spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಮಹಾಶರಣ ಆದಯ್ಯ

ಶರಣ ಚಳವಳಿಯಲ್ಲಿ ಕನ್ನಡೇತರ ಅನೇಕ ಶರಣ ಶರಣೆಯರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಅವರಲ್ಲಿ ತೆಲಗು ಮಸಣೇಶ, ಮಾದಾರ ಚೆನ್ನಯ್ಯ ಬೊಂತಾದೇವಿ ಕಾಶ್ಮೀರದ ಮಹಾದೇವ ಭೂಪಾಲ ಮುಂತಾದ ನೂರಾರು ಶರಣರಲ್ಲಿ ,ಆದಯ್ಯನೂ ಒಬ್ಬನು .

ಆದಯ್ಯನ ರಗಳೆ(ಹರಿಹರ) ಸೋಮನಾಥ ಚರಿತ್ರ(ರಾಘವಾಂಕ) ಮೊದಲಾದ ಕೃತಿಗಳಲ್ಲಿ ಚಿತ್ರಿತನಾದ ಆದಯ್ಯ ಮೂಲತಃ ಗುಜರಾತದ ಸೌರಾಷ್ಟ್ರದವನು. ಇತನ ಕಾಲ ಸಾ ಶ 1165. ಆದಯ್ಯ ಬಸವಣ್ಣನವರ ಕಾಲದ ವಚನಕಾರ. ಜನ್ಮಸ್ಥಳ ಗುಜರಾತಿನ ದ್ವಾರಕಾನಗರ. ದೋರದತ್ತ ಮತ್ತು ಪುಣ್ಯವತಿಯರ ಮಗ. ವಂಶವೃತ್ತಿ ವ್ಯಾಪಾರ. ವರ್ತಕರ ಮನೆಯಲ್ಲಿ ಹುಟ್ಟಿ ಬಾಲ್ಯದಲ್ಲಿ ಬಹಳ ಸೂಟಿಯಾಗಿದ್ದುದರಿಂದ ವ್ಯವಹಾರಕುಶಲನಾಗಿ ಬಹುಭಾಷಾವಿಶಾರದನಾದ. ಬನಿಯಾ ಅಥವಾ ಬಣಜಿಗನಾದ ಈತನು ಊರಿನಿಂದ ಊರಿಗೆ ವಲಸೆಯಾಗಿ ವ್ಯಾಪಾರ ಮಾಡಲು ಹೋಗಿ ಅಣ್ಣಿಗೇರಿ- ಪುಲಗೇರಿ ನಾಡಿನಲ್ಲಿ ಸಂಚರಿಸುತ್ತಾ ವ್ಯವಹಾರ ಮಾಡುತ್ತಿದ್ದನು. ಬಣಜಿಗ ಎಂದರೆ, ಬಣ ಜಿನ ಇರಬಹುದು, ಅಂದರೆ ಜೈನರ ಬಣ, ಮುಂದೆ ಇದೇ ‘ಬಣಜಿಗ’ ಆಗಿರುವ ಸಾಧ್ಯತೆ ಇದೆ.

- Advertisement -

ಪುಲಿಗೆರೆ ಅಂದರೆ ಇಂದಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿ ವಾಸ ಮಾಡಿ ತನ್ನ ವ್ಯಾಪಾರ ವಹಿವಾಟವನ್ನು ನಡೆಸುತ್ತಾನೆ. ಆಗ ಅಲ್ಲಿ ಪದ್ಮಾವತಿ ಎಂಬ ಜೈನ ಕನ್ಯೆಯನ್ನು ಪ್ರೀತಿಸಿ ಮದುವೆಯಾದನು . ಈ ಮದುವೆಗೆ ಪದ್ಮಾವತಿಯ ತಂದೆ ಒಪ್ಪದಿದ್ದಾಗ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನು ತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸೋಮೇಶ್ವರನನ್ನು ಸ್ಥಾಪಿಸಿ ತಾನೊಬ್ಬ ನಿಜ ಶಿವ ಭಕ್ತನೆಂದು ಹೇಳಿಕೊಂಡನು. ಈತನೇ ವಚನಕಾರ ಆದಯ್ಯ ಎಂದು ನಂಬಲಾಗಿದೆ.

ಕರ್ನಾಟಕದ ಬಹು ಪ್ರಸಿದ್ಧ ಜೈನರ ನಗರಿಯಾದ ಪುಲಿಗೆರೆ ಅಥವಾ ಈಗಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿನ ಜೈನಧರ್ಮಾವಲಂಬಿಯಾದ ಪಾರಿಶೆಟ್ಟಿಯ ಏಕೈಕ ಪುತ್ರಿ ಪದ್ಮಾವತಿಯನ್ನು ಮದುವೆಯಾಗಿ ಸೌರಾಷ್ಟ್ರದ ಸೋಮನಾಥನನ್ನು ತಂದು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಿ (1100) ಸೋಮನಾಥನಲ್ಲಿದ್ದ. ಪರಮನಿಷ್ಠೆಯಿಂದ ಮುಂದೆ ಸೌರಾಷ್ಟ್ರ ಸೋಮೇಶ್ವರ ಎಂಬ ಅಂಕಿತವನ್ನಿಟ್ಟುಕೊಂಡು ಪ್ರಸಿದ್ಧ ವಚನಕಾರನೆನಿಸಿಕೊಂಡನು. ʼಸೌರಾಷ್ಟ್ರ ಸೋಮೇಶ್ವರಾʼ ಮುದ್ರಿಕೆಯಲ್ಲಿ ಇವನ 403 ವಚನಗಳು ಈ ವರೆಗೆ ಲಭ್ಯವಾಗಿವೆ. ಈ ಮುದ್ರಿಕೆಯ ಜೊತೆಗೆ ಕೆಲವೊಮ್ಮೆ ಮಲ್ಲಿಕಾರ್ಜುನ ಎಂಬುದೂ ಕಂಡಬರುತ್ತಿರುವುದು ಶೋಧನೀಯ ಅಂಶವಾಗಿದೆ. ವಚನಗಳಲ್ಲದೆ ಇವನು ಕೆಲವು ಸ್ವರವಚನಗಳನ್ನು ಬರೆದಿದ್ದು ಈ ಎರಡೂ ಬಗೆಯ ರಚನೆಗಳಲ್ಲಿ ಆದಯ್ಯನವರ ಸಾಹಿತ್ಯಿಕ ಹಾಗೂ ತಾತ್ವಿಕ ಪ್ರೌಢಿಮೆ ಎದ್ದು ಕಾಣುತ್ತದೆ. ವಚನಗಳಲ್ಲಿ ರೇವಣಸಿದ್ಧಯ್ಯ, ಮರುಳಸಿದ್ಧಯ್ಯ, ಏಕೋರಾಮಯ್ಯ, ಪಂಡಿತಾರಾಧ್ಯರ ಹೆಸರು ಉಕ್ತವಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಶರಣ ಧರ್ಮ ತತ್ವಗಳ ವಿವೇಚನೆ ಆದಯ್ಯನವರ ವಚನಗಳಲ್ಲಿ ವ್ಯಾಪಕವಾಗಿ ನಡೆದಿದೆ. ಸಾಹಿತ್ಯಿಕ ಸತ್ವ, ತಾತ್ವಿಕ ಪ್ರೌಢಿಮೆ ಎರಡೂ ಇವರ ವಚನಗಳಲ್ಲಿ ಮೇಳೈಸಿರುವುದು ವಿಶೇಷವೆನಿಸಿದೆ. ಇವನ ವಚನಗಳ ಮೇಲೆ ಬಸವಣ್ಣ – ಅಲ್ಲಮರ ಪ್ರಭಾವ ವಿಶೇಷವಾಗಿ ಆಗಿದೆ. ಶರಣ ಚಳುವಳಿಯ ಪ್ರಮುಖರಲ್ಲಿ ಆದಯ್ಯ ಒಬ್ಬ ಲಿಂಗಾಯತದ ವೈಶಿಷ್ಟ್ಯವನ್ನು ಚೆನ್ನಾಗಿ ತಿಳಿಯಪಡಿಸಿರುವನು, `ವೇದಗಳ ಹಿಂದೆ ಹರಿಯದಿರು ಎಂದು ಹೇಳುವ ಮೂಲಕ ಶರಣಧರ್ಮಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದು, ಇವರ ವಚನಗಳಲ್ಲಿ ಬೆಡಗಿನ ವಚನಗಳು ಸಾಕಷ್ಟು ಬಳಕೆಗೊಂಡಿವೆ.
ದೊರೆತಿರುವ ಈತನ ವಚನಗಳಲ್ಲಿ ಹೆಚ್ಚು ತತ್ವನಿರೂಪಣೆಗೆ ಸಂಬಂಧಿಸಿದುವು. ಬೆಡಗಿನ ವಚನಗಳನ್ನು ಬಿಟ್ಟರೆ ಉಳಿದ ವಚನಗಳ ಶೈಲಿ ನೇರವಾಗಿದೆ, ಸರಳವಾಗಿದೆ.

ಹೊರನಾಡಿನಿಂದ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿ ಹಾಡಿದ ಆದಯ್ಯನ ಹೆಸರು ಕನ್ನಡ ನಾಡಿನ ಜನಮನದಲ್ಲಿ ಆಚಂದ್ರಾರ್ಕವಾಗಿ ಉಳಿಯುತ್ತದೆ. ಇತಿಹಾಸ, ತತ್ವನಿರೂಪಣೆ ಮತ್ತು ಶಿವಾನುಭಾವ ಮಾರ್ಗಗಳಲ್ಲಿ ಚಿರಂತನವಾಗಿರುತ್ತದೆ. ಆದಯ್ಯ ಕಾವ್ಯಗಳಲ್ಲಿ ಪರವಸ್ತುವಿನ ಅಸ್ತಿತ್ವವನ್ನು ಪ್ರಸ್ತಾಪಿಸುವ ಕಟುತರ ನಿಷ್ಠೆಯುಳ್ಳ ಕಲಿಯಾಗಿ ಕಾಣುತ್ತಿದ್ದರೆ ವಚನಗಳಲ್ಲಿ ಮಹಾನುಭಾವಿಯಾಗಿ ಶ್ರೇಷ್ಠನಾದ ಪಂಡಿತನಾಗಿ ಕಂಗೊಳಿಸುತ್ತಿದ್ದಾನೆ. ಅವರ ಕೆಲವು ವಚನಗಳ ವಿಶ್ಲೇಷಣೆಯನ್ನು ನೊಡೋಣ..

- Advertisement -

1. ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮ[ದ] ಉಭಯದನುವನೇನೆಂಬೆನಯ್ಯಾ,
ಅಂಗದೊಳಗೆ ಅನುಭಾವಸಾಹಿತ್ಯ, ಆಚಾರಲಿಂಗಸಂಬಂಧ.
ಚಿದಂಗದೊಳಗೆ ಸ್ವಾನುಭಾವ ಸಮ್ಯಕ್‍ಜ್ಞಾನದುದಯ, ಪ್ರಾಣಲಿಂಗಸಂಬಂಧ.
ಇಂತೀ ಉಭಯದನುವನಾನೇನೆಂಬೆನಯ್ಯಾ.
ಅರಿವಿನೊಳಗನುಭವ, ಅನುಭವದೊಳಗರಿವಿಪ್ಪಂತೆ
ಭಕ್ತನೊಳಗೆ ಜಂಗಮ, ಜಂಗಮದೊಳಗೆ ಭಕ್ತ.
ಇಂತೀ ಭಕ್ತ ಜಂಗಮದ ಸಕೀಲಸಂಬಂಧವಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರು.

ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮದ
ಉಭಯದನುವನೇನೆಂಬೆನಯ್ಯಾ.

ದೇಹ ಪ್ರಾಣ ಇವೆರಡರಲ್ಲೂ ಒಂದಕ್ಕೊಂದು ಸಹಕಾರವಿದ್ದಲ್ಲಿ ಈ ಬದುಕು ಸುಂದರ,
ಪ್ರಾಣಕ್ಕೆ ದೇಹವಾಶ್ರಯ, ದೇಹವಿಲ್ಲದ ಪ್ರಾಣ ನಿಷ್ಪ್ರಾಣವಾದಂತೆ,
ಭಕ್ತನಾದ ಮೇಲೆ ಜಂಗಮ(ಜಾತಿರಹಿತವಾದ ವ್ಯಕ್ತಿತ್ವಗಳ)-ಸಮಾಜದೊಳಿರಬೇಕು, ತಾನು ಭಕ್ತನಾಗಿ ಇಡೀ ಸಮಾಜವೇ ಜೀವ ಜಗತ್ತೆಲ್ಲ ಶಿವನ ಪ್ರತೀಕವೆಂದು ಭಾವಿಸುವುದೆ ಬೆರೆಯಬೇಕು.

ಅಂಗದೊಳಗೆ ಅನುಭಾವಸಾಹಿತ್ಯ, ಆಚಾರಲಿಂಗಸಂಬಂಧ. ಚಿದಂಗದೊಳಗೆ ಸ್ವಾನುಭಾವ ಸಮ್ಯಕ್‍ಜ್ಞಾನದುದಯ, ಪ್ರಾಣಲಿಂಗಸಂಬಂಧ. ಇಂತೀ ಉಭಯದನುವನಾನೇನೆಂಬೆನಯ್ಯಾ.

ಅಂಗವ ಧರಿಸಿ ಬಂದ ಬಳಿಕ ಸುಖ ದುಃಖಗಳ ತನ್ನವೆಂದು ನರಳುವವ ಭವಿ,
ನಾನು ನನ್ನದು ತನ್ನದು ಎಂಬ ಉಭಯ ಸಂದೇಹವಳಿದವ ಅನುಭಾವಿ ಜಂಗಮ,
ಇಂತಪ್ಪ ಅನುಭಾವ ಸಾಹಿತ್ಯವಾದ ಬಳಿಕ ಆತನ ಆಚರಣೆಗಳೆಲ್ಲವೂ ಲಿಂಗಮಯ,
ಆತನ ಸಂಗವೇ ಸದಾಚಾರ ಆತನೇ ಆಚಾರಲಿಂಗಸಂಬಂಧಿ, ಚಿನ್ಮಯನ ಚಿದ್ಬೆಳಕು ತುಂಬಿರುವ ಈ ಅಂಗ ಚಿದಂಗ,ಮಾಣಿಕ್ಯದಂತೆ ಸ್ವಪ್ರಕಾಶಮಾನವಾಗಿ ಬೆಳಗುವ ಜ್ಞಾನ ತುಂಬಿದ, ಈ ಚಿದಂಗದಲ್ಲಿ ಸ್ವಾನುಭಾವ ಪರಿಪೂರ್ಣವಾದ ಜ್ಞಾನ ತುಂಬಿದ್ದರೂತುಳುಕದವ ಸಂಯಮಜ್ಞಾನಿ, ಆತನ ಜ್ಞಾನವೇ (ಸಮ್ಯಕ್ ಶ್ರೇಷ್ಠ ಜ್ಞಾನದುದಯ)ಆತನೇ ಪ್ರಾಣಲಿಂಗಸಂಧಿ ಜಂಗಮ,

ಅರಿವಿನೊಳಗನುಭವ, ಅನುಭವದೊಳಗರಿವಿಪ್ಪಂತೆ
ಭಕ್ತನೊಳಗೆ ಜಂಗಮ, ಜಂಗಮದೊಳಗೆ ಭಕ್ತ.
ಇಂತೀ ಭಕ್ತ ಜಂಗಮದ ಸಕೀಲಸಂಬಂಧವಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರು.

ಜಂಗಮನ ಅರಿವಿನಲ್ಲಿ’ ಅಪೂರ್ವವಾದ ಅನುಭವ ತುಂಬಿದೆ,
ಜಂಗಮನ ಅನುಭವದಲ್ಲಿ’ ಅಗಮ್ಯವಾದ ಅರಿವು ತುಂಬಿಕೊಂಡಿದೆ, ಭಕ್ತನಲ್ಲಿಯ ಜಂಗಮಪ್ರಜ್ಞೆ ಅರಿವಿನಲ್ಲಿ ಕಾಣುವಂತೆ, ಜಂಗಮನಲ್ಲಿನ ಭಕ್ತಿಪ್ರಜ್ಞೆ ಅರಿವು ಆಚಾರ ಅನುಭಾವದಲ್ಲಿ ಕಾಣುತ್ತದೆ, ಕಾಯ ಭಕ್ತನಾದಡೆ, ‘ಪ್ರಾಣ ಜಂಗಮದಂತೆ’.
ಜಂಗಮನೆಂದಡೆ ಜೀವಚೈತನ್ಯ, ಮತ್ತು ಜೀವಚೈತನ್ಯದ ಅರಿವುಳ್ಳ ಅಂತಃಕರಣವೇ ‘ಜಂಗಮ’
ಇಂತೀ ಭಕ್ತ ಜಂಗಮದ ಸಕೀಲಸಂಬಂಧವ #ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರೆನ್ನುತ್ತಾರೆ ಶರಣ ಆದಯ್ಯನವರು.

2.ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ,
ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ

ತನುವಿನಲ್ಲಿ ನಿರ್ಮೋಹ’
ದೇಹದ ಮೋಹಕ್ಕಾಗಿ ಸೌಂದರ್ಯ ವರ್ಧಕಗಳ ಬಳಕೆ ಮಾಡದೆ’ ಶ್ರೀವಿಭೂತಿಯನ್ನೇ ಧರಿಸಿ ದೇಹದ ವ್ಯಾಮೋಹವನ್ನೇ ಸುಟ್ಟು ಭಸ್ಮ ಮಾಡಿದರು ಶರಣರು. ಕಾರಣ ಶಾಶ್ವತವಲ್ಲದ ಈ ದೇಹವನ್ನು ಅಂದ ಚೆಂದಕ್ಕಾಗಿ ನೊಡದೆ, ಪರಿಶ್ರಮದ ಕಾಯಕದಲ್ಲಿ ದಂಡಿಸಿ ಬೆವರು ಸುರಿಸಿ ದುಡಿದು ತಂದು ತನಗೆ ಬೇಕೆಂಬ ಮೋಹಕ್ಕೆ ಒಳಗಾಗದೆ,‘ಸೋಹಂ ಎನ್ನದೇ ದಾಸೋಹಂ’ ಎಂದರು ಶರಣರು ತನುವಿನಲ್ಲಿ ನಿರ್ಮೋಹಿಗಳಾದರು, ಶರಣರು ಬಾಹ್ಯ ಸೌದರ್ಯಕ್ಕೆ ಮಾರುಹೋಗದೇ ಆಂತರಿಕ ಸೌಂದರ್ಯದ ಅರಿವನ್ನು ಕಂಡುಕೊಂಡವರಾಗಿದ್ದರು. ಆದ್ದರಿಂದ ತನುವಿನಲ್ಲಿ ನಿರ್ಮೋಹ ಎಂದಿದ್ದಾರೆ.

‘ಮನದಲ್ಲಿ ನಿರಹಂಕಾರ’
ಅವರೆಷ್ಟೇ ಅರಿವುಳ್ಳ ಜ್ಞಾನಿಗಳಾದರೂ ಪರಮ ದಾಸೋಹಿಗಳಾದರೂ ಮಹಾನ್ ಶರಣರೆನಿಸಿಕೊಂಡರೂ ಅವರ ಮನದಲ್ಲಿ ಕಿಂಚಿತ್ತೂ ಅಹಂಕಾರಕ್ಕೆ ಜಾಗವಿರುತ್ತಿರಲಿಲ್ಲ.. ಅವರ ಮನದಲ್ಲಿ ನಿರಹಂಕಾರ ತುಂಬಿ ಬಾಗಿದ ತಲೆ ಮುಗಿದ ಕೈಗಳು ಶರಣು ಶರಣಾರ್ಥಿ ಎಂಬ ಶರಣರ ಮನ ಮಹಾಲಿಂಗಮನ,

‘ಪ್ರಾಣದಲ್ಲಿ ನಿರ್ಭಯ’
ಶರಣರಲ್ಲಿ ಯಾವುದೇ ಪ್ರಾಣ ಭಯವಿರಲಿಲ್ಲ, ಅವರು ಮಾಡಬೇಕೆಂದ ಕಾರ್ಯಗಳಲ್ಲಿ, ಸಮಾಜೋಧಾರ್ಮಿಕ ಕ್ರಿಯೆಗಳಲ್ಲಿ, ದಯೆ ಕರುಣೆ ಸಮತೆ ಪ್ರೀತಿ ತುಂಬಿದ ಅವರಲ್ಲಿ ಸ್ವಲ್ಪವೂ ಪ್ರಾಣಭಯವಿರಲಿಲ್ಲ. ಕಾರಣ ಅವರಲ್ಲಿ ಇದ್ದದ್ದು ಅನ್ಯಾಯವನ್ನು ಖಂಡಿಸುವ ನ್ಯಾಯ ನಿಷ್ಠೂರತೆ’ ಸರ್ವ ಸಮಾನತೆಯ ಕಲ್ಯಾಣ ರಾಜ್ಯವ ಕಟ್ಟುವ ದಿಟ್ಟಗುರಿ ಮಾತ್ರ.

‘ಚಿತ್ತದಲ್ಲಿ ನಿರಪೇಕ್ಷೆ’
ಅವರ ಚಿತ್ತದಲ್ಲಿ ಸುಳಿವ ಯೋಚನೆಗಳು ಮತ್ತು ಯೋಜನೆಗಳು ಸ್ವಾರ್ಥ ಸಾಧನೆಯ ಇಚ್ಚೆಗಳಲ್ಲ, ಲೊಕ ಕಲ್ಯಾಣದ ಶ್ರೇಷ್ಠ ಚಿಂತನೆಗಳು. ಅವರ ಕಾಯಕದಿಂದ ಬಂದ ಪರಿಶ್ರಮದ ಫಲವನ್ನೂ ನಾಳೆಗೆಂದು ತೆಗೆದು ಇಟ್ಟವರಲ್ಲ ಶರಣರು, ಅಂದಂದಿನ ಪರಿಶ್ರಮದ ಫಲವನ್ನು ಅಂದಂದೇ ದಾಸೋಹಕ್ಕಾಗಿ ವಿನಿಯೋಗಿಸಿ ಮತ್ತೆ ಮರುದಿನ ಕಾಯಕಕ್ಕೆ ಅಣಿಯಾಗುತ್ತಿದ್ದರು ಶರಣರು. ಅವರ ಚಿತ್ತದಲ್ಲಿ ಎಂದೂ ಸ್ವಾರ್ಥದ ಅಪೇಕ್ಷೆಗಳು ಹುಟ್ಟಲೇ ಇಲ್ಲ. ಅವರ ಚಿತ್ತದಲ್ಲಿ ಇದ್ದದ್ದು ‘ನಿರಪೇಕ್ಷೆ ಮಾತ್ರ’

‘ವಿಷಯಂಗಳಲ್ಲಿ ಉದಾಸೀನ’
ಲೌಕಿಕದ ಮೋಹ, ಕಾಮ ಕ್ರೋಧಗಳು, ಅವರ ಹತ್ತಿರ ಎಂದೂ ಸುಳಿಯದಂತೆ ನೊಡಿಕೊಂಡರು, ಅವರಲ್ಲಿ ಇದ್ದ ವಿಷಯ ಕಾಮದ್ದಲ್ಲ,‘ಸರ್ವಸಮಾನತೆಯ ವಿಶ್ವಪ್ರೇಮದ್ದು’ ವಿಶ್ವ ಭ್ರಾತೃತ್ವದ್ದು, ಕಲ್ಯಾಣರಾಜ್ಯದ್ದು, ಹಸಿವಿನಿಂದ ಬಂದ ಜೀವಕ್ಕೆ ಅನ್ನ. ಬಡವರ ಅನಾರೋಗ್ಯಕ್ಕೆ ಔಷಧಿ, ಉಡಲು ಬಟ್ಟೆ, ಬದುಕಲು ಕಾಯಕ, ಅರಿವಿಗೆ ಅಕ್ಷರಾಭ್ಯಾಸ ಧಾರ್ಮಿಕ ಸಮಾನತೆಗಾಗಿ ಲಿಂಗಧಾರಣೆ,ಮನಶುದ್ಧಿಗಾಗಿ ಅನುಭಾವ. ಮುಂದಿನ ತಲೆಮಾರಿಗೆ ಅರಿವು ಮತ್ತು ಜ್ಞಾನದ ಕೊಡುಗೆಯಾಗಿ ‘ವಚನ ಸಾಹಿತ್ಯ’ ಹೀಗೇ ಬದುಕಿನುದ್ದಕ್ಕೂ ತಮಗಾಗಿ ತಮ್ಮ ಹೆಂಡಿರು ಮಕ್ಕಳಿಗಾಗಿ ಎನ್ನದೇ ಲೌಕಿಕ ವಿಷಯದಲ್ಲಿ ‘ಉದಾಸೀನರಾಗಿ’ ಲೋಕಕಲ್ಯಾಣಕ್ಕಾಗಿ ಇಂದಿಗೂ ಪ್ರಸ್ತುತವಿರುವ ಅಸಂಖ್ಯಾತ ಶರಣರು ತಮ್ಮ ವಚನಗಳಲ್ಲಿ ನಡೆ ನುಡಿ ಆದರ್ಶಗಳಿಂದ ಇಂದಿಗೂ ಜೀವಂತವಾಗಿರುವರು.

‘ಭಾವದಲ್ಲಿ ದಿಗಂಬರ’
ಅವರ ಭಾವನೆಗಳು ನಮ್ಮಂತೆ ಕ್ಷಣಕ್ಕೊಂದು ರೂಪ ಪಡೆಯದೇ. ಸದಾ ಒಂದೇ ರೀತಿಯಾದ ಭಾವ ‘ಬಸವಭಾವ, ಶಿವಾನುಭಾವ’ ಅವರ ಭಾವನೆಗಳು ಒಂದೇ ರೀತಿ ಅವು ನಿರಪೇಕ್ಷೆಯ ದಿಗಂಬರ ಭಾವ.

‘ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ’
ಅವರು ಪಡೆದದ್ದು ಕ್ಷಣಿಕವಾದ ವಸ್ತುಗಳ ಆನಂದವಲ್ಲ, ಘಳಿಗೆಯ ದೇಹದ ಆನಂದವೂ ಅಲ್ಲ. ಮೂರು ದಿನದ ಐಶ್ವರ್ಯದ ಆನಂದವೂ ಅಲ್ಲ, ಅವರು ಪಡೆದ ಆನಂದ ಅದು ಪರಮಾನಂದ, ಶಿವಾನಂದ ಬಸವಾನಂದ, ದಿವ್ಯಾನಂದ, ಭವ್ಯಾನಂದ, ಅದುವೇ, ಕಾಲ ಕಾಲಗಳಿಗೆಯೂ ಯುಗ ಯುಗಗಳಿಗೂ ಅಳಿಯದ ‘ಮಹದಾನಂದ ಜ್ಞಾನದ ಪರಮಾನಂದ’ ಆ ಮಹಾ ಜ್ಞಾನದ ಪರಮಾನಂದದ ನೆಲೆಯೇ ಲಿಂಗನೆಲೆ. ಆ ಪರಮಾನಂದಮಯ ಜ್ಞಾನಾತ್ಮದಲ್ಲೇ ಲಿಂಗವೂ ಐಕ್ಯವಾಗಿರುತ್ತದೆ ಎಂಬುದಾಗಿದೆ ಆದಯ್ಯಶರಣರ ವಚನದ ಭಾವಾರ್ಥ

ಶರಣ ಆದಯ್ಯನು ಬರೀ ವಚನಕಾರನಲ್ಲ ಅವನು ಇನ್ನೂ ಹಲವಾರು ಕೃತಿಗಳನ್ನು ಬರೆದನೆಂದು ಡಾ ಎಂ ಎಂ ಕಲಬುರ್ಗಿ ಅವರು ಸಂಶೋಧಿಸಿ “ ಆದಯ್ಯನ ಲಘು ಕೃತಿಗಳು” ಎನ್ನುವ ಚಿಕ್ಕಕೃತಿಯೊಂದನ್ನು ಪ್ರಕಟಿಸಿದ್ದಾರೆ. ಅವರು ಆಕೃತಿಗಳ ಕುರಿತು ಹೀಗೆ ಹೇಳಿದ್ದಾರೆ. “ ಆದಯ್ಯನ ಇತರ ಸಾಹಿತ್ಯದಲ್ಲಿ ಆದಯ್ಯಗಳ ಕಂದ, ಉಯ್ಯಲಪದ ಮತ್ತು ಮುಕ್ತಿಕ್ಷೇತ್ರಗಳನ್ನು ಹೆಸರಿಸಬಹುದು. ಆದಯ್ಯಗಳ ಕಂದ ಹದಿನಾರು ಕಂದ ಪದ್ಯಗಳ ಗುಚ್ಚ, ಶರಣರು ಸಾಹಿತ್ಯದ ಈ ಮಟ್ಟವನ್ನು ಎಷ್ಟು ಸುಂದರವಾಗಿ ಸಮರ್ಪಕವಾಗಿ ಬಳಸಬಲ್ಲರೆಂಬುದಕ್ಕೆ ಇದು ಉತ್ತಮ ಉದಾಹರಣೆ.” ಉಯ್ಯಲು ಪದವು ಸ್ವರವಚನ ಎಂದು ಹೇಳಬಹುದು. ಜೋಗುಳ ಪದಗಳು ಸಾಹಿತ್ಯದಲ್ಲಿ ಹೇರಳವಾಗಿದೆ. ʼ ತೂಗಿದಳಾ ತಾಯಿ ಜಗದೋದ್ಧಾರನʼ ಎನ್ನುವ ಹಾಡು ಹೇಳಿ ಮೆರೆದವರು ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು. ಈ ಪರಂಪರೆಗೆ ಆದಿ ಆದಯ್ಯ ಎಂದರೆ ತಪ್ಪಾಗದು. ಮುಕ್ತಿಕ್ಷೇತ್ರ ಎಂಬುದು ಆದಯ್ಯನ ಮತ್ತೊಂದು ಕೃತಿ.
ಸೋಮನಾಥ ದೇವಸ್ಥಾನದ ಪಕ್ಕದಲ್ಲಿ ಒಂದು ಪುಟ್ಟ ಗುಡಿಯಿದೆ , ಅದುವೇ ಶ್ರೇಷ್ಠ ಅನುಭಾವಿ ಆದ್ಯಯ್ಯನ ಸಮಾಧಿಯಾಗಿದೆ. ಇಂತಹ ಅಪೂರ್ವ ವಚನಕಾರ ಆದಯ್ಯ ಸೌರಾಷ್ಟ್ರದಿಂದ ಕನ್ನಡ ನೆಲಕ್ಕೆ ಬಂದು ಇಲ್ಲಿನ ಶರಣ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಂಗ ಲಿಂಗ ಅಭೇದ್ಯದ ಅರಿವು ಅನುಭಾವವನ್ನು ನೀಡಿ, ವೃಷ್ಟಿ ಸಮಷ್ಟಿಯ ಬಂಧನದ ಜೊತೆಗೆ ಪ್ರಗತಿ ವಿಕಸನ ಕಾಣುವ ಚಿಂತನೆ ಅತ್ಯಂತ ಶ್ಲಾಘನೀಯವಾಗಿದೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಆದಯ್ಯನ ಸೇವೆ ಮನನೀಯವೆಂದೇ ಹೇಳಬಹುದು. ಆದಯ್ಯನೊಬ್ಬ ಮಹಾಶರಣ, ಕ್ರಾಂತಿಕಾರಕ ಉತ್ತಮ ಸಾಹಿತಿ ಎಂಬುದು ಮಾತ್ರ ತ್ರಿಕಾಲಬಾದಿತ ಸತ್ಯವಾಗಿದೆ.

ಡಾ ದಾನಮ್ಮ ಚ. ಝಳಕಿ, ಬೆಳಗಾವಿ( ವಿವಿಧ ಆಧಾರ ಗ್ರಂಥಗಳಿಂದ )

Previous article
Next article
- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group