ್ತರ ಎತ್ತರವಾಗಿ ಒಟ್ಟಿರುತ್ತಿದ್ದರು.  ಪ್ರಾಜೆಕ್ಟಿನಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದ ಅವರು ಪೆನ್ನು, ಹಾಳೆ ತಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸೂಕ್ತಿ ಸುಭಾಷಿತ ಇತ್ಯಾದಿ ತಮಗೆ ಬೇಕಾದ ಮಾಹಿತಿ ಬರೆದುಕೊಳ್ಳುತ್ತಿದ್ದ ವಿದ್ಯಾರ್ಥಿಯಂತೆ ಗೋಚರಿಸುತ್ತಿದ್ದರು.

ರಾವ್ ಶಾಲೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡುವ ಬಗ್ಗೆ ನನ್ನಲ್ಲಿ ಪ್ರಸ್ತಾಪಿಸುತ್ತಿದ್ದರು. ನಾನು ವಿದ್ಯಾರ್ಥಿಗಳ ನಾಟಕ ತಂಡ ಕಟ್ಟಿ ನಟನೆ ನಿರ್ದೇಶನದೊಂದಿಗೆ ಅವಕಾಶ ಸಿಕ್ಕಿದ ಕಡೆ ಪ್ರದರ್ಶನ ನೀಡುತ್ತಿದ್ದೆ. ಮುಂದೆ ನಾನು ಮತ್ತು ಕೋ.ಲ.ರಂ. ‘ನಗಿಸುವ ತಂಡ’ ಹೆಸರಿನಲ್ಲಿ ಹಾಸ್ಯ ಕಾರ್ಯಕ್ರಮ ನೀಡಲು ಸಿದ್ಧರಾದವು. ನಮ್ಮ ಪ್ರಥಮ ಪ್ರದರ್ಶನ ಹೊಳೆನರಸೀಪುರದಲ್ಲಿ ಬಹಿರಂಗ ವೇದಿಕೆಯಲ್ಲಿ. ನಾಟಕ ರೂಪದಲ್ಲಿ ಜೋಕ್ಸ್ ಕಾರ್ಯಕ್ರಮ ನೀಡುವುದು ಕಷ್ಟಕರ ನಮಗೆ ಹೊಸದು. ಈಗಿದು ಜೀ ಟೀವಿ, ಕಲರ್ಸ್ ಕನ್ನಡದಲ್ಲಿ ಜನಪ್ರಿಯ ಕಾರ್ಯಕ್ರಮವಾಗಿರಂಜಿಸುತ್ತಿವೆ. ನಾವು ಮಿಮಿಕ್ರಿ ಕಲಾವಿದರಲ್ಲ. ಸಿನಿಮಾ ತಾರೆಯರಲ್ಲ. ನಗಿಸುವ ತಂಡವೆಂದರೆ ಜೋಕರ್‍ಗಳ ತಂಡವೆಂದೇ ಕಾರ್ಯಕ್ರಮ ಏರ್ಪಡಿಸಿದ್ದ ಜೇಸಿ ಸಂಸ್ಥೆಯವರು ಭಾವಿಸಿರಬೇಕು. ಅವರ ನಿರೀಕ್ಷೆಯಂತೆ ನಮ್ಮ ಈ ಮೊದಲ ಕಾರ್ಯಕ್ರಮ ನಡಯಿತೋ ಇಲ್ಲವೋ ಆದರೆ ನಾವು ಸ್ವಲ್ಪ ಕಾಲದಲ್ಲೇ ಹಾಸ್ಯ ಕಾರ್ಯಕ್ರಮ ನೀಡುವಲ್ಲಿ  ನೂರರ ಗಡಿ ದಾಟಿದೆವು. 

ಹಾಸ್ಯ ಸಾಹಿತ್ಯ ಹೆಚ್ಚು ಓದಿಕೊಂಡಿದ್ದ ರಾವ್ ಹಾಸ್ಯದಿಂದ ಆರೋಗ್ಯ ಭಾಗ್ಯ ಎಂಬ ವಿಷಯ ಇಟ್ಟುಕೊಂಡು ಉಪನ್ಯಾಸದೊಂದಿಗೆ ಶಾರ್ಟ್ ಜೋಕ್ಸ್ ಕಟ್ ಮಾಡುತ್ತಿದ್ದರು. ನಾನು ನಾಟಕೀಯವಾಗಿ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಿ ಪಡಿಸುತ್ತಿದ್ದೆ. ರೋಟರಿ, ಲಯನ್ಸ್ ಕ್ಲಬ್‍ಗಳಲ್ಲಿ ಇಂಗ್ಲೀಷ್ ಜೋಕ್ಸ್ ಜೊತೆಗೆ ತಮ್ಮ ಸ್ಥೂಲ ಶರೀರವನ್ನೇ ವಿಡಂಬಿಸಿಕೊಂಡು ರಂಜಿಸುತ್ತಿದ್ದ ರಾವ್ ಸಕ್ಸಸ್ ಆದರೆ ನಟನೆಯೇ ಬೇಸ್ ಆಗಿ ನಾನು ಶಾಲಾ ಕಾಲೇಜಿನಲ್ಲಿ ಭೇಷ್ ಎನಿಸಿಕೊಳ್ಳುತ್ತಿದ್ದೆ. ಒಟ್ಟಾರೆ ತಲಾ ಅರ್ಧ ಗಂಟೆಯಂತೆ ಒಂದು ಗಂಟೆಯ ಕಾರ್ಯಕ್ರಮ ಬೋರ್ ಆಗದಂತೆ ನಡೆಸಿಕೊಡುತ್ತಿದ್ದೆ ವಿಶೇಷವಾಗಿತ್ತು. ಬೆಂಗಳೂರು, ಮೈಸೂರು, ತರೀಕೆರೆ, ಬೀರೂರು, ಹಿರಿಯೂರು, ಕಡೂರು, ಚಿಕ್ಕಮಗಳೂರು, ಹುಣಸೂರು, ಪಿರಿಯಾಪಟ್ಟಣ ಹೀಗೆ ಊರೂರು ತಿರುಗಿದ ನಗೆ ಜೋಡಿಗಳಾಗಿದ್ದವು ನಾವು ಅಂದು. ನಂತರ ರಾವ್‍ಗೆ ಬೆಂಗಳೂರಿಗೆ ವರ್ಗವಾಗಿದ್ದರಿಂದ ಅವರಿಲ್ಲದೇ ನಾನು ಎಲ್ಲೂ ಹಾಸ್ಯ ಕಾರ್ಯಕ್ರಮ ಆಯೋಜಿಸಲಿಲ್ಲ. ನಮ್ಮ ಜೋಡಿ ಹೀಗೆ ಮುಂದುವರೆದಿದ್ದರೆ ಟಿವಿಗಳಲ್ಲಿ ಮಿಂಚಿ ಇನ್ನು ಹೆಚ್ಚಿನ ಜನಪ್ರಿಯ ಜೋಡಿಯಾಗಿ ಬೆಳೆಯಬಹುದಿತ್ತೇನೋ.? ನನಗೆ ಕೋ.ಲ.ರಂ. ಸಹವಾಸದಿಂದ ಹಾಸ್ಯ ಲೇಖನಗಳ ಬಗ್ಗೆ ಆಸಕ್ತಿ ಮೂಡಿ ನೂರಾರು ಹಾಸ್ಯ ಲೇಖನಗಳನ್ನು ಪತ್ರಿಕೆಗಳಿಗೆ ಬರೆಯಲು, ಸೋಮಾರಿಗಳ ಸಭೆಯಲ್ಲಿ, ಸನ್ಮಾನ ಪ್ರಶಸ್ತಿ ಪರಂತು, ಹಾಸ್ಯ ಪ್ರಹಸನಗಳು ಎಂಬ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಯಿತು. ರಾವ್ ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಅವರು ಹಣ ಹಾಕಿ ಪುಸ್ತಕ ಪ್ರಕಟಿಸಲು ಧೈರ್ಯ ಮಾಡಿರಲಿಲ್ಲ. ನಾನೇ ಅವರನ್ನು ಹುರಿದುಂಬಿಸಿ ಹಾಸ್ಯ ಚಟಾಕಿ ಎಂಬ ಕೃತಿಯನ್ನು ಮೊದಲಿಗೆ ಪ್ರಕಟಿಸಿದರು. ಅದಾಗಿ ಅವರ ಹಿಂತಿರುಗಿ ನೋಡಲಿಲ್ಲ. 32 ಪುಟಗಳ ಹಾಸ್ಯ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸುತ್ತಾ  99ರ ಗಡಿ ಮುಟ್ಟಿದರು. ಅವರ ನೂರನೇ ಕೃತಿ ಇಂದು (ತಾ.31-3-2024) ಕೋ.ಲ.ರಂಗನಾಥರಾವ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಲೋಕಾರ್ಪಣೆ ಆಗುತ್ತಿದೆ. ರಾವ್ ಇತ್ತೀಚಿಗಷ್ಟೇ ನಿಧನರಾದರು.  ಹಾಸ್ಯ ದರ್ಪಣ ಹಾಸ್ಯ ಪತ್ರಿಕೆ ಸಂಪಾದಕರು ಎಸ್.ಎಸ್.ಪಡಶೆಟ್ಟಿ ‘ಬನ್ನಿ ಸಾರ್ ಕಾರ್ಯಕ್ರಮಕ್ಕೆ ಎಂದು ಪೋನ್ ಮಾಡಿದರು. ರಾವ್ ಬೆಂಗಳೂರಿಗೆ ಹೋದ ಮೇಲೆ ಪಡಶೆಟ್ಟಿ ಅವರ ಜೊತೆಗೂಡಿ ತಮ್ಮ ಹಾಸ್ಯ ಕಾರ್ಯಕ್ರಮ ಮುಂದುವರೆಸಿ ಇನ್ನೂರಕ್ಕೂ ಹೆಚ್ಚು ಹಾಸ್ಯ ಕಾರ್ಯಕ್ರಮ ನೀಡಿದ್ದಾಗಿ ಪಡಶೆಟ್ಟಿ ತಿಳಿಸಿದರು.

2008ರಲ್ಲಿ ರಾವ್ ಅವರ ಮಿತ್ರರೆಲ್ಲಾ ನಗೆ ಮಿತ್ರ ಅಭಿನಂದನ ಗ್ರಂಥ ಪ್ರಕಟಿಸಿದ್ದಾರೆ. ಅದರಲ್ಲಿ ಅಭಿನಂದನೆ ಶೀರ್ಷಿಕೆಯಡಿ ಕವಯಿತ್ರಿ ಟಿ.ವಿ.ಮಂಜುಳಾದೇವಿ ಬರೆದ ಎರಡು ಚುಟುಕು ಹೀಗಿವೆ.

ನಕ್ಕರೆ ಸಾಕು ನೋವೆಲ್ಲಾ ಮಾಯ

ಮನದಲ್ಲಿ ಆಗಿದೆ ನೂರೊಂದು ಗಾಯ

ನಕ್ಕು ನಗಿಸುವುದ ಕಲಿತವನೆ ಜಾಣ

ಆರೋಗ್ಯ ಆಯುಷ್ಯಕ್ಕೆ ರಾಮ ಬಾಣ

ಸಮರ್ಪಣಾ ಭಾವಕ್ಕೆ ನೂರೊಂದು ವಂದನೆ

ಸಾಹಿತ್ಯ ಸೇವೆಗೆ ಇದೆಲ್ಲಾ ಚಂದಾನೆ

ಕನ್ನಡದ ಕಾರ್ಯಕ್ಕೆ ನೀವೆಲ್ಲಾ ಕಳಸ

ನಡೆಯಲಿ ಹೀಗೆಯೇ ಕನ್ನಡದ ಕೆಲಸ. 

ನಗಿಸುತ್ತಿದ್ದ ಹಿರಿಯ ನಗೆ ಮಿತ್ರರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸುವೆ. 


 -ಗೊರೂರುಅನಂತರಾಜು, ಹಾಸನ.

 ಮೊಬೈಲ್: 9449462879.  

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-573201.

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group