ಕತೆ: ಕೊಬ್ಬಿದ ಗೂಳಿ….

Must Read

ಕೊಬ್ಬಿದ ಗೂಳಿ….

ಕರಿಯವ್ವ ಕೈಯಲ್ಲಿಯ ಕುಂಡಲಿಯನ್ನು ಅಜ್ಜನ ಮುಂದಿಟ್ಟು ,
” ಅಜ್ಜಾರ ಈ ಕುಂಡಲಿವೊಳಗ ಮಂಗಳ ದೋಷ ಐತೇನ್ರಿ……! ? ” ಎಂದು ಕೇಳಿದಳು.

ಚಾಪೆಯ ಮೇಲೆ ಕುಳಿತಂತಹ ಶಾಸ್ತ್ರಿ ಕರಿಯವ್ವನೊಮ್ಮೆ ಕುಂಡಲಿಯನೊಮ್ಮೆ ನೋಡತೊಡಗಿದನು. ಕರಿಯವ್ವ ಅನುಮಾನಿಸುತ್ತಾ ಶಾಸ್ತ್ರಿಯನ್ನು ನೋಡತೊಡಗಿದಳು.

“ಒಂದ ಕಸಾ ಹೊಡಿತಾರ ಅನ್ನುದಿಲ್ಲ…….ಒಂದ ಪೂಜೆ ಮಾಡಾಕತ್ತಾರನ್ನುದಿಲ್ಲ …. ಏನ ಮಂದ್ಯೋ…….ಏನೋ…….
ಪೂಜಾ ಮಾಡಲಿಲ್ಲಾ ಅಂದ್ರ ೨೦೦೦ ರೂ ಕೂಡುದಿಲ್ಲ.” ಎನ್ನುತ್ತಾ ಕುಂಡಲಿ ಕೈಯಲ್ಲಿ ಹಿಡಿದು ನೋಡತೊಡಗಿದನು. ಕರಿಯವ್ವ ” ಅಬ್ಬಾ…..!! ” ಎಂದಳು.

“ಇವಂದೂ ಗವರ್ಮೆಂಟ ನೌಕರೀನ ಆದಂಗ ಆತಲ್ಲಾ……! ?” ಹುಬ್ಬೇರಿಸಿದಳು.

“ಹೋಗಲಿ ಸದ್ಯ ನನ್ನ ಸಮಸ್ಯಾ ಪರಿಹಾರ ಆದ್ರ ಸಾಕ ” ಎನ್ನುತ್ತಾ ಆತನ ಓದಿನಲ್ಲಿ ಮಗ್ನಳಾದಳು. ‌ಶಾಸ್ತ್ರಿ ನೀರಿನಿಂದ ಹೊರ ಬಿದ್ದ ಮೀನಿನಂತೆ ಚಡಪಡಿಸಿ : ” ನಮ್ಮ ಮನಿಗೆ ಹೋಗ್ರಿ….ನಮ್ಮ ಮಗಾ ಅದಾನ ಹೇಳತಾನ “ಎನ್ನುತ್ತಾ ಕುಂಡಲಿ ಕೆಳಗಿಟ್ಟ. ಕರಿಯವ್ವನಿಗೆ ಅಸಮಾಧಾನವಾಯ್ತು. ಅವಳು ಸಿಡಿಮಿಡಿಗೊಳ್ಳುತ್ತಾ ಶಾಸ್ತ್ರಿ ರೂಂ ಬಿಟ್ಟು ಹೊರಬಂದಳು.

ಶಾಸ್ತ್ರಿ ಮನೆ ಇರುವುದು ನೇಕಾರ ಪ್ಯಾಟಿ. ದೂರ ದೂರ ಅಷ್ಟು ದೂರ ನಡೆದು ಹೋಗಬೇಕಲ್ಲಾ ದೇವರೇ….” ಎಂದು ಮಿಡುಕಾಡಿದಳು. ಈ ಕುಂಡಲಿಗೂ ಮನುಷ್ಯನಿಗೂ ಏನಾದರೂ ಸಂಬಂಧ ಇದೆಯಾ…..! ? ಅದು ಹೇಗೆ……? ಯಾವ ಅಕ್ಷರವೂ ನಮ್ಮ ಹುಟ್ಟಿನ ಜೊತೆ ಹುಟ್ಟಿ ಬಂದಿಲ್ಲ. ಎಲ್ಲವೂ ಕಲ್ಪಿತ . ಮನುಷ್ಯ ಕಲ್ಪಿತ. ಏನಾದರೂ ಸುಡುಗಾಡು ಆಗಿ ಹೋಗಲಿ ಮದುವೆ ಮಾಡಿ ಬಿಟ್ಟರಾತು. ಎನ್ನುತ್ತಿದ್ದಂತೆ ಅವಳ ಅಂತರಾಳದಲ್ಲಿ ಮಹಾಭಾರತದ ಲವಕುಶರ ನೆನಪಾಯಿತು.

ಭೀಮ ಮಹಾ ಪರಾಕ್ರಮಿ ಆದರೆ ಪಾರ್ಥ ಬಿಲ್ವಿದ್ಯೆ ಪ್ರವೀಣ , ಲವಕುಶರು ಜೋತಿಷ್ಯ ಜ್ಞಾನಿಗಳು. ಮಹಾಭಾರತದ ವಿಚಾರಗಳು ಬದುಕಿನಲ್ಲಿ ಹಾಸುಹೊಕ್ಕಾಗಿವೆಯಲ್ಲಾ ಜೋತಿಷ್ಯವನ್ನ ಅಲ್ಲಗಳೆಯಲಾದೀತೇ….! ? ” ಕರಿಯವ್ವ ಒದ್ದಾಡುತ್ತಿದ್ದಳು.ಅವಳ ಒಬ್ಬಳೇ ಮಗಳ ಲಗ್ನ ಯಶಸ್ವಿಯಾಗಲಿ ಮದುವೆಯ ನಂತರ ಯಾವದೇ ತಂಟೆ ತಕರಾರುಗಳು ಬಂದು ಮದುವೆ ಮಸಣವಾಗಬಾರದೆಂಬುದು ಅವಳ ಹೋರಾಟವಾಗಿತ್ತು.

ಕರಿಯವ್ವ ಮಗಳಿಗೆ ತುಂಬಾ ಶಾಲೆ ಕಲಿಸಿದ್ದಾಳೆ. ಶಿಕ್ಷಣ ಕ್ಷೇತ್ರದಲ್ಲಿ ಟಾಪ ಒನ್ ಇಟ್ಟ ಕರಿಯವ್ವ ಮದುವೆ ವಿಷಯದಲ್ಲೂ ಗೆಲುವು ಸಾಧಿಸಬೇಕೆಂದು ನಿರಂತರ ಚಿಂತಿಸುತ್ತಿದ್ದಾಳೆ. ಹುಡುಗನಿಗೆ ಕುಂಡಲಿ ದೋಷ ಐತಿ ಅದರಾಗ ಮಂಗಳ ದೋಷ ಮಹಾ ದೋಷ. ಯಾವ ಪೂಜೆ ಪುನಸ್ಕಾರಕ್ಕೂ ಹೋಗದ ದೋಷ ” ಕರಿಯವ್ವನ ಅಕ್ಕನ ಮಗಳು ಚೆಲ್ವಿ ಹೇಳಿದಾಗ ಕರಿಯವ್ವ ಕೆಂಡಾಮಂಡಲವಾಗಿದ್ದಳು.

ಅವಳನ್ನು ನಿರಂತರ ಒಂದು ತಾಸು ಬಯ್ದು ಮನಸ್ಸು ಸಮಾಧಾನಪಡಿಸುವ ಪ್ರಯತ್ನ ಮಾಡಿಕೊಂಡಿದ್ದಳು.ಚೆಲ್ವಿಯ ಜೊತೆ ಕರಿಯವ್ವನ ಮಗ ‘ ಸೋ….’ ಎಂದದ್ದು ಅವಳ ಅಸಮಾಧಾನಕ್ಕೆ ವೇಗವರ್ಧಕ ಹಾಕಿದಂತಾಗಿತ್ತು. ಕರಿಯವ್ವ ಕಾಲಿಗೆ ಚಕ್ರ ಕಟ್ಟಿಕೊಂಡಂತಾಗಿತ್ತು.

ರಸ್ತೆಯ ಎಡ ಬಲ ಅಂಗಡಿಗಳು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತಲ್ಲೀನವಾಗಿದ್ದವು. ಬಸ್ಸುಗಳು ಬೈಕುಗಳು ಹೋಗುವ ಬರುವ ಕೆಲಸ ನಡೆದೇ ಇತ್ತು. ಪೈಸಾ ಹುಟ್ಟದ ಈ ಬೀದಿಯಲ್ಲಿ ಶಾಸ್ತ್ರಿ ದಿನಕ್ಕೆ ೨೦೦೦ ರೂ ‘……..!!!!!! ಹೂಂ’ ಹೂಂಕರಿಸಿದಳು ಕರಿಯವ್ವ. ಕರಿಯವ್ವ ನೇಕಾರ ಪ್ಯಾಟಿ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಅವಮಾನದಿಂದ ಕಂಗಾಲಾದಳು.

ತನ್ನನ್ನು ನೋಡಿಕೊಂಡು ತಾನೇ ನಕ್ಕಳೂ ಕೂಡಾ. ಇಪ್ಪತೊಂದನೇಯ ಶತಮಾನದಲ್ಲಿ ಮಂಗಳ ದೋಷ……!! ಚೆಲ್ವಿಯನೊಮ್ಮೆ ಮಗನನ್ನೊಮ್ಮೆ ನೆನಪಿಸಿಕೊಂಡು ಗುರಾಡಿದಳು. ಆದರೆ ಲವಕುಷರ ಜ್ಞಾನವನ್ನು ಅಲ್ಲಗಳೆಯದೇ ….ಲವಲವಿಕೆಯ ಹೆಜ್ಜೆಯನ್ನು ಹಾಕತೊಡಗಿದಳು.

ದಾರಿಯ ಎಡ ಬಲ ಮಗ್ಗಗಳದೇ ಸದ್ದು “ಲಟ್ ಪಟ್……ಲಟ್ ಪಟ್…..” ಸದ್ದು ಕೇಳಿದ ಕರಿಯವ್ವ ಕುತುಹಲದಿಂದ ಶಾಸ್ತ್ರಿಯ ಮನೆ ಬಾಗಿಲತ್ತ ನಡೆದಳು.

ತೆಳ್ಳನೆಯ ಬಳ್ಳಿಯಂತಹ ಮಹಿಳೆಯೊಬ್ಬಳು ನೂಲಿನ ಹಗ್ಗಕ್ಕೆ ತೊಳೆದ ಬಟ್ಟೆಗಳನ್ನು ಹಾಕುತ್ತಿದ್ದಳು.ಅವಳೇ ಶಾಸ್ತ್ರಿಯ ಸೊಸೆಯಂದು ಗುರುತಿಸಿಕೊಂಡು : ” ಅಕ್ಕರ …..ಅಜ್ಜಾರ ಅದಾರ್ಯಾ…….! ? ” ಎಂದು ಕೇಳಿದಳು. ಮಿಸ್ ಇಂಡಿಯಾ ಚೆಲುವಿಯನ್ನು ಹೋಲುವ ಅವಳು ಎದೆ ಮತ್ತು ಗೋಣುಗಳಲ್ಲಿ ಎಲುವುಗಳು ಮೇಲೆದ್ದಿದ್ದವು. ಶಾಸ್ತ್ರಿ ಮನೆಯಲ್ಲಿ ಊಟಕ್ಕೆ ಬರವೋ……ಚಿಂತಿಸಿದಳು .ಇಲ್ಲ ಇಲ್ಲ ….ಕೆಲಸದ ಒತ್ತಡವೆಂದು ರುಜುವಾತು ಪಡಿಸಿಕೊಂಡ ಅವಳು ಹೇಳಿದಳು :
“ಇಲ್ಲ. ….ರಿ …….ಈಗ …….ಹೊರಗ ಹೋದ್ರ…..” ಎಂದಳು.ಅವಳ ಮುಖ ವಿಷ ಕುಡಿದವರ ಹಾಗೆ ಕಹಿಯಾಗಿತ್ತು.

ಕರಿಯವ್ವ ಇಂಗು ತಿಂದ ಮಂಗನಂತಾದಳು. ‘ ಹಾಂ….’ ಮನಿಯಾಗ ನನ್ನ ಮಗಾ ಅದಾನಂತ ತಂದಿ ಹೇಳಿದ್ರ ……! ಮುಂಜಾನೇಳುತ್ತಲೇ ಅವನೆಲ್ಲಿಗೆ ಹೋಕ್ಕಾನ……! ? ಮನಿಗೆ ಇರುದು ಒಂದೇ ಬಾಗಿಲು….., ಮನಿಬಿಟ್ಟು ಹೊರಬಂದಿದ್ದರ…… ತನಗ ಆತ ಎದುರಾಗಲೇ ಬೇಕಿತ್ತು .ಇಲ್ಲ ಇಲ್ಲ ಆತ ತನಗ ಎದುರಾಗಿಲ್ಲ. ಅವಳ ಮಾತು ಸತ್ಯವನ್ನು ಕೊಲ್ಲಲು ಮಾಡಿದ ಪ್ರಯತ್ನವಾಗಿತ್ತು. ಮೂಢಳಂತೆ ಮತ್ತೆ ಕರಿಯವ್ವ ಅಂಗಲಾಚಿದ ಳು. : ಅಕ್ಕಾರ ……ಸ್ವಲ್ಪ ….ಕುಂಡಲಿ ತೋರಸುದಿತ್ತು.

ಮತ್ತೇನಿಲ್ಲ ರಿ……! ” ಎಂಬ ಅಭಯ ಕೊಟ್ಟಳು. ಅವಳು, “ನಿಲ್ಲರಿ ಫೋನ ಮಾಡತೇನಿ” ಎಂದು ಒಳಹೋದಳು . ಕರಿಯವ್ವ ಒಂಟಿಕಾಲಿನಲ್ಲಿ ಕಾಯತೊಡಗಿದಳು. ಮಂಗಳ ದೋಷ ಮಾಯವಾಗಿರಲಪ್ಪ ತಂದೆ ಎಂದು ದೇವರಲ್ಲಿ ಅವಳ ಪ್ರಾರ್ಥನೆ ಇತ್ತು.ಇನ್ನೂ ಒಂದು ನಿಮಿಷ ಸಹ ಆಗಿರ ಲಿಲ್ಲ.

ಮಗ ಶಾಸ್ತ್ರಿಯ ಮಗ ತುಂಬು ವಯಸ್ಸಿನವ ಕೈಯಲ್ಲಿ ಒಂದು ಚೀಲ ಹಿಡಿದು ಬಡಾನೇ…..ಚಾಪಿಯ ಮೇಲೆ ಕುಳಿತುಕೊಂಡನು. ಕರಿಯವ್ವ ಮತ್ತಷ್ಟು ದಿಗ್ಬ್ರಮೆಗೊಂಡಳು ” ಶಾಸ್ತ್ರಿ ಜೋತಿಷ್ಯ ತಾನಷ್ಟೇ ಕಲಿವುದಲ್ಲದ ವಯಸ್ಸಿನ ಮಗನಿಗೂ ಇದನ್ನೇ ಉದ್ಯೋಗವಾಗಿಸಿದ್ದನಲ್ಲ…..ಅದರಲ್ಲಿ ಹುಟ್ಟುವ ಹಣದ ಕುರಿತು ಲೆಕ್ಕ ಹಾಕಿದ ಳು. ಸಾಕಷ್ಟು ಬೀದಿಗಳಲ್ಲಿ ಅವಳು ನೋಡಿದ್ದಾಳೆ.

ದುಡ್ಡು ಹುಟ್ಟದೇ ಅಂಗಡಿ ಕಿತ್ತವರನ್ನು, ಗಿರಾಕಿ ಸಿಗದೇ ಧೂಳು ಹೊಡೆವ ಅಂಗಡಿಗಳನ್ನು . ಆದರೆ ಈ ಶಾಸ್ತ್ರಿ ಈ ಶಾಸ್ತ್ರಿಯ ಮಗನಿಗೆ ಬಂದು ಬೀಳುವ ದುಡ್ಡು ಎಣಿಸಲು ಪುರುಸತ್ತು ಸಿಗದಂತೆ ಇದ್ದಾರೆ. ಅದು ಹೇಗೆ ಎನ್ನುತ್ತಿದ್ದವಳಿಗೆ….ನಂಬಿಕೆ ಮುಖ್ಯ . ನಂಬಿಕೆಯೇ ದೇವರು ಎಂಬ ನುಡಿಯೊಂದು ಮಿಂಚಿಮಾಯವಾಗುತ್ತಿದ್ದಂತೆ ಕರಿಯವ್ವ ಕೈಯಲ್ಲಿಯಕುಂಡ ಲಿ ಆತನ ಕೈಗೆ ಕೊಟ್ಟು : ” ಈ ಕುಂಡ ಲಿಗೆ ಮಂಗಳ ದೋಷ ಏನಾದ್ರೂ ಇದೆಯೇ …..ನೋಡ್ರಿ….! ? ” ಎಂದ ಳು.

ಕುಂಡಲಿಯ ಮೇಲೆ ಕೆಳಗೆ ಆತ ನೋಡಿದ. ” ಕ್ರಾಸನ್ಯಾಗ ಹಾಕಿರ್ತಾರ ಕುಂಡಲಿ ಅದು ಬೇಕ್ರಿ ಅದು ” ಉತ್ತರಿಸಿದ. ಅದನ್ನೂ ಕರಿಯವ್ವ ಇಲ್ಲಿ ಇಲ್ಲಿ ಐತಿ ನೋಡ್ರಿ ” ಎಂದು ಕೆಳಪುಟ ತೆರೆದು ತೋರಿಸಿದಳು.ಆತ ಅದನ್ನು ನೋಡುತ್ತಾ…. ಇದುರಿ ಅಪ್ಪಗ ಗೊತ್ತರಿ…..ಅಲ್ಲೇ ಕೇಳ ಬೇಕ್ರಿ….? ” ಎಂದನು.

ಅಲ್ಲಿ ಕೇಳಿದ್ರ ಇಲ್ಲಿ,ಇಲ್ಲಿ ಕೇಳಿದ್ರ ಅಲ್ಲಿ.. ಅಯ್ಯೋ…. ಈ ವಿದ್ಯೆನಾ ನಾ ಯಾಕ ಕಲಿಲಿಲ್ಲಾ…..!….? ” ಎಂದು ಕರಿಯವ್ವ ಮನದಲ್ಲಿ ಹಳಹಳಿಸಿ ; ಅಲ್ಲಿ ಕೇಳಿದ್ನೆರಿ ಅವ್ರು ಇಲ್ಲಿಗೆ ಕಳಿಸಿದ್ದ್ರು ಎಂದ ಳು. ಆತ ಹೌದ್ರ್ಯಾ….ಹಂಗಾರ ರಾಮಾಜೋಷಿ …ಕ್ರಿಷ್ಮಾ ಟಾಕೀಜಿನ ಹತ್ರ ಅದಾರ ನೋಡ್ರಿ ಅವ್ರಿಗೆ ತೋರಿಸ್ರಿ…” ಎಂದು ಹೇಳಿ ಕೈ ತೊಳೆದುಕೊಂಡ. ಕರಿಯವ್ವನ ಸಮಸ್ಯೆ ಸಮಸ್ಯೆ ಆಗಿಯೇ ಉಳಿಯಿತು.

ಇಡೀ ದಿನ ಜೋತಿಷ್ಯದಲ್ಲೇ ಕಾಲ ಕಳೆವ ಇವನು ಮನಿತನ ಬಂದ್ರೂ ತೆಗೆಸಿದ ಕುಂಡ ಲಿ ಓದಿ ಹೇಳದ ಅಜ್ಜನ ಕುರಿತು ಬೇಜಾರಾಯಿತು. ಇಡೀ ದಿನ ಬಜಾರದಲ್ಲಿ ಬಂದ ಜನರಿಂದ ಕಾಲು ಮುಗಿಸಿಕೊಂಡು ಹಣ ತಗೊಂಡು ಬ್ಯಾಗಿಗೆ ಹಾಕ್ಕೊಂಡು ಬರ್ತಾನ. ಎಲ್ಲಾ ಜನಾ ಅಜ್ಜಾ , ಅಜ್ಜಾ ಅಂತಾರ ಅದಕ್ಕಾರ ಕಿಮ್ಮತ್ತ ಕೊಡಬಾರದ.ಅಜ್ಜನ ಮಗನ ಮಾತು ಕರಿಯವ್ವನಿಗೆ ಸುಳ್ಳಾಗಿ ಕಂಡಿತು. “ಅಯ್ಯೋ….ದೇವರೇ ಈ ಕುಂಡಲಿ ತಿಳಿಯಲು ಹೋಗಿ ಸಾಕಾಯ್ತು.”ಎಂದು ನಿಟ್ಟುಸಿರು ಬಿಟ್ಟಳು.

ದುಡ್ಡಿಗೆ ಕೈಯೊಡ್ಡಿದ ಆತನಿಗೆ ಹಣ ಕೊಟ್ಟು ಹೊರ ಬಂದ ಕರಿಯವ್ವನ ಮನಃಪಟಲದ ಮೇಲೆ ಅಜ್ಜ ಅವನ ಅಂಗಡಿ ಆ ಅಂಗಡಿ ಮುಂದೆ ಅಡ್ಡಾಡುವ ಗೂಳಿ ಆ ಗೂಳಿ ದೇವರ ಗೂಳಿ ಅದಕ್ಕ ಕಲ್ಲು ಒಗೀಬಾರ್ದು ಎನ್ನುವ ಜನ , ನಮಸ್ಕರಿಸುವ ಜನ , ಅದಕ್ಕೆ ಹಣ್ಣುಕೊಡುವ ಜನ ಅವಳ ಕಣ್ಣ ಮುಂದೆ ಸುಳಿಯತೊಡಗಿದರು. ರೊಟ್ಟಿ ತಿನ್ನಲು ಕೊಡುತ್ತಿದ್ದ ಮುದುಕಿಯೊಬ್ಬಳಿಗೆ ಕೊಬ್ಬಿದ ಗೂಳಿ ತನ್ನ ಕೋಡಿನಿಂದ ನೆವರುವ ಚಿತ್ರ ಕಂಡ ಕರಿಯವ್ವ ಬೆವೆತು ಹೋದಳು.

ಪತ್ತೆ ಹತ್ತದ ಮಂಗಳ ದೋಷವನ್ನು ಅವಳ ಅಪನಂಬಿಕೆ ಮೆಟ್ಟಿ ಹಾಕಿತ್ತು. ಈ ನಂಬಿಕೆಯನ್ನು ಸುಟ್ಟು ಹಾಕಿ ಕಾಯ ವಾಚಾ ಮನಸಾ ಶುದ್ದಿಯಾಗಿದ್ದುಕೊಂಡು ಹೊಸ ಮನೆಯ ಹೊಸ್ತಿಲೇರಳು ಅವಳು ಮಗಳನ್ನು ತಯಾರು ಮಾಡತೊಡಗಿದಳು…

ಯಮುನಾ ಕಂಬಾರ, ರಾಮದುರ್ಗ

Latest News

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ....

More Articles Like This

error: Content is protected !!
Join WhatsApp Group