ಅಪ್ಪನ ನೆನಪು
(ಹೆತ್ತ ಒಡಲು ಹೊತ್ತ ಹೆಗಲು ಎರಡು ಇಲ್ಲವಾದ ಘಳಿಗೆ)
ಕರುಳ ಬಳ್ಳಿಯ ಕುಡಿಯು
ಹೊಸ ಬೆಳಕು ಕಾಣುತಿದೆ
ಹೃದಯ ಸುಮಗಳ ಸೊಂಪ
ಸುರಿಸಬನ್ನಿ….
ಜೊತೆ ಬಾಳ ಸಿಹಿ ಕಹಿಯ
ಸಮರಸವ ತಿಳಿ ಹೇಳಿ
ಹಸೆ ಮಣೆಯ ಹಸುಳರನು
ಹರಸಬನ್ನಿ …..
ಎಂದೆನ್ನ ಹಾರೈಸಿ ಮರೆಯಾದ
ಕವಿ ಹೃದಯಿ…ನನ್ನಪ್ಪ
ಬಚ್ಚಿಡದೆ ಬಿಚ್ಚಿಟ್ಟ
ಬಯಲಂಥ ಬದುಕು
ನಿನದಪ್ಪ..
ಸಾವಿರ ಸಿರಿ ಸೂರೆಗೊಂಡರೂ
ಸಿಗಲಾರದ ಪ್ರೀತಿಯ
ಸಿರಿಯಲ್ಲಿ ಸೆರೆ ಹಾಕಿದ
ಸಿರಿವಂತ…..ನನ್ನಪ್ಪ
ಮನಗಳ ನಡುವಿನ
ಗೋಡೆಯ ಕೆಡವಿ
ಹೃದಯಗಳ ನಡುವೆ
ಸೇತುವೆ ಕಟ್ಟಿದ
ಅಭಿಯಂತ….
ಸಾವಿರ ಕೊರತೆಗಳ
ನಡುವೆಯೂ ಬತ್ತದ ಪ್ರೀತಿಯ
ಒರತೆ ಹರಿಸುತ
ಹಣದಿಂದಲ್ಲ ಗುಣದಿಂದಾಳಿದ
ಧೀಮಂತ…..ನನ್ನಪ್ಪ
ಆಸ್ತಿ ಅಡವಿಗೆ ಆಸೆ ಪಡದೆ
ಕಾಂಚಾಣವ ಕಡೆಗಣ್ಣಲೂ
ನೋಡದೆ ನೇರ ನಡೆದು
ಎಲ್ಲರ ಹೃದಯಕೆ ಲಗ್ಗೆ ಹಾಕಿದ
ಹೃದಯವಂತ….
ಅಂತರಂಗದಿ ಅಡಗಿಹ
ಕೆಸರ ಹೊರಹಾಕಿ
ತಿಳಿ ನೀರ ಕೊಳವಾಗಿಸಿದ
ಹುದುಗಿದ ದ್ವೇಷದ ಹೂಳೆತ್ತಿ
ಪ್ರೀತಿಯ ಅಂತರ್ಜಲ
ಸ್ಫುರಿಸಿದ ಹೆಂಗರುಳು.,.ನನ್ನಪ್ಪ.
ಇಟ್ಟಿಗೆ ಗಾರೆಯ ಮನೆ ಕಟ್ಟದೇ
ಎಲ್ಲರ ಮನದಲ್ಲೇ ಮನೆ ಕಟ್ಟಿ
ನೆಲೆಸಿದ ಪ್ರೀತಿಯ ನನ್ನಪ್ಪ..
ಹಗಲ ಬಟ್ಟೆಯ ತೊಟ್ಟು,
ಹೆಗಲ ಮೇಲೆ ನನ್ನ ಹೊತ್ತು
ಮುಗಿಲ ತೋರಿಸಿದ ಸರದಾರ…ನನ್ನಪ್ಪ
ನಿನಗೆ ನೀನೇ ಸಾಟಿಯಪ್ಪ
ನಿನ್ನಂತೆ ಬೇರಾರೂ ಇಲ್ಲ ನನ್ನಪ್ಪ….
— ಇಂದಿರಾ ಮೋಟೆಬೆನ್ನೂರ. ಬೆಳಗಾವಿ.